ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣೆಯಾಗುತ್ತಿರುವ ನಾಗಬನಗಳು

Last Updated 27 ಜುಲೈ 2017, 19:46 IST
ಅಕ್ಷರ ಗಾತ್ರ

ನಾಗಾರಾಧನೆಯು ಪ್ರಕೃತಿ ಜೊತೆಗೆ ಮನುಷ್ಯ ಸಾಮರಸ್ಯದ ಬದುಕನ್ನು ಕಟ್ಟಿಕೊಂಡದ್ದರ ಸಂಕೇತ. ಮಾನವ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧದ ಮೂರ್ತರೂಪ. ಉಸಿರಾಡುವ ಗಾಳಿ, ಕುಡಿಯುವ ನೀರು, ಬದುಕಲು ಆಹಾರ ಇವೆಲ್ಲಕ್ಕೂ ಪ್ರಕೃತಿಯನ್ನೇ ಅವಲಂಬಿಸಬೇಕಾದ ಮಾನವ ತನ್ನನ್ನು ಪೊರೆವ ಈ ಪ್ರಕೃತಿಯನ್ನೇ ದೇವರೆಂದು ಪೂಜಿಸಲಾರಂಭಿಸಿದ. ಬೀಸುವ ಗಾಳಿಯಲ್ಲಿ, ಹರಿಯುವ ನೀರಿನಲ್ಲಿ, ಸುಡುವ ಬೆಂಕಿಯಲ್ಲಿ ಮಾತ್ರವಲ್ಲದೆ ಪ್ರಾಣಿ, ಪಕ್ಷಿ, ಉರಗಗಳಲ್ಲೂ ದೇವರನ್ನೇ ಕಂಡು ಆರಾಧಿಸಿಕೊಂಡು ಬಂದುದರ ಕುರುಹೇ ನಾಗಬನಗಳು ಮತ್ತು ದೇವರ ಕಾಡುಗಳು.

ಜಗತ್ತಿನಾದ್ಯಂತ ಕಾಣುವ ಇಂತಹ ಪ್ರಕೃತಿ ಆರಾಧನೆಯ ಸೊಬಗು ಕರಾವಳಿ ಜಿಲ್ಲೆಗಳಲ್ಲಿ ಇಂದಿಗೂ ಉಳಿದುಕೊಂಡು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಹತ್ತಾರು ನಾಗಬನಗಳಿವೆ. ಅಲ್ಲಲ್ಲಿ ದೇವರ ಕಾಡುಗಳಿವೆ. ವಿಶಾಲವಾದ ಗದ್ದೆಗಳ ನಡುವೆ ವಿಸ್ತಾರವಾಗಿ ಹರಡಿಕೊಂಡಿರುವ, ಗುಡ್ಡಗಳ ನಡುವೆ ದಟ್ಟವಾದ ಗಿಡಮರಗಳಿಂದ ತುಂಬಿರುವ ನಾಗಬನಗಳನ್ನು ಎಲ್ಲೆಡೆಯೂ ನೋಡಬಹುದಾಗಿದೆ. ವಿವಿಧ ಪ್ರಾಣಿ ಪಕ್ಷಿಗಳು ವಾಸವಾಗಿದ್ದ ಕಾಡುಗಳನ್ನು ದೇವರ ಹೆಸರಿನಲ್ಲಿ ಸಂರಕ್ಷಿಸಿಕೊಂಡು ಬರಲಾಗಿತ್ತು. ಉರಗಗಳೂ ಸೇರಿದಂತೆ ವಿವಿಧ ಜೀವಜಂತುಗಳ ಆವಾಸ ಸ್ಥಾನವಾಗಿದ್ದ ಪ್ರದೇಶಗಳನ್ನು ನಾಗಬನಗಳಾಗಿ ಗುರುತಿಸಿ ಅವುಗಳನ್ನು ಜತನದಿಂದ ಕಾಪಾಡಿಕೊಂಡು ಬರಲಾಗಿತ್ತು.

ಮನುಕುಲಕ್ಕೆ ಪ್ರತ್ಯಕ್ಷವಾಗಿ ಇಲ್ಲವೇ ಕೆಲವೊಮ್ಮೆ ಪರೋಕ್ಷವಾಗಿ ಸಹಕಾರಿಯಾಗಿದ್ದ ಜೀವಜಾಲಕ್ಕೆ ಮಾನವ ಅತಿಕ್ರಮಣದಿಂದ ತೊಂದರೆಯಾಗದಂತೆ ಮಾಡಿಕೊಂಡ ಒಂದು ಬಗೆಯ ನೈತಿಕ ರಕ್ಷಣೆ ಇದಾಗಿತ್ತು. ನೂರಾರು ವರ್ಷಗಳಿಂದ ಬೆಳೆದು ನಿಂತ ಹತ್ತು ಹಲವು ಜಾತಿಯ ಗಿಡ-ಮರಗಳಿಂದ ತುಂಬಿ, ಅಲ್ಲಿ ಬೆಳೆದ ಮರಗಿಡಗಳ ತರಗೆಲೆಗಳು, ಒಣಗಿದ ರೆಂಬೆಗಳೆಲ್ಲಾ ಅಲ್ಲೇ ಮಣ್ಣಾಗುವ ಅಪೂರ್ವ ಪ್ರಕೃತಿಯ ಮಡಿಲಲ್ಲಿ ಮೃದುವಾದ ಹಾಸಿಗೆಯಂಥ ಭೂಮಿ, ಅಲ್ಲಲ್ಲಿ ಬೆಳೆದ ಹುತ್ತಗಳು, ಅವುಗಳ ಬಿಲಗಳಲ್ಲಿ ಹಾವುಗಳ ವಾಸ, ಸಂತತಿಯ ಬೆಳವಣಿಗೆಗೆ ಬೇಕಾದ ತಂಪಾದ ವಾತಾವರಣ. ವಿವಿಧ ಪ್ರಾಣಿ-ಪಕ್ಷಿಗಳು ಮಾನವ ಪ್ರವೇಶದ ಯಾವ ಭಯವೂ ಇಲ್ಲದೆ ಬದುಕುತ್ತಿದ್ದ ನಿಸರ್ಗದ ರಮಣೀಯ ತೊಟ್ಟಿಲು ಎಂದರೆ ಅತಿಶಯೋಕ್ತಿಯಲ್ಲ.

ಇಂತಹ ನಾಗಬನಗಳು ಜೀವ ವೈವಿಧ್ಯದ ಭಂಡಾರವಾಗಿವೆ. ಹವಾಗುಣದ ನಿಯಂತ್ರಣದಲ್ಲಿ ಬಹು ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ. ಕೃಷಿಗಾಗಿ, ಮಾನವ ನೆಲೆಗಾಗಿ ಪ್ರಕೃತಿಯ ಮೇಲೆ ನಡೆಯುವ ಅತಿಕ್ರಮಣದ ನಡುವೆಯೂ ನೂರಾರು ವರ್ಷಗಳಿಂದ ಉಳಿದು ಬಂದ ಮೀಸಲು ಅರಣ್ಯಗಳಾಗಿದ್ದವು. ನಮ್ಮ ಪೂರ್ವಜರ ದೂರದೃಷ್ಟಿಯಿಂದ ಒಂದಷ್ಟು ಕಾಡು ದೈವೀ ಭಾವದೊಂದಿಗೆ ಸಂರಕ್ಷಣೆಯಾಯಿತು. ಇಂತಹ ಅರಣ್ಯಗಳೇ ಆ ಪ್ರದೇಶದ ಸಸ್ಯಾವರಣ, ಮಣ್ಣು, ನೀರು ಹಾಗೂ ಶುದ್ಧ ಹವೆಯ ಮೂಲ ಆಧಾರವಾಗಿವೆ. ಗಿಡ ಮರಗಳಿಂದ ಉದುರಿಬಿದ್ದ ತರಗೆಲೆಗಳು, ದೂರದವರೆಗೂ ಹರಡಿರುವ ಬೇರು ಬಳ್ಳಿಗಳಿಂದ ಈ ಪ್ರದೇಶದಲ್ಲಿ ಬೀಳುವ ಮಳೆನೀರು ಭೂಮಿಯೊಳಗೇ ಇಂಗುವ ಕಾರಣದಿಂದ ಅಂತರ್ಜಲದ ಮಟ್ಟ ಹೆಚ್ಚಾಗಲೂ ಕಾರಣವಾಗಿದ್ದವು. ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಬೇರುಗಳಿಂದ ಮಣ್ಣಿನ ಸವಕಳಿಯನ್ನೂ ತಡೆಯುತ್ತಿದ್ದವು. ಪ್ರಕೃತಿಯ ಜೈವಿಕ ಚಕ್ರದ ಪ್ರಮುಖ ಕೊಂಡಿಯಾದ ಹಾವುಗಳು ಆರಾಧನೆಯ ದೈವೀ ಭಾವದೊಂದಿಗೆ, ಪೂರಕ ಪ್ರಕೃತಿಯ ಕಾರಣದಿಂದ ಪೋಷಣೆಯಾದವು. ನಂಬಿಕೆ, ಆಚರಣೆಗಳು, ಆ ಮೂಲಕ ಹಾಕಿಕೊಂಡ ಕಟ್ಟುಪಾಡುಗಳು ಪ್ರಕೃತಿಯ ಪೋಷಕ ವ್ಯವಸ್ಥೆಯಾಗಿವೆ.

ಹೀಗಿದ್ದ ನಾಗಬನಗಳು ಇಂದು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿರುವುದು ಆತಂಕದ ಸಂಗತಿ. ನಮ್ಮ ಪೂರ್ವಜರು ಹಾಕಿಕೊಟ್ಟಿದ್ದ ಪರಿಸರಸ್ನೇಹಿ ಆರಾಧನಾ ಪರಂಪರೆಯೊಂದು ಆಧುನಿಕ ಕಾಲಘಟ್ಟದ ಆಕ್ರಮಣದ ಭರಾಟೆಗೆ ಸಿಲುಕಿದೆ, ಮೀಸಲಿಟ್ಟ ಹಸಿರ ನೆಲೆ ಕಳೆದುಹೋಗುತ್ತಿದೆ. ನಾಗನ ಹಸಿರು ಬನಗಳನ್ನು ನಾಶಮಾಡಿ ಅಲ್ಲಿ ಗುಡಿ ಗೋಪುರಗಳನ್ನು ನಿರ್ಮಿಸಿ ಕಾಂಕ್ರೀಟ್ ಕಟ್ಟಡಗಳು ತಲೆಎತ್ತುತ್ತಿವೆ. ಪ್ರಕೃತಿಯ ಸುಂದರ ನಾಗಬನವನ್ನು ಕಡಿದುರುಳಿಸಿ ಅಲ್ಲಿ ಗ್ರಾನೈಟ್, ಮಾರ್ಬಲ್‌ಗಳನ್ನು ಬಳಸಿ ಗುಡಿಗಳನ್ನು ಕಟ್ಟುತ್ತಿದ್ದೇವೆ. ಪ್ರಕೃತಿ ನಿರ್ಮಿತ ಕೊಂಡಿಯೊಂದು ಕಳಚಿಬೀಳುತ್ತಿರುವ ಪರಿಣಾಮವಾಗಿ ಹಾವುಗಳು ನಾಗಬನಗಳಿಂದ ಹೊರಗೆ ಹೊರಟು ನಿಂತಿವೆ. ನಮ್ಮ ಶ್ರೀಮಂತಿಕೆಯನ್ನು, ಹಣವನ್ನು ತೋರಿಸುವ ಪ್ರತಿಷ್ಠೆಯ ಹಟಕ್ಕೆ ಬಿದ್ದು ಹೈಟೆಕ್ ಎನ್ನಬಹುದಾದ ಕಾಂಕ್ರೀಟ್ ಬನಗಳನ್ನು, ಗುಡಿ ಗೋಪುರಗಳನ್ನು ನಿರ್ಮಿಸುತ್ತಿದ್ದೇವೆ.

ಭೂಮಿಯ ತಂಪಿನ ಹಸಿರ ಒಡನಾಟದಲ್ಲಿ ಓಡಾಡುವ ನಾಗನಿಗೆ ನಮ್ಮ ಕಾಂಕ್ರೀಟ್ ಬನಗಳು, ಗುಡಿಗಳು ಶಾಪವೇ ಹೊರತು ವರವಲ್ಲ. ನಮ್ಮ ಹಿರಿಯರು ದೂರದೃಷ್ಟಿಯಿಂದ ಮೀಸಲಿಟ್ಟ ಹಸಿರು ನೆಲೆಗಳನ್ನು ಭಗ್ನಗೊಳಿಸುತ್ತಾ ಆಧುನಿಕತೆಯ ಹೆಸರಲ್ಲಿ ಅತಿಕ್ರಮಿಸುತ್ತಿದ್ದೇವೆ. ನಾಗಬನಗಳಿಗೆ ಪ್ರವೇಶಿಸಿದ ಜೀರ್ಣೋದ್ಧಾರದ ಆಚರಣೆಗಳು ಇಂದು ಒಂದು ಪಿಡುಗಾಗಿ ಪರಿಣಮಿಸಿವೆ. ಪುರಾತನ ಹಸಿರ ಸಿರಿಯ ನಾಗಬನಗಳನ್ನು ಜೀರ್ಣೋದ್ಧಾರದ ಹೆಸರಲ್ಲಿ ವಿರೂಪಗೊಳಿಸುತ್ತಿದ್ದೇವೆ. ಕೊಡಲಿಯೇಟಿಗೆ ಪ್ರಾಚೀನ ನಾಗಬನಗಳು ಕಾಣೆಯಾಗುತ್ತಿವೆ. ಭಕ್ತಿಯ ಭರಾಟೆಯಲ್ಲಿ ಪ್ರಕೃತಿಯನ್ನು ನಿರ್ನಾಮಗೊಳಿಸುವ ಚಟುವಟಿಕೆಗಳಲ್ಲಿ ನಾವು ಭಾಗಿಯಾಗುತ್ತಿದ್ದೇವೆ.

ನಾಗಬನಗಳ ಹಿಂದಿರುವ ಜೀವ ಪರಿಸರದ ರಕ್ಷಣೆಯ ಆಶಯವನ್ನು ಮರೆತಿದ್ದೇವೆ. ಜ್ಯೋತಿಷಿಗಳು, ಪುರೋಹಿತರು, ಭಕ್ತಿಯ ಪರಾಕಾಷ್ಠೆಯ ಭಕ್ತರು ಧಾರ್ಮಿಕ ಜ್ಞಾನದ ಕೊರತೆಯಿಂದ ಜೀರ್ಣೋದ್ಧಾರದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಧಾರ್ಮಿಕ ನೆಲೆಯಿಂದ ನೋಡುವುದಾದರೂ ಇದು ಒಂದು ದ್ರೋಹವೇ ಸರಿ. ಹುತ್ತಗಳಲ್ಲಿ, ಮರದ ಬೇರುಗಳ ನಡುವೆ ಹರಡಿದ್ದ ವಿಶಾಲ ತಂಪಿನ ನೆಲದಲ್ಲಿ ವಾಸವಾಗಿದ್ದ ಹಾವುಗಳು ಆಧುನಿಕ ಕಾಂಕ್ರೀಟ್ ಗುಡಿ-ಗೋಪುರಗಳಲ್ಲಿ ವಾಸವಾಗಲು ಸಾಧ್ಯವೇ?

ನಂಬಿಕೆಯ ನೆಲೆಯಲ್ಲಾದರೂ ಜೀವಜಗತ್ತು ಉಳಿಯಲಿ, ಬೆಳೆಯಲಿ ಎಂದು ನಮ್ಮ ಪೂರ್ವಿಕರು ಅನುಸರಿಸಿದ್ದ ಆಚರಣೆಯನ್ನು ನಾವು ಕೆಡಿಸದೆ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು. ಇಲ್ಲದೇ ಹೋದರೆ ಅದು ಭವಿಷ್ಯದ ಪೀಳಿಗೆಗೆ ನಾವು ಮಾಡುವ ವಂಚನೆಯಲ್ಲವೇ? ಮಾರ್ಗದರ್ಶನದ ಹೆಸರಲ್ಲಿ ದಾರಿ ತಪ್ಪಿಸುವ ಪುರೋಹಿತರು, ಜ್ಯೋತಿಷಿಗಳ ಬಗ್ಗೆ ಆಸ್ತಿಕ ಜನ ಎಚ್ಚೆತ್ತು ಕೊಳ್ಳಬೇಕು. ಜಡಗೊಂಡ ನಮ್ಮ ಮನಸ್ಸುಗಳು ಜೀರ್ಣೋದ್ಧಾರಗೊಳ್ಳಲಿ. ದೇವರ ಹೆಸರಿನ ಕಾಡನ್ನು, ಬನಗಳನ್ನು, ಕೆರೆಯನ್ನು, ನದಿಯನ್ನು ಅವುಗಳ ಮೂಲ ಸ್ವರೂಪದಲ್ಲಿಯೇ ಉಳಿಸಲು, ಉಳಿಯುವಂತೆ ಜನಜಾಗೃತಿ ಮೂಡಿಸಲು ಕಾರ್ಯಪ್ರವೃತ್ತರಾಗಬೇಕಾಗಿದೆ. ಸತ್ತ ಹಾವಿಗೆ ಸರ್ಪಸಂಸ್ಕಾರ ಮಾಡುವ ಮೊದಲು, ಯಾವುದೋ ಪೂಜೆ, ವಿಧಿಗಳಿಂದ ನಾಗದೋಷಗಳನ್ನು ಕಳೆದುಕೊಳ್ಳಲು ಯೋಚಿಸುವ ಮೊದಲು ನಾಗಬನಗಳನ್ನು ಬನಗಳಾಗಿಯೇ ಉಳಿಸುವ ಸಂಕಲ್ಪ ಮಾಡೋಣವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT