ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶ್ರೀದೇವಿ ಜೊತೆ ನರ್ವಸ್‌ ಆಗಿದ್ದೆ’

Last Updated 7 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಐಎಎಸ್ ಅಧಿಕಾರಿ ಆಗಬೇಕೆಂದಿದ್ದವರು ಬಣ್ಣದ ಬದುಕಿಗೆ ಬಂದದ್ದು ಹೇಗೆ?

ಕ್ರೀಡೆ ಮತ್ತು ಓದು ಎರಡರಲ್ಲೂ ನಾನು ಮುಂದಿದ್ದೆ. ಅಪ್ಪ–ಅಮ್ಮನಿಗೆ ನಾನು ಐಎಎಸ್ ಅಧಿಕಾರಿ ಆಗಬೇಕೆಂಬ ಆಸೆಯಿತ್ತು. ಮುಂಬೈನಲ್ಲಿ ನಡೆಯುತ್ತಿದ್ದ ಫ್ಯಾಷನ್ ಷೋಗಳಲ್ಲಿ ಆಗಾಗ ಭಾಗವಹಿಸುತ್ತಿದ್ದೆ. ಹಾಗೇ ಒಮ್ಮೆ ಪೃಥ್ವಿ ಥಿಯೇಟರ್‌ನಲ್ಲಿ ಮಕರಂದ್‌ ದೇಶಪಾಂಡೆ ಅವರ ನಾಟಕ ನೋಡಿ ರಂಗಭೂಮಿಯತ್ತ ಆಕರ್ಷಿತನಾದೆ. ಅವರ ತಂಡದಲ್ಲಿ ನಟನಾಗಿ ರೂಪುಗೊಂಡೆ.

ಮೊದಲ ಸಿನಿಮಾಕ್ಕೆ ಆಯ್ಕೆಯಾಗಿದ್ದು ಹೇಗೆ?

ನಾಟಕವೊಂದರಲ್ಲಿ ನನ್ನ ಪಾತ್ರ ನೋಡಿ ಮೆಚ್ಚಿದ ನಟ ಮನೋಜ್ ಭಾಜಪೇಯಿ ಅವರು ನನ್ನ ಹೆಸರನ್ನು ನಿರ್ದೇಶಕ ಓಂಪ್ರಕಾಶ್ ಮೆಹ್ರಾ ಅವರಿಗೆ ಸೂಚಿಸಿದರು. ಆಗ ಮೆಹ್ರಾ ಅವರು ‘ಅಕ್ಸ್‌’ ಸಿನಿಮಾ ಮಾಡುತ್ತಿದ್ದರು. ಸ್ಕ್ರೀನ್ ಟೆಸ್ಟ್ ಮಾಡಿದವರೇ ನನ್ನನ್ನು ಪೊಲೀಸ್‌ ಪಾತ್ರಕ್ಕೆ ಆಯ್ಕೆ ಮಾಡಿಕೊಂಡರು. ಅಲ್ಲಿಂದ ಬಾಲಿವುಡ್ ನಂಟು ಆರಂಭವಾಯಿತು.

ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸಿದ್ದೀರಿ. ಇಲ್ಲಿಗೂ ಬಾಲಿವುಡ್‌ಗೂ ಏನು ವ್ಯತ್ಯಾಸ?

ವಿಶೇಷ ವ್ಯತ್ಯಾಸವೇನೂ ಇಲ್ಲ. ಹಾಗೆ ನೋಡಿದರೆ ದಕ್ಷಿಣದಲ್ಲಿ ಸಿನಿಮಾ ಶೂಟಿಂಗ್ ಸರಿಯಾದ ಸಮಯಕ್ಕೆ ಆರಂಭವಾಗಿ ಸರಿಯಾದ ಸಮಯಕ್ಕೆ ಮುಕ್ತಾಯವಾಗುತ್ತದೆ. ಬಾಲಿವುಡ್‌ನಲ್ಲಿ  ಹಾಗಲ್ಲ. ಅಲ್ಲಿ ದೊಡ್ಡ ದೊಡ್ಡ ನಟರ ವರ್ತನೆಯೇ ಭಿನ್ನ. ದಕ್ಷಿಣದಲ್ಲಿ ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ಸಹನಟರ ಜತೆ ‘ಡೌನ್ ಟು ಅರ್ತ್’ ಇರುತ್ತಾರೆ. ನಿಜ ಹೇಳಬೇಕೆಂದರೆ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸುವಾಗ ನನಗೆ ಭಾಷೆಯೇ ಸಮಸ್ಯೆ. ಆಯಾ ಸನ್ನಿವೇಶವನ್ನು ಅರ್ಥಮಾಡಿಕೊಂಡು ನಟಿಸುತ್ತೇನೆ. ಆದರೆ, ಬಾಲಿವುಡ್‌ನಲ್ಲಿ ಈ ತೊಂದರೆ ಇಲ್ಲ.

‘ಮಾಮ್’ ಸಿನಿಮಾದಲ್ಲಿ ನಟಿ ಶ್ರೀದೇವಿ ಎದುರು ವಿಲನ್ ಆಗಿ ಅಭಿನಯಿಸಿದ್ದೀರಿ...

ಹೌದು. ಮೊದಲು ಅವರ ಜತೆ ಅಭಿನಯಿಸುವಾಗ ನರ್ವಸ್ ಆಗಿದ್ದೆ. ಶ್ರೀದೇವಿ ನನ್ನ ಇಷ್ಟದ ನಟಿ. ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು ನಾನು. ಅವರ ಜತೆ ನಟಿಸುತ್ತೇನೆಂಬ ಕಲ್ಪನೆಯೂ ನನಗಿರಲಿಲ್ಲ. ಅವರ ಜತೆ ಅಭಿನಯಿಸಿದ್ದು ಕನಸಿನಂತೆ ಭಾಸವಾಗುತ್ತಿದೆ. ಒಂದು ಸೀನ್‌ನಲ್ಲಿ ಅವರ ತಲೆಕೂದಲು ಹಿಡಿದು ಕೆನ್ನೆಗೆ ಹೊಡೆಯುವ ಸನ್ನಿವೇಶವಿತ್ತು. ಎಷ್ಟೆಂದರೂ ಆ ದೃಶ್ಯ ಪರಿಣಾಮಕಾರಿಯಾಗಿ ಬರಲೇ ಇಲ್ಲ. ಅದನ್ನು ಗ್ರಹಿಸಿದ ಶ್ರೀದೇವಿ ಅವರು ನನಗೆ ‘ನೀವು ತುಂಬಾ ಮೆದುವಾಗಿ ನನ್ನ ಕೆನ್ನೆಗೆ ಹೊಡೆಯುತ್ತಿದ್ದೀರಿ. ನೀವು ಜೋರಾಗಿಯೇ ಹೊಡೆಯಬೇಕು. ಆಗ ಮಾತ್ರ ಆ ದೃಶ್ಯ ಪರಿಣಾಮಕಾರಿಯಾಗುತ್ತೆ’ ಎಂದು ವಿವರಿಸಿ, ಧೈರ್ಯ ತುಂಬಿದರು. ನಂತರ ಆ ದೃಶ್ಯವನ್ನು ಸರಾಗವಾಗಿ ಮಾಡಿದೆ. ಆದರೆ, ನಾನು ಕೊಟ್ಟ ಏಟಿನಿಂದ ಶ್ರೀದೇವಿ ಅವರ ಕೆನ್ನೆಗೆ ನೋವಾಗಿತ್ತು!

‘ಗುಲಾಲ್’ ನಿಮಗೆ ಬ್ರೇಕ್ ನೀಡಿದ ಸಿನಿಮಾ. ಅದರಲ್ಲಿನ ಅಭಿನಯಕ್ಕಾಗಿ ಪ್ರಶಸ್ತಿಯೂ ಸಿಕ್ಕಿತಲ್ಲ...

ಹೌದು. ‘ಗುಲಾಲ್ ’ ನನ್ನ ವೃತ್ತಿ ಬದುಕಿನಲ್ಲಿ ಬ್ರೇಕ್ ನೀಡಿದ ಸಿನಿಮಾ. ಪಟ್ನಾದಂಥ ಸಣ್ಣ ಪಟ್ಟಣದಲ್ಲಿ ಬೆಳೆದ ಹುಡುಗ ನಾನು. ನನ್ನ ಅಭಿನಯದ ಸಿನಿಮಾಕ್ಕೆ ಪ್ರಶಸ್ತಿ ದೊರೆಯಬೇಕೆಂಬ ಮಹದಾಸೆ ನನಗಿತ್ತು. ‘ಗುಲಾಲ್’ ಅಭಿನಯಕ್ಕೆ ಪ್ರಶಸ್ತಿ ಸಿಕ್ಕಾಗ ಅದು ಕನಸಿನಂತೆ ಭಾಸವಾಗುತ್ತಿತ್ತು. ಪ್ರಶಸ್ತಿ ಮೂಲಕ ನನ್ನ ಕೆಲಸ ಗುರುತಾಯಿತು. ಆದರೆ, ಪ್ರಶಸ್ತಿಯೇ ಎಲ್ಲದಕ್ಕೂ ಮಾನದಂಡವಲ್ಲ ಎಂಬ ಅರಿವೂ ಆಯಿತು.

ವಿಲನ್ ರೋಲ್‌ಗಳನ್ನೇ ಮಾಡಿ ಮಾಡಿ ಬೋರ್ ಅನಿಸಲ್ವಾ?

ಹಹ್ಹಹ್ಹ... (ಜೋರಾದ ನಗು) ಹೌದು. ಪ್ರೇಕ್ಷಕರು ನನ್ನನ್ನು ಹೆಚ್ಚಾಗಿ ವಿಲನ್ ಪಾತ್ರಗಳಲ್ಲೇ ನೋಡಿದ್ದಾರೆ. ಆದರೆ, ಪ್ರತಿ ಪಾತ್ರವೂ ಅನನ್ಯವಾಗಿದೆ. ‘ರಕ್ತ ಚರಿತ್ರ‘ದ ಬುಕ್ಕಾ ರೆಡ್ಡಿ ಪಾತ್ರವನ್ನೂ ಈಗಲೂ ನೆನೆಯುವವರಿದ್ದಾರೆ. ಆದರೆ, ನನಗೆ ಬರೀ ವಿಲನ್ ಪಾತ್ರಗಳಿಗೆ ಅಂಟಿಕೊಂಡಿರಲು ಇಷ್ಟವಿಲ್ಲ. ಮುಂಬರುವ ಸಿನಿಮಾಗಳಲ್ಲಿ ಪಾಸಿಟಿವ್ ಶೇಡ್ ಇರುವ ಪಾತ್ರಗಳನ್ನು ಮಾಡುತ್ತಿದ್ದೇನೆ. ಅಂತೆಯೇ ಹಾಸ್ಯ ಪಾತ್ರಗಳಲ್ಲೂ ನಟಿಸುತ್ತಿದ್ದೇನೆ.

‘ಹೋಂ ಮಿನಿಸ್ಟರ್‌’ ಕನ್ನಡದಲ್ಲಿ ನಿಮ್ಮ ಎರಡನೇ ಸಿನಿಮಾ. ಅದರಲ್ಲಿ ನಿಮ್ಮ ಪಾತ್ರವೇನು?

ಹೌದು. ಕನ್ನಡದಲ್ಲಿ ಎರಡನೇ ಬಾರಿಗೆ ನಟಿಸುತ್ತಿದ್ದೇನೆ. ಈ ಮೊದಲು ಪುನೀತ್ ರಾಜ್‌ಕುಮಾರ್ ಅಭಿನಯದ ‘ಚಕ್ರವ್ಯೂಹ’ದಲ್ಲಿ ನಟಿಸಿದ್ದೆ. ಈಗ ನಟ ಉಪೇಂದ್ರ ಅಭಿನಯದ ‘ಹೋಂಮಿನಿಸ್ಟರ್’ನಲ್ಲಿ ನಟಿಸುತ್ತಿದ್ದೇನೆ. ಇದರಲ್ಲಿ ಸೈಕೋ ರೀತಿಯ ಪಾತ್ರ ನನ್ನದು. ಬೆಂಗಳೂರು ಇಷ್ಟವಾಗುತ್ತಿದೆ. ಇಲ್ಲಿನ ಜನರು ಒಳ್ಳೆಯವರು. ಊಟ ಚೆನ್ನಾಗಿದೆ.

ಎಂಥ ಪಾತ್ರಗಳಲ್ಲಿ ನಟಿಸುವಾಸೆ?

ಮಹಾರಾಣಾ ಪ್ರತಾಪ್ ಸಿಂಗ್ ಪಾತ್ರ ಮಾಡಬೇಕೆಂಬ ಆಸೆ ಬಹಳ ಇದೆ. ಯಾರಾದರೂ ಮಹಾರಾಣಾ ಕುರಿತಂತೆ ಐತಿಹಾಸಿಕ ಸಿನಿಮಾ ಮಾಡಲು ಮುಂದೆ ಬಂದರೆ ನಿರ್ಮಾಣದ ಜವಾಬ್ದಾರಿಯನ್ನು ಹೊರಲು ನಾನು ಸಿದ್ಧ.

ಮುಂಬರುವ ಹೊಸ ಸಿನಿಮಾಗಳ ಬಗ್ಗೆ ಹೇಳಿ...

‘ಗನ್ಸ್ ಆಫ್ ಬನಾರಸ್‌’ನಲ್ಲಿ ಪಾಸಿಟಿವ್ ಡಾನ್ ಪಾತ್ರ ಮಾಡುತ್ತಿದ್ದೇನೆ. ಕ್ರೀಡೆಗೆ ಸಂಬಂಧಿಸಿದ ಒಂದು ಸಿನಿಮಾದಲ್ಲಿ ಬ್ಯಾಡ್ಮಿಂಟನ್ ಕೋಚ್ ಪಾತ್ರ ಮಾಡುತ್ತಿದ್ದೇನೆ. ಮತ್ತೊಂದು ಸಿನಿಮಾದಲ್ಲಿ ರಾ ಏಜೆಂಟ್ ಪಾತ್ರ ಮಾಡುತ್ತಿದ್ದೇನೆ. ಪ್ರತಿ ಸಿನಿಮಾದಲ್ಲೂ ನನ್ನ ಪಾತ್ರ ಅನನ್ಯವಾಗಿರಬೇಕೆಂದು ಬಯಸುವೆ. ಹಾಗಾಗಿ, ಪಾತ್ರದ ಆಳ–ಅಗಲಕ್ಕೆ ತಕ್ಕಂತೆ ನನ್ನನ್ನು ರೂಪಿಸಿಕೊಂಡೇ ಅಭಿನಯಕ್ಕೆ ಒಡ್ಡಿಕೊಳ್ಳುವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT