ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕರಿಗೆ ಬಸ್ ನುಗ್ಗಿ ಇಬ್ಬರ ಬಲಿ

ರಸ್ತೆ ಅಪಘಾತದಲ್ಲಿ ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ಹಾಗೂ ಪುತ್ರ ಸಾವು
Last Updated 31 ಜುಲೈ 2017, 20:25 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಸೋಮವಾರ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಐದು ಮಂದಿ ಮೃತಪಟ್ಟಿದ್ದು ‘ಕರಾಳ ಸೋಮವಾರ’ ಎನ್ನುವಂತಾಗಿದೆ.

ಕೊರಟಗೆರೆ ತಾಲ್ಲೂಕಿನ ಕೊಳಾಲ ಗ್ರಾಮದ ಬನಶಂಕರಿ ಬೇಕರಿಗೆ ಬಸ್ ನುಗ್ಗಿ ಬೇಕರಿ ಮಾಲೀಕ ಕುಮಾರ್ (40) ಹಾಗೂ ಲಕ್ಷ್ಮಮ್ಮ (55) ಎಂಬುವವರು ಬಲಿಯಾಗಿದ್ದಾರೆ. ಕೊರಟಗೆರೆಯಿಂದ ಕೋಳಾಲ ಮಾರ್ಗವಾಗಿ ಬೆಂಗಳೂರಿಗೆ ಲಕ್ಷ್ಮಿನಾರಾಯಣ ಹೆಸರಿನ ಬಸ್ ನಿತ್ಯ ಸಂಚರಿಸುತ್ತಿತ್ತು. ಬ್ರೇಕ್ ವೈಫಲ್ಯದ ಕಾರಣ ಎರಡು ದಿನಗಳಿಂದ ಗ್ರಾಮದ ಹೊರ ವಲಯದಲ್ಲಿ ಬಸ್ ನಿಲ್ಲಿಸಲಾಗಿತ್ತು. ಸೋಮವಾರ ದುರಸ್ತಿಯಾಗಿ ಬೆಂಗಳೂರಿನತ್ತ ಚಾಲಕ ಮತ್ತು ನಿರ್ವಾಹಕ ಹೊರಟಿದ್ದರು.

ಗ್ರಾಮದ ಬಳಿ ಬರುತ್ತಿದ್ದಂತೆ ಮತ್ತೆ ಬ್ರೇಕ್ ವಿಫಲವಾಗಿದೆ. ಆಗ ಚಾಲಕ ದೂರ ಹೋಗಿ ಎಂದು ಜೋರಾಗಿ ಕಿರುಚಿಕೊಂಡಿದ್ದಾನೆ. ರಸ್ತೆ ಇಳಿಜಾರಾಗಿದ್ದರಿಂದ ನೇರವಾಗಿ ಬಸ್ ಬೇಕರಿಗೆ ನುಗ್ಗಿದೆ.

ಬೇಕರಿ ಒಳಗೆ ಕೆಲಸದಲ್ಲಿ ನಿರತರಾಗಿದ್ದ ಕುಮಾರ್ ಹಾಗೂ ಬೇಕರಿ ಮುಂಭಾಗ ನಿಂತಿದ್ದ ಲಕ್ಷ್ಮಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ರಸ್ತೆಯಲ್ಲಿ ಹಿಂದೆ ಇಂತಹ ಮೂರು ಪ್ರಕರಣಗಳು ಜರುಗಿದ್ದವು. ಆದರೆ ಯಾವುದೇ ಪ್ರಾಣಾಪಾಯ ಆಗಿರಲಿಲ್ಲ.

‘ರಸ್ತೆ ಕಿರಿದಾಗಿದೆ. ವಾಹನಗಳ ಬ್ರೇಕ್ ವಿಫಲವಾದಾಗ ಅಂಗಡಿಗಳಿಗೆ ನುಗ್ಗುತ್ತಿವೆ. ಆದ್ದರಿಂದ ಸಂಬಂಧ ಪಟ್ಟ ಇಲಾಖೆ ರಸ್ತೆ ವಿಸ್ತರಣೆಗೆ ಮುಂದಾಗಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಕೊಳಾಲ ಠಾಣೆ ಪಿಎಸ್ಐ   ಸಂತೋಷ್ ಭೇಟಿ ನೀಡಿದ್ದರು.

ಜೆಡಿಎಸ್ ಅಧ್ಯಕ್ಷ ಸಾವು: ತುಮಕೂರು ತಾಲ್ಲೂಕಿನ ನರಗನಹಳ್ಳಿ ಕಟ್ಟೆ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗ್ರಾಮಾಂತರ ಜೆಡಿಎಸ್ ಘಟಕದ ಅಧ್ಯಕ್ಷ ಡಾ.ಕುಮಾರ್ (48) ಹಾಗೂ ಅವರ ಪುತ್ರ ಜೀವನ್ (14) ಮೃತಪಟ್ಟಿದ್ದಾರೆ.

ಕುಮಾರ್ ಮತ್ತು ಅವರ ಪುತ್ರ ಹೊನ್ನುಡಿಕೆಯಿಂದ ತುಮಕೂರಿನತ್ತ ಕಾರಿನಲ್ಲಿ ತೆರಳುತ್ತಿದ್ದರು. ತುಮಕೂರಿನಿಂದ ಕುಣಿಗಲ್ ಕಡೆಗೆ ಸಾಗುತ್ತಿದ್ದ ಬಸ್, ಕಾರಿಗೆ ಡಿಕ್ಕಿ ಹೊಡೆದಿದೆ. ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಜಿಲ್ಲಾ ಆಸ್ಪತ್ರೆ ಶವಗಾರಕ್ಕೆ ಶವಗಳನ್ನು ರವಾನಿಸಲಾಗಿದೆ. ಡಿ.ಸಿ.ಗೌರಿಶಂಕರ್ ಸೇರಿದಂತೆ ಜೆಡಿಎಸ್ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದರು. ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಸಾವು: ಮಧುಗಿರಿ ತಾಲ್ಲೂಕಿನ ಕಂಬಯ್ಯನಪಾಳ್ಯದಲ್ಲಿ ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಆಚೇನಹಳ್ಳಿ ಗ್ರಾಮದ ಶಿವಮ್ಮ (28) ಎಂಬುವವರು ಮೃತಪಟ್ಟಿದ್ದಾರೆ.

ಕೃಷ್ಣಮೂರ್ತಿ ಎಂಬುವವರ ಪತ್ನಿಯಾದ ಶಿವಮ್ಮ, ತನ್ನ ತಮ್ಮನ ಜೊತೆ ಕೊರಟಗೆರೆ ತಾಲ್ಲೂಕಿನ ಮುಗ್ಗೊಂಡನಹಳ್ಳಿಗೆ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಬಂದ್ ಮತ್ತೊಂದು ಬೈಕ್ ಸವಾರರು ಇವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಶಿವಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT