ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ನಕ್ಷೆ ಅನುಮತಿ ಸರಳೀಕರಣ ನಾಗರಿಕರನ್ನು ನಂಬುವ ಉಪಕ್ರಮ

Last Updated 6 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಕಟ್ಟಡ ನಿರ್ಮಿಸುವವರು ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯಲು ಅನುಸರಿಸಬೇಕಾದ ವಿಧಿವಿಧಾನಗಳ ಸರಳೀಕರಣಕ್ಕೆ ರಾಜ್ಯ ಸರ್ಕಾರ ಕೊನೆಗೂ ಮನಸ್ಸು ಮಾಡಿದೆ. ನಕ್ಷೆ ಅನುಮೋದನೆಗೆ ಎಷ್ಟೆಲ್ಲ ತೊಂದರೆ ಪಡಬೇಕು, ಯಾರ್‍ಯಾರ ಕೈ ಬೆಚ್ಚಗೆ ಮಾಡಬೇಕು ಎನ್ನುವುದು ಅನುಭವಿಸಿದವರಿಗೇ ಗೊತ್ತು.

ನಿಯಮ ಸರಳೀಕರಣ, ಜನರ ಕಷ್ಟವನ್ನು ಕಡಿಮೆ ಮಾಡುತ್ತದೆ; ಅದಕ್ಕಿಂತ ಹೆಚ್ಚಾಗಿ ಭ್ರಷ್ಟಾಚಾರ ಮತ್ತು ಕಿರುಕುಳಕ್ಕೆ ಕಡಿವಾಣ ಹಾಕುತ್ತದೆ. ಈಗ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ಕೊಡುವ ಅಧಿಕಾರ ಸ್ಥಳೀಯ ಸಂಸ್ಥೆಗಳಿಗೆ ಇದೆ.

ಬೆಂಗಳೂರು ಮಹಾನಗರದಲ್ಲಿ ವಸತಿ ಅಥವಾ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ಪಡೆಯಲು ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸುವ ಸೌಕರ್ಯವೂ ಇದೆ. ರಾಜ್ಯದ ಎಲ್ಲೆಡೆ ಪರವಾನಗಿ ನೀಡಿಕೆಯನ್ನು ಸಕಾಲ ವ್ಯಾಪ್ತಿಯಲ್ಲಿ ತರಲಾಗಿದೆ. ಆದರೂ ರಂಗೋಲಿ ಕೆಳಗೆ ತೂರುವುದನ್ನು, ಪ್ರತಿಯೊಂದಕ್ಕೂ ಕೊಕ್ಕೆ ಹಾಕಿ ನಾಗರಿಕರನ್ನು ಗೋಳಾಡಿಸುವುದನ್ನು ಚೆನ್ನಾಗಿ ಕರಗತ ಮಾಡಿಕೊಂಡ ಅಧಿಕಾರಶಾಹಿಗೆ ಇವೆಲ್ಲ ಯಾವ ಲೆಕ್ಕ? ಈ ಕಾರಣಕ್ಕಾಗಿಯೇ ನಿಯಮ ಸರಳೀಕರಣದ ಬೇಡಿಕೆ ಬಹಳ ದಿನಗಳಿಂದಲೂ ಇತ್ತು.

ಕೇಂದ್ರ ಸರ್ಕಾರ ಕೂಡ ಅನವಶ್ಯಕ ಕಾನೂನುಗಳ ರದ್ದು ಮತ್ತು ಸಾರ್ವಜನಿಕರಿಗೆ ತೊಂದರೆ ಕೊಡುವ ನಿಯಮಗಳನ್ನು ಕೈಬಿಡುವುದರ ಪರವಾಗಿದೆ. ತನ್ನ ಈ ನೀತಿಗೆ ಅನುಸಾರವಾಗಿ ಅದು ಮಾದರಿ ನಿಯಮಗಳನ್ನು ರಚಿಸಿ ಕಳೆದ ವರ್ಷವೇ ಎಲ್ಲ ರಾಜ್ಯಗಳಿಗೂ ಕಳುಹಿಸಿತ್ತು.

ಅದನ್ನು ಆಧರಿಸಿ ನಗರಾಭಿವೃದ್ಧಿ ಇಲಾಖೆಯು ‘ಕರ್ನಾಟಕ ನಗರಪಾಲಿಕೆ ಸಾಮಾನ್ಯ ಕಟ್ಟಡಗಳ ಬೈಲಾ– 2017’ರ ಕರಡು ಪ್ರತಿಯನ್ನು ಜುಲೈ 11ರಂದೇ ಸಾರ್ವಜನಿಕರ ಅವಗಾಹನೆಗೆ ಪ್ರಕಟಿಸಿದೆ. ಈಗ ಇದಕ್ಕೆ ರಾಜ್ಯ ಸರ್ಕಾರದ ಒಪ್ಪಿಗೆ ಸಿಗುವುದೊಂದೇ ಬಾಕಿ.

ಈ ಬೈಲಾ ಜಾರಿಗೆ ಬಂದರೆ, ಬೆಂಗಳೂರು ಸೇರಿ ರಾಜ್ಯದ 11 ನಗರ ಪಾಲಿಕೆ ವ್ಯಾಪ್ತಿಯಲ್ಲಿ 5,380 ಚದರ ಅಡಿಗಿಂತ ಕಡಿಮೆ ನಿವೇಶನದಲ್ಲಿ ನಿರ್ಮಿಸುವ ನೆಲ ಅಂತಸ್ತು ಮತ್ತು ಗರಿಷ್ಠ 3 ಅಂತಸ್ತಿನ ವಸತಿ ಕಟ್ಟಡಗಳು ಮತ್ತು 3,760 ಚದರ ಅಡಿಗಿಂತ ಕಡಿಮೆ ನಿವೇಶನದಲ್ಲಿ ನಿರ್ಮಿಸುವ 15 ಮೀಟರ್‌ಗಿಂತ ಕಡಿಮೆ ಎತ್ತರದ ಕೈಗಾರಿಕಾ ಕಟ್ಟಡ ಕಟ್ಟಲು ಅರ್ಜಿದಾರರ ಸ್ವಯಂ ಪ್ರಮಾಣೀಕರಣ ಸಾಕು.

ಪಾಲಿಕೆಗಳು ಇದಕ್ಕಾಗಿಯೇ ಪ್ರತ್ಯೇಕ ಆನ್‌ಲೈನ್‌ ವ್ಯವಸ್ಥೆ ರೂಪಿಸಬೇಕಾಗುತ್ತದೆ. ಸಂದರ್ಭಾನುಸಾರ ವಿವಿಧ ಇಲಾಖೆಗಳಿಂದ ಅನುಮೋದನೆ ಪಡೆಯಲು ಅರ್ಜಿದಾರರು ಸರ್ಕಾರಿ ಕಚೇರಿಗಳ ಕಂಬ ಸುತ್ತುವ ಪ್ರಮೇಯ ಇರುವುದಿಲ್ಲ. ಪಾಲಿಕೆ ಕಚೇರಿಗೆ ಹೋಗಬೇಕಾಗಿಲ್ಲ.

ಒಂದೇ ಅರ್ಜಿ ಸಲ್ಲಿಸಿದರೆ ಸಾಕು. ಇದರಿಂದ ಭ್ರಷ್ಟಾಚಾರ, ಕಿರುಕುಳ, ವಿಳಂಬಕ್ಕೆ ಲಗಾಮು ಹಾಕಬಹುದು. ಮುಂದಿನ ಹಂತದಲ್ಲಿ ಪಂಚಾಯಿತಿಗಳು ಮತ್ತು ಇತರ ಸ್ಥಳೀಯ ಸಂಸ್ಥೆಗಳ ಪ್ರದೇಶದಲ್ಲೂ ಇದು ವಿಸ್ತರಣೆಯಾಗಬೇಕು. ಕಾಲ ಬದಲಾದಂತೆ ಕಾನೂನುಗಳೂ ಬದಲಾಗಬೇಕು. ಆ ದಾರಿಯಲ್ಲಿ ಇದೊಂದು ಸ್ವಾಗತಾರ್ಹ ಹೆಜ್ಜೆ.

ಸ್ವಯಂ ಪ್ರಮಾಣೀಕರಣ ಎಂದರೆ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ಕೊಡುವ ಅಧಿಕಾರವು ಸರ್ಕಾರದಿಂದ ಮಾನ್ಯತೆ ಪಡೆದ ಆರ್ಕಿಟೆಕ್ಟ್, ಎಂಜಿನಿಯರ್‌ ಅಥವಾ ಕಟ್ಟಡ ವಿನ್ಯಾಸ ಸಲಹೆಗಾರರಿಗೇ ದೊರೆಯುತ್ತದೆ. ಇದು ಪ್ರತಿಯೊಂದಕ್ಕೂ ಅಧಿಕಾರಿಯ ಮರ್ಜಿ ಕಾಯುವ ಯಾತನೆಯಿಂದ ಜನಸಾಮಾನ್ಯರನ್ನು ಪಾರು ಮಾಡುತ್ತದೆ.

ಒಂದು ವೇಳೆ ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದರೆ ಮಾಲೀಕ ಮತ್ತು ಅನುಮತಿ ಕೊಟ್ಟ ವೃತ್ತಿಪರರೇ ಹೊಣೆ ಹೊರಬೇಕಾಗುತ್ತದೆ. ಹೊಣೆ ನಿಗದಿ ಮಾಡುವುದರಿಂದ ಮತ್ತು ತಪ್ಪು ಮಾಡಿದರೆ ಕಠಿಣ ಕ್ರಮ ಜರುಗಿಸುವುದರಿಂದ ಅವರಲ್ಲೂ ಜವಾಬ್ದಾರಿ ಮೂಡುತ್ತದೆ. ಹಾಲಿ ವ್ಯವಸ್ಥೆಯಡಿ ಅನುಮತಿ ಪಡೆದು ಕಟ್ಟಿದ ಕಟ್ಟಡಗಳಲ್ಲೂ ನಿಯಮ ಉಲ್ಲಂಘನೆಯ ಬಹಳಷ್ಟು ಉದಾಹರಣೆಗಳು ನಮ್ಮ ಮುಂದಿವೆ.

ಜನ ಯಾಕೆ ನಿಯಮ ಮುರಿಯಲು ಮುಂದಾಗುತ್ತಾರೆ ಎಂಬುದನ್ನು ಗುರುತಿಸಬೇಕು. ಮೂಲ ಉದ್ದೇಶಕ್ಕೆ, ಕಟ್ಟಡಗಳ ಸುರಕ್ಷೆಗೆ ಭಂಗ ಬರದಂತೆ ಅಗತ್ಯ ಬಿದ್ದರೆ ನಿಯಮಗಳಿಗೆ ತಿದ್ದುಪಡಿ ಮಾಡಬೇಕು. ನಿಯಮ ಉಲ್ಲಂಘನೆಯನ್ನು ಗುರುತಿಸುವ, ಕ್ರಮ ಜರುಗಿಸುವ ವಿಧಾನ ಪಾರದರ್ಶಕವಾಗಿರಬೇಕು. ಈ ವಿಷಯದಲ್ಲಿ ಅಧಿಕಾರಿಗಳಿಗೆ ಅತಿಯಾದ ಅಧಿಕಾರ ಕೊಟ್ಟರೆ ಸರಳೀಕರಣದ ಉದ್ದೇಶವೇ ತಲೆಕೆಳಗಾದೀತು.

ಅದು ಇನ್ನೊಂದು ರೂಪದಲ್ಲಿ ಭ್ರಷ್ಟಾಚಾರಕ್ಕೆ ಎಡೆ ಮಾಡೀತು. ಪ್ರಜೆಗಳನ್ನು ನಂಬಬಾರದು ಎನ್ನುವ ಧೋರಣೆಯಲ್ಲಿಯೇ ಬ್ರಿಟಿಷರು ನಮ್ಮನ್ನು ಆಳಿದರು. ಆ ಧೋರಣೆ ಪ್ರಜಾಸತ್ತೆಗೆ ಹೊಂದುವುದಿಲ್ಲ.

ಈಗಾಗಲೇ ಆದಾಯ ಮತ್ತು ಆಸ್ತಿ ತೆರಿಗೆ ಸ್ವಯಂ ಘೋಷಣೆ, ವಿವಿಧ ಪ್ರಮಾಣ ಪತ್ರಗಳಿಗೆ ಗೆಜೆಟೆಡ್‌ ಅಧಿಕಾರಿ ಸಹಿ ಬದಲು ಸ್ವತಃ ಸಹಿ ಮಾಡಿ ಸಲ್ಲಿಸುವ ಅವಕಾಶ ಇದೆ. ಇಲ್ಲೆಲ್ಲ ದುರುಪಯೋಗ ಆಗಿದ್ದು ಕಡಿಮೆ. ಇವೆಲ್ಲ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಉಪಕ್ರಮಗಳು. ಇಂಥವು ಹೆಚ್ಚಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT