ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಅನ್ನದ ಭಾಷೆಯಲ್ಲ ಎಂಬುದು ಸುಳ್ಳು

Last Updated 28 ಜುಲೈ 2017, 5:28 IST
ಅಕ್ಷರ ಗಾತ್ರ

ಶಿಕಾರಿಪುರ: ‘ಕನ್ನಡ ಮಾಧ್ಯಮದಲ್ಲಿ ಓದಿದರೆ ಅನ್ನ ಸಿಗುವುದಿಲ್ಲ ಎಂಬ ಅಪಪ್ರಚಾರ ನಿಲ್ಲಬೇಕು’ ಎಂದು ಕಾದಂಬರಿಕಾರ ಕುಂ.ವೀರಭದ್ರಪ್ಪ ಕಳಕಳಿ ವ್ಯಕ್ತಪಡಿಸಿದರು. 
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಗುರುವಾರ ಶಿರಾಳಕೊಪ್ಪ ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಆಯೋಜಿಸಿದ್ದ ಮಯೂರ ಕನ್ನಡ ಪ್ರತಿಭಾನ್ವೇಷಣೆ ರಾಜ್ಯ ಮಟ್ಟದ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕನ್ನಡ ಮಾಧ್ಯಮದಲ್ಲಿ ಓದಿದರೆ ಅನ್ನ ಸಿಗುತ್ತದೆ ಹಾಗೂ ಉದ್ಯೋಗ ದೊರೆಯುತ್ತವೆ. ಪ್ರಸ್ತುತ ಯುಪಿಎಸ್‌ಸಿ ಪರೀಕ್ಷೆಯಲ್ಲಿ ರಾಜ್ಯದ ಸರ್ಕಾರಿ ಶಾಲೆಯ ಕನ್ನಡ ಭಾಷೆಯಲ್ಲಿ ಓದಿದ ಮಕ್ಕಳು ಆಯ್ಕೆಯಾಗುವ ಮೂಲಕ ಉತ್ತಮ ಪ್ರತಿಭೆ ತೋರಿದ್ದಾರೆ’ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಬಾಲ ಕಲಾವಿದ ಪ್ರಣೀತ್‌ಗೆ ನಟ ಸಾರ್ವಭೌಮ ಆಗುವ ಎಲ್ಲಾ ಅವಕಾಶ ಹಾಗೂ ಅರ್ಹತೆಗಳಿವೆ ಎಂದರು.

ಜಗತ್ತಿನಲ್ಲೇ ಭಾರತ ಚೆಂದ, ಭಾರತದಲ್ಲಿ ಕರ್ನಾಟಕ ಅಂದವಾಗಿದೆ. ಶಿಕಾರಿಪುರ ತಾಲ್ಲೂಕಿನ ತಾಳಗುಂದ, ಬಂದಳಿಕೆ, ಬಳ್ಳಿಗಾವಿ, ಉಡುಗಣಿ ರಾಜ್ಯದ ವರ್ಚಸ್ಸನ್ನು ಹೆಚ್ಚಿಸಿದೆ. ಅನುಭವ ಮಂಟಪಕ್ಕೆ ಅಧ್ಯಕ್ಷರಾಗಿದ್ದ ಅಲ್ಲಮಪ್ರಭು ಹಾಗೂ ಕನ್ನಡ ಸಾಮ್ರಾಜ್ಯ ಸ್ಥಾಪಕ ಮಯೂರ ವರ್ಮ ತಾಲ್ಲೂಕಿನ ತಾಳಗುಂದ ಗ್ರಾಮದಲ್ಲಿ ಜನಿಸಿರುವುದು ಹೆಮ್ಮೆಯ ವಿಷಯವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ತಾಲ್ಲೂಕಿನ ಈಸೂರು ಗ್ರಾಮದ ಹೋರಾಟಗಾರರು ವೀರ ಮರಣ ಹೊಂದಿದ್ದಾರೆ ಎಂದು ಇತಿಹಾಸ ತೆರೆದಿಟ್ಟರು.

ಹಿರಿಯ ಸಾಹಿತಿ ನಾ.ಡಿಸೋಜ ಮಾತನಾಡಿ, ‘ಪಲ್ಲವರ ಆಕ್ರಮಣಕ್ಕೆ ಉತ್ತರ ನೀಡಲು ಹಾಗೂ ಸ್ವಾಭಿಮಾನ ಉಳಿಸಿಕೊಳ್ಳಲು, ಮಯೂರವರ್ಮ ಕನ್ನಡ ಸಾಮ್ರಾಜ್ಯ ಸ್ಥಾಪನೆ ಮಾಡಿದ. ಶಿರಾಳಕೊಪ್ಪ ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಪ್ರತಿಷ್ಠಾನವು ಇಂತಹ ಮಯೂರ ವರ್ಮನನ್ನು ಆದರ್ಶ ವಾಗಿಟ್ಟುಕೊಂಡು ಮಕ್ಕಳ ಮೂಲಕ  ಕನ್ನಡ ಭಾಷೆಗೆ ಸ್ಥಾನಮಾನ ನೀಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡ್ರಾಮಾ ಜೂನಿಯರ್‌ ಖ್ಯಾತಿಯ ಕಲಾವಿದ ಪ್ರಣೀತ್‌, ‘ಶಿಕಾರಿಪುರ ತಾಲ್ಲೂಕು ಶಿವಶರಣರ ನಾಡು, ಪುಣ್ಯವಂತರ ಬೀಡಾಗಿದೆ. ಮಕ್ಕಳಲ್ಲಿ ಆಲೋಚನಾ ಶಕ್ತಿ, ಬುದ್ಧಿಶಕ್ತಿ ಹಾಗೂ ನಾಡಿನ ಇತಿಹಾಸದ ಬಗ್ಗೆ ಜ್ಞಾನ ಹೆಚ್ಚಿಸಲು ಮಯೂರ ಅಕ್ಷರ ವೀರ ಕನ್ನಡ ಪ್ರತಿಭಾನ್ವೇಷಣೆ ಪರೀಕ್ಷೆ ಪೂರಕವಾಗಿದೆ’ ಎಂದರು.

ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ  ಅಧ್ಯಕ್ಷ ನವೀನ್‌ ಕುಮಾರ್‌ ಮಾತನಾಡಿ, ‘ತಾಲ್ಲೂಕಿನ ತಾಳಗುಂದ ಗ್ರಾಮದಲ್ಲಿ ಜನಿಸಿ ಕನ್ನಡಿ ಗರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಕನ್ನಡ ಸಾಮ್ರಾಜ್ಯ ಸ್ಥಾಪನೆ ಮಾಡಿದ ರಾಜ ಮಯೂರವರ್ಮ ಸ್ಮರಣೆಗಾಗಿ ಆತನ ಹೆಸರಿನಲ್ಲಿ ಸರ್ಕಾರ ಪ್ರಶಸ್ತಿ ನೀಡದಿರುವುದು ದುರಂತ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಬಿ.ವೈ.ರಾಘವೇಂದ್ರ, ಕೆಎಎಸ್ ನಿವೃತ್ತ ಅಧಿಕಾರಿ ಎಚ್‌.ಟಿ. ಬಳಿಗಾರ್‌, ಛಾಯಾಗ್ರಾಹಕ ಸಂಘದ ಅಧ್ಯಕ್ಷ ಕಿರಣ್‌, ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಸಂಚಾಲಕ ಕೆ.ಎಸ್‌.ಹುಚ್ಚರಾಯಪ್ಪ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್‌.ಬಿ.ಅರುಣ್‌ ಕುಮಾರ್‌, ಪದಾಧಿಕಾರಿಗಳು 
ಇದ್ದರು.

ರಾಜ್ಯಮಟ್ಟದ ಸ್ಪರ್ಧೆಯಲ್ಲಿ 21 ಜಿಲ್ಲೆಗಳ 80 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಟಿವಿ ಮಾಧ್ಯಮದ ಅನುಷಾ ಸ್ಪರ್ಧೆಯನ್ನು ನಿರೂಪಿಸಿದರು. ತೀರ್ಪುಗಾರರಾಗಿ ಹಿರಿಯ ಸಾಹಿತಿ ನಾ.ಡಿಸೋಜ, ಕಾದಂಬರಿಕಾರ ಕುಂ.ವೀರಭದ್ರಪ್ಪ ಪಾಲ್ಗೊಂಡಿದ್ದರು. ಸ್ಪರ್ಧೆಗೆ ‘ಪ್ರಜಾವಾಣಿ’ ಪತ್ರಿಕೆ ಹಾಗೂ ಕಿಯೋನಿಕ್ಸ್‌ ಸಂಸ್ಥೆ ಮಾಧ್ಯಮ ಸಹಯೋಗ ನೀಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT