ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಹೇರಿಕೆ ನೆಲದ ಭಾಷೆಯನ್ನುಕೊಲ್ಲುವ ಸಂಚು

ವಾರದ ಸಂದರ್ಶನ
Last Updated 5 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಹಿಂದಿ ಹೇರಿಕೆ ವಿರುದ್ಧ ರಾಜ್ಯದಲ್ಲಿ ದೊಡ್ಡ ಮಟ್ಟದ ಕೂಗು ಎದ್ದಿದೆ. ‘ನಮ್ಮ ಮೆಟ್ರೊ’ದಲ್ಲಿ ಹಿಂದಿ ಬಳಕೆ ಕಡ್ಡಾಯಗೊಳಿಸುವುದನ್ನು ವಿರೋಧಿಸಿ ಆರಂಭವಾದ ಈ ಹೋರಾಟದ ವ್ಯಾಪ್ತಿ ವಿಸ್ತಾರವಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆ ಕಣ್ಮರೆಯಾಗುತ್ತಿರುವ ಬಗ್ಗೆಯೂ ಧ್ವನಿ ಎದ್ದಿದೆ. ಇನ್ನೊಂದೆಡೆ ರಾಜ್ಯಕ್ಕೆ ಪ್ರತ್ಯೇಕ ನಾಡಗೀತೆ ಇರುವಂತೆ ಪ್ರತ್ಯೇಕ ಧ್ವಜವೂ ಬೇಕು ಎಂಬ ಬೇಡಿಕೆಯೂ ವ್ಯಕ್ತವಾಗಿದೆ. ಕನ್ನಡದ ಬಗ್ಗೆ ಹೊಸ ಸಂಚಲನ ಮೂಡುತ್ತಿರುವುದರ ನಡುವೆಯೂ ಕನ್ನಡ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿರುವ ಆತಂಕವೂ ತಲೆದೋರಿದೆ.

ಹಿಂದಿ ಹೇರಿಕೆಯನ್ನು ಏಕೆ ವಿರೋಧಿಸಬೇಕು, ಒಕ್ಕೂಟ ವ್ಯವಸ್ಥೆಗೆ ಅದರಿಂದಾಗುವ ಅಪಾಯಗಳೇನು, ಬ್ಯಾಂಕ್‌ಗಳಲ್ಲೂ ಕನ್ನಡ ಏಕೆ ಕಣ್ಮರೆ ಆಗುತ್ತಿದೆ, ಕನ್ನಡ ಶಾಲೆಗಳ ಸಂಖ್ಯೆ ಕುಸಿಯಲು ಕಾರಣಗಳೇನು, ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಗಬೇಕಾದ ಕಾರ್ಯಗಳೇನು ಎಂಬ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ‘ಪ್ರಜಾವಾಣಿ’ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

* ‘ನಮ್ಮ ಮೆಟ್ರೊ’ದಲ್ಲಿ ತ್ರಿಭಾಷಾ ಸೂತ್ರ ಪಾಲನೆಯನ್ನು ಬಲವಾಗಿ ವಿರೋಧಿಸಲು ಕಾರಣವೇನು?
ತ್ರಿಭಾಷಾ ಸೂತ್ರವನ್ನು ಪಾಲಿಸಬೇಕಾದುದು ರೈಲ್ವೆ, ಅಂಚೆ ಕಚೇರಿಯಂತಹ ಕೇಂದ್ರ ಸರ್ಕಾರದ ಉದ್ಯಮಗಳಲ್ಲಿ ಮಾತ್ರ. ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಂತೆಯೇ (ಬಿಎಂಟಿಸಿ) ರಾಜ್ಯ ಸರ್ಕಾರದ ಒಂದು ನಿಗಮ. ಆಡಳಿತ ಭಾಷೆ ವಿಷಯದಲ್ಲಿ ಬಿಎಂಟಿಸಿಗೆ ಅನ್ವಯವಾಗುವ ನಿಯಮಗಳು ಬಿಎಂಆರ್‌ಸಿಎಲ್‌ಗೂ ಅನ್ವಯವಾಗುತ್ತವೆ.  ಕೇಂದ್ರ ಸರ್ಕಾರ ಆರ್ಥಿಕ ನೆರವು ಒದಗಿಸಿದೆ ಎಂಬ ಕಾರಣಕ್ಕೆ ಮೆಟ್ರೊದಲ್ಲಿ ಹಿಂದಿ ಕಡ್ಡಾಯ ಮಾಡಲಾಗದು. ನರ್ಮ್‌, ನರೇಗ ಯೋಜನೆಗಳಿಗೆ ಆರ್ಥಿಕ ನೆರವು ನೀಡಿದಂತೆಯೇ ಮೆಟ್ರೊ ಯೋಜನೆಗೂ ನೆರವು ನೀಡಿದೆ ಅಷ್ಟೇ.

ಮೆಟ್ರೊ ಯೋಜನೆಗೆ ನೆಲ, ಜಲ, ವಿದ್ಯುತ್‌ ನೀಡಿದ್ದು ಕನ್ನಡಿಗರು. ಮೆಟ್ರೋ ಯೋಜನೆಗೆ ವಿದೇಶಿ ಕಂಪೆನಿಗಳಿಂದ ಪಡೆದ  ಸಾಲವನ್ನು ತೀರಿಸುವ ಹೊಣೆಯೂ ರಾಜ್ಯ ಸರ್ಕಾರದ್ದು. ಇದನ್ನೆಲ್ಲ ಗಣನೆಗೆ ತೆಗೆದುಕೊಂಡರೆ ಈ ಯೋಜನೆಯಲ್ಲಿ ಶೇಕಡಾ 70ಕ್ಕೂ ಹೆಚ್ಚಿನ ಪಾಲು ರಾಜ್ಯದ್ದು. ಹಾಗಾಗಿ ಮೆಟ್ರೊದಲ್ಲಿ ದ್ವಿಭಾಷಾ ಸೂತ್ರಕ್ಕೆ ಮಾತ್ರ ಅವಕಾಶ ಇರಬೇಕು.

* ಮೆಟ್ರೊದಲ್ಲಿ ಇಂಗ್ಲಿಷ್‌ ಹಾಗೂ ಕನ್ನಡ ಮಾತ್ರ ಬಳಸಿದರೆ, ಉತ್ತರ ಭಾರತದಿಂದ ಬಂದವರು ಸಮಸ್ಯೆ ಎದುರಿಸುವುದಿಲ್ಲವೇ?
ಬೆಂಗಳೂರಿನಲ್ಲಿ ತೆಲುಗು, ತಮಿಳು, ಮಲಯಾಳಿ, ಗುಜರಾತಿ ಭಾಷೆಯ ಕಾರ್ಮಿಕರು ಹಿಂದಿ ಭಾಷಿಕರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಎಲ್ಲ ಭಾಷೆಗಳನ್ನೂ ಬಳಸಲು ಸಾಧ್ಯವಿದೆಯೇ. ಈ ವಾದಕ್ಕೆ ತಾತ್ವಿಕ ತಳಹದಿ ಇಲ್ಲ. ಹೊರರಾಜ್ಯಗಳಿಗೆ ಹೋದ ಕನ್ನಡಿಗರು ಅಲ್ಲಿನ ಭಾಷೆಯನ್ನು ಕಲಿತಿಲ್ಲವೇ. ಹೊಟ್ಟೆಪಾಡಿಗಾಗಿ ಇಲ್ಲಿಗೆ ಬರುವವರು ಈ ನೆಲದ ಭಾಷೆಯನ್ನು ಕಲಿತು ಮುಖ್ಯವಾಹಿನಿ ಜೊತೆ ಬೆರೆಯಬೇಕು.

* ಬೆಂಗಳೂರು ಕಾಸ್ಮೊಪಾಲಿಟನ್‌ ನಗರ. ಹಿಂದಿ ಬಳಕೆ ನಿರಾಕರಿಸಿದರೆ ಸಂಕುಚಿತ ನಡವಳಿಕೆ ಆಗುವುದಿಲ್ಲವೇ?
ಕನ್ನಡಿಗರು ಯಾವುದೇ ಭಾಷೆಯ ದ್ವೇಷಿಗಳಲ್ಲ. ಸ್ವಂತಿಕೆ ಕಳೆದುಕೊಂಡು ನಾವು ಅನ್ಯಭಾಷೆಗಳನ್ನು ಓಲೈಸಬೇಕಿಲ್ಲ. ಹಿಂದಿ ರಾಷ್ಟ್ರಭಾಷೆ ಅಲ್ಲ. ದಕ್ಷಿಣ ಭಾರತದವರು ಹಿಂದಿಯನ್ನು ಕಲಿಯಬೇಕು ಎಂದಾದರೆ ಉತ್ತರ ಭಾರತದವರು ದಕ್ಷಿಣದ ಭಾಷೆಗಳನ್ನೂ ಕಲಿಯಬೇಕಾಗುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ಸಹಕಾರ, ಸಹಿಷ್ಣುತೆ ಇರಬೇಕಾದರೆ ಒಂದು ಭಾಷೆ ಇನ್ನೊಂದರ ಮೇಲೆ ಆಕ್ರಮಣ ಮಾಡಬಾರದು. ನೆಲದ ಭಾಷೆಯ ಸಾರ್ವಭೌಮತ್ವವನ್ನು ಎತ್ತಿಹಿಡಿಯುವುದು ಒಕ್ಕೂಟ ವ್ಯವಸ್ಥೆಯ ಪ್ರಾಥಮಿಕ ಪಾಠ.  ಹಿಂದಿಯ ಆಕ್ರಮಣ ಜಾಸ್ತಿ ಆಗುತ್ತಿರುವುದರಿಂದಲೇ ಒಡಿಶಾ ಹಾಗೂ ಕೇರಳ ರಾಜ್ಯಗಳೂ ಎಚ್ಚೆತ್ತುಕೊಂಡಿವೆ. ಅವರೂ ಭಾಷಾ ಪ್ರಾಧಿಕಾರ ಸ್ಥಾಪಿಸಲು ಸಿದ್ಧತೆ ನಡೆಸಿದ್ದಾರೆ.

* 2015ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮೆಟ್ರೊದಲ್ಲಿ ತ್ರಿಭಾಷಾ ಸೂತ್ರ ಪಾಲಿಸುವುದಕ್ಕೆ ಸಮ್ಮತಿ ನೀಡಿದ್ದರಲ್ಲವೇ?
ಆ ಕ್ಷಣದ ತಿಳಿವಳಿಕೆ ಕೊರತೆಯಿಂದ ಅವರು ಕೈಗೊಂಡ ನಿರ್ಧಾರವದು. ಆಗಲೇ ಅವರಿಗೆ ತಪ್ಪು ಮನವರಿಕೆ ಆಗಿತ್ತು. ಈ ಲೋಪವನ್ನು ತಿದ್ದಿಕೊಂಡಿದ್ದರು. ಮೆಟ್ರೊದಲ್ಲೂ ದ್ವಿಭಾಷಾ ಸೂತ್ರವನ್ನೇ ಪಾಲಿಸಬೇಕು ಎಂದು ಅವರೂ ಸ್ಪಷ್ಟಪಡಿಸಿದ್ದರು.

* ತ್ರಿಭಾಷಾ ಸೂತ್ರ ಪಾಲನೆಯಿಂದ ಕನ್ನಡಕ್ಕಾಗುವ ನಷ್ಟವಾದರೂ ಏನು?
ರಾಷ್ಟ್ರೀಕೃತ ಬ್ಯಾಂಕ್‌ಗಳು ತ್ರಿಭಾಷಾ ಸೂತ್ರವನ್ನು ಪಾಲಿಸಬೇಕು. ಆದರೆ ಹಾಗಾಗುತ್ತಿಲ್ಲ.  ಕೇಂದ್ರ ಸರ್ಕಾರದ ಸಂಸ್ಥೆಗಳು ಕನ್ನಡವನ್ನು ಕಡೆಗಣಿಸಿವೆ. ಗ್ರಾಮೀಣ ಪ್ರದೇಶದ ಕೆಲವು ಬ್ಯಾಂಕ್‌ಗಳಲ್ಲಿ ಕೇವಲ ಹಿಂದಿಯಲ್ಲೇ ವ್ಯವಹರಿಸಬೇಕಾದ ಪ್ರಮೇಯ ಸೃಷ್ಟಿಯಾಗಿದೆ. ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ಬ್ಯಾಂಕಿನ ಅಧಿಕಾರಿಯೊಬ್ಬರು ಹಿಂದಿಯಲ್ಲೇ ಅರ್ಜಿ ನಮೂನೆ ನೀಡಿದ್ದ ಬಗ್ಗೆ ಪ್ರಾಧಿಕಾರಕ್ಕೆ ದೂರು ಬಂದಿದೆ.

ಕರ್ನಾಟಕದಲ್ಲೇ ಕನ್ನಡಕ್ಕೆ ನೆಲೆ ಇಲ್ಲದಿದ್ದರೆ ಹೇಗೆ. ಹಿಂದಿ ಹಾಗೂ ಇಂಗ್ಲಿಷ್‌ ಬಾರದ ಕನ್ನಡಿಗರು ಹೇಗೆ ವ್ಯವಹಾರ ನಡೆಸಲು ಸಾಧ್ಯ. ಹಿಂದಿ ಹೇರಿಕೆ ನೆಲದ ಭಾಷೆಯನ್ನು ಕೊಲ್ಲುತ್ತದೆ. ಹಿಂದಿಯ ಆಕ್ರಮಣದಿಂದ ನೆಲದ ಭಾಷೆಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಲೇಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಇದನ್ನು ಸೃಷ್ಟಿಸಿದ್ದು ಕೇಂದ್ರ ಸರ್ಕಾರ. ಬ್ಯಾಂಕಿಂಗ್‌ ಪರೀಕ್ಷೆಗಳಲ್ಲಿ ಕನ್ನಡವನ್ನು ಕೈಬಿಡುವುದರಿಂದಲೂ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟಾಗಲಿದೆ. ಏಕಭಾಷೆ, ಏಕದೇಶ ಎಂಬ ಚಿಂತನೆಯೇ ಬಹುತ್ವವನ್ನು ನಾಶಪಡಿಸುವ ನಡೆ. ಬಹುಭಾಷೆ, ಬಹುಸಂಸ್ಕೃತಿಯನ್ನು ಕಳೆದುಕೊಳ್ಳುವುದೆಂದರೆ ದೇಶದ ಅಸ್ಮಿತೆಯನ್ನೇ ಕಳೆದುಕೊಂಡಂತೆ.

2,000 ವರ್ಷಗಳಷ್ಟು ಸುದೀರ್ಘ ಇತಿಹಾಸ ಹೊಂದಿರುವ ಕನ್ನಡ ಹಿಂದಿಗಿಂತ ಯಾವ ದೃಷ್ಟಿಯಿಂದಲೂ ಕಡಿಮೆ ಇಲ್ಲ.  ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿವೆ. ಸರ್‌.ಎಂ.ವಿಶ್ವೇಶ್ವರಯ್ಯ ಅವರಂಥ ಎಂಜಿನಿಯರ್‌, ಸಿ.ಎನ್‌.ಆರ್‌.ರಾವ್, ಯು.ಆರ್‌.ರಾವ್‌ ಅವರಂತಹ ಜಗದ್ವಿಖ್ಯಾತ ವಿಜ್ಞಾನಿಗಳು ಸರ್ಕಾರಿ ಕನ್ನಡ ಶಾಲೆಯಲ್ಲಿ ಕಲಿತವರು.

* ಬ್ಯಾಂಕ್‌ಗಳಲ್ಲಿ ಅನ್ಯಭಾಷಿಕ ಅಧಿಕಾರಿಗಳ ಸಂಂಖ್ಯೆ ಹೆಚ್ಚುತ್ತಿರುವುದರಿಂದಲೇ ಕನ್ನಡ ಕಣ್ಮರೆ ಆಗುತ್ತಿದೆ ಎಂಬ ದೂರು ಇದೆಯಲ್ಲಾ?
ಇದು ನಿಜ. 2014ರ ನೇಮಕಾತಿ ನೀತಿಯನ್ನು ಕೈಬಿಟ್ಟಿದ್ದೇ ಇದಕ್ಕೆ ಕಾರಣ.  ಈ ಹಿಂದೆ ನೇಮಕಾತಿ ವೇಳೆ ಪ್ರಾದೇಶಿಕ ಭಾಷೆಗೆ ಆದ್ಯತೆ ಸಿಗುತ್ತಿತ್ತು. ನಿರ್ದಿಷ್ಟ ರಾಜ್ಯದ ಬ್ಯಾಂಕ್‌ನಲ್ಲಿ ಉದ್ಯೊಗ ಪಡೆಯಲು ಪ್ರಾದೇಶಿಕ ಭಾಷೆಯಲ್ಲೇ 1ರಿಂದ 10ನೇ ತರಗತಿವರೆಗೆ ಕಲಿಯುವುದು ಕಡ್ಡಾಯವಾಗಿತ್ತು. ನೇಮಕಾತಿಗೆ ಆಯಾ ರಾಜ್ಯದ ಪ್ರಾದೇಶಿಕ ಭಾಷೆಯನ್ನು ತಿಳಿದಿದ್ದರೂ ಸಾಕು ಎಂದು 2015ರಲ್ಲಿ ತಿದ್ದುಪಡಿ ಮಾಡಲಾಯಿತು. ಅನಂತರ, ನೇಮಕಾತಿ ವೇಳೆ ಸ್ಥಳೀಯ ಭಾಷೆ ತಿಳಿಯದಿದ್ದರೂ, ಆರು ತಿಂಗಳ ಒಳಗೆ ಕಲಿತುಕೊಂಡರೆ ಸಾಕು ಎಂದು ನಿಯಮ ಬದಲಾಯಿಸಲಾಯಿತು.

ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗೆ ತರಬೇತಿ ನೀಡುವ ಸಂಸ್ಥೆಗಳು ಉತ್ತರ ಭಾರತದಲ್ಲಿ ಹೆಚ್ಚು ಇವೆ. ಅವುಗಳ ಕುತಂತ್ರದಿಂದಾಗಿಯೇ ಉತ್ತರ ಭಾರತದವರು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕಿಂಗ್‌ ಉದ್ಯೋಗ ಪಡೆಯುತ್ತಿದ್ದಾರೆ ಎಂದು ಕೆಲವು ಕನ್ನಡಿಗ ಅಭ್ಯರ್ಥಿಗಳು ದೂರಿದ್ದಾರೆ. ಈ ಪರಿಸ್ಥಿತಿ ಹೀಗೆಯೇ ಮುಂದುವರಿಯಲು ಬಿಟ್ಟರೆ ಒಕ್ಕೂಟ ವ್ಯವಸ್ಥೆ ಅಪಾಯಕ್ಕೆ ಸಿಲುಕಲಿದೆ.

ಬ್ಯಾಂಕಿಂಗ್‌ ಪರೀಕ್ಷೆಗಳನ್ನು  ಪ್ರಾದೇಶಿಕ ಭಾಷೆಗಳಲ್ಲೂ ನಡೆಸುವಂತೆ ರಾಜ್ಯ ಸರ್ಕಾರ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಪತ್ರ ಬರೆದಿದೆ. ದೇಶದ ಕಾನೂನು ರೂಪುಗೊಳ್ಳುವುದು ಸಂಸತ್ತಿನಲ್ಲಿ.  ಭಾಷಿಕ ಸಮುದಾಯದ ಜನರ ಉದ್ಯೋಗ ಕಸಿದುಕೊಳ್ಳುವ ಇಂತಹ ಬೆಳವಣಿಗೆಯನ್ನು ತಡೆಯುವಲ್ಲಿ ಸಂಸದರ ಜವಾಬ್ದಾರಿ ಹೆಚ್ಚು ಇದೆ.

* ನಮ್ಮ ನಾಡಿನ ಕನ್ನಡ ಶಾಲೆಗಳು ಕಣ್ಮರೆ ಆಗುತ್ತಿವೆಯಲ್ಲ. ಇದಕ್ಕೆ ಕಡಿವಾಣ ಹಾಕುವುದು ರಾಜ್ಯ ಸರ್ಕಾರದ ಜವಾಬ್ದಾರಿಯಲ್ಲವೇ?
ಕನ್ನಡಿಗರಿಗೇ ಈ ಭಾಷೆಯ ಬಗ್ಗೆ ಕೀಳರಿಮೆ ಇರುವುದು ಇದಕ್ಕೆ ಕಾರಣ. ಅದು ಮೊದಲು ತೊಲಗಬೇಕು. ದೇಶದ ಎಲ್ಲ ಪ್ರಾದೇಶಿಕ ಭಾಷೆಗಳು ಈ ಸಮಸ್ಯೆ ಎದುರಿಸುತ್ತಿವೆ.

ಶಿಕ್ಷಣ ವ್ಯವಸ್ಥೆಯ ಖಾಸಗೀಕರಣವೂ ಈ ಪರಿಸ್ಥಿತಿಗೆ ಕಾರಣ.  ಶಿಕ್ಷಣ ಈಗ ದಂಧೆಯಾಗಿಬಿಟ್ಟಿದೆ. ಶಿಕ್ಷಣ ಸಂಸ್ಥೆಗಳಿಗೆ  ನೆಲದ ಕಾನೂನು ಲೆಕ್ಕಕ್ಕೇ ಇಲ್ಲ. ಖಾಸಗಿ ಶಾಲೆಗಳಲ್ಲಿ ಕನ್ನಡ ಕಡೆಗಣನೆಗೆ ಕಡಿವಾಣ ಹಾಕಲು  ಸರ್ಕಾರಿ, ಖಾಸಗಿ, ಅನುದಾನಿತ ಶಾಲೆ, ಕೇಂದ್ರೀಯ ವಿದ್ಯಾಲಯ, ಸಿಬಿಎಸ್‌ಇ ಶಾಲೆ, ಐಸಿಎಸ್‌ಸಿ ಶಾಲೆಗಳಲ್ಲೂ 10ನೇ ತರಗತಿವರೆಗೆ ಕನ್ನಡವನ್ನು ಭಾಷೆಯಾಗಿ ಕಲಿಸಬೇಕು ಎಂಬ ನಿಯಮವನ್ನು ರಾಜ್ಯ ಸರ್ಕಾರ ರೂಪಿಸಿದೆ.

* ಈ ಹಿಂದೆ ಕನ್ನಡ ಮಾಧ್ಯಮದಲ್ಲಿ ಶಾಲೆ ಆರಂಭಿಸಲು ಅನುಮತಿ ಪಡೆದು, ಇಂಗ್ಲಿಷ್‌ ಮಾಧ್ಯಮದಲ್ಲಿ ತರಗತಿ ನಡೆಸಿದ ಉದಾಹರಣೆಗಳಿವೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರದ ನಿಯಮ ಜಾರಿಯಾಗುವ ಬಗ್ಗೆ ವಿಶ್ವಾಸ ಹೊಂದುವುದಾದರೂ ಹೇಗೆ?
ಈ ನಿಯಮದ ಅನುಷ್ಠಾನಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರನ್ನು ನೋಡೆಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಈ ನಿಯಮ ಪಾಲನೆ ಬಗ್ಗೆ ಪ್ರಾಧಿಕಾರವೂ ನಿಗಾ ಇಟ್ಟಿದೆ.

ಕನ್ನಡ ಮಾಧ್ಯಮದಲ್ಲಿ ಶಾಲೆ ತೆರೆಯಲು ಅನುಮತಿ ಪಡೆದು ಇಂಗ್ಲಿಷ್‌ ಮಾಧ್ಯಮದ ಶಾಲೆಗಳನ್ನು ನಡೆಸುವುದು ವಂಚನೆ. ದುರದೃಷ್ಟವಶಾತ್‌ ನ್ಯಾಯಾಲಯವು ಇಂತಹ ಶಾಲೆಗಳಿಗೆ ದಂಡ ವಿಧಿಸಲಿಲ್ಲ. ’ಮಾತೃಭಾಷೆ’ಯನ್ನೇ  ಮರುವ್ಯಾಖ್ಯಾನ ಮಾಡಬೇಕಾದ ಸಂದರ್ಭ ಎದುರಾಗಿದೆ. ಪರಿಸರದ ಭಾಷೆ, ಪ್ರಾದೇಶಿಕ ಭಾಷೆ ಅರ್ಥಾತ್‌ ರಾಜ್ಯದಲ್ಲಿ ಪ್ರಧಾನವಾಗಿ ಬಳಕೆ ಆಗುವ ಭಾಷೆಯನ್ನೇ ಮಾತೃಭಾಷೆ ಎಂದು ಪರಿಗಣಿಸಬೇಕು. ನಮ್ಮಲ್ಲಿ ತುಳು, ಕೊಂಕಣಿ, ಕೊಡವ, ಬ್ಯಾರಿ, ಅರೆಭಾಷೆಗಳಂತಹ ಕನ್ನಡದ ಸೋದರ ಭಾಷೆಗಳಿವೆ. ಇವೆಲ್ಲವೂ ಮನೆ ಮಾತು. ಆದರೆ ಅವರ ಮಾತೃಭಾಷೆಯು ಕನ್ನಡ ಎಂದೇ ಪರಿಗಣಿಸಬೇಕು.

ಶಿಕ್ಷಣದ ಖಾಸಗೀಕರಣವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆದಿರುವ ದೊಡ್ಡ ದ್ರೋಹ. 1ರಿಂದ 10ನೇ ತರಗತಿವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು ಎಂಬ ನೀತಿ ನಮ್ಮಲ್ಲಿದೆ. ಆದರೆ, ಈಗ ಶಿಕ್ಷಣ ಉಚಿತವಾಗಿಯೂ ಇಲ್ಲ, ಕಡ್ಡಾಯವಾಗಿಯೂ ಇಲ್ಲ. ಸರ್ಕಾರಿ ಶಾಲೆಗಳ ವಿಲೀನದಿಂದ ಹೊಡೆತ ಬೀಳುತ್ತಿರುವುದೂ  ಶಿಕ್ಷಣ ವಂಚಿತ ಸಮುದಾಯಗಳಿಗೆ.  ಸರ್ಕಾರಿ ಶಾಲೆ ಮುಚ್ಚಿದರೆ ಬಡವರ ಮಕ್ಕಳು, ಕೊಳೆಗೇರಿ ಮಕ್ಕಳು, ಹಳ್ಳಿಗಾಡಿನ ಮಕ್ಕಳು, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ನಾವು  ಶಿಕ್ಷಣ ವ್ಯವಸ್ಥೆಯನ್ನು 100 ವರ್ಷಗಳಷ್ಟು ಹಿಂದಕ್ಕೆ ಒಯ್ಯುತ್ತಿದ್ದೇವೆ. ಶಿಕ್ಷಣದ ಅಸಮಾನತೆಯಿಂದಾಗಿ ಬಡವರ ಮಕ್ಕಳಿಗೆ ವೈದ್ಯಕೀಯ, ಎಂಜಿನಿಯರಿಂಗ್‌, ಎಂಬಿಎಯಂತಹ ಉನ್ನತ  ಶಿಕ್ಷಣ ಗಗನ ಕುಸುಮವಾಗಿದೆ.

* ಸರ್ಕಾರಿ ಶಾಲೆಗಳ ಗುಣಮಟ್ಟದ ಕೊರತೆ ಇದೆ ಎಂಬ ಕಾರಣಕ್ಕೆ ಜನ ಖಾಸಗಿ ಶಾಲೆಗಳತ್ತ ಮುಖಮಾಡುತ್ತಿರುವುದಲ್ಲವೇ?
ಇದೊಂದು ಹಸೀ ಸುಳ್ಳು. ವಾಸ್ತವದಲ್ಲಿ ಸರ್ಕಾರಿ ಶಾಲೆಗಳ ಅಧ್ಯಾಪಕರೇ ಹೆಚ್ಚು ತರಬೇತಾದವರು. ಅವರು ಸ್ಪರ್ಧೆಯಲ್ಲಿ ಗೆದ್ದುಬಂದವರು. ಖಾಸಗಿ ಶಾಲೆ ಶಿಕ್ಷಕರು ಕಡಿಮೆ ಸಂಬಳಕ್ಕೆ ಜೀತ ಮಾಡುವಂತಹ ಪರಿಸ್ಥಿತಿ ಇದೆ. ಮೇಲ್ವಿಚಾರಣಾ ವ್ಯವಸ್ಥೆ ಚೆನ್ನಾಗಿರುವುದರಿಂದ ಖಾಸಗಿ ಶಾಲೆಗಳ ಕಾರ್ಯದಕ್ಷತೆ ಎದ್ದುಕಾಣಿಸುತ್ತದೆ. ಸರ್ಕಾರಿ ಶಾಲೆಗಳ ಅನೇಕ ಶಿಕ್ಷಕರಲ್ಲಿ ವೃತ್ತಿಪರತೆ, ವೃತ್ತಿ ನಿಷ್ಠೆ, ವೃತ್ತಿ ಬದ್ಧತೆಯ ಕೊರತೆ ಇದೆ. ಇದಕ್ಕೆ ಅಪವಾದ ಎಂಬಂತೆ ದಕ್ಷತೆಯಿಂದ ಕಾರ್ಯನಿರ್ವಹಿಸುವ ಶಿಕ್ಷಕರೂ ಇದ್ದಾರೆ. ಅಧ್ಯಾಪಕರನ್ನು ಚುನಾವಣೆ ಕರ್ತವ್ಯ ಹೊರತಾಗಿ ಇತರ ಕೆಲಸಗಳಿಗೆ  ಹಚ್ಚಬಾರದು.

*  ಕನ್ನಡಕ್ಕೆ ಪ್ರತ್ಯೇಕ ಧ್ವಜದ ಅಗತ್ಯವಿದೆಯೇ?
ಒಕ್ಕೂಟ ವ್ಯವಸ್ಥೆಯ ಪ್ರತಿಯೊಂದು ಭಾಷೆಗೂ ಒಂದೊಂದು ಪರಂಪರೆ ಇದೆ. ಭಾಷೆ ಕೇವಲ ಸಂವಹನ ಸಾಧನ ಮಾತ್ರ ಅಲ್ಲ. ಅದೊಂದು ಸಂಸ್ಕೃತಿ. ಅದರ ಸಂಕೇತವಾಗಿ ಧ್ವಜವನ್ನು ಹೊಂದುವುದು ಸಂವಿಧಾನದ ಪ್ರಕಾರವೂ ತಪ್ಪಲ್ಲ. ಇದು ರಾಷ್ಟ್ರಧ್ವಜಕ್ಕೆ ಪೂರಕವೇ ಹೊರತು ಪರ್ಯಾಯ ಅಲ್ಲ.

* ಕನ್ನಡ ಸಂಘಟನೆಗಳು ನೆಲ, ಜಲ ಹಾಗೂ ಭಾಷೆ ಹೆಸರಿನಲ್ಲಿ ಸುಲಿಗೆ ಮಾಡುತ್ತಿವೆ ಎಂಬ ಆರೋಪದ ಬಗ್ಗೆ ಏನನ್ನುತ್ತೀರಿ.
ಕನ್ನಡದ ಸಂಘಟನೆಗಳ ಚಟುವಟಿಕೆಯಿಂದಾಗಿಯೇ ಕನ್ನಡದ ವಾತಾವರಣ ಬೆಳೆಯುತ್ತಿದೆ. ಕನ್ನಡದ ಇಚ್ಛಾಶಕ್ತಿ, ನೆಲದ ಧರ್ಮ ಉಳಿಯಲು ಇವುಗಳ ಕೊಡುಗೆಯೂ ಇದೆ. ಇಂತಹ ಆರೋಪಗಳ ಬಗ್ಗೆ ಸಂಘಟನೆಗಳೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕು.

* ಕನ್ನಡವನ್ನು ಕಟ್ಟುವ ನಿಟ್ಟಿನಲ್ಲಿ ಪ್ರಾಧಿಕಾರ ಯಾವ ರೀತಿಯ ಹೆಜ್ಜೆ ಇಟ್ಟಿದೆ?
ಕನ್ನಡೇತರರಿಗೆ ಕನ್ನಡವನ್ನು ಕಲಿಸಲು ಶಿಬಿರಗಳನ್ನು ಏರ್ಪಡಿಸುತ್ತಿದ್ದೇವೆ. ಕನ್ನಡ ಕಲಿಸುವ ಅಧ್ಯಾಪಕರಿಗೆ ಪ್ರೋತ್ಸಾಹಧನ ನೀಡುತ್ತಿದ್ದೇವೆ. ಅಮೆರಿಕದಲ್ಲೂ ಇಂತಹ ತರಗತಿಗಳು ನಡೆಯುತ್ತಿವೆ. ತರಗತಿ ನಡೆಸುವವರಿಗೆ ಪಠ್ಯಪುಸ್ತಕಗಳನ್ನು ಉಚಿತವಾಗಿ ಒದಗಿಸುತ್ತೇವೆ. ನಮ್ಮ ವೆಬ್‌ಸೈಟ್‌ನಲ್ಲೂ (http://www.kannada-praadhikaara.gov.in) ಪಠ್ಯಗಳು ಲಭ್ಯ.

ಸರ್ಕಾರದ ಇಲಾಖೆಗಳಲ್ಲಿ ಕನ್ನಡದ ಅನುಷ್ಠಾನ ಕುರಿತು ಪರಿಶೀಲಿಸಲು 15 ಜಿಲ್ಲೆಗಳಲ್ಲಿ ಸಭೆ ನಡೆಸಿದ್ದೇನೆ. ರಾಜಧಾನಿಯ 14 ಇಲಾಖೆಗಳ ಕೇಂದ್ರ ಕಚೇರಿಗಳಿಗೂ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಇಲಾಖೆಗಳ ವೆಬ್‌ಸೈಟ್‌ಗಳಲ್ಲಿ ಕನ್ನಡವೇ ಆದ್ಯತೆ ಭಾಷೆ ಆಗಿರಬೇಕು ಎಂದು ಸೂಚಿಸಿದ್ದೇನೆ.

‘ಕನ್ನಡದಲ್ಲಿ ಬರೆದ ಟಿಪ್ಪಣಿ ನೋಡುವುದಿಲ್ಲ’ ಎಂದು ಹೇಳಿದ ಒಬ್ಬ ಐಎಎಸ್‌ ಅಧಿಕಾರಿ ವಿರುದ್ಧ ಕ್ರಮಕ್ಕೆಶಿಫಾರಸು ಮಾಡಿದ್ದೆ. ಆ ಅಧಿಕಾರಿಯನ್ನು ಕೇಂದ್ರ ಸೇವೆಗೆ ವಾಪಾಸ್‌ ಕಳುಹಿಸಲಾಗಿದೆ. ‘ಕನ್ನಡ ಅನುಷ್ಠಾನ ಮಾಡದ ಅಧಿಕಾರಿಗಳಿಗೆ ರಾಜ್ಯದಲ್ಲಿ ಜಾಗ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ  ಸ್ಪಷ್ಟಪಡಿಸಿದ್ದಾರೆ. ಇದು ನಮ್ಮ ಕನ್ನಡ ಕಾಯಕಕ್ಕೆ ಮತ್ತಷ್ಟು ಬಲ ತುಂಬಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT