ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಖರ್ಜೂರ

Last Updated 31 ಜುಲೈ 2017, 19:30 IST
ಅಕ್ಷರ ಗಾತ್ರ

ಇದು ಫುಕುವೊಕಾನ ಒಂದು ಹುಲ್ಲಿನ ಕ್ರಾಂತಿಯಂತೆಯೇ ಪದವೀಧರನೊಬ್ಬ ಮರಳಿ ಮಣ್ಣಿಗೆ ಬಂದ ಕತೆ. ಕರ್ನಾಟಕದಲ್ಲೂ ಲಾಭದಾಯಕವಾಗಿ ಖರ್ಜೂರ ಬೆಳೆದ ಕತೆ. ನಂಬಿದವರನ್ನು ಭೂಮಿ ಎಂದೂ ಕೈಬಿಡುವುದಿಲ್ಲ ಎಂಬ ಸತ್ಯವನ್ನು ಹೇಳುವ ಕತೆ.

ಗೌರಿಬಿದನೂರಿನ ಬಳಿಯ ಸಾಗಾನಹಳ್ಳಿಯಲ್ಲಿರುವ ಖರ್ಜೂರದ ತೋಟ ಈ ಕತೆಯನ್ನು ಬಿತ್ತರಿಸುತ್ತದೆ. ಈಗ ನೀವು ತೋಟಕ್ಕೆ ಕಾಲಿಟ್ಟರೆ ನೂರಾರು ಖರ್ಜೂರದ ಗಿಡಗಳು ಮೈ ತುಂಬಾ ಗೊನೆಯನ್ನು ಹೊತ್ತು ಸಾರ್ಥಕತೆಯ ಕತೆ ಹೇಳುತ್ತವೆ. ಒಂದು ಹಣ್ಣನ್ನು ಕಿತ್ತು ಬಾಯಲ್ಲಿ ಇಟ್ಟರೆ ಅಮೃತದ ರುಚಿ. ಈ ರುಚಿ ಇನ್ನೊಂದು ತಿನ್ನಲು ಪ್ರೇರೇಪಿಸುತ್ತದೆ. ಜೊತೆಗೆ ರೈತನೊಬ್ಬನ ಒಡಲಾಳದ ಕತೆಯನ್ನೂ ಬಿಚ್ಚಿಡುತ್ತದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಬೇಗೂರು ಗ್ರಾಮದ ದಿವಾಕರ ಚನ್ನಪ್ಪ ಸ್ನಾತಕೋತ್ತರ ಪದವಿ ಪಡೆದು ಒಂದೆರಡು ವರ್ಷ ಬೇರೆ ಬೇರೆ ಕಡೆ ಕೆಲಸ ಮಾಡುವವರೆಗೂ ಭೂಮಿಯ ಕಡೆ ಮುಖ ಮಾಡಿದವರೇ ಅಲ್ಲ. ಭೂಮಿಯನ್ನು ನಂಬಿದರೆ ಬದುಕು ಕಟ್ಟಿಕೊಳ್ಳುವುದು ಸಾಧ್ಯವೇ ಇಲ್ಲ ಎಂಬ ನಂಬಿಕೆಯಿಂದಲೇ ಬದುಕಿದವರು. ಆದರೆ ಅವರ ಬಾಳಲ್ಲಿ ಬೆಳಕು ಮೂಡಿಸಿದ್ದು ಫುಕುವೊಕಾನ ‘ಒಂದು ಹುಲ್ಲಿನ ಕ್ರಾಂತಿ’ ಎಂಬ ಪುಸ್ತಕ.

ಈ ಪುಸ್ತಕ ಅವರ ಮಸ್ತಕದಲ್ಲಿ ಹೊಂಬೆಳಕು ಮೂಡಿಸಿತು. ಏನಾದರೂ ಮಾಡಿದರೆ ಭೂಮಿಯಲ್ಲಿಯೇ ಮಾಡಬೇಕು ಎಂಬ ಛಲದೊಂದಿಗೆ ಅವರು ಹೊಲದತ್ತ ಮುಖಮಾಡಿದರು. ತಂದೆ ಯಾವಾಗಲೋ ಖರೀದಿ ಮಾಡಿಟ್ಟಿದ್ದ ಒಂದಿಷ್ಟು ಭೂಮಿ ಗೌರಿಬಿದನೂರು ತಾಲ್ಲೂಕಿನ ಸಾಗಾನಹಳ್ಳಿಯಲ್ಲಿ ಇತ್ತು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಎಸ್‌ಡಬ್ಲ್ಯು ಸ್ನಾತಕೋತ್ತರ ಪದವಿ ಪಡೆದ, ಇಸ್ರೊದಲ್ಲಿ ವಾಟರ್ ಮ್ಯಾಪಿಂಗ್ ಕೆಲಸ ಮಾಡಿದ್ದ, ತುಮಕೂರು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿದ್ದ ದಿವಾಕರ ಎಲ್ಲವನ್ನೂ ಬಿಟ್ಟು ಭೂಮಿಯತ್ತ ಮುಖ ಮಾಡಿದರು. ಪಿಎಚ್‌ಡಿ ಮಾಡುವ ಯತ್ನವನ್ನೂ ಅರ್ಧದಲ್ಲಿಯೇ ಬಿಟ್ಟು ಭೂಮಿಯಲ್ಲಿಯೇ ಸಂಶೋಧನೆಗೆ ಮುಂದಾದರು.

‘2010ರಲ್ಲಿ ನಾನು ಮೊದಲ ಬಾರಿಗೆ ನನ್ನ ಭೂಮಿಯಲ್ಲಿ ಕಾಲಿಟ್ಟೆ. ಏನಾದರೂ ಮಾಡುವುದಾದರೆ ಇಲ್ಲಿಯೇ ಮಾಡಬೇಕು ಎಂಬ ಛಲ ಹೊತ್ತೆ. ಸಾವಯವ ಕೃಷಿಯನ್ನೇ ಮಾಡಬೇಕು ಎಂದು ಕನಸು ಕಂಡೆ. ನಮ್ಮ ಮನೆಯ ಆಳುಗಳಿಂದ ಹಿಡಿದು ಎಲ್ಲರೂ ನನ್ನನ್ನು ಗೇಲಿ ಮಾಡಿದರು. ಆದರೆ ನಾನು ಛಲ ಬಿಡಲಿಲ್ಲ. ಸಾವಯವ ಕೃಷಿಯನ್ನೇ ಮಾಡಿದೆ’ ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ತಂದೆಯಿಂದ ಬಂದ ಭೂಮಿಯಲ್ಲಿ ಮೊದಲು ಮುಸುಕಿನ ಜೋಳ, ರಾಗಿ ಬೆಳೆದರು. ಆದರೆ ಏನಾದರೂ ಹೊಸದು ಮಾಡಬೇಕು ಎಂಬ ಹಂಬಲ ಇತ್ತು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಕೃಷಿಮೇಳಕ್ಕೆ ಹೋದಾಗ ಅಲ್ಲಿ ತಮಿಳುನಾಡು ಧರ್ಮಪುರಿ ಜಿಲ್ಲೆಯ ನಿಜಾಮುದ್ದೀನ್ ಎಂಬ ರೈತ ಖರ್ಜೂರ ಬೆಳೆಯ ಪ್ರಾತ್ಯಕ್ಷಿಕೆ ನಡೆಸಿದ್ದರು. ಅದನ್ನು ನೋಡಿ ತಾವೂ ಈ ಬೆಳೆ ಮಾಡಬಾರದೇಕೆ ಎಂದುಕೊಂಡರು.

ಧರ್ಮಪುರಿಗೆ ಹೋಗಿ ನಿಜಾಮುದ್ದೀನ್ ತೋಟವನ್ನು ನೋಡಿಬಂದರು. ಅಲ್ಲಿಂದ 150 ಖರ್ಜೂರದ ಗಿಡಗಳನ್ನು ತಂದು ನೆಟ್ಟೇಬಿಟ್ಟರು. ಆಗಲೂ ‌‘ಎಲ್ಲ ಬಿಟ್ಟ ಭಂಗಿ (ಗಾಂಜಾ) ನೆಟ್ಟ’ ಎನ್ನುವಂತೆಯೇ ಎಲ್ಲರೂ ನೋಡಿದರು. ‘ಏನೋ ಹುಡುಗ, ಕೃಷಿ ಗೊತ್ತಿಲ್ಲ. ಈಚಲು ಸಸಿಗಳನ್ನು ನೆಟ್ಟು ಖರ್ಜೂರ ಎನ್ನುತ್ತಾನೆ ಪಾಪ’ ಎಂದು ಮೂದಲಿಸಿದವರೇ ಹೆಚ್ಚು. ಆದರೆ ಖರ್ಜೂರದ ಗಿಡಗಳು ನಾಲ್ಕನೇ ವರ್ಷಕ್ಕೆ ಫಲ ಕೊಡಲು ಆರಂಭಿಸಿದಾಗ ಮೂದಲಿಸಿದವರೇ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಸಾವಯವ ಕೃಷಿಯಲ್ಲಿಯೇ ಬೆಳೆದ ಖರ್ಜೂರದ ರುಚಿಗೆ ಮಾರುಹೋದರು.

ಖರ್ಜೂರದ ಸಸಿಯಲ್ಲಿ ಎರಡು ವಿಧ. ಒಂದು ಗಂಡು, ಇನ್ನೊಂದು ಹೆಣ್ಣು. ಗಂಡು ಗಿಡ ಹೂವು ಬಿಡುತ್ತದೆ. ಆದರೆ ಕಾಯಿ ಆಗುವುದಿಲ್ಲ. ಹೆಣ್ಣು ಗಿಡದಲ್ಲಿ ಕಾಯಿ ಬರುತ್ತದೆ. ಗಂಡು ಗಿಡದಲ್ಲಿ ಬಂದ ಹೂವು ಹಾಗೂ ಹೆಣ್ಣು ಗಿಡದಲ್ಲಿ ಬಂದ ಹೂವಿಗೆ ಪರಾಗ ಸ್ಪರ್ಶ ಮಾಡಬೇಕು. ಪ್ರಾಕೃತಿಕವಾಗಿ ಪರಾಗ ಸ್ಪರ್ಶವಾಗುತ್ತದಾದರೂ ಕೃತಕವಾಗಿಯೂ ಪರಾಗ ಸ್ಪರ್ಶ ಮಾಡಿದರೆ ಬೆಳೆ ಚೆನ್ನಾಗಿ ಬರುತ್ತದೆ ಎನ್ನುವುದು ದಿವಾಕರ ಅವರ ಅನುಭವದ ಮಾತು.

2011ರಲ್ಲಿ ಎರಡೂಕಾಲು ಎಕರೆಯಲ್ಲಿ ದಿವಾಕರ ಅವರು ಖರ್ಜೂರದ ಸಸಿಗಳನ್ನು ಹಾಕಿದರು. ತಂದಿದ್ದು 150 ಸಸಿ. ಅದರಲ್ಲಿ 135 ಸಸಿಗಳು ಈಗ ಮರಗಳಾಗಿ ಬೆಳೆದಿವೆ. ಅವುಗಳಲ್ಲಿ 15 ಸಸಿಗಳು ಗಂಡಾದರೆ ಉಳಿದವು ಹೆಣ್ಣು ಗಿಡಗಳು. ಸಸಿಗಳನ್ನು ಕೊಡುವಾಗಲೇ ನಿಜಾಮುದ್ದೀನ್ ‘ಇವುಗಳಿಗೆ ರಾಸಾಯನಿಕ ಗೊಬ್ಬರ ಹಾಕಿ ಚೆನ್ನಾಗಿ ಬೆಳೆಸಿದರೆ ಮೂರು ವರ್ಷಕ್ಕೇ ಫಸಲು ನೀಡುತ್ತವೆ’ ಎಂದಿದ್ದರು.

ಆದರೆ ದಿವಾಕರ ಸಾವಯವ ಅಲ್ಲದೆ ಬೇರೆ ಕೃಷಿ ಮಾಡುವುದಿಲ್ಲ ಎಂಬ ಶಪಥ ಮಾಡಿದ್ದರು. ಅದಕ್ಕೇ ಖರ್ಜೂರವನ್ನೂ ಅವರು ಸಾವಯವ ಕೃಷಿ ಪದ್ಧತಿಯಲ್ಲಿಯೇ ಬೆಳೆದರು. ಭೂಮಿ ಮೋಸ ಮಾಡಲಿಲ್ಲ. ನಾಲ್ಕನೇ ವರ್ಷದಿಂದಲೇ ಬೆಳೆ ನೀಡಲು ಆರಂಭಿಸಿತು. ಮೊದಲ ವರ್ಷ 1,120 ಕೆ.ಜಿ. ಹಣ್ಣು ಬಂದರೆ ಎರಡನೇ ವರ್ಷ 1,580 ಕೆ.ಜಿ. ಹಣ್ಣು ಬಂತು. ಈ ಬಾರಿ 2 ಟನ್ ಹಣ್ಣು ಬಂದಿದೆ.

ಮೇಲೆ ಶಾಖ. ಕೆಳಗೆ ತೇವ ಇದ್ದರೆ ಖರ್ಜೂರ ಹುಲುಸಾಗಿ ಬೆಳೆಯುತ್ತದೆ. ಖರ್ಜೂರ ಮರಳುಗಾಡಿನಲ್ಲಿ ಮಾತ್ರ ಬೆಳೆಯುತ್ತದೆ ಎನ್ನುವ ನಂಬಿಕೆ ಸುಳ್ಳು. ಖರ್ಜೂರಕ್ಕೆ ನೀರು ಬೇಡ ಎನ್ನುವ ನಂಬಿಕೆಯೂ ತಪ್ಪು. ನೀರಿಲ್ಲದೆಯೂ ಬಹಳ ಕಾಲ ಖರ್ಜೂರದ ಸಸಿ ಬದುಕುತ್ತದೆ. ಆದರೆ ಅದು ಫಲ ನೀಡಬೇಕು ಎಂದರೆ ನೀರು ಬೇಕೇ ಬೇಕು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಇದಕ್ಕೆ ತಕ್ಕನಾದ ವಾತಾವರಣ ಇದೆ. ಇಲ್ಲಿ ಖರ್ಜೂರ ಬೆಳೆಯಬಹುದು ಎಂದು ಅವರು ತೋರಿಸಿಕೊಟ್ಟಿದ್ದಾರೆ.

ಕರ್ನಾಟಕದ ವಾಣಿಜ್ಯ ಬೆಳೆಯಾಗಿ ಇದು ಅಭಿವೃದ್ಧಿ ಹೊಂದಬಹುದಲ್ಲವೇ ಎಂದು ಕೇಳಿದರೆ ‘ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ನಾನು ಬೆಳೆ ಬೆಳೆಯುತ್ತಿರುವುದು ಇದು ಮೂರನೇ ವರ್ಷ. ಈವರೆಗೆ ನನಗೆ ಉತ್ತಮ ಬೆಳೆ ಬಂದಿದೆ. ಆದರೆ ಯಾವುದೇ ಬೆಳೆ ಕನಿಷ್ಠ 10 ವರ್ಷ ನಿರಂತರವಾಗಿ ಬೆಳೆ ಬರದೇ ಇದ್ದರೇ ಆ ಬಗ್ಗೆ ರೈತರಿಗೆ ಸಲಹೆ ನೀಡುವುದು ತಪ್ಪು. ನಾನು ಮಾಡಿದ್ದೇನೆ. ನೀವು ಮಾಡಿ ಎಂದು ಹೇಳಲಾಗದು’ ಎಂಬ ಎಚ್ಚರಿಕೆಯ ಸಂದೇಶವನ್ನೂ ಅವರು ಕೊಡುತ್ತಾರೆ. ‘ಇನ್ನೂ ಎರಡು ವರ್ಷ ಉತ್ತಮ ಬೆಳೆ ಬಂದರೆ ಮಾತ್ರ ನಾನು ಇತರ ರೈತರಿಗೆ ಈ ಬಗ್ಗೆ ಸಲಹೆ ನೀಡುತ್ತೇನೆ’ ಎಂದು ಅವರು ಹೇಳುತ್ತಾರೆ.

ಖರ್ಜೂರಕ್ಕೆ ರೋಗ ಕಡಿಮೆ. ಆದರೆ ರೆಡ್ ಪಾಮ್ ವೀವಿಲ್ ಎಂಬ ಹುಳದ ಕಾಟ ಇದೆ. ಇದರ ನಿಯಂತ್ರಣಕ್ಕೆ ಇನ್ನೂ ಸರಿಯಾದ ಔಷಧ ಇಲ್ಲ. ಈ ಹುಳು ಗಿಡದ ಒಳಕ್ಕೇ ಹೋಗಿ ಗಿಡವನ್ನು ಸಂಪೂರ್ಣವಾಗಿ ತಿಂದು ಹಾಕುತ್ತದೆ. ಇದೊಂದು ತರಹ ಕಾಂಡದೊಳಕ್ಕೇ ಕೊರೆಯುವ ಹುಳು. ದಿವಾಕರ ಅವರು ಇದಕ್ಕೂ ಸಾವಯವ ಔಷಧವನ್ನೇ ಮಾಡಿ ಕೆಲವು ಗಿಡ ಉಳಿಸಿಕೊಂಡಿದ್ದಾರೆ.

ಖರ್ಜೂರ ಬೆಳೆದಿದ್ದೇನೋ ಆಯಿತು. ಆದರೆ ಅದಕ್ಕೊಂದು ಮಾರುಕಟ್ಟೆ ಇಲ್ಲಿ ಇಲ್ಲ. ಅದಕ್ಕೇ ದಿವಾಕರ ಅವರು ಪ್ರತಿ ಬಾರಿಯೂ ತಮ್ಮ ತೋಟದಲ್ಲಿಯೇ ‘ಕುಯಿಲು ಹಬ್ಬ’ ಮಾಡುತ್ತಾರೆ. ಈ ಬಾರಿಯ ಹಬ್ಬ ಜುಲೈ 29 ಮತ್ತು 30ರಂದು ಸಾಗಾನಹಳ್ಳಿಯ ತೋಟದಲ್ಲಿ ನಡೆದಿದೆ. ಇನ್ನೊಂದು ಹಬ್ಬ ಇನ್ನು 15 ದಿನದಲ್ಲಿ ಮತ್ತೆ ನಡೆಯುತ್ತದೆ. ಆಗ ಇಲ್ಲಿಗೆ ಜನರು ಬಂದು ತಾವೇ ಹಣ್ಣನ್ನು ಕಿತ್ತುಕೊಂಡು ತೂಕವನ್ನೂ ಮಾಡಿಕೊಂಡು ಮನೆಗೆ ಒಯ್ಯಬಹುದು. ತೋಟದಲ್ಲಿಯೇ ಹಣ್ಣು ತೆಗೆದುಕೊಂಡರೆ ಕೆ.ಜಿಗೆ ₹ 400 ಮಾತ್ರ. ಬೆಂಗಳೂರಿಗೆ ತಂದು ಕೊಡಬೇಕು ಎಂದರೆ ಒಂದು ಕೆ.ಜಿ. ಹಣ್ಣಿನ ಬೆಲೆ ₹ 425. ಈವರೆಗೆ ದಿವಾಕರ್ ಬೆಳೆದ ಹಣ್ಣುಗಳೆಲ್ಲಾ ತೋಟದಲ್ಲಿಯೇ ಮಾರಾಟವಾಗಿವೆ.

ಸಾಗಾನಹಳ್ಳಿಯ ಖರ್ಜೂರ ತೋಟದ ವೈಭವವನ್ನು ಕಂಡು ಬೆಂಗಳೂರು ಮತ್ತು ಇತರ ಕಡೆಯ ನರ್ಸರಿಯಲ್ಲಿ ಸಿಗುವ ಖರ್ಜೂರದ ಸಸಿಗಳನ್ನು ಕೊಂಡರೆ ಮೋಸ ಹೋಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನೂ ಅವರು ಕೊಡುತ್ತಾರೆ. ಯಾಕೆಂದರೆ ಸಸಿಯಾಗಿರುವಾಗ ಯಾವುದು ಹೆಣ್ಣು, ಯಾವುದು ಗಂಡು ಎಂದು ಗೊತ್ತಾಗುವುದಿಲ್ಲ. 3–4 ವರ್ಷದ ನಂತರ ಗಿಡದಲ್ಲಿ ಹೊಂಬಾಳೆ ಬಂದಾಗಲೇ ಇದು ಗಂಡು ಅಥವಾ ಹೆಣ್ಣು ಎಂದು ಗೊತ್ತಾಗುತ್ತದೆ.

ನೂರು ಹೆಣ್ಣು ಗಿಡಗಳಿಗೆ 10ರಿಂದ 15 ಗಂಡು ಸಸಿಗಳು ಸಾಕು. ಆದರೆ ನಮ್ಮ ಅದೃಷ್ಟ ಸರಿ ಇಲ್ಲದೇ ಇದ್ದರೆ ನಾವು ಕೊಂಡುಕೊಂಡ ಸಸಿಗಳಲ್ಲಿ ಗಂಡು ಸಸಿಗಳೇ ಹೆಚ್ಚಾಗಿರಬಹುದು. ಆಗ ನಷ್ಟ ಗ್ಯಾರಂಟಿ. ನರ್ಸರಿಗಳಲ್ಲಿ ₹ 150ಕ್ಕೆ ಸಸಿ ಸಿಕ್ಕಿತು ಎಂದು ತಂದು ಹಾಕಿದರೆ ಕಷ್ಟ. ಅಂಗಾಂಶ ಕೃಷಿಯಲ್ಲಿ ನಿರ್ದಿಷ್ಟವಾಗಿ ಗಂಡು ಮತ್ತು ಹೆಣ್ಣಿನ ಸಸಿಗಳನ್ನೇ ಅಭಿವೃದ್ಧಿಪಡಿಸುತ್ತಾರೆ. ಆದರೆ ಇದಕ್ಕೆ ಬೆಲೆ ಹೆಚ್ಚು. ಒಂದು ಸಸಿಗೆ ₹ 3500 ಆಗುತ್ತದೆ. ಆದರೆ ಫಲ ಗ್ಯಾರಂಟಿ.

ಒಂದು ತೆಂಗಿನ ಸಸಿಗೆ ಎಷ್ಟು ನೀರು ಬೇಕೋ ಅಷ್ಟೇ ನೀರು ಖರ್ಜೂರದ ಸಸಿಗೂ ಸಾಕು. ಆದರೆ ತಲೆಯ ಮೇಲೆ ಬಿಸಿಲು ಜಾಸ್ತಿ ಇರಬೇಕು. ಖರ್ಜೂರದ ಆದಾಯದಿಂದ ದಿವಾಕರ ಬದುಕು ಕಟ್ಟಿಕೊಂಡಿದ್ದಾರೆ. ಅವರ ಎಲ್ಲ ಅಗತ್ಯಗಳನ್ನೂ ಖರ್ಜೂರ ಪೂರೈಸುತ್ತದೆ. ಹಾಗೆಯೇ ನಮ್ಮ ರೈತರು ಯಾವುದಾದರೂ ಒಂದು ಬೆಳೆಯನ್ನು ನಂಬಿ ಅದು ನಮ್ಮ ಅಗತ್ಯವನ್ನು ಪೂರೈಸುವಷ್ಟು ಆದಾಯ ತರುವಂತೆ ಇರಬೇಕು. ಉಳಿದ ಬೆಳೆಗಳು ನಮಗೆ ಬೋನಸ್ ಆಗಿರಬೇಕು. ಲೆಕ್ಕಾಚಾರದ ಕೃಷಿಯೇ ರೈತನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎನ್ನುವುದು ಅವರ ಅಭಿಮತ.

ನೀವೂ ಕುಯಿಲು ಹಬ್ಬದಲ್ಲಿ ಭಾಗವಹಿಸಬೇಕು ಎಂದರೆ ದಿವಾಕರ ಅವರ ಸಂಪರ್ಕಕ್ಕೆ: 98450 63743

⇒ಚಿತ್ರಗಳು: ಲೇಖಕರವು

***

ಕರಾವಳಿಯಲ್ಲೂ ಬೆಳೆದ ಫಲ
ರಾಜ್ಯದ ಕರಾವಳಿಯಲ್ಲೂ ಖರ್ಜೂರವನ್ನು ಬೆಳೆಯಲಾಗಿದೆ, ಗೊತ್ತೆ? ಈ ಪ್ರದೇಶದಲ್ಲಿ ಬೆಳೆಯಲಾದ ಖರ್ಜೂರದ ಗಿಡಗಳನ್ನು ನೋಡಬೇಕೆಂದರೆ ನೀವು ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಕರ್ನಿರೆಗೆ ಬರಬೇಕು. ಅನಿವಾಸಿ ಉದ್ಯಮಿ ಕೆ.ಎಸ್.ಸಯ್ಯದ್ ಹಾಜಿ ಅವರ ಇಲ್ಲಿನ ಮನೆಯ ವರಾಂಡದಲ್ಲಿ ಈ ‘ಮರುಭೂಮಿಯ ಫಲ’ದ 12 ಗಿಡಗಳು ಬೆಳೆದುನಿಂತಿವೆ. ಅದರಲ್ಲಿ ನಾಲ್ಕು ಗಿಡಗಳು ಈಗಾಗಲೇ ಫಲ ನೀಡುತ್ತಿವೆ.

‘ನಮ್ಮ ವರಾಂಡದ ಖರ್ಜೂರದ ಗಿಡಗಳಲ್ಲಿ ಹೂವು ಬಿಟ್ಟಾಗ ಕಾಟಿಪಳ್ಳ ನಿವಾಸಿ ಪಿ.ಇ.ಮುಹಮ್ಮದ್ ಅವರನ್ನು ಸಂಪರ್ಕಿಸಿದ್ದೆವು (ಸೌದಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಮುಹಮ್ಮದ್‌ ಅಲ್ಲಿನ ಖರ್ಜೂರದ ಕೃಷಿ ಕುರಿತು ಅಧ್ಯಯನ ನಡೆಸಿದವರು). ಅವರ ಸಲಹೆಯಂತೆ ಗಿಡಗಳ ಆರೈಕೆ ಮಾಡಿದೆವು. ಎರಡು ವಾರಗಳ ಬಳಿಕ ಫಸಲು ಬರಲು ಆರಂಭವಾಯಿತು. ಖರ್ಜೂರದ ಹಣ್ಣು ನೋಡಿ ತುಂಬಾ ಸಂತೋಷ ಮತ್ತು ಅಚ್ಚರಿ ಉಂಟಾಯಿತು’ ಎನ್ನುತ್ತಾರೆ ಸಯ್ಯದ್‌ ಅವರ ಮನೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮುಹಮ್ಮದ್ ಅಶ್ರಫ್.

‘ಕರಾವಳಿಯ ಸಮುದ್ರ ತೀರದಲ್ಲಿ ಮರಳು ಮತ್ತು ಉಪ್ಪಿನ ತೇವಾಂಶ ಇರುವುದರಿಂದ ಖರ್ಜೂರ ಇಲ್ಲಿ ಬೇರೂರಲು ಸಾಧ್ಯವಾಗಿದೆ' ಎಂದು ಪಿ.ಇ.ಮುಹಮ್ಮದ್ ಅಭಿಪ್ರಾಯಪಡುತ್ತಾರೆ.

– ಅಬ್ದುಲ್‌ ಹಮೀದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT