ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಿಕಾ ಬದುಕಿನ ಎರಡನೇ ಅಧ್ಯಾಯ

Last Updated 3 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

‘ತುಂಬ ಒಳ್ಳೆಯ ನಟಿ. ಪ್ರತಿಭಾವಂತೆ. ತುಂಬಾ ಚೆನ್ನಾಗಿ ಡಾನ್ಸ್‌ ಮಾಡ್ತಾರೆ. ಆದ್ರೆ... ಸ್ವಲ್ಪ ಜಾಸ್ತಿ ದಪ್ಪ ಆಗಿಬಿಟ್ಟಿದ್ದಾರೆ’

ತನ್ನ ಬಗ್ಗೆ ಇಂಥ ಮಾತುಗಳು ಪದೆ ಪದೆ ಕೇಳಿಬಂದಾಗ ಆ ಹುಡುಗಿ ಸಿಡುಕಲಿಲ್ಲ. ದೇಹವನ್ನೂ ಪ್ರತಿಭೆಯನ್ನೂ ಒಟ್ಟೊಟ್ಟಿಗೇ ತೂಗಿ ನೋಡುವ ಚಿತ್ರರಂಗದ ಬಗ್ಗೆ ಜಿಗುಪ್ಸೆ ಬೆಳೆಸಿಕೊಳ್ಳಲಿಲ್ಲ. ಬದಲಿಗೆ ಕನ್ನಡಿ ಮುಂದೆ ನಿಂತು ತನ್ನನ್ನು ತಾನೇ ಒಮ್ಮೆ ನೋಡಿಕೊಂಡರು. ಜನರ ಮನಸ್ಸಿನಲ್ಲಿನ ‘ನಾಯಕಿ’ ಎಂಬ ಪರಿಕಲ್ಪನೆಗೆ ಹೊಂದಿಕೊಳ್ಳುವ ಹಾಗೆ ತನ್ನ ದೇಹಾಕಾರ ಇಲ್ಲ ಎಂಬ ವಾಸ್ತವವನ್ನು ಒಪ್ಪಿಕೊಂಡರು. ಇದು ತಮ್ಮ ವೃತ್ತಿಜೀವನ ಕವಲೊಡೆಯುವ ಸಂದರ್ಭ ಅನಿಸಿತು. ಮನಸ್ಸನ್ನು ಗಟ್ಟಿಗೊಳಿಸಿ ದೃಢ ನಿರ್ಧಾರ ಮಾಡಿ ತಮಗೆ ತಾವೇ ಹೇಳಿಕೊಂಡರು.

‘ಇನ್ನು ಒಂದು ವರ್ಷ ನಾನು ಚಿತ್ರರಂಗದಿಂದ ದೂರ ಉಳಿಯುತ್ತೇನೆ!’ ಇದೆಲ್ಲ ನಡೆದಿದ್ದು ವರ್ಷದ ಹಿಂದೆ. ಹೀಗೆ ಪ್ರತಿಜ್ಞೆ ಮಾಡಿದ ಹುಡುಗಿ ರೂಪಿಕಾ. ಚಿತ್ರರಂಗದಿಂದ ದೂರ ಇರಲು ಅವರು ನಿರ್ಧರಿಸಿದ್ದು, ಬೇಸರದಿಂದಲ್ಲ. ತಮ್ಮ ದೇಹವನ್ನೂ, ಚೈತನ್ಯವನ್ನೂ ನಟನಾವೃತ್ತಿಯ ಅವಶ್ಯಕತೆಗೆ ತಕ್ಕ ಹಾಗೆ ಸಜ್ಜುಗೊಳಿಸಿಕೊಳ್ಳುವ ಸಂಕಲ್ಪವೂ ಅದರ ಹಿಂದಿತ್ತು. ಹಾಗೆಂದು ಅವರೇನೂ ಒಂದು ವರ್ಷ ಖಾಲಿ ಕುಳಿತುಕೊಳ್ಳಲಿಲ್ಲ. ದಿನದಲ್ಲಿ ನಾಲ್ಕು ಗಂಟೆ ಜಿಮ್‌ನಲ್ಲಿ ಬೆವರು ಹರಿಸಿದರು.

ಜಿಮ್‌ ಮಾಸ್ಟರ್‌ ಅವರ ಕಟ್ಟುನಿಟ್ಟಿನ ಆದೇಶಗಳನ್ನು ಆಜ್ಞಾಧಾರಕಳಾಗಿ ಪಾಲಿಸಿದರು. ಊಟದಲ್ಲಿಯೂ ಅಷ್ಟೇ ಪಥ್ಯ. ಮೈ– ಮನಸ್ಸು ದಣಿಯುವವರೆಗೂ ಡಾನ್ಸ್‌ ಮಾಡಿದರು. ಹೊಸ ಹೊಸ ಸಿನಿಮಾಗಳನ್ನು ನೋಡಿ ಅಭಿನಯದ ಇನ್ನಷ್ಟು ಮಟ್ಟುಗಳನ್ನು ಕರಗತ ಮಾಡಿಕೊಂಡರು. ’ಗೆಜ್ಜೆ’ ಎನ್ನುವ ಡಾನ್ಸ್‌ ಸ್ಟುಡಿಯೊವನ್ನೂ ಪ್ರಾರಂಭಿಸಿದರು. ವರ್ಷವೆಂಬುದು ಕಣ್ಮುಚ್ಚಿ ಬಿಡುವಷ್ಟರಲ್ಲಿ ಕಳೆದುಹೋಗಿತ್ತು. ಕಾಲದ ಕುಲುಮೆಗೆ ತಮ್ಮನ್ನು ಒಡ್ಡಿಕೊಂಡಿದ್ದ ರೂಪಿಕಾ ಅವರೂ ಸಾಕಷ್ಟು ಬದಲಾಗಿದ್ದರು.

‘ರೂಪಿಕಾ ಸಣ್ಣಗಾಗಿದ್ದಾರೆ’ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಹರಡಲು ತುಂಬ ಸಮಯವೇನೂ ತೆಗೆದುಕೊಳ್ಳಲಿಲ್ಲ. ಒಂದೊಂದೇ ಸಿನಿಮಾ ಅವಕಾಶಗಳು ಬರತೊಡಗಿದವು. ಒಂದಕ್ಕಿಂತ ಒಂದು ಭಿನ್ನ. ಪ್ರತಿಯೊಂದು ಅವರ ಪ್ರತಿಭೆಯ ಭಿನ್ನ ಮಜಲುಗಳನ್ನು ಒರೆಗೆ ಹಚ್ಚುವಂಥವೇ. ವರ್ಷದ ಕಾಲ ಜಿಮ್‌ನಲ್ಲಿ ಹರಿಸಿದ್ದ ಬೆವರು, ಮನಸ್ಸಿನ ಏಕಾಗ್ರತೆಯೆಲ್ಲ ಸಾರ್ಥಕತೆಯ ಬಿಂದುವಿನಲ್ಲಿ ಸೇರಿ ಮುಖದಲ್ಲಿ ಧನ್ಯತೆಯ ಮಂದಹಾಸ ಮೂಡಿತು.

ಸದ್ಯಕ್ಕೆ ಅವರು ನಾಯಕಿಯಾಗಿ ನಟಿಸಿರುವ ‘ಮಂಜರಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದರಲ್ಲಿ ಕಣ್ಣಿಗೆ ಲೆನ್ಸ್‌ಗಳನ್ನು ಹಾಕಿ, ಸ್ಟಂಟ್‌ಗಳನ್ನು ಮಾಡಿದ್ದಾರೆ. ‘ರುದ್ರಾಕ್ಷಿಪುರ’ ಎಂಬ ಸಿನಿಮಾದಲ್ಲಿ ಸ್ಟೋನ್‌ ರಿಸರ್ಚ್‌ ಮಾಡುವ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಥರ್ಡ್‌ ಕ್ಲಾಸ್‌’ ಎಂಬ ಪಕ್ಕಾ ಕಮರ್ಷಿಯಲ್‌ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇನ್ನೊಂದು ದೊಡ್ಡ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾವನ್ನೂ ಅವರು ಒಪ್ಪಿಕೊಂಡಿದ್ದು, ಇನ್ನೇನು ಕೆಲಸ ಪ್ರಾರಂಭವಾಗಲಿದೆ. ಇದರ ಜತೆಗೆ ಕಿರುತೆರೆ ವಾಹಿನಿಯ ‘ಮಜಾ ಟಾಕೀಜ್‌’ನಲ್ಲಿಯೂ ನಟಿಸುತ್ತಿದ್ದಾರೆ.

ಹೀಗೆ ತಮ್ಮ ವೃತ್ತಿಬದುಕಿನ ದ್ವಿತೀಯ ಅಧ್ಯಾಯವನ್ನು ಸಾಕಷ್ಟು ಬ್ಯುಸಿಯಾಗಿಯೇ ಆರಂಭಿಸಿರುವ ಖುಷಿಯಲ್ಲಿ ಅವರಿದ್ದಾರೆ.

‘ನಾವು ಮಾಡುವ ಕೆಲಸವನ್ನು ನೂರಕ್ಕೆ ನೂರರಷ್ಟು ವಿಶ್ವಾಸ ಮತ್ತು ಬದ್ಧತೆಯಿಂದ ಮಾಡಿದರೆ ಖಂಡಿತವಾಗಿಯೂ ಒಳ್ಳೆಯ ಪ್ರತಿಫಲ ಸಿಕ್ಕೇ ಸಿಗುತ್ತದೆ. ಎಷ್ಟೋ ಜನ ಇಲ್ಲಿ ಕನ್ನಡದ ನಟಿಯರಿಗೆ ಅವಕಾಶ ಸಿಗುವುದಿಲ್ಲ ಎಂದು ದೂರುತ್ತಿರುತ್ತಾರೆ. ಆದರೆ ನಾನು ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ’ ಎನ್ನುತ್ತಾರೆ ರೂಪಿಕಾ.

ರೂಪಿಕಾ ಅವರ ಮೊದಲಿನ ಹೆಸರು ಅಪೂರ್ವಾ ಡಿ. ಸಾಗರ್‌. ತಾತ ಖ್ಯಾತ ಚಿತ್ರಕಾರ, ಅಜ್ಜಿ, ಮಾವ, ಅಮ್ಮ ಎಲ್ಲರೂ ಸಂಗೀತಗಾರರು. ಹೀಗೆ ಕಲಾವಿದರ ಕುಟುಂಬದಲ್ಲಿಯೇ ಬೆಳೆದ ಹುಡುಗಿ ಅವರು. ತಾಯಿ ಸರ್ಕಾರಿ ನೌಕರಿಯಲ್ಲಿದ್ದಿದ್ದರಿಂದ ಮಗಳನ್ನು ನೋಡಿಕೊಳ್ಳಲು ಸಾಕಷ್ಟು ಸಮಯ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಪ್ಲೇ ಹೋಂ ಬದಲಿಗೆ ಡಾನ್ಸ್‌ ಸ್ಕೂಲಿಗೆ ಸೇರಿಸಿದರು. ಅದೇ ಅಪೂರ್ವಾ ಬದುಕಿನ ತಿರುವಿನ ಮೊದಲ ಬಿಂದು ಎನ್ನಬಹುದು.

ಹದಿನೈದು ವರ್ಷಗಳಿಂದ ಭರತನಾಟ್ಯ ಕಲಿಯುತ್ತಿರುವ ರೂಪಿಕಾ ಅವರಿಗೆ ಸಾವಿರಾರು ಬಹುಮಾನ – ಪ್ರಶಸ್ತಿಗಳು ಬಂದಿವೆ. ಐದು ಸಾವಿರಕ್ಕೂ ಮಿಕ್ಕಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಾಗೆಯೇ ರಂಗಭೂಮಿಯಲ್ಲಿಯೂ ಸಾಕಷ್ಟು ಸಕ್ರಿಯವಾಗಿ ತೊಡಗಿಕೊಂಡಿದ್ದರು.

‘ನಾನು ಶಾಲೆ ಮುಗಿಸಿಕೊಂಡು ಮನೆಗೆ ಓಡಿ ಬರುತ್ತಿದ್ದೆ. ಅಮ್ಮ ನನ್ನ ಅಲಂಕಾರ ಮಾಡುತ್ತಿದ್ದರು. ಅಣ್ಣ ಸಿ.ಡಿ ಸಿದ್ಧಗೊಳಿಸುತ್ತಿದ್ದ. ಅಪ್ಪ ತಮ್ಮ ಚೇತಕ್‌ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಎಲ್ಲೆಲ್ಲಿ ನೃತ್ಯ ಸ್ಪರ್ಧೆ ಇರುತ್ತದೆಯೋ ಅಲ್ಲೆಲ್ಲ ಕರೆದುಕೊಂಡು ಹೋಗುತ್ತಿದ್ದರು. ಆ ದಿನಗಳ ನೆನಪು ನನಗಿನ್ನೂ ಹಸಿರಾಗಿದೆ. ನನ್ನ ವಿಶ್ವಾಸ ವೃದ್ಧಿಸಿದ ಗಳಿಗೆಗಳು ಅವು. ಕಲೆಯ ಬಗ್ಗೆ ನನ್ನಲ್ಲಿ ಗೌರವಭಾವವನ್ನು ಬೆಳೆಸಿದ ಕ್ಷಣಗಳು ಅವು’ ಎಂದು ಬಾಲ್ಯದ ನೆನಪುಗಳನ್ನು ಅವರು ಮೆಲುಕು ಹಾಕುತ್ತಾರೆ.

ಇವರ ಡಾನ್ಸ್‌ ನೋಡಿಯೇ ಅವರಿಗೆ ‘ಪ್ರಕೃತಿ’ ಎಂಬ ಟೆಲಿಫಿಲಂನಲ್ಲಿ ಬಾಲನಟಿಯಾಗಿ ಅಭಿನಯಿಸುವ ಅವಕಾಶ ಬಂತು. ಅದಕ್ಕೆ ಅತ್ಯುತ್ತಮ ಬಾಲನಟಿ ಪ್ರಶಸ್ತಿಯೂ ಬಂತು. ಆಗಿನ್ನೂ ರೂಪಿಕಾ ಎರಡನೇ ತರಗತಿ ವಿದ್ಯಾರ್ಥಿನಿ!

ಅಲ್ಲಿಂದ ಮುಂದೆ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ’ಬೆಳ್ಳಿ ಚುಕ್ಕಿ’ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಹೀಗೆ ಆರಂಭವಾದ ಕಿರುತೆರೆ ಪ್ರಯಾಣ ‘ತ್ರಿವೇಣಿ ಸಂಗಮ’, ’ಬದುಕು’, ‘ಹಸೆಮಣೆ’ ಹೀಗೆ ಹಲವು ಧಾರಾವಾಹಿಗಳಲ್ಲಿ ನಟಿಸುವ ಅವಕಾಶದೊಂದಿಗೆ ಮುಂದುವರಿಯುತ್ತಲೇ ಹೋಯಿತು. ಕಿರುತೆರೆಯಿಂದ ಹಿರಿತೆರೆಗೆ ಅವರು ಜಿಗಿದಿದ್ದು ಗಣೇಶ್‌ ಅಭಿನಯದ ‘ಕೃಷ್ಣ’ ಚಿತ್ರದ ಮೂಲಕ. ಅದರಲ್ಲಿ ಅಂಗವಿಕಲ ಹುಡುಗಿಯಾಗಿ ನಟಿಸಿದ್ದರು. ನಂತರ ’ಸತ್ಯ ಇನ್‌ ಲವ್‌’, ‘ತೀರ್ಥ’, ಹೀಗೆ ಹಲವು ಸಿನಿಮಾ ಕಿರುತೆರೆಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಲೇ ಅವರು ಎಸ್‌. ನಾರಾಯಣ್‌ ನಿರ್ದೇಶನದ ‘ಚೆಲುವಿನ ಚಿಲಿಪಿಲಿ’ ಚಿತ್ರದ ಮೂಲಕ ನಾಯಕಿಯಾಗಿ ಬಡ್ತಿ ಪಡೆದರು.

‘ನಾನು ಒಮ್ಮಿಂದೊಮ್ಮೆಲೇ ಬೆಳಕಿಗೆ ಬಂದ ನಟಿಯಲ್ಲ. ಹಲವು ವರ್ಷಗಳ ಕಾಲ, ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ನಟಿಸುತ್ತಾ ಒಂದೊಂದೇ ಹೆಜ್ಜೆ ಹತ್ತಿ ನಾಯಕಿಯ ಪಟ್ಟ ಗಿಟ್ಟಿಸಿಕೊಂಡವಳು. ಆದ್ದರಿಂದಲೇ ಈಗ ಹಿಂತಿರುಗಿ ನೋಡಿದಾಗ ನಾನು ಮಾಡಿದ ಒಂದೊಂದು ಪಾತ್ರಗಳೂ ನನ್ನ ಯಶಸ್ಸಿನ ದಾರಿಯ ಒಂದೊಂದು ಹೆಜ್ಜೆಗಳಾಗಿ ಕಾಣುತ್ತವೆ. ಸಾಗುವ ದಾರಿಯಿನ್ನೂ ದೂರವಿದೆ’ ಎನ್ನುತ್ತಾರೆ ರೂಪಿಕಾ.

ವಿಕೃತ ಕಾಮಿ ಉಮೇಶ್‌ ರೆಡ್ಡಿ ಬದುಕನ್ನು ಆಧರಿಸಿದ ‘ಖತರ್‌ನಾಕ್‌’ ಚಿತ್ರದಲ್ಲಿ ಅವರು ಗ್ಲ್ಯಾಮರಸ್‌ ಆಗಿ ಕಾಣಿಸಿಕೊಂಡಿದ್ದರು. ಆ ಚಿತ್ರ ತಮ್ಮ ವೃತ್ತಿಜೀವನದ ಮುಖ್ಯ ಸಿನಿಮಾ ಎಂದು ಒಪ್ಪಿಕೊಳ್ಳುತ್ತಲೇ ಮತ್ತೆ ಅಷ್ಟು ಗ್ಲ್ಯಾಮರಸ್ ಆಗಿ ಕಾಣಿಸಿಕೊಳ್ಳಲಾರೆ ಎಂದೂ ಅವರು ಹೇಳುತ್ತಾರೆ. ಒಂದು ಸಲ ಅಂಥ ಪಾತ್ರಗಳಲ್ಲಿ ಕಾಣಿಸಿಕೊಂಡು ಬಿಟ್ಟರೆ ತಮ್ಮನ್ನು ಅದಕ್ಕೇ ಬ್ರ್ಯಾಂಡ್‌ ಮಾಡಿಬಿಡುತ್ತಾರೆ ಎಂಬ ಆತಂಕವೂ ಅವರಿಗಿದೆ.

ಒಂದೇ ರೀತಿಯ ಪಾತ್ರಗಳಿಗೆ ಜೋತುಬೀಳಲಾರೆ ಎನ್ನುವುದು ಅವರ ಖಚಿತ ನಿಲುವು. ’ಪಾತ್ರಕ್ಕೆ ಅವಶ್ಯವಿದ್ದರೆ ಗ್ಲ್ಯಾಮರಸ್‌ ಆಗಿ ಕಾಣಿಸಿಕೊಳ್ಳಬಲ್ಲೆ, ಆದರೆ ಎಕ್ಸ್‌ಪೋಸ್  ಮಾಡಲಾರೆ’ ಎಂದೂ ಹೇಳುತ್ತಾರೆ.

ಈಗ ರೂಪಿಕಾ ಸಿನಿಮಾರಂಗವನ್ನು, ನಟನೆಯನ್ನು ನೋಡುವ ದೃಷ್ಟಿಯಲ್ಲಿಯೂ ಪ್ರಬುದ್ಧತೆ ಬಂದಿದೆ. ‘ನಾನು ನಟಿಸುವ ಸಿನಿಮಾದಲ್ಲಿ ಕಥೆ ತುಂಬಾ ಮುಖ್ಯ’ ಎಂದು ಹೇಳುತ್ತಲೇ ‘ಅದರಲ್ಲಿ ನಾನು ಎಷ್ಟು ಭಿನ್ನವಾಗಿ ಕಾಣಿಸಿಕೊಳ್ಳಬಹುದು, ನನ್ನ ನಟನೆಗೆ ಎಷ್ಟು ಅವಕಾಶ ಇದೆ ಎನ್ನುವುದೂ ಅಷ್ಟೇ ಮುಖ್ಯ’ ಎನ್ನುವಷ್ಟು ಜಾಣೆಯಾಗಿದ್ದಾರೆ. ಅವರ ಅಭಿಲಾಷೆಗೆ ತಕ್ಕ ಪಾತ್ರಗಳೂ ಅವರನ್ನು ಅರಸಿಕೊಂಡು ಬರುತ್ತಿವೆ.

ಸಂಪೂರ್ಣವಾಗಿ ನೃತ್ಯಾಧಾರಿತ ಚಿತ್ರದಲ್ಲಿ ನಟಿಸಬೇಕು ಎನ್ನುವುದು ರೂಪಿಕಾ ಅವರಿಗಿರುವ ದೊಡ್ಡ ಕನಸು. ಅಂಥದ್ದೊಂದು ಅವಕಾಶ ಬಂದೇ ಬರುತ್ತದೆ ಎಂಬ ವಿಶ್ವಾಸವೂ ಅವರಿಗಿದೆ.

ಫಿಟ್‌ ಆಗಿರುವುದು ಮುಖ್ಯ
‘ಇಂದು ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಪ್ರಯೋಗಳನ್ನು ನೋಡಿದರೆ ದಪ್ಪಗಿದ್ದೇನಾ, ಸಣ್ಣಗಿದ್ದೇನಾ ಎನ್ನುವುದು ತುಂಬ ಮುಖ್ಯವಲ್ಲ. ಆದರೆ ನಮಗೂ ನಾವು ತೆರೆಯ ಮೇಲೆ ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಇರುತ್ತದಲ್ಲ. ಹಾಗೆಯೇ ಆರೋಗ್ಯದ ದೃಷ್ಟಿಯಿಂದಲೂ ನಾವು ಫಿಟ್‌ ಆಗಿರುವುದು ತುಂಬ ಮುಖ್ಯ. ಎಲ್ಲರಿಗೂ ನಾಯಕಿ ಎನ್ನುವವರು ಹೀಗೆಯೇ ಇರಬೇಕು ಎನ್ನುವ ಆಲೋಚನೆ ಇರುತ್ತದಲ್ಲ, ಅದಕ್ಕಾದರೂ ನಾವು ಸಣ್ಣಗಿರಬೇಕಾಗುತ್ತದೆ.

ಅದೆಲ್ಲಕ್ಕಿಂತ ಹೆಚ್ಚಾಗಿ ದಪ್ಪಗಾದಾಗ ನನಗೆ ಹೆಚ್ಚು ಕಂಪರ್ಟ್‌ ಆಗಿರುತ್ತಿರಲಿಲ್ಲ. ಇಷ್ಟಪಡುವ ದಿರಿಸು ಹಾಕಿಕೊಳ್ಳಲು ಮುಜುಗರ ಅನಿಸುತ್ತಿತ್ತು. ನಾವು ವರ್ಕೌಟ್‌ ಮಾಡಿ ಫಿಟ್‌ ಆಗಿದ್ದಾಗ ನಮ್ಮ ಜೀವನಶೈಲಿಯೂ ಬದಲಾಗುತ್ತದೆ’ ಎನ್ನುವುದು ರೂಪಿಕಾ ಅಭಿಮತ.

***
ಸೂಪರ್‌ ಸ್ಟಾರ್‌ ಆಗುವ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಒಳ್ಳೆಯ ಕಲಾವಿದೆಯಾಗಿ ಗುರುತಿಸಿಕೊಳ್ಳುವುದು ತುಂಬಾ ಮುಖ್ಯ. ಇವರು ಯಾವುದೇ ಪಾತ್ರ ಕೊಟ್ಟರೂ ಮಾಡುತ್ತಾರೆ ಎಂಬ ವಿಶ್ವಾಸವನ್ನು ಗಳಿಸುವುದು ಸುಲಭವಲ್ಲ. ಆ ವಿಶ್ವಾಸವನ್ನು ಗಳಿಸಿಕೊಂಡಿರುವ ಖುಷಿ ನನಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT