ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸೆಗೆ ತಣ್ಣೀರೆರಚಿದ ಹೈಕಮಾಂಡ್‌

ಅಧಿಕೃತ ಆಹ್ವಾನವಿಲ್ಲದಿದ್ದರೂ ಬಿಜೆಪಿಗೆ ಮರಳಲು ಜನಾರ್ದನರೆಡ್ಡಿ ಹವಣಿಕೆ
Last Updated 28 ಜುಲೈ 2017, 19:38 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿಯಲ್ಲಿ ಸಕ್ರಿಯವಾಗುವ ಮೂಲಕ, ಅಧಿಕಾರ ರಾಜಕಾರಣದತ್ತ ಮರಳಬೇಕೆಂಬ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ಆಸೆಗೆ ಪಕ್ಷದ ಹೈಕಮಾಂಡ್‌ ತಣ್ಣೀರು ಎರಚಿದೆ.

ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ, ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಜನಾರ್ದನ ರೆಡ್ಡಿ ಅವರು ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ಇಷ್ಟಪಡದ ವರಿಷ್ಠರು, ಅವರನ್ನು ದೂರ ಇರಿಸುವಂತೆ ರಾಜ್ಯ ಘಟಕಕ್ಕೆ ಸೂಚಿಸಿದ್ದಾರೆ ಎನ್ನಲಾಗಿದೆ.

‘ಯಾರೇ ಇರಲಿ, ಆರೋಪಗಳಿಂದ ಮುಕ್ತವಾಗದ ಹೊರತು ಪಕ್ಷಕ್ಕೆ ಸೇರಿಸಿಕೊಳ್ಳುವತ್ತ ರಾಜ್ಯ ಘಟಕ ಆಲೋಚಿಸಕೂಡದು’ ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ತಿಳಿಸಿದ್ದು, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತಿತರರು ಪಕ್ಷದ ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸಕೂಡದು ಎಂದು ಮೌಖಿಕವಾಗಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿಯ ಅಧಿಕೃತ ಸಭೆ– ಸಮಾರಂಭಗಳಿಗೆ ಆಹ್ವಾನ ನೀಡದಿದ್ದರೂ, ಪಕ್ಷದಲ್ಲಿ ಸಕ್ರಿಯವಾಗಬೇಕೆಂದು ಹವಣಿಸುತ್ತಿರುವ ಜನಾರ್ದನರೆಡ್ಡಿ, ವಿವಿಧ ಸಮುದಾಯಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗಲೆಲ್ಲ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಯತ್ನಿಸುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಹೈಕಮಾಂಡ್‌ನ ಕಟ್ಟುನಿಟ್ಟಿನ ಆದೇಶದಿಂದಾಗಿ, ರಾಜ್ಯಮಟ್ಟದ ಯಾವೊಬ್ಬ ನಾಯಕರೂ ಅವರನ್ನು ಬೆಂಬಲಿಸುತ್ತಿಲ್ಲ.

ರಾಜ್ಯದ ಕೆಲವು ಹಿರಿಯ ಮುಖಂಡರ ನೆರವು ಪಡೆದು ಪಕ್ಷದಲ್ಲಿ ಮತ್ತೆ ಅಸ್ತಿತ್ವ ಸಾಧಿಸಬೇಕೆಂಬ ಹವಣಿಕೆ ನಡೆಸಿದ್ದ ರೆಡ್ಡಿ, ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದರು. ಆದರೆ, ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಲ್ಲಿ ವಿಪಕ್ಷಗಳ ಟೀಕೆಗೆ ಆಹಾರವಾಗಿ ಮುಜುಗರ ಎದುರಾಗಲಿದೆ ಎಂಬ ಕಾರಣದಿಂದ ವರಿಷ್ಠರೇ ಅವರನ್ನು ದೂರ ಇಡಲು ಸೂಚಿಸಿದ್ದಾರೆ ಎಂದು ಹೈಕಮಾಂಡ್‌ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಈ ಸೂಚನೆಯ ಸುಳಿವು ದೊರೆತಿರುವುದರಿಂದಲೇ, ‘ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ’ ಎಂದು ರೆಡ್ಡಿ ಹೇಳಿಕೆ ನೀಡಿದ್ದಾರೆ.

ಸೋದರನ ಅಸಮ್ಮತಿ: ಅಕ್ರಮ ಗಣಿಗಾರಿಕೆಯ ತನಿಖೆ ನಡೆಸಿ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಅವರು ಸಲ್ಲಿಸಿದ್ದ ವರದಿಯಲ್ಲಿ ತಮ್ಮ ಹೆಸರನ್ನು ಅನಗತ್ಯವಾಗಿ ಸೇರಿಸಲಾಗಿದೆ ಎಂದು ತಿಳಿಸಿ, 2011ರಲ್ಲಿ ಬಿಜೆಪಿ ತೊರೆದು ಬಿಎಸ್‌ಆರ್‌ ಕಾಂಗ್ರೆಸ್‌ ಸ್ಥಾಪಿಸಿದ್ದ ಶ್ರೀರಾಮುಲು ಅವರ ನಿರ್ಧಾರದ  ಹಿಂದೆ ಜನಾರ್ದನರೆಡ್ಡಿ ಅವರೇ ಪ್ರೇರಣೆಯಾಗಿದ್ದರು. ಆದರೆ, ಬಿಜೆಪಿ ತ್ಯಜಿಸುವ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಗಾಲಿ ಕರುಣಾಕರ ರೆಡ್ಡಿ, ತಮ್ಮ ಸೋದರ ಜನಾರ್ದನರೆಡ್ಡಿ ಈಗ ಪಕ್ಷಕ್ಕೆ ಮರಳುವುದಕ್ಕೆ ಸಹಮತಿ ಸೂಚಿಸಿಲ್ಲ ಎಂದೂ ಪಕ್ಷದ ಮೂಲಗಳು ಹೇಳಿವೆ.

2014ರ ಲೋಕಸಭೆ ಚುನಾವಣೆಗೆ ಮುನ್ನ ಯಡಿಯೂರಪ್ಪ ಅವರೊಂದಿಗೇ ಬಿಜೆಪಿಗೆ ಮರಳಿ, ಬಳ್ಳಾರಿ ಕ್ಷೇತ್ರದಿಂದ ಜಯಿಸಿ ಸಂಸದರಾಗಿರುವ ಬಿ.ಶ್ರೀರಾಮುಲು ಕೂಡ ತಮಗೆ ಆಪ್ತರಾಗಿರುವ ಯಡಿಯೂರಪ್ಪ ಅವರ ಮನವೊಲಿಸಿ ಜನಾರ್ದನರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಮನ ಒಲಿಸುವ ಪ್ರಯತ್ನ ಮಾಡುತ್ತಿದ್ದಾರೆ.

‘ಹೈಕಮಾಂಡ್‌ನ ಅನುಮತಿ ಇಲ್ಲದೆ ಅವರಿಗೆ ಆದ್ಯತೆ ನೀಡುವುದು ಅಸಾಧ್ಯ’ ಎಂಬ ಉತ್ತರ ಯಡಿಯೂರಪ್ಪ ಅವರಿಂದ ಬಂದಿದೆ ಎನ್ನಲಾಗಿದೆ.

‘ಗಂಭೀರ ಆರೋಪ ಇರುವವರು ಬೇಡ’
ನವದೆಹಲಿ:
‘ಜನಾರ್ದನರೆಡ್ಡಿ ಪಕ್ಷಕ್ಕೆ ಮರಳಿದ್ದಾರೆಯೇ ಎಂಬ ಪ್ರಶ್ನೆಯನ್ನು ರಾಜ್ಯದಾದ್ಯಂತ ಅನೇಕ ಕಾರ್ಯಕರ್ತರು ಕೇಳುತ್ತಿದ್ದಾರೆ. ಆದರೆ, ಪಕ್ಷ ಚಟುವಟಿಕೆಗೆ ಸಂಬಂಧಿಸಿದಂತೆ ಯಾವುದೇ ಮುಖಂಡರು ಅವರ ಸಂಪರ್ಕದಲ್ಲಿ ಇಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ರಾಜ್ಯ ಮುಖಂಡರೊಬ್ಬರು ಸ್ಪಷ್ಟಪಡಿಸಿದರು.

ಕಳೆದ ನವೆಂಬರ್‌ನಲ್ಲಿ ನೋಟು ರದ್ದತಿಯ ಸಂದರ್ಭದಲ್ಲೂ ಪುತ್ರಿಯ ಮದುವೆಯನ್ನು ಅದ್ಧೂರಿಯಾಗಿ ಮಾಡುವ ಮೂಲಕ ದೇಶದ ಗಮನ ಸೆಳೆದಿರುವ ಜನಾರ್ದನರೆಡ್ಡಿ, ಪಕ್ಷದಲ್ಲಿ ಮತ್ತೆ ಸಕ್ರಿಯವಾಗಲು ಶತಾಯಗತಾಯ ಯತ್ನಿಸುತ್ತಿದ್ದಾರೆ. ಕೇರಳ, ತೆಲಂಗಾಣಗಳಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಅವರು ಪಕ್ಷದಲ್ಲಿ ಇದ್ದಾರೆಯೇ ಎಂದು ಸಹಜವಾಗಿಯೇ ಜನರು ಕೇಳುತ್ತಿದ್ದಾರೆ ಎಂದು ಅವರು ಹೇಳಿದರು.

ಪಕ್ಷದ ಅಧಿಕೃತ ಸಭೆ, ಸಮಾರಂಭಗಳಿಗೆ ಅವರನ್ನು ಆಹ್ವಾನಿಸಲಾಗುತ್ತಿಲ್ಲ. ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಂತೂ ಭ್ರಷ್ಟಾಚಾರದ ಗಂಭೀರ ಆರೋಪ ಇರುವವರನ್ನು ಪಕ್ಷದಿಂದ ದೂರವೇ ಇರಿಸಲು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.

‘ಸಂಬಂಧವಿಲ್ಲದಿದ್ದರೂ ಪಕ್ಷವನ್ನು ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ತರುವ ಹೇಳಿಕೆ ನೀಡುತ್ತ, ಪ್ರಚಾರ ಮಾಡುತ್ತಿರುವ ಅವರಿಗೆ ಬೇಡ ಎಂದು ಹೇಳಲು ಯಾರೂ ಮುಂದಾಗಿಲ್ಲ. ಪ್ರಚಾರ ನೀಡುವವರಿಗೆ ಬೇಡ ಎಂದು ಹೇಳುವ ಅಗತ್ಯವಾದರೂ ಏನಿದೆ ಅಲ್ಲವೇ ಎಂದು ಅವರು ನಗುತ್ತಲೇ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT