ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಸ್ವಾಸ್ಥ್ಯಕ್ಕೆ ಭಂಗ ತರುವ ಸಾಮಾಜಿಕ ಜಾಲತಾಣಗಳು

Last Updated 1 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಸಾಮಾಜಿಕ ಜಾಲತಾಣ ಬಳಸುವ ಯುವಕರಲ್ಲಿ ಕೋಪ ಮತ್ತು ಭಯ ಹೆಚ್ಚು. ಇಂದು ಇಡೀ ಜಗತ್ತೆ ಸಾಮಾಜಿಕ ಜಾಲತಾಣಗಳಿಗೆ ತೆರೆದುಕೊಂಡಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರು ಕೂಡ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಅದರಲ್ಲೂ ಯುವಕರಿಗೆ ಇವುಗಳ ಬಳಕೆ ಒಂದು ಹವ್ಯಾಸವಾಗಿದೆ ಎಂದರೆ ಅತಿಶಯೋಕ್ತಿಯಲ್ಲ!

ಸಾಮಾಜಿಕ ಜಾಲತಾಣಗಳನ್ನು ಬಳಸುವ ಬಹುಪಾಲು ಯುವಕರು ಕೋಪ ಮತ್ತು ಭಯದಿಂದ ನರಳುತ್ತಿದ್ದಾರೆ ಎಂದು ಬ್ರಿಟ‌ನ್ನಿನ ಸಂಶೋಧನಾ ಸಂಸ್ಥೆಯೊಂದು ವರದಿ ಮಾಡಿದೆ. ಶೇ 70 ರಷ್ಟು ಯುವಕರು ಸಾಮಾಜಿಕ ಜಾಲತಾಣಗಳ ಗೆಳೆಯರಿಂದ ನಿಂದನೆಗೆ ಒಳಗಾಗಿರುವುದು ಮಾತ್ರವಲ್ಲದೆ ಸೈಬರ್ ಅಪರಾಧದ ಭಯದಿಂದ ಬಳಲುತ್ತಿದ್ದಾರೆ ಎಂದು ಡಿಚ್ ಲೇಬಲ್ ಸಂಸ್ಥೆ ತಿಳಿಸಿದೆ.

ಡಿಚ್ ಲೇಬಲ್ ಸಂಸ್ಥೆ ಆನ್‌ಲೈನ್‌ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆ ಕುರಿತಂತೆ ಅಧ್ಯಯನ ನಡೆಸುವ ಸಂಶೋಧನಾ ಸಂಸ್ಥೆ. ಫೇಸ್‌ಬುಕ್‌, ಟ್ವೀಟರ್ ಮತ್ತು ಇನ್‌ಸ್ಟಾ ಗ್ರಾಂ ಬಳಕೆದಾರರ ಕುರಿತಂತೆ ಇತ್ತೀಚೆಗೆ ಅಧ್ಯಯನ ನಡೆಸಿತ್ತು. ಬ್ರಿಟನ್ನಿನ 10 ಸಾವಿರ ಯುವಕ ಮತ್ತು ಯುವತಿಯರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇವರಲ್ಲಿ ಶೇ 70 ರಷ್ಟು ಯುವಕರು ಜಾಲತಾಣಗಳ ಬಳಕೆಯಿಂದ ಗೆಳೆಯರಿಂದ ವೈಯಕ್ತಿಕ ನಿಂದನೆಗೆ ಗುರಿಯಾಗಿ ಕೋಪಕ್ಕೆ ತುತ್ತಾಗಿದ್ದಾರೆ. ಶೇ 40 ಯುವಕರು ತಿಳಿದಿದ್ದರೂ ವಿವಾದಾತ್ಮಕ ಹಾಗೂ ವೈಯಕ್ತಿಕ ನಿಂದನೆಯ ಸ್ಟೇಟಸ್ ಹಾಕಿ ಸೈಬರ್ ಅಪರಾಧದ ಭಯದಿಂದ ನರಳುತ್ತಿದ್ದಾರೆ ಎಂದು ಈ ಅಧ್ಯಯನ ಸಂಸ್ಥೆ ತಿಳಿಸಿದೆ.

ನಿಂದನಾತ್ಮಕ ಪೋಸ್ಟ್‌ಗಳಿಂದ ಬೇಸತ್ತು ಶೇ 25 ರಷ್ಟು ಬಳಕೆದಾರರು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದಾರೆ. ಒಟ್ಟಾರೆ ಸಾಮಾಜಿಕ ಜಾಲತಾಣಗಳು ಮಾಹಿತಿ ಮತ್ತು ಮನರಂಜನೆ ಕೊಡುವ ಬದಲು ಮಾನಸಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ ಎಂದು ಡಿಚ್ ಲೇಬಲ್ ಅಧ್ಯಯನ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಸರ್ಕಾರಿ ಸವಲತ್ತುಗಳ ಹೊಸ ಆ್ಯಪ್
ದೆಹಲಿಯ ಎಎಪಿ ಸರ್ಕಾರ ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳು ಮತ್ತು ಸವಲತ್ತುಗಳನ್ನು ಒದಗಿಸುವ ಸಲುವಾಗಿ ಹೊಸ ಆ್ಯಪ್ ಅನ್ನು ಅಭಿವೃದ್ಧಿಪಡಿಸುತ್ತಿದ್ದು  ಅಕ್ಟೋಬರ್ ತಿಂಗಳಲ್ಲಿ ಹೊಸ ಆ್ಯಪ್ ಅನ್ನು ಬಿಡುಗಡೆಯಾಗಲಿದೆ.

ಈ ಹೊಸ ಆ್ಯಪ್ ಅನ್ನು ಕರ್ನಾಟಕದ ‘ಸಕಾಲ’ ಯೋಜನೆಯ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತಿರುವುದು ವಿಶೇಷ. ಆ್ಯಪ್‌ನ ಒಂದೇ ವೇದಿಕೆ ಅಡಿಯಲ್ಲಿ ಹಲವಾರು ಸವಲತ್ತುಗಳನ್ನು ಪಡೆಯಬಹುದು ಎಂದು ದೆಹಲಿ ಸರ್ಕಾರದ ತಂತ್ರಜ್ಞಾನ ಇಲಾಖೆ ತಿಳಿಸಿದೆ. ಈ ಆ್ಯಪ್ ನಲ್ಲಿ ಸರ್ಕಾರದ ಎಲ್ಲ ಕಲ್ಯಾಣ ಯೋಜನೆಗಳ ಮಾಹಿತಿಯನ್ನು ಸೇರಿಸಲಾಗಿದೆ. ಇದರ ಜತೆಯಲ್ಲಿ ಕಲ್ಯಾಣ ಯೋಜನೆಗಳಿಗೆ ಅರ್ಜಿಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗೇ ಅರ್ಜಿಯ ಸ್ಥಿತಿ ಗತಿ ನೋಡುವ ಟ್ರ್ಯಾಕ್ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ.

ಉದಾಹರಣೆಗೆ ದೆಹಲಿಯ ನಾಗರಿಕ ರೊಬ್ಬರು ಈ ಆ್ಯಪ್ ಮೂಲಕ ಸರ್ಕಾರದ ವಸತಿ ಯೋಜನೆ ಬಗ್ಗೆ ಮಾಹಿತಿ ತಿಳಿದುಕೊಳ್ಳುತ್ತಾರೆ. ನಂತರ ಇದೇ ಆ್ಯಪ್ ಮೂಲಕ ಮನೆಗಾಗಿ ಆನ್‌ಲೈನ್‌ ಮೂಲಕ ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸುತ್ತಾರೆ.

ಮುಂದಿನ ದಿನಗಳಲ್ಲಿ ತನ್ನ ಅರ್ಜಿಯ ಸ್ಥಿತಿಗತಿ ಕುರಿತು ಟ್ರ್ಯಾಕ್ ಮಾಡುತ್ತಾರೆ. ಅಂತಿಮವಾಗಿ ಮನೆ ನಿರ್ಮಾಣಕ್ಕೆ ಮಂಜೂರಾಗಿರುವ ಹಣ ನಾಗರಿಕರ ಬ್ಯಾಂಕ್ ಶಾಖೆಯಲ್ಲಿ ಜಮೆ ಆಗುವ ತನಕವೂ ಅರ್ಜಿದಾರರು ನಿಗಾ ಇರಿಸಬಹುದು. ಅಡಚಣೆ ಹಾಗೂ ವಿಳಂಬವಾದದಲ್ಲಿ ಆ್ಯಪ್ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬಹುದು. ಇದರಿಂದ ನಾಗರಿಕರು ಪದೇ ಪದೇ ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ.

ರಕ್ತದಾನಿಗಳ ಮಾಹಿತಿ ಆ್ಯಪ್
ಹೈದರಾಬಾದ್‌ನ ಮೂರು ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಆರು ವಿದ್ಯಾರ್ಥಿಗಳು ಸೇರಿ ರಕ್ತದಾನಿಗಳು ಮತ್ತು ರಕ್ತವನ್ನು ಪಡೆಯುವವರ ಮಾಹಿತಿಗಾಗಿ ಹೊಸ ಆ್ಯಪ್  ಅಭಿವೃದ್ಧಿಪಡಿಸಿದ್ದಾರೆ. ಈ ನೂತನ ಆ್ಯಪ್ ಗೆ ಜೆ.ಪಿ. ಮೊರ್ಗಾನ್ ತಂತ್ರಜ್ಞಾನ ಸಂಸ್ಥೆಯ ಪ್ರಶಸ್ತಿ ಸಿಕ್ಕಿದೆ.

ಇದಕ್ಕೆ ಬ್ಲಡ್ ಬ್ರಿಡ್ಜ್‌ ಆ್ಯಪ್ ಎಂದು ನಾಮಕರಣ ಮಾಡಲಾಗಿದೆ. ಇಲ್ಲಿ ರಕ್ತವನ್ನು ದಾನ ಮಾಡುವವರ ಹೆಸರು, ವಿಳಾಸ ಹಾಗೂ ಅವರ ಮೊಬೈಲ್ ಅಥವಾ ದೂರವಾಣಿ ಸಂಖ್ಯೆಯನ್ನು ನಮೂದಿಸಲಾಗಿರುತ್ತದೆ. ರಕ್ತ ಬೇಕಾಗಿರುವವರು ರಕ್ತದ ಮಾದರಿ ಮತ್ತು ಸ್ಥಳದ ಮಾಹಿತಿಯನ್ನು ನಮೂದಿಸಿದರೆ ಸಾಕು ಅದು ರಕ್ತ ದಾನಿಗಳ ಮೊಬೈಲ್ ಸಂಖ್ಯೆಗೆ ಆ ಮಾಹಿತಿ ರವಾನೆಯಾಗುತ್ತದೆ (ನೋಟಿಫಿಕೇಶನ್). ರಕ್ತ ಬೇಕಾಗಿರುವವರ ಹತ್ತಿರದಲ್ಲಿ ಇರುವ ದಾನಿಗಳು ಅವರ ಸ್ಥಳಕೆ ತೆರಳಿ ರಕ್ತವನ್ನು ದಾನ ಮಾಡಬಹುದು ಎಂದು ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿರುವ ವಿದ್ಯಾರ್ಥಿಗಳು ಹೇಳುತ್ತಾರೆ.

ಸದ್ಯಕ್ಕೆ ಹೈದರಾಬಾದ್ ನಗರವನ್ನು ಮಾತ್ರ ಕೇಂದ್ರಿಕರಿಸಿಕೊಂಡು ಈ ಆ್ಯಪ್ ವಿನ್ಯಾಸ ಮಾಡಲಾಗಿದೆ. ಆಂಡ್ರಾಯ್ಡ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಿರುವ ಈ ಆ್ಯಪ್ ಅನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಗೂಗಲ್ ಪ್ಲೇಸ್ಟೋರ್: blood bridge app

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT