ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 4–8–1967

50 ವರ್ಷಗಳ ಹಿಂದೆ
Last Updated 3 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ತೆರಿಗೆ ಕಳ್ಳರ ಆಸ್ತಿಪಾಸ್ತಿ ಮುಟ್ಟುಗೋಲು ಸಂಭವ

ನವದೆಹಲಿ, ಆ. 3– ತೆರಿಗೆ ಕೊಡದೆ ತಪ್ಪಿಸಿಕೊಳ್ಳುವವರಿಗೆ ಶಿಕ್ಷೆಯಾಗಿ ಆಸ್ತಿಪಾಸ್ತಿ ಮುಟ್ಟುಗೋಲು ಹಾಕುವುದೂ ಸೇರಿ ಉಗ್ರ ಕ್ರಮ ಕೈಗೊಳ್ಳುವುದನ್ನು ಕೇಂದ್ರ ಸರಕಾರ ಪರಿಶೀಲಿಸುತ್ತಿದೆ. ಕೇಂದ್ರ ಅರ್ಥಸಚಿವ ಹಾಗೂ ಉಪ ಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ಇಂದು ಲೋಕಸಭೆಯಲ್ಲಿ ಇದನ್ನು ಹೇಳಿದರು.

ಅಮೀನ್‌ಚಂದ್‌ ಪ್ಯಾರೆಲಾಲ್‌ ಗುಂಪಿನ ಸಂಸ್ಥೆ ತೆರಿಗೆ ಕೊಟ್ಟಿಲ್ಲವೆಂಬ ಆಪಾದನೆ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಶ್ರೀ ದೇಸಾಯಿ ಅವರು ‘ಆದಾಯ ತೆರಿಗೆ ಕೊಡದೆ ತಪ್ಪಿಸಿಕೊಂಡವರ ಬಗ್ಗೆ ಸಾಧ್ಯವಾದ ಪ್ರಕರಣಗಳಲ್ಲೆಲ್ಲಾ ಕಾನೂನು ಕ್ರಮ ಜರುಗಿಸುವಂತೆ ಸೂಚನೆ ಕೊಡಲಾಗಿದೆ’ ಎಂದರು.

**

ಆಯುರ್ವೇದ ವಿಶ್ವವಿದ್ಯಾನಿಲಯ ಸ್ಥಾಪನೆ ಇಲ್ಲ

ಬೆಂಗಳೂರು, ಆ. 3– ಆಯುರ್ವೇದಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಅಗತ್ಯವಿಲ್ಲವೆಂದು ಆರೋಗ್ಯ ಸಚಿವ ಶ್ರೀ ಕೆ. ಪುಟ್ಟಸ್ವಾಮಿ ಅವರು ಇಂದು ವಿದಾನ ಪರಿಷತ್ತಿನಲ್ಲಿ ತಿಳಿಸಿದರು.

ಈ ವರ್ಷ ಬೆಂಗಳೂರಿನಲ್ಲಿ ಆಯುರ್ವೇದ ಕಾಲೇಜನ್ನು ಆರಂಭಿಸಲಾಗುವುದರ ಜೊತೆಗೆ ಮೈಸೂರಿನಲ್ಲಿರುವ ಡಿಪ್ಲೋಮಾ ಕೋರ್ಸ್‌ನ್ನು ಡಿಗ್ರಿ ಕೋರ್ಸ್‌ಗೆ ಏರಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಸಚಿವ ಶ್ರೀ ಪುಟ್ಟಸ್ವಾಮಿ ಅವರು ಹೇಳಿದರು.

**

ಬೆಂಗಳೂರು ನೀರಿನ ದರ ಸಮರ್ಪಕ– ಆರ್‌.ಎಂ. ಪಾಟೀಲ್‌

ಬೆಂಗಳೂರು, ಆ. 3– ಬೆಂಗಳೂರು ನಾಗರಿಕರಿಗೆ ಒದಗಿಸಲಾಗುತ್ತಿರುವ ನೀರಿನ ಮೇಲೆ ವಿಧಿಸಲಾಗಿರುವ ದರ ಸಮರ್ಪಕವಾಗಿದೆ ಎಂದು ಪೌರಾಡಳಿತ ಸಚಿವ ಶ್ರೀ ಆರ್‌.ಎಂ. ಪಾಟೀಲ್‌ ಅವರು ಇಂದು ವಿಧಾನ ಪರಿಷತ್ತಿನಲ್ಲಿ ಸಮರ್ಥಿಸಿದರು.

**

ಕೈ ಮಗ್ಗ ವಸ್ತ್ರಗಳ ‘ರಿಬೇಟ್‌’: ಸರಕಾರ ಪರಿಶೀಲನೆಯಲ್ಲಿ

ಬೆಂಗಳೂರು, ಆ. 3– ದುರುಪಯೋಗಕ್ಕೆ ಅವಕಾಶವಿಲ್ಲದ ಹೊಸ ವಿಧಾನದಲ್ಲಿ ಕೈಮಗ್ಗ ವಸ್ತ್ರಗಳಿಗೆ ‘ರಿಬೇಟ್‌’ ಸೌಲಭ್ಯವನ್ನು ಪುನಃ ಒದಗಿಸಲು ಸರಕಾರ ಪರಿಶೀಲಿಸುತ್ತಿದೆ.

ಸಹಕಾರ ಸಚಿವ ಶ್ರೀ ಪಿ.ಎಂ. ನಾಡಗೌಡರು ಈ ವಿಷಯವನ್ನು ಇಂದು ವಿಧಾನಸಭೆಯಲ್ಲಿ ಶ್ರೀ ಎ.ಜಿ. ದೊಡ್ಡಮೇಟಿ (ಕಾಂ–ರೋಣ್‌) ಅವರಿಗೆ ತಿಳಿಸಿದರು.

‘ರಿಬೇಟ್‌’ ದುರುಪಯೋಗವಾದುದರಿಂದ ರಾಜ್ಯದಲ್ಲಿ ಅದನ್ನು 1964ನೇ ಏಪ್ರಿಲ್‌ 1 ರಿಂದ ನಿಲ್ಲಿಸಲಾಯಿತೆಂದು ಅವರು ತಿಳಿಸಿ, ಈಗ ಕೇಂದ್ರದ ಕೈಮಗ್ಗ ಸಲಹಾ ಮಂಡಳಿ ಸಲಹೆ ಮೇರೆಗೆ ಪರಿಶೀಲಿಸಲಾಗುತ್ತಿದೆ’ ಎಂದರು.

**

ಶಾಸಕರ ವೇತನ ಏರಿಕೆ ಮಸೂದೆಗೆ ತಿದ್ದುಪಡಿ ಮಂಡನೆಗೆ ತೀವ್ರ ವಿರೋದ

ಬೆಂಗಳೂರು, ಆ. 3– ಶಾಸಕರ ಸಂಬಳ– ಭತ್ಯಗಳನ್ನು ಏರಿಸುವ ತಿದ್ದುಪಡಿ ಮಸೂದೆ ಇಂದು ವಿಧಾನಸಭೆಯಲ್ಲಿ ವಿಧಿಗಳ ಪಠಣದ ಕಾಲದಲ್ಲಿ ಶ್ರೀ ಸಿ.ಆರ್‌. ರಂಗೇಗೌಡ ಮತ್ತು ಶ್ರೀ ಎಸ್‌.ಡಿ. ಕೊಠಾವಳೆ ಅವರು ಸೂಚಿಸಿದ್ದ ತಿದ್ದುಪಡಿ ಮಂಡನೆ ಬಗ್ಗೆ ತೀವ್ರ ಆಕ್ಷೇಪಣೆ ಬಂದುದರಿಂದ ನಾಳೆಗೆ ಮುಂದಕ್ಕೆ ಹೋಯಿತು.

ಸಂಬಳ ಮತ್ತು ವಿಶೇಷ ಭತ್ಯ ಪಡೆಯುವ ಹಕ್ಕು ಗಳಿಸಿರುವ ಯಾವುದೇ ಸದಸ್ಯ ಎರಡನ್ನೂ ಅಥವಾ ಅದರಲ್ಲಿ ಒಂದು ಭಾಗವನ್ನು ತನಗೆ ಬೇಕಾಗಿಲ್ಲವೆಂದು ಯಾವಾಗ ಬೇಕಾದರೂ ಸ್ಪೀಕರ್‌ ಅವರಿಗೆ ಅಥವಾ ವಿಧಾನಪರಿಷತ್ತಿನ ಸಭಾಪತಿಗಳಿಗೆ ಬರೆದು ತಿಳಿಸಬೇಕೆಂದೂ ಈ ರೀತಿ ವರ್ಜಿಸಿ ಬರೆದುಕೊಟ್ಟಿದ್ದನ್ನು ಯಾವಾಗ ಬೇಕಾದರೂ ರದ್ದುಪಡಿಸಲು ಅಧ್ಯಕ್ಷರಿಗೆ ಬರಹದಲ್ಲಿ ತಿಳಿಸಬೇಕೆಂದೂ ಈ ತಿದ್ದುಪಡಿಯಲ್ಲಿ ಸೂಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT