ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಸಾರ್ಟ್ ರಾಜಕೀಯ ಪ್ರಜಾಪ್ರಭುತ್ವಕ್ಕೆ ಮಾರಕ

Last Updated 31 ಜುಲೈ 2017, 19:30 IST
ಅಕ್ಷರ ಗಾತ್ರ

ರಾಜ್ಯಸಭೆ ಚುನಾವಣೆ ಜಿದ್ದಾಜಿದ್ದಿಗಾಗಿ ಗುಜರಾತಿನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರು ಹೊರ ವಲಯದ ರೆಸಾರ್ಟ್‌ಗೆ ಕರೆ ತಂದು ಇಡಲಾಗಿದೆ. ಹೀಗೆ ರೆಸಾರ್ಟ್‌ಗಳಲ್ಲಿ ಶಾಸಕರನ್ನು ಉಳಿಸುವುದು ಹೊಸದೇನೂ ಅಲ್ಲ. ಈ ಹಿಂದೆ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಸೇರಿ ದೇಶದ ಬಹಳಷ್ಟು ರಾಜ್ಯಗಳಲ್ಲಿ ಇಂತಹ ವಿದ್ಯಮಾನ ನಡೆದಿದೆ. ಆದರೆ ಶಾಸಕರನ್ನು ಹೀಗೆ ಬಲವಂತದ ಬಂಧನದಲ್ಲಿಡುವುದು ಹಾಗೂ ಶಾಸಕರು ಇಂತಹ ಒತ್ತಡಕ್ಕೆ ಮಣಿಯುವುದು ಸರಿಯಲ್ಲ. ದೇಶದ ಯಾವುದೇ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾದರೆ ಅಥವಾ ಪ್ರಮುಖವಾದ ಚುನಾವಣೆ ಬಂದರೆ ಶಾಸಕರನ್ನು ಹೀಗೆ ರೆಸಾರ್ಟ್ ಗಳಲ್ಲಿ ‘ಬಂಧಿಸಿಡುವುದು’ ಮಾಮೂಲಿ ಎನ್ನುವಂತಾಗಿದೆ. ತಮ್ಮನ್ನು ಆಯ್ಕೆ ಮಾಡಿದ ಜನರ ಭಾವನೆಗೆ ಗಾಸಿಯಾಗುತ್ತದೆ ಎನ್ನುವುದು ಗೊತ್ತಿದ್ದರೂ ಶಾಸಕರು ಕೂಡ ಇಂತಹ ಬಂಧನಕ್ಕೆ ಸಂತೋಷದಿಂದಲೇ ಒಳಗಾಗುತ್ತಿದ್ದಾರೆ. ಇದು ವಿಷಾದಕರ ವಿಷಯ.

ಇಂತಹ ರೆಸಾರ್ಟ್ ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಗುಜರಾತಿನ ಶಾಸಕರಿಗೆ ಇಲ್ಲಿ ಅನೇಕ ನಿರ್ಬಂಧಗಳನ್ನು ಹೇರಲಾಗಿದೆ ಹಾಗೂ ಅವರ ಮೊಬೈಲ್‌ಗಳನ್ನು ಕಸಿದುಕೊಳ್ಳಲಾಗಿದೆ ಎಂಬ ಆರೋಪವೂ ಇದೆ. ಇದನ್ನು ನೋಡಿದರೆ ರಾಜಕೀಯ ವ್ಯವಸ್ಥೆ ಬಗ್ಗೆಯೇ ಹೇಸಿಗೆ ಹುಟ್ಟುತ್ತದೆ. ಜನರು ತಮ್ಮನ್ನು ಯಾವ ಕಾರಣಕ್ಕೆ ಆಯ್ಕೆ ಮಾಡಿದ್ದಾರೆ, ಅವರ ಅಗತ್ಯಗಳು ಏನು, ಆ ಅಗತ್ಯಗಳಿಗೆ ಯಾವ ರೀತಿ ಸ್ಪಂದಿಸಬೇಕು ಎನ್ನುವುದನ್ನು ಬಿಟ್ಟು ರಾಜಕೀಯ ನೆಪಗಳಿಗಾಗಿ ಶಾಸಕರು ಹೀಗೆ ಬಂದಿಗಳಾಗುವುದು ಅಸಹ್ಯ ಹುಟ್ಟಿಸುತ್ತದೆ. ಜನರ ಒಳಿತು, ಪಕ್ಷದ ಸಿದ್ಧಾಂತ ಯಾವುದರಲ್ಲಿಯೂ ಶಾಸಕರಿಗೆ ನಂಬಿಕೆ ಇಲ್ಲ ಎನ್ನುವುದನ್ನು ಇದು ತೋರಿಸುತ್ತದೆ. ರಾಜಕೀಯ ಪಕ್ಷಗಳು ಕೂಡ ಹೀಗೆ ನಡೆದುಕೊಳ್ಳುವುದು ಎಳ್ಳಷ್ಟೂ ಸರಿಯಲ್ಲ. ಇದನ್ನೆಲ್ಲ ನೋಡಿದರೆ ನಮ್ಮ ರಾಜಕಾರಣಿಗಳಿಗೆ ಮಜುಗರ, ನಾಚಿಕೆ ಯಾವುದೂ ಇಲ್ಲ ಎನ್ನುವುದು ಗೊತ್ತಾಗುತ್ತದೆ. ಶಾಸಕರನ್ನು ಹೀಗೆ ಗುಂಪು ಗುಂಪಾಗಿ ಒಂದೆಡೆ ಕರೆದು ತಂದು ಇಡುವುದು ಕರ್ನಾಟಕದ ಮಟ್ಟಿಗೆ 1980ರ ದಶಕದಲ್ಲಿಯೇ ಆರಂಭವಾಯಿತು.

ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷ ಅಂತಃಕಲಹ ಕಾರಣ ತನ್ನ ಶಾಸಕರನ್ನು ಕರ್ನಾಟಕಕ್ಕೆ ಕರೆತಂದಾಗ ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಜನತಾ ಪಕ್ಷ ಅವರಿಗೆ ಆಶ್ರಯ ನೀಡಿತ್ತು. ನಂತರ ಕಾಂಗ್ರೆಸ್ ಮತ್ತು ಜನತಾ ದಳ ಸರ್ಕಾರಗಳ ಅವಧಿಯಲ್ಲಿ ರಾಜಕೀಯ ಅಸ್ಥಿರತೆ ಇದ್ದರೂ ರೆಸಾರ್ಟ್ ರಾಜಕೀಯ ಇರಲಿಲ್ಲ. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗ ರೆಸಾರ್ಟ್ ರಾಜಕೀಯ ವಿಪರೀತವಾಯಿತು. ಜೆಡಿಎಸ್‌ ಶಾಸಕರನ್ನೂ ರೆಸಾರ್ಟ್‌ನಲ್ಲಿ ಇಟ್ಟ ಪ್ರಸಂಗಗಳೂ ನಡೆದವು. ರೆಸಾರ್ಟ್ ರಾಜಕೀಯಕ್ಕೆ ಆ ಪಕ್ಷ ಈ ಪಕ್ಷ ಎನ್ನುವ ಭೇದವಿಲ್ಲ. ಎಲ್ಲ ರಾಜಕೀಯ ಪಕ್ಷಗಳೂ ಇದನ್ನು ನಡೆಸಿವೆ. ತಮಿಳುನಾಡಿನಲ್ಲಿ ಜಯಲಲಿತಾ ನಿಧನದ ನಂತರ ಉಂಟಾದ ರಾಜಕೀಯ ತಳಮಳದ ಸಂದರ್ಭದಲ್ಲಿಯೂ ಹೀಗೆಯೇ ಶಾಸಕರನ್ನು ರೆಸಾರ್ಟ್‌ನಲ್ಲಿ ಉಳಿಸಲಾಗಿತ್ತು. ಒಟ್ಟಿನಲ್ಲಿ ಈಗ ರೆಸಾರ್ಟ್ ರಾಜಕೀಯ ಎನ್ನುವುದು ಒಂದು ಕೆಟ್ಟ ಚಾಳಿ ಆಗಿಬಿಟ್ಟಿದೆ. ಇದು ನಿಜಕ್ಕೂ ಆತಂಕಕಾರಿ ವಿಷಯ. ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ.

ಗುಜರಾತಿನಲ್ಲಿ ರಾಜ್ಯಸಭೆಯ ಮೂರೂ ಸ್ಥಾನಗಳನ್ನು ಗೆಲ್ಲಬೇಕು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರನ್ನು ಶತಾಯಗತಾಯ ಸೋಲಿಸಬೇಕು ಎನ್ನುವ ಬಿಜೆಪಿಯ ಹೆಬ್ಬಯಕೆಯೇ ಈಗಿನ ರೆಸಾರ್ಟ್ ರಾಜಕೀಯಕ್ಕೆ ಕಾರಣ. ಚುನಾವಣೆ ಎಂದಮೇಲೆ ಅಲ್ಲಿ ಜಿದ್ದಾಜಿದ್ದಿ, ತಂತ್ರ ಪ್ರತಿತಂತ್ರ ಎಲ್ಲ ಇರಬೇಕು ನಿಜ. ಆದರೆ ಈಗ ನಡೆಯುತ್ತಿರುವುದು ಕೀಳು ರಾಜಕೀಯ. ಬಿಜೆಪಿ ತಮಗೆ ತಲಾ ₹ 15 ಕೋಟಿ ಆಮಿಷವೊಡ್ಡಿದೆ ಎಂದು ರೆಸಾರ್ಟ್‌ನಲ್ಲಿರುವ ಕಾಂಗ್ರೆಸ್ ಶಾಸಕರು ಹೇಳಿಕೊಂಡಿದ್ದಾರೆ. ಹೀಗೆ ಆಮಿಷ ಒಡ್ಡಿರುವುದು ನಿಜವಾಗಿದ್ದರೆ ಇದು ಆಡಳಿತ ಪಕ್ಷಕ್ಕೆ ಗೌರವ ತರುವ ವಿಷಯ ಅಲ್ಲ. ಗುಜರಾತಿನ ಹಲವು ಕಡೆ ಪ್ರವಾಹ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಶಾಸಕರು ಕ್ಷೇತ್ರವನ್ನು ಬಿಟ್ಟು ದೂರದ ಊರಿನಲ್ಲಿರುವ ರೆಸಾರ್ಟ್‌ಗಳಲ್ಲಿ ಇರುವುದು ಸರಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT