ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೀ ಬಾರಮ್ಮ...

Last Updated 28 ಜುಲೈ 2017, 19:30 IST
ಅಕ್ಷರ ಗಾತ್ರ

ಶ್ರಾವಣಮಾಸ ಶುಭದಾಯಕ ಮಾಸ; ಈ ಮಾಸದಲ್ಲಿ ನಿಸರ್ಗವು ಮೈದುಂಬಿಕೊಂಡಿರುತ್ತದಲ್ಲದೆ, ಹಬ್ಬ–ಹರಿದಿನಗಳ ಸಂಭ್ರವೂ ಹೆಚ್ಚು. ಇಡೀ ತಿಂಗಳು ಹಬ್ಬಗಳ ಸಂಬ್ರಮದಲ್ಲಿಯೇ ಮಹಿಳೆಯರು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಹಬ್ಬಗಳ ಆಚರಣೆಯು ಸಡಗರ, ಸಂತಸ, ಶಾಂತಿ, ತಾಳ್ಮೆಗಳನ್ನು ಹೆಚ್ಚಿಸುತ್ತದೆ. ಉದ್ವೇಗಗೊಂಡ ಮನಸ್ಸು ದೇವರ ಧ್ಯಾನ, ಭಕ್ತಿ, ಪೂಜೆ, ತನ್ಮಯತೆ, ಶಾಂತಿಗಳತ್ತ ಹರಿಯುತ್ತದೆ. ಈ ಹಬ್ಬಗಳು ಭಕ್ತಿ, ಜ್ಞಾನ, ಕರ್ಮಗಳ ತ್ರಿವೇಣಿ ಸಂಗಮ.

ಅಷ್ಟೈಶ್ವರ್ಯಗಳ ಒಡತಿ ಎನಿಸಿರುವ ಶ್ರೀ ವರಮಹಾಲಕ್ಷ್ಮಿಯ ವ್ರತವನ್ನು ಪ್ರತಿವರ್ಷ ಶ್ರಾವಣ ಮಾಸದ ಪೂರ್ಣಿಮೆಯ ಹಿಂದಿನ ಶುಕ್ರವಾರ ಅಥವಾ ಶ್ರಾವಣಶುಕ್ಲ ಪೂರ್ಣಿಮಾ ಶುಕ್ರವಾರದ ದಿನದಂದು ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ. ಶರತ್ಕಾಲದ ಚಂದ್ರಕಾಂತಿಯಂಥ ಕಿರುನಗೆ, ಅರಳಿದ ಕಪ್ಪು ನೈದಿಲೆಯಂಥ ಕಣ್ಣುಗಳು, ಪದ್ಮದಂಥ ಸುಂದರವಾದ ಮುಖ, ಬಂಗಾರ-ಹಳದಿ ಬಣ್ಣಗಳ ಮೇಳೈಸಿದಂಥ ಮೈ, ಅಹಾರಧಾನ್ಯಗಳು ತುಂಬಿರುವ ಬಂಗಾರದ ಪಾತ್ರೆಗಳನ್ನು ಹಿಡಿದಿರುವ ಕೈಗಳು, ಪದ್ಮಾಸನದ ಮೇಲೆ ಕಂಗೋಳಿಸುತ್ತಾ ಹೊಳೆಯುವ ದೇವಿ ಈ ತಾಯಿ.

ಸಕಲ ಸಂಪತ್ತುಗಳನ್ನೂ ನೀಡಿ ಮಾನವವರಿಗೆ ಸಂತೋಷವನ್ನೂ ಮಂಗಳವನ್ನೂ ಅನುಗ್ರಹಿಸುವ ಶ್ರೀಮಹಾಲಕ್ಷ್ಮಿಗೆ ನಾಮಗಳು ಸಾವಿರಾರು.  ಶ್ರೀದೇವಿ, ಅಮೃತೋದ್ಭವೆ, ಕಮಲಾಕ್ಷಿ, ಲೋಕಸುಂದರಿ, ವಿಷ್ಣುಪತ್ನಿ, ವಾರಾಹಿ, ಹರಿವಲ್ಲಭಾ, ಮಹಾಲಕ್ಷ್ಮಿ, ಭುವನೇಶ್ವರಿ, ಪದ್ಮಾಲಯಾ, ಶ್ರೀಲಕ್ಷ್ಮಿ, ಹರಿಪ್ರಿಯಾ, ಲೋಕಮಾತಾ, ಮಂಗಳದೇವಿ, ವಿಷ್ಣುವಲ್ಲಭಾ – ಹೀಗೆ. ಧನಲಕ್ಷೀ, ಧಾನ್ಯಲಕ್ಷ್ಮೀ, ಸಂತಾನಲಕ್ಷ್ಮೀ, ವಿದ್ಯಾಲಕ್ಷ್ಮಿ, ಧೈರ್ಯಲಕ್ಷ್ಮಿ, ಶೌರ್ಯಲಕ್ಷ್ಮೀ, ಕೀರ್ತಿಲಕ್ಷ್ಮಿ, ಸೌಮ್ಯಲಕ್ಷ್ಮಿ, ವಿಜಯಲಕ್ಷ್ಮಿ  – ಹೀಗೆ ಲಕ್ಷ್ಮಿಗೂ ಹಲವು ರೂಪಗಳು, ಹಲವು ಶಕ್ತಿಗಳು. ಲಕ್ಷ್ಮಿಯು ವರಗಳನ್ನು ದಯಪಾಲಿಸುವವಳು; ಆದುದರಿಂದಲೇ ಅವಳು ವರಮಾಹಾಲಕ್ಷ್ಮಿ ಎನಿಸಿರುವಳು. ಲಕ್ಷ್ಮಿಯ ಅನುಗ್ರಹವಾದರೆ ಮನೆಯಲ್ಲಿ ಅಷ್ಟಲಕ್ಷಿಯರು ನೆಲೆಸುತ್ತಾರೆ ಎನ್ನುವುದು ಆಸ್ತಿಕರ ನಂಬಿಕೆ. ‘ಶ್ರೀ’ ಎಂಬ ಏಕಾಕ್ಷರ ಲಕ್ಷ್ಮೀಯ ಅಪೂರ್ವ ಹೆಸರು.

ಲಕ್ಷ್ಮಿ ಐಶ್ವರ್ಯದಾಯಿನಿ; ಸಂಪತ್ತಿನ ಜೊತೆಗೆ ವಿದ್ಯೆ–ಶಕ್ತಿ–ಸೌಂದರ್ಯಗಳನ್ನೂ ಅನುಗ್ರಹಿಸುತ್ತಾಳೆ. ಮಹಾಲಕ್ಷ್ಮಿಯ ಕಟಾಕ್ಷ ಎಲ್ಲರಿಗೂ ಬೇಕು. ಅವಳ ಅನುಗ್ರಹದಿಂದಲೇ ದಾರಿದ್ರ್ಯ, ರೋಗ, ಹಸಿವು, ಅಪಮೃತ್ಯು, ಭಯ, ಶೋಕ, ಮನೋವ್ಯಥೆಗಳು ನೀಗಬಲ್ಲವು. ಶಕ್ತಿ, ವಿದ್ಯೆ, ಕೀರ್ತಿ, ಸಂಪತ್ತು, ಯಶಸ್ಸು, ಆಯುಸ್ಸು, ಆನಂದಗಳನ್ನು ಅವಳೇ ಕೊಡುವವಳು.

ಸಿರಿಸೌಭಾಗ್ಯ–ಸಂಪತ್ತುಗಳ ಅಭಿವೃದ್ಧಿಗೆ ಗೃಹಿಣಿಯರು ದಂಪತಿಸಮೇತರಾಗಿ ಶ್ರೀವರಮಹಾಲಕ್ಷ್ಮೀವ್ರತವನ್ನು ಆಚರಿಸುತ್ತಾರೆ. ಹನ್ನೆರಡು ಗಂಟುಗಳಿಂದ ಕೂಡಿದ ಲಕ್ಷ್ಮೀದಾರವನ್ನು ಬಲಹಸ್ತಕ್ಕೆ ಕಟ್ಟಿಕೊಳ್ಳಲಾಗುತ್ತದೆ. ವ್ರತವನ್ನು ಆಚರಣೆ ಮಾಡುವವರು ಸ್ನಾನಮಾಢಿ ಶುಭ್ರವಸ್ತ್ರವನ್ನು ಧರಿಸಿ, ಆಹ್ನಿಕಗಳನ್ನು ಪೂರೈಸಿ, ಮನೆಯನ್ನು ಸಾರಿಸಿ ರಂಗವಲ್ಲಿಯನ್ನಿಟ್ಟು, ದಿವ್ಯಮಂಟಪದಲ್ಲಿ, ಪಂಚವರ್ಣಗಳಿಂದ ಕೂಡಿದ ಅಷ್ಟದಳ ಪದ್ಮವನ್ನು ರಚಿಸಿ, ಕಳಶವನ್ನು ಇಟ್ಟು ಅದರಲ್ಲಿ ವರಮಹಾಲಕ್ಷ್ಮಿಯನ್ನು ಆವಾಹಿಸಿ, ಪ್ರ್ರಾಣಪ್ರತಿಷ್ಠಾಪನೆಯನ್ನು ಮಾಡಿ, ಶ್ರೀಸೂಕ್ತವನ್ನು ಪಠಿಸಿ, ಕಲ್ಪೋಕ್ತ ಷೋಡಶೋಪಚಾರಗಳಿಂದ ಪೂಜೆಯನ್ನು ಸಲ್ಲಿಸಲಾಗುತ್ತದೆ. ನಾನಾ ವಿಧವಾದ ಭಕ್ಷ್ಯಭೋಜ್ಯಗಳನ್ನು ದೇವಿಗೆ ಅರ್ಪಿಸಿ, ದಾರಿದ್ರ್ಯವನ್ನೂ ರೋಗರುಜಿನಗಳನ್ನೂ ದೂರ ಮಾಡಿ, ಸಂತೋಷವನ್ನೂ ಸಂಪತ್ತನ್ನೂ ಅನುಗ್ರಹಿಸುವಂತೆ ಪ್ರಾರ್ಥಿಸಲಾಗುತ್ತದೆ.

**

-ರಾಜೇಶ್ವರಿ ವಿಶ್ವನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT