ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 7–8–1967

Last Updated 6 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಆಮದು ಮೇಲೆ ನಿರ್ಬಂಧ, ಕಡಿಮೆ ತೆರಿಗೆ: ಆರ್ಥಿಕ ಹಿಂಜರಿಕೆ ಸಮಸ್ಯೆಗೆ ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದ ಪರಿಹಾರ ಸೂತ್ರ
ನವದೆಹಲಿ, ಆ. 6–
ಈಗ ಉಂಟಾಗಿರುವ ಆರ್ಥಿಕ ಹಿಂಜರಿತದ ಸಮಸ್ಯೆ, ನಿವಾರಣೆಗೆ ಕೇಂದ್ರ ಸರ್ಕಾರವು ಆಮದುಗಳ ಮೇಲೆ ನಿರ್ಬಂಧವನ್ನು ವಿಧಿಸಬೇಕು ಹಾಗೂ ಕೈಗಾರಿಕಾ ಕಾರ್ಖಾನೆಗಳಲ್ಲಿ ಪೋಲಾಗುತ್ತಿರುವ ಉತ್ಪಾದನಾ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿಕೊಳ್ಳಬೇಕು ಎಂಬ ಸಲಹೆಗಳನ್ನು ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷ ಇಂದು ಸೂಚಿಸಿತು. ಕೆಲವು ಕೈಗಾರಿಕೆಗಳಲ್ಲಿ ಶೇ. 50 ರಷ್ಟು ಉತ್ಪಾದನಾ ಸಾಮರ್ಥ್ಯ ಪೋಲಾಗುತ್ತಿದೆಯೆಂದು ಅಂದಾಜು ಮಾಡಲಾಗಿದೆ.

ಪ್ರತ್ಯಕ್ಷ ಹಾಗೂ ಪರೋಕ್ಷ ತೆರಿಗಗಳ ಪ್ರಮಾಣವನ್ನೂ ಕಡಿಮೆ ಮಾಡುವುದರಿಂದ ಕೈಗಾರಿಕಾ ಕ್ಷೇತ್ರಕ್ಕೆ ಸಹಾಯವಾಗುವುದೆಂದು ಕೆಲವು ಸದಸ್ಯರ ಮತ.

ತಮ್ಮ ಸ್ಥಿರತೆಯ ಬಗ್ಗೆ ಸೂಕ್ತವಾದ ಭರವಸೆಯ ಕೊರತೆಯಿಂದಾಗಿ ತಮ್ಮ ರಾಜ್ಯದ ಅನೇಕ ಕೈಗಾರಿಕೆಗಳು ರಾಷ್ಟ್ರದ ಇತರೆ ಭಾಗಗಳಿಗೆ ಬದಲಾಯಿಸಿವೆ ಎಂದು ಪಶ್ಚಿಮ ಬಂಗಾಳದ ಸದಸ್ಯರೊಬ್ಬರು ತಿಳಿಸಿದರು.

ದಕ್ಷಿಣದಲ್ಲಿ ಹಿಂದಿಗೆ ವಿರೋಧವಿಲ್ಲ: ಒತ್ತಾಯ ಸಲ್ಲದೆಂದು ನಿಜಲಿಂಗಪ್ಪ
ಭೋಪಾಲ್, ಆ. 6–
‘ದಕ್ಷಿಣ ಭಾರತದಲ್ಲಿ ಹಿಂದೀ ಭಾಷೆಗೆ ವಿರೋಧವಿಲ್ಲ, ಆದರೆ ಅದನ್ನು ಜನರ ಮೇಲೆ ಒತ್ತಾಯಪೂರ್ವಕವಾಗಿ ಹೇರಬಾರದೆಂಬುದೇ ಆಗಿದೆ’ ಎಂದು ಮೈಸೂರು ರಾಜ್ಯದ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ಹೇಳಿದರು.

ಹಿಂದಿಯು ಉತ್ತರದ ಕೆಲವು ರಾಜ್ಯಗಳ ಭಾಷೆ ಮಾತ್ರವೇ ಅಲ್ಲ ಅದು ದಕ್ಷಿಣದ ಭಾರತಕ್ಕೂ ಸಂಬಂಧಿಸಿದ್ದು, ಸ್ವಾಭಾವಿಕವಾಗಿ ಅದು ಬೆಳೆಯುವುದಕ್ಕೆ ಅವಕಾಶ ಕೊಡಬೇಕೆಂದೂ ಅವರು ನುಡಿದರು.

ಪಕ್ಷಾಂತರದ ವಿರುದ್ಧ ಜನತೆಯಲ್ಲಿ ಪ್ರಜ್ಞೆ ಮೂಡಿಸಬೇಕೆಂದು ಅಶೋಕ ಮೆಹ್ತಾ
ನವದೆಹಲಿ, ಆ. 6–
ರಾಷ್ಟ್ರದಲ್ಲಿ ರಾಜಕೀಯ ಪಕ್ಷಾಂತರ ಸಮಸ್ಯೆಯನ್ನು ಎದುರಿಸುವ ಏಕ ಮಾತ್ರ ಮಾರ್ಗವೆಂದರೆ ಅದರ ವಿರುದ್ಧ ಜನತೆಯಲ್ಲಿ ರಾಜಕೀಯ ಪ್ರಜ್ಞೆಯನ್ನು ಉಂಟು ಮಾಡವುದೇ ಆಗಿದೆಯೆಂದು ಕೇಂದ್ರದ ಪೆಟ್ರೋಲಿಯಂ ಹಾಗೂ ರಾಸಾಯನಿಕ ಶಾಖಾ ಸಚಿವ ಶ್ರೀ ಅಶೋಕ ಮೆಹ್ತಾ ಅವರು ಇಂದು ಇಲ್ಲಿ ತಿಳಿಸಿದರು.

‘ಭಾರತದ ನಾನಾ ಪಕ್ಷಗಳ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಾಂತರ’ದ ಬಗ್ಗೆ ವ್ಯವಸ್ಥೆಗೊಳಿಸಲಾಗಿದ್ದ ದುಂಡು ಮೇಜಿನ ಪರಿಷತ್ತಿನ ಅಧ್ಯಕ್ಷತೆಯನ್ನು ಶ್ರೀ ಮೆಹ್ತಾ ಅವರು ವಹಿಸಿದ್ದರು. ಇದಕ್ಕೆ ಪರ್ಯಾಯವೆಂದರೆ ಒಂದೇ ಪಕ್ಷ ನಿಚ್ಚಳ ಬಹುಮತದಿಂದ ಅಧಿಕಾರಕ್ಕೆ ಬರಬೇಕು ಇಲ್ಲವೆ ಯಾವ ಪಕ್ಷವೂ ಇರಬಾರದು ಎಂದೂ ಶ್ರೀ ಮೆಹ್ತಾ ನುಡಿದರು.

ಸರ್ಕಾರಿ ಕ್ಷೇತ್ರದಲ್ಲಿ ಎರಡನೇ ಟೆಲಿಫೋನ್ ಕಾರ್ಖಾನೆ ಸ್ಥಾಪನೆ
ಬೆಂಗಳೂರು, ಆ. 6–
ಸರ್ಕಾರಿ ಕ್ಷೇತ್ರದಲ್ಲಿನ ಎರಡನೆ ಟೆಲಿಫೋನ್ ಕಾರ್ಖಾನೆಯನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಈಚೆಗೆ ನಿರ್ಧಾರ ಕೈಗೊಂಡಿದೆ ಎಂದು ಕೇಂದ್ರ ಸಂಪರ್ಕ ಇಲಾಖೆಯ ಸ್ಟೇಟ್ ಸಚಿವ ಶ್ರೀ ಐ.ಕೆ. ಗುಜ್ರಾಲ್ ಅವರು ಇಂದು ತಿಳಿಸಿದರು.

ತಂತಿ ಸಂಪರ್ಕ ಉಪಕರಣಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದರು. ಆದರೆ ಕಾರ್ಖಾನೆಯ ನಿವೇಶನದ ಬಗ್ಗೆ ಇನ್ನೂ ಅಂತಿಮ ನಿರ್ಣಯಕ್ಕೆ ಬಂದಿಲ್ಲ ಎಂದು ಹೇಳಿದರು.

ಬೆಂಗಳೂರಿನಲ್ಲಿರುವ ಕಾರ್ಖಾನೆಯಲ್ಲಿ ಸಾಕಷ್ಟು ಧನ ಮೂಲವಿಲ್ಲದಿರುವುದರಿಂದ ಎರಡನೇ ಕಾರ್ಖಾನೆಗೆ ಬೇಕಾಗುವ ಬಂಡವಾಳವನ್ನೂ ಸರ್ಕಾರವೇ ಒದಗಿಸುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT