ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಳೆತನ ಸಹಬಾಳ್ವೆಗೆ ಸೋಪಾನ

Last Updated 29 ಜುಲೈ 2017, 19:30 IST
ಅಕ್ಷರ ಗಾತ್ರ

–ಪ್ರಕಾಶ್ ಆರ್. ಕಮ್ಮಾರ್, ಸಿಹಿಮೊಗೆ

ಒಂದಾನೊಂದು ಕಾಲದಲ್ಲಿ ದಟ್ಟವಾದ ಕಾಡು ಇತ್ತು. ಅದರಲ್ಲಿ ನವಿಲು ಮತ್ತು ಗಿಳಿ ವಾಸವಿದ್ದವು. ಕಾಡಿನಲ್ಲಿ ಇವೆರಡೂ ಪ್ರೀತಿಯಿಂದ ಅನ್ಯೋನ್ಯದಿಂದಿದ್ದವು. ಎರಡೂ ಒಟ್ಟಿಗೆ ಹಾರುತ್ತಿದ್ದವು, ಕುಣಿಯುತ್ತಿದ್ದವು. ನವಿಲಿನ ಕುಣಿತವನ್ನು ಕಂಡ ಗಿಳಿಯು ಸಂತೋಷದಿಂದ ‘ನವಿಲೇ, ನವಿಲೇ ನಿನ್ನ ಕುಣಿತ ನೋಡಲು ಬಲು ಚಂದ. ನಿನ್ನ ಗರಿ ಬಹಳ ಸುಂದರ. ನಿನ್ನ ಮೋಹಕ ಬಣ್ಣ ಆಕರ್ಷಿಸದೇ ಇರದು. ಆ ದೇವರು ನಿನಗೆ ಎಷ್ಟೊಂದು ಸೌಂದರ್ಯ ಕೊಟ್ಟಿದ್ದಾನೆ. ನೀನು ಬಹಳ ಸುಂದರವಾಗಿ ಕಾಣುತ್ತಿ. ನೀನೇ ಭಾಗ್ಯಶಾಲಿ’ ಎಂದಿತು.

‘ನೀನೇನು ಕಡಿಮೆಯೇನೆ. ನೀನೂ ಕೂಡ ಸೌಂದರ್ಯವತಿ. ಆಹಾ! ನಿನ್ನ ಕೆಂಪಾದ ಚಿಕ್ಕದಾದ ಮುದ್ದಾದ ಬಾಗಿದ ಕೊಕ್ಕು ನೋಡಲೆಷ್ಟು ಚಂದ. ನಿನ್ನ ಅಚ್ಚ ಹಸಿರಾದ ಪುಚ್ಚವನ್ನು ಕಂಡರೇ ಹಸಿರಾದ ಸುಂದರವಾದ ಎಲೆಯನ್ನು ನೋಡಿದಂತಾಗುತ್ತದೆ. ಅಷ್ಟೆ ಅಲ್ಲ ಕಣೇ, ನಿನ್ನ ಕತ್ತಿನ ಸುತ್ತಲೂ ಇರುವ ಕೆಂಪು ಪಟ್ಟಿ ನಿನ್ನ ಸೌಂದರ್ಯವನ್ನು ಇಮ್ಮಡಿ ಮಾಡಿದೆ. ನಿನ್ನ ಮಾತೇ ಮಧುರ’ ಎಂದಿತು ನವಿಲು.

ಅವೆರಡೂ ಬಹಳ ಚೆನ್ನಾಗಿ ಹೊಂದಿಕೊಂಡು ಬದುಕಿದ್ದವು. ಅವರೆಡರ ಗೆಳೆತನ ಹೊಟ್ಟೆಕಿಚ್ಚು ಬರುವಂತಿತ್ತು. ಒಂದು ದಿನ ಇವುಗಳ ನಡುವೆ ಕಾಗಕ್ಕ ಬಂದಳು. ‘ನವಿಲಕ್ಕ, ನವಿಲಕ್ಕ, ಗಿಳಿಯಕ್ಕ ನನ್ನನ್ನು ನಿಮ್ಮ ಗೆಳತಿಯನ್ನಾಗಿ ಮಾಡ್ಕೊಳ್ಳಿ. ನಿಮ್ಮಿಬ್ಬರೊಂದಿಗೆ ನಾನೂ ಒಬ್ಬಳು ಇರ್ತೇನೆ’ ಎಂದಿತು ಕಾಗಕ್ಕ.

ಈ ಕಾಗಕ್ಕ ಕಪ್ಪು ಬಣ್ಣ, ಕುರೂಪಿ ಬೇರೆ. ಅದರ ಕರ್ಕಶ ಧ್ವನಿ ಕೇಳಿ, ‘ಅಯ್ಯೋ ಇದೇನಪ್ಪ, ಇದು ಫ್ರೆಂಡ್‌ಷಿಪ್‌ ಬೇಕು ಅಂತ ಬಂದಿದೆ. ಹೇಗಪ್ಪಾ ಇದರ ಗೆಳೆತನ ಹೇಗೆ ಮಾಡೋದು’ ಎಂದು ಯೋಚಿಸಿದವು. ‘ನೋಡು ಕಾಗಕ್ಕ, ನೀನೇನು ಬೇಜಾರು ಮಾಡ್ಕೋಬೇಡ. ಆ ನಿನ್ನ ಬಣ್ಣ, ಕರ್ಕಶ ಧ್ವನಿ, ಇವು ನಮ್ಗೆ ಇಷ್ಟ ಆಗುವುದಿಲ್ಲ. ಅಲ್ದೇ ನೀನು ಕುರೂಪಿ. ನಿನ್ನ ಸ್ನೇಹ ನಮ್ಗೆ ಬೇಡ’ ಅಂತ ಖಡಾಖಂಡಿತವಾಗಿ ಹೇಳಿದವು. ಇವರ ಮಾತು ಕೇಳಿ ಕಾಗಕ್ಕಂಗೆ ಬಹಳ ನೋವಾಯ್ತು. ದುಃಖವಾದರೂ ಅದನ್ನ ತೋರಿಸಿಕೊಳ್ಳದೇ ಅಲ್ಲಿಯೇ ಇತ್ತು.

ದಿನ ಕಳೆದಂತೆ ಗಿಳಿಯಕ್ಕ ತನ್ನ ಗೂಡಿನಲ್ಲಿ ಮೂರು ತತ್ತಿಗಳನ್ನಿಟ್ಟಿತು. ತತ್ತಿಗಳು ಬೆಳೆಯತೊಡಗಿದವು. ಅಲ್ಲಿಯೇ ವಾಸವಾಗಿದ್ದ ಹಾವಿಗೆ ಗಿಳಿಯಕ್ಕ ತತ್ತಿ ಇಟ್ಟ ಸುದ್ದಿ ಹೇಗೋ ಗೊತ್ತಾಯಿತು. ಒಳ್ಳೆಯ ಆಹಾರ ತಾನು ಇದ್ದಲ್ಲಿಯೇ ಸಿಕ್ಕಿತು ಎಂದು ಹಾವು ಮರವೇರಿತು. ಇನ್ನೇನು ತತ್ತಿಗೆ ಬಾಯಿ ಹಾಕಬೇಕು, ಅಷ್ಟರಕ್ಕು ಅಲ್ಲಿಯೇ ಇದ್ದ ಕಾಗಕ್ಕ ನೋಡಿದಳು. ‘ಅಯ್ಯೋ ಗಿಳಿಯಕ್ಕನ ತತ್ತಿಗಳನ್ನೆಲ್ಲ ತಿಂದುಹಾಕ್ತಿದೆ’ ಎಂದು ತಕ್ಷಣ ಹಾರಿ ಬಂದು ಹಾವನ್ನ ರೆಕ್ಕೆಯಿಂದ ಬಡಿದು, ಕೊಕ್ಕಿನಿಂದ ಕುಕ್ಕಿ ಸಾಯಿಸಿತು.

ಎಲ್ಲಿಗೋ ಹೋಗಿದ್ದ ಗಿಳಿಯಕ್ಕ ಗೂಡಿಗೆ ಬಂದಾಗ ಸತ್ತ ಹಾವನ್ನು ಕಂಡು ಗಾಬರಿಯಾಯ್ತು. ನಂತರ ಅದಕ್ಕೆ ಪರಿಸ್ಥಿತಿ ಅರ್ಥ ಆಯ್ತು. ಕಾಗಕ್ಕ ರಕ್ಷಿಸದೇ ಹೋಗಿದ್ದರೆ ತನ್ನ ಮೊಟ್ಟೆಗಳನ್ನೆಲ್ಲ ಹಾವು ತಿಂದು ಹಾಕುತ್ತಿತ್ತು ಎಂದು ನೆನೆದು ಗಿಳಿಯಕ್ಕನಿಗೆ ಕಣ್ಣು ತುಂಬಿ ಬಂತು. ‘ಕಾಗಕ್ಕ ನೀನು ತುಂಬಾ ಒಳ್ಳೆ ಕೆಲಸ ಮಾಡಿದ್ದೀಯ, ನಿನ್ನನ್ನು ಮರೆಯಲು ಸಾಧ್ಯವಿಲ್ಲ’ ಎಂದು ಕಾಗಕ್ಕನನ್ನು ಮನಸಾರೆ ಹೊಗಳಿ ಅಭಿನಂದಿಸಿತು.

ಇನ್ನೊಂದು ದಿನ ನವಿಲಕ್ಕನಿಗೆ ಇದ್ದಕ್ಕಿದ್ದಂತೆ ಜ್ವರ ಬಂದಿತ್ತು. ತುಂಬಾ ಬಳಲಿದ್ದ ನವಿಲಕ್ಕ ಮಲಗಿದ್ದಳು. ಈ ಸಂದರ್ಭಕ್ಕಾಗಿ ಕಾದು ಕುಳಿತಿದ್ದ ನರಿಯಣ್ಣ ಅಲ್ಲಿಗೆ ಬಂದ. ಮಲಗಿದ್ದ ನವಿಲಕ್ಕನನ್ನು ಕಂಡು ಬಾಯಲ್ಲಿ ನೀರೂರಿತು. ಅದನ್ನು ಹಿಡಿಯಲು ಮುಂದಾಯಿತು. ಅಲ್ಲಿಗೆ ಗಿಳಿಯಕ್ಕನೂ ಬಂದಳು. ನರಿಯನ್ನು ಕಂಡು ಬೆದರಿ ಚೀರತೊಡಗಿದಳು. ತನ್ನಿಂದೇನು ಮಾಡಲಿಕ್ಕಾಗಲಿಲ್ಲ ಎಂದು ಪರಿತಪಿಸುತಿತ್ತು. ಇದನ್ನು ಗಮನಿಸುತ್ತಿದ್ದ ಕಾಗಕ್ಕ ತಕ್ಷಣವೇ ತನ್ನ ಸ್ನೇಹಿತರನ್ನೆಲ್ಲ ತನ್ನ ಕರ್ಕಶ ಧ್ವನಿಯಿಂದ ಕ್ರಾವ್, ಕ್ರಾವ್ ಎಂದು ಕೂಗಿ, ಕೂಗಿ ಕರೆಯಿತು. ತನ್ನ ಬಳಗದ ಸಹಾಯದಿಂದ ಆ ನರಿಯನ್ನು ಹೆದರಿಸಿ ಓಡಿಸಿದವು.

ಆಗ ನವಿಲಕ್ಕನಿಗೆ, ಗಿಳಿಯಕ್ಕನಿಗೆ ಮನವರಿಕೆಯಾಯಿತು. ಕಪ್ಪಾದರೇನಂತೆ, ಮಧುರ ಕಂಠವಿಲ್ಲದಿದ್ದರೇನಂತೆ, ಕುರೂಪಿಯಾದರೇನಂತೆ ಅದರ ಹೃದಯ ಶ್ರೀಮಂತಿಕೆ ಮಿಗಿಲಾದುದು ಎಂದು ತಿಳಿದವು. ತಮ್ಮ ತಪ್ಪಿನ ಅರಿವಾಯಿತು. ತಿರಸ್ಕರಿಸಿದ್ದ ಕಾಗಕ್ಕನನ್ನು ಅಂದಿನಿಂದ ತಮ್ಮ ಗೆಳತಿಯನ್ನಾಗಿ ಸ್ವೀಕರಿಸಿದವು. ಈ ಮೂರು ಗೆಳೆಯರು ಪ್ರೀತಿಯಿಂದ ಅನ್ಯೋನ್ಯದಿಂದ ಬಹಳ ವರ್ಷಗಳವರೆಗೆ ಸಹಬಾಳ್ವೆಯಿಂದ ಬದುಕಿ ಬಾಳಿದವು.

ಚಿತ್ರಗಳು: ಎಸ್‌. ಶ್ರೀಕಂಠಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT