ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾವಡಿಗಳ ಭಗೀರಥರು!

Last Updated 7 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ದಿಲ್‌ಶಾಹಿ ದೊರೆಗಳು ಶತಮಾನಗಳ ಹಿಂದೆಯೇ ಬಾವಡಿಗಳ ಮೂಲಕ ಕಂಡುಕೊಂಡಿದ್ದ ಆ ಜೀವಸೆಲೆಗಳು ಇಂದಿಗೂ ಜೀವಂತವಾಗಿವೆ. ಇವುಗಳನ್ನು ಕಾಪಿಟ್ಟುಕೊಳ್ಳುವ ಹೊಣೆ ನಮ್ಮೆಲ್ಲರದ್ದು. ಆ ನಿಟ್ಟಿನಲ್ಲಿ ನಡೆದ ಕೆಲಸಕ್ಕೊಂದು ದೊಡ್ಡ ಸಲಾಂ’...

ತಾಜ್‌ ಬಾವಡಿ ಮೆಟ್ಟಿಲುಗಳ ಮೇಲೆ ಮಾತಿಗೆ ಸಿಕ್ಕಿದ್ದ ಬಾಷಾಸಾಬ್‌ ವಾಲೀಕಾರ ಖುಷಿಯಿಂದ ಹೇಳುತ್ತಿದ್ದರು. ಹೂಳಿನಿಂದ ಹೂತು ಹೋಗಿದ್ದ ಹಲವು ಬಾವಡಿಗಳು ತಿಂಗಳೊಪ್ಪತ್ತಿನಲ್ಲಿಯೇ ಹೊಸರೂಪ ಪಡೆದಿರುವ ಸಂತೋಷ ಅವರ ಪ್ರತಿ ಮಾತಿನಲ್ಲೂ ವ್ಯಕ್ತವಾಗುತ್ತಿತ್ತು.

ತಮ್ಮೂರಿನ ಹೆಗ್ಗುರುತುಗಳಾದ ಬಾವಡಿಗಳ ಅಸ್ತಿತ್ವವನ್ನೇ ಮರೆತುಬಿಟ್ಟಿದ್ದ ವಿಜಯಪುರದ ಜನಕ್ಕೆ ಈಗ ಅವುಗಳ ಮೇಲೆ ಪ್ರೀತಿ ಉಕ್ಕಿದೆ. ಈ ಅಂದದ ಬಾವಿಗಳನ್ನು ಇದುವರೆಗೆ ತಿರುಗಿಯೂ ನೋಡದಿದ್ದವರು, ಈಗ ನಿತ್ಯ ಬೆಳಗು–ಬೈಗಿನಲ್ಲಿ ಅವುಗಳ ದಂಡೆಯ ಮೇಲೇ ಕಾಲ ಕಳೆಯುತ್ತಿದ್ದಾರೆ. ಜನರ ಮನೋಭಾವ ಹೀಗೆ ಇದ್ದಕ್ಕಿದ್ದಂತೆ ಬದಲಾಗುವಂತೆ ಈ ಬಾವಡಿಗಳು ಮಾಡಿದ ಮೋಡಿಯಾದರೂ ಏನು?

ಹೂಳಿನ ಹೊರೆಯನ್ನೆಲ್ಲ ಕಳೆದುಕೊಂಡಿರುವ ಈ ಬಾವಿಗಳು, ಪುಟ್ಟ ಜಲಪಾತಗಳಂತೆ ಧುಮ್ಮಿಕ್ಕುವ ಝರಿಗಳ ತಾಣಗಳಾಗಿ ಮಾರ್ಪಟ್ಟಿವೆ! ಗುಂಬಜ್‌ ನಗರದ ಜಲತಾಣಗಳ ಒಡಲಿನಲ್ಲಿ ಕ್ಯಾನ್ಸರ್‌ ಗೆಡ್ಡೆಗಳಂತೆ ಬಿದ್ದಿದ್ದ ಹೂಳಿನ ಗುಡ್ಡಗಳನ್ನು ದೈತ್ಯ ಯಂತ್ರಗಳು ಕರಗಿಸುವಾಗ ಕುತೂಹಲದಿಂದ ನೋಡುತ್ತಿದ್ದ ಜನ ಈಗ ಪರಿಶುದ್ಧ ನೀರಿನಿಂದ ತುಂಬಿದ ಬಾವಡಿಗಳ ವೀಕ್ಷಣೆಗೆ ಲಗ್ಗೆ ಇಡುತ್ತಿದ್ದಾರೆ.

2017ರ ಬೇಸಿಗೆ ವಿಜಯಪುರ ಜನರಿಗೆ ಮರೆಯಲಾರದ ‘ಜಲ ಸಾಕ್ಷರತೆ’ಯ ಪಾಠ ಕಲಿಸಿದೆ. ಆಲಮಟ್ಟಿ ಜಲಾಶಯದ ನೀರಿನಮಟ್ಟ ಮೊದಲ ಬಾರಿಗೆ ಕನಿಷ್ಠ ಮಟ್ಟಕ್ಕೆ ಇಳಿದಿದ್ದರಿಂದ, ಕೃಷ್ಣೆಯನ್ನೇ ಅವಲಂಬಿಸಿದ್ದ ಈ ಐತಿಹಾಸಿಕ ಊರು ಬಾಯಾರಿಕೆಯಿಂದ ಬಿಕ್ಕಳಿಸಿತ್ತು.

ತಮ್ಮೂರಿನ ಜನ ನೀರಿಗಾಗಿ ಹಾಹಾಕಾರ ಹಾಕುವುದನ್ನು ತಪ್ಪಿಸಲು, ಪರ್ಯಾಯ ಮಾರ್ಗಗಳ ಹುಡುಕಾಟದಲ್ಲಿದ್ದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರಿಗೆ ಮೊದಲು ಹೊಳೆದಿದ್ದು ಆದಿಲ್‌ ಶಾಹಿಗಳು ತಮ್ಮ ಆಳ್ವಿಕೆಯಲ್ಲಿ ನೀರಿಗಾಗಿ ನಿರ್ಮಿಸಿಕೊಂಡಿದ್ದ ಐತಿಹಾಸಿಕ ಬಾವಡಿಗಳ ಪುನಃಶ್ಚೇತನ.

ಮುಖ್ಯ ಜಲಮೂಲಗಳಾಗಿದ್ದ ಈ ಬಾವಡಿಗಳು ಹಿಂದೆ ಇಡೀ ನಗರದ ನೀರಿನ ಅಗತ್ಯ ಪೂರೈಸುತ್ತಿದ್ದವು. ಆದರೆ, ನಲ್ಲಿಗಳಲ್ಲಿ ಪೂರೈಕೆ ಶುರುವಾಗುತ್ತಿದ್ದಂತೆ ಅವುಗಳು ಮಹತ್ವ ಕಳೆದುಕೊಂಡು, ನಿರ್ವಹಣೆಯಿಲ್ಲದೆ ಶಿಥಿಲಾವಸ್ಥೆಗೆ ತಲುಪಿದ್ದವು.

ಕೆರೆ ತುಂಬುವ ಯೋಜನೆಯಡಿ 2016ರಲ್ಲಿ ಐತಿಹಾಸಿಕ ಬೇಗಂ ತಾಲಾಬ್‌, ಭೂತನಾಳ ಕೆರೆ ಒಡಲನ್ನು ಕೃಷ್ಣೆ ಮೈದುಂಬಿದ ಬಳಿಕ ವಿಜಯಪುರದಲ್ಲಿನ ಬಾವಡಿಗಳ ಸೆಲೆಯೂ ಹೆಚ್ಚಿತ್ತು. ಇವುಗಳಿಗೆ ಕಾಯಕಲ್ಪ ಭಾಗ್ಯ ಕರುಣಿಸಿದರೆ, ಸುತ್ತಮುತ್ತಲಿನ ಜನತೆಗೆ ನೀರು ಪೂರೈಸಬಹುದು ಎಂಬ ಆಲೋಚನೆ ಸ್ಪಷ್ಟ ರೂಪ ತಳೆಯುತ್ತಿದ್ದಂತೆ, ಆರಂಭಗೊಂಡಿದ್ದೇ ‘ಬಾವಡಿಗಳ ಪುನರುಜ್ಜೀವನ ಯೋಜನೆ’.

‘ನೀರ ನೆಮ್ಮದಿಯ ನಾಳೆಗಾಗಿ’ ಜಲಸಂಪನ್ಮೂಲ ಸಚಿವರು ತಜ್ಞರ ಜತೆ ಚರ್ಚಿಸಿದರು. ವಿವರವಾದ ಯೋಜನಾ ವರದಿ ಸಿದ್ಧವಾಯಿತು. ಸರ್ಕಾರದಿಂದ ಈ ಯೋಜನೆ ಅನುಷ್ಠಾನಗೊಳ್ಳಬೇಕು ಎಂದರೆ ತಕ್ಷಣಕ್ಕೆ ಸಾಧ್ಯವಿಲ್ಲ ಎಂಬುದನ್ನರಿತಿದ್ದ ಸಚಿವರು ಖಾಸಗಿ ಸಹಭಾಗಿತ್ವ ಬಯಸಿದರು.

ಜಲಸಂಪನ್ಮೂಲ ಇಲಾಖೆಯ ಗುತ್ತಿಗೆದಾರರೇ ಯೋಜನೆಗೆ ನೆರವು ನೀಡಲು ಮುಂದಾದರು. ಒಬ್ಬೊಬ್ಬರು ಒಂದೊಂದು ಬಾವಡಿಯ ಸ್ವಚ್ಛತಾ ವೆಚ್ಚ ಭರಿಸಲು ಮುಂದೆ ಬರುತ್ತಿದ್ದಂತೆಯೇ ಬಾವಡಿಗಳ ಪುನರುಜ್ಜೀವನ ಕಾರ್ಯ ಏಕಕಾಲಕ್ಕೆ ಶುರುವಾಯಿತು. 25 ಅರ್ಥ್‌ ಮೂವರ್‌ಗಳು, ಆರು ಬೃಹತ್‌ ಕ್ರೇನ್‌ಗಳನ್ನು ಬಾವಡಿಯೊಳಗೆ ಇಳಿಸಿ ಕಂಟೇನರ್‌ಗಳಲ್ಲಿ ಹೂಳನ್ನು ಎತ್ತಿ ಹೊರ ಹಾಕಲಾಯಿತು.

ಬಾವಡಿಗಳ ಕಾಯಕಲ್ಪ ಕಾಮಗಾರಿಗೆ ಚಾಲನೆ ನೀಡುತ್ತಿದ್ದಂತೆ, ಯೋಜನೆಯ ವೆಚ್ಚ ಹೆಚ್ಚುತ್ತಾ ಹೋಯಿತು. ದೇಣಿಗೆ ನೀಡಲೊಪ್ಪಿದ್ದ ಗುತ್ತಿಗೆದಾರರು ಸಹ ಖುಷಿಯಿಂದಲೇ ಹೆಚ್ಚಿನ ಮೊತ್ತವನ್ನೂ ಭರಿಸಿದರು. ತಾಜ್‌ ಬಾವಡಿಯೊಂದನ್ನು ಹೊರತುಪಡಿಸಿ ಮಿಕ್ಕವು ತಿಂಗಳೊಳಗೆ ಸ್ವಚ್ಛಗೊಂಡವು. ಜಲಧಾರೆ ಧುಮ್ಮಿಕ್ಕಿತು. ಸ್ವಚ್ಛ ನೀರು ಅವುಗಳ ಒಡಲು ತುಂಬಿತು. ಪಿಒಪಿ ಗಣಪ ಮೂರ್ತಿಗಳನ್ನೇ ದಶಕದಿಂದ ತನ್ನೊಡಲಲ್ಲಿ ತುಂಬಿಕೊಂಡು ‘ತ್ಯಾಜ್ಯ’ ಬಾವಡಿ ಎಂದೇ ಬಿಂಬಿತಗೊಂಡಿದ್ದ, ತಾಜ್‌ ಬಾವಡಿ ಇದೀಗ ‘ವಾವ್ಹ್‌ ತಾಜ್‌..!’ ಎಂಬ ಉದ್ಗಾರ ಹೊರಡುವಂತೆ ಮಾಡುತ್ತಿದೆ.

ದಶಕಗಳಿಂದಲೂ ಹೂಳು ತುಂಬಿದ್ದ ಬಾವಡಿ, ಸ್ವಚ್ಛಗೊಳ್ಳುವ ಮುನ್ನ ತನ್ನೊಡಲಲ್ಲಿ 43,000 ಕ್ಯೂಬಿಕ್‌ ಮೀಟರ್ ಹೊಲಸು ತುಂಬಿಕೊಂಡಿತ್ತು. ಇದರಲ್ಲಿ ಬಹುತೇಕ ಪ್ರಮಾಣದ ಹೂಳು ಪಿಒಪಿ ಗಣಪನ ಮೂರ್ತಿಗಳಿದ್ದಾಗಿತ್ತು.

ನಗರದ ಹಿರಿಯರು ಹೇಳುವಂತೆ 1980ರ ದಶಕದಲ್ಲಿ ವಿ.ಕೆ.ಗೋರೆಯವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಬಾವಡಿ ಸ್ವಚ್ಛಗೊಳ್ಳುವ ಪ್ರಯತ್ನ ನಡೆದಿತ್ತು. ಆದರೆ, ಆಗಲೂ ಪೂರ್ಣ ಹೂಳು ತೆಗೆದಿರಲಿಲ್ಲ. ಮೊದಲ ಸಲ ಅಂತಹ ಸಾಹಸಕ್ಕೆ ಕೈ ಹಾಕಲಾಗಿದೆ.

ತಾಜ್‌ ಬಾವಡಿ ಭರ್ತಿಯಾಗುವ ಮುನ್ನ ಸುತ್ತಲೂ ಧುಮ್ಮಿಕ್ಕುತ್ತಿದ್ದ 20ಕ್ಕೂ ಹೆಚ್ಚು ಝರಿಗಳು ಮಲೆನಾಡಿನ ದಟ್ಟ ಕಾನನದೊಳಗಿನ ಪರ್ವತ ಶ್ರೇಣಿಗಳಲ್ಲಿ ಅಲ್ಲಲ್ಲೇ ಬಂಡೆಗಳ ಸಂದಿನಲ್ಲಿ ಚಿಮ್ಮುವ ಝರಿಗಳ ಚಿತ್ರಣವನ್ನು ನೆನಪಿಸುತ್ತಿದ್ದವು. ಇದೀಗ ಧುಮ್ಮಿಕ್ಕುವ ಝರಿಗಳು ನೀರಿನಲ್ಲಿ ಮುಳುಗಿವೆ. ಬಾವಡಿಯ ನೀರಿನ ಶೇಖರಣೆಯೂ ಹೆಚ್ಚಿದೆ. ಈಗ ಒಂದೆರೆಡು ಝರಿಗಳಷ್ಟೇ ವೀಕ್ಷಣೆಗೆ ಲಭ್ಯ.

‘ಐತಿಹಾಸಿಕ ಬಾವಡಿಯನ್ನು ಪುನರುತ್ಥಾನಗೊಳಿಸುವ ಕೆಲಸ ಮಾಡಿದವರಿಗೆ ನಾವು ಅಭಿನಂದಿಸಲೇಬೇಕು’ ಎನ್ನುತ್ತಾರೆ ಧುಮ್ಮಿಕ್ಕುವ ಝರಿಗಳನ್ನು ಕಂಡು ಖುಷಿಪಟ್ಟ ಗುರುರಾಜ ಹುಣಶ್ಯಾಳ.

ಬೃಹತ್ ಮೋಟರ್‌ ಮೂಲಕ ಬಾವಡಿಯೊಳಗಿನ ಹೊಲಸು ನೀರನ್ನು 20 ದಿನಗಳವರೆಗೆ ಹೊರ ಹಾಕಲಾಯಿತು. ನಂತರ ಹೂಳೆತ್ತುವ ಪ್ರಕ್ರಿಯೆ ನಡೆಯಿತು. ನದಿಯ ನೀರಿನ ಮಧ್ಯೆ ಮರಳು ತೆಗೆಯುವ ಬೋಟ್‌ಗಳನ್ನು ತಾಜ್‌ ಬಾವಡಿಯ ಹೂಳೆತ್ತಲು ಬಳಸಿದ್ದು ವಿಶೇಷ. ಬೃಹತ್‌ ಕ್ರೇನ್‌ಗಳ ಮೂಲಕ ಮೂರು ಬೋಟ್‌ಗಳನ್ನು, ಎರಡು ಹಿಟಾಚಿಗಳನ್ನು ತಾಜ್‌ ಬಾವಡಿಯೊಳಗೆ ಇಳಿಸಿ, ಅದರೊಳಗಿದ್ದ ಹೂಳನ್ನು ಸತತ ಒಂದು ತಿಂಗಳವರೆಗೆ, ಬೃಹತ್‌ ಕಂಟೇನರ್‌ಗಳ ಮೂಲಕ ಹೊರ ಹಾಕಲಾಯಿತು. ಬಾವಡಿ ಸ್ವಚ್ಛಗೊಳ್ಳಲು ಆರಂಭಿಸುತ್ತಿದ್ದಂತೆ ತೆರೆದುಕೊಂಡ ನೀರಿನ ಸೆಲೆಗಳು ಚಿಮ್ಮಲು ಆರಂಭಿಸಿದವು.

ದಟ್ಟ ಕಾನನ ಇಲ್ಲ. ಪರ್ವತ ಶ್ರೇಣಿಯೂ ಇಲ್ಲಿಲ್ಲ. ಬರದ ನಾಡು, ಬಯಲು ಸೀಮೆಯ ಬೀಡಿದು. ಬಿಸಿಲ ನಾಡಿನಲ್ಲಿ ಪುಟ್ಟ ಝರಿಗಳ ಜಲಧಾರೆ ಧುಮ್ಮಿಕ್ಕುವ ಚಿತ್ರಣ ಕಣ್ತುಂಬಿಕೊಳ್ಳುವುದೇ ಒಂದು ಆನಂದ.

ಬಾವಡಿಗಳ ಹೊಸರೂಪ ಕಂಡು ಖುಷಿಪಡುತ್ತಿರುವ ರಘು ಸುಣಗಾರ, ‘ಇವುಗಳನ್ನು ಹೀಗೇ ಕಾಪಾಡಿಕೊಳ್ಳಬೇಕೆಂದರೆ ನೀರಿನ ಬಳಕೆಯಾಗಬೇಕು. ಜತೆಗೆ ಅವುಗಳ ಒಡಲಲ್ಲಿ ಸ್ನಾನ ಮಾಡುವುದು, ಬಟ್ಟೆ ಒಗೆಯುವುದು, ಗಣೇಶ ವಿಸರ್ಜಿಸುವುದು ಸ್ಥಗಿತಗೊಳ್ಳಬೇಕು’ ಎನ್ನುತ್ತಾರೆ.

‘ಗುತ್ತಿಗೆದಾರ ಡಿ.ವೈ.ಉಪ್ಪಾರ ಒಡೆತನದ ಕಂಪೆನಿ ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಮೂಲಕ ತಾಜ್ ಬಾವಡಿಗೆ ಕಾಯಕಲ್ಪ ಒದಗಿಸುವ ಯೋಜನೆಗೆ ₹ 2.5 ಆರ್ಥಿಕ ನೆರವು ನೀಡಿದೆ’ ಎಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಮಾಹಿತಿ ನೀಡುತ್ತಾರೆ.

ತಾಜ್‌ ಬಾವಡಿ ಸ್ವಚ್ಛಗೊಂಡು ಶುದ್ಧ ನೀರಿನಿಂದ ಭರ್ತಿ ಯಾಗಿದೆ. ಸುತ್ತಲೂ ಮೆಷ್‌ ಅಳವಡಿಸಲಾಗಿದೆ. ಪ್ರವೇಶದ್ವಾರದ ಬಳಿ ಟೈಲ್ಸ್‌ ಹಾಕಿ ಸುಂದರಗೊಳಿಸಲಾಗಿದೆ. ಸಂರಕ್ಷಿತ ಸ್ಮಾರಕ ತಾಣದಲ್ಲಿ ಕೈಗೊಳ್ಳಬೇಕಿದ್ದ ಎಲ್ಲ ಸುರಕ್ಷಿತ ಕ್ರಮಗಳನ್ನು ಇದೀಗ ತೆಗೆದುಕೊಳ್ಳಲಾಗಿದೆ. ನೀರಿನ ಬಳಕೆಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸುವ ಕೆಲಸವೂ ನಡೆದಿದೆ.

‘ನಮ್ಮಿಂದ ಇಂತಹ ಕಲಾತ್ಮಕ ಬಾವಡಿ ನಿರ್ಮಾಣ ಅಸಾಧ್ಯ. ಪೂರ್ವಿಕರು ನಿರ್ಮಿಸಿರುವ ಬಾವಡಿಗೆ ಕಾಯಕಲ್ಪ ನೀಡಿದ್ದು ಪ್ರಶಂಸನಾರ್ಹ. ತಾಜ್‌ ಬಾವಡಿಯನ್ನು ಇದೀಗ ವೀಕ್ಷಿಸುವುದೇ ಒಂದು ಆನಂದ. ಮನಸ್ಸಿಗೆ ಮುದ ನೀಡುತ್ತದೆ’ ಎನ್ನುತ್ತಾರೆ ಪ್ರಕಾಶ ರಾಠೋಡ. ಹೌದು, ಇದು ವಿಜಯಪುರದ ಪ್ರತಿಯೊಬ್ಬ ನಿವಾಸಿಯ ಅಭಿಮತವೂ ಇದಾಗಿದೆ.

***

140 – ವಿಜಯಪುರದಲ್ಲಿರುವ ಐತಿಹಾಸಿಕ ಬಾವಡಿಗಳು
22 – ಕಾಯಕಲ್ಪ ಭಾಗ್ಯ ಪಡೆದ ಬಾವಡಿಗಳು
75,000– ಕ್ಯೂಬಿಕ್‌ ಮೀಟರ್‌ ಹೂಳು ತೆರವು

***

ತಾಜ್‌ ಬಾವಡಿ ಪೂರ್ವಾಪರ

ಎರಡನೇ ಇಬ್ರಾಹಿಂ ಆದಿಲ್‌ಶಾಹಿ ತನ್ನ ಪತ್ನಿ ತಾಜ್‌ ಸುಲ್ತಾನಳ ಹೆಸರಿನಲ್ಲಿ ಕ್ರಿ.ಶ.1620ರಲ್ಲಿ ‘ತಾಜ್ ಬಾವಡಿ’ ನಿರ್ಮಿಸಿದ. ಮೆಕ್ಕಾ ಮಹಾದ್ವಾರದ ಹತ್ತಿರವಿರುವ ಈ ಬಾವಿ ಉತ್ತರಕ್ಕೆ ಮುಖ ಮಾಡಿದ್ದು, 35 ಅಡಿ ಎತ್ತರದ ಭವ್ಯ ಕಮಾನಿನ ಮಹಾದ್ವಾರ ಹೊಂದಿದೆ.

ಬಾವಡಿಯ ಉಭಯ ಕಡೆಗಳಲ್ಲೂ ಎರಡು ಗುಮ್ಮಟಗಳಿವೆ. ಒಳಗೆ ಹೋದೊಡನೆ ಎದುರಿಗೆ ಪರದೆಯ ಗೋಡೆಯಿದೆ. ಈ ಬಾವಿ 120 ಅಡಿ ಉದ್ದ, 100 ಅಡಿ ಅಗಲ, 52 ಅಡಿ ಆಳವಿದೆ. ಪೂರ್ವ–ಪಶ್ಚಿಮ, ದಕ್ಷಿಣ ದಿಕ್ಕುಗಳಲ್ಲಿ ಬಾವಿಯ ಗೋಡೆಗೆ ಹೊಂದಿಕೊಂಡಂತೆ ವಿಶ್ರಾಂತಿ ಧಾಮಗಳು ಇವೆ. ಮಹಾದ್ವಾರದಲ್ಲಿ ಪರದೆಯ ಗೋಡೆಗೆ ಹೊಂದಿಕೊಂಡಂತೆ ವಿಶಾಲವಾದ ಮೊಗಸಾಲೆಯ ಇಬ್ಬದಿಗುಂಟ ಆರಂಭವಾಗುವ ಮೆಟ್ಟಿಲುಗಳು ನೀರಿನ ತಳದವರೆಗೂ ಇವೆ. ಸುತ್ತಲೂ ಒಳಮಗ್ಗುಲಲ್ಲಿ ಸಂಚರಿಸಲು ಆರು ಅಡಿ ಅಗಲದ ದಾರಿಯೂ ಇರುವುದು ‘ತಾಜ್‌ ಬಾವಡಿ’ಯ ವೈಶಿಷ್ಟ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT