ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವ್‌ಬತ್ತಿ ಬೇಟೆ!

Last Updated 7 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನೀರಿಗೆ ಬಲೆಯೊಡ್ಡಿ ಅಥವಾ ಗಾಳ ಹಾಕಿ ಮೀನು ಹಿಡಿಯುವುದು ಅಷ್ಟೇನೂ ತ್ರಾಸದಾಯಕವಲ್ಲ. ಆದರೆ ಸೆಳೆತದ ನೀರಿಗೆ ಕೊಡಪೆಯೊಡ್ಡಿ ಹಾವ್‌ಬತ್ತಿಗಳನ್ನು ಬೇಟೆಯಾಡಲು ಅನುಭವದ ಜತೆಗೆ ನೈಪುಣ್ಯವೂ ಇರಬೇಕು.

ಹಾವ್‌ಮೀನು, ಹಾಂಬತ್ತಿ, ಹಾವ್‌ಬತ್ತಿ, ಬಂಬೂ– ಹೀಗೆ ವಿವಿಧ ಹೆಸರುಗಳಿಂದ ಕರೆಯಲಾಗುವ ಹಾವ್‌ಬತ್ತಿಗಳು ಇತರ ಮೀನುಗಳಿಗೆ ಹೋಲಿಸಿದರೆ ಹೆಚ್ಚು ರುಚಿಕರ. ಎಳೆಯ ಬೀನ್ಸ್ನಂತೆ ಬಳಕುವ ಹಾವ್‌ಬತ್ತಿ ಮೀನುಪ್ರಿಯರ ಬಾಯಲ್ಲಿ ನೀರೂರಿಸುತ್ತದೆ. ಹಾಗಾಗಿ ಇವುಗಳಿಗೆ ಹೆಚ್ಚು ಬೇಡಿಕೆಯುಂಟು.

‘ಬಾಣಂತಿಯರಿಗೆ ಹಾವ್‌ಬತ್ತಿ ಮೀನು ಕೊಡಿ’ ಎಂದು ನಾಟಿ ವೈದ್ಯರು ಒತ್ತಿ ಹೇಳುವುದರಿಂದ ಗ್ರಾಮೀಣ ಪ್ರದೇಶದ ಜನ ಮೀನುಗಾರರ ಬಳಿ ಹೇಳಿ ಹಾವ್‌ಬತ್ತಿ ಮೀನುಗಳನ್ನು ತರಿಸಿಕೊಳ್ಳುತ್ತಾರೆ. ಬೆನ್ನುಮೂಳೆ ಹೊರತುಪಡಿಸಿದರೆ ಹೆಚ್ಚು ಮುಳ್ಳು ಇಲ್ಲದೇ ಇರುವುದು ಇವುಗಳಿಗೆ ಹೆಚ್ಚು ಬೇಡಿಕೆ ಕುದುರಲು ಮತ್ತೊಂದು ಕಾರಣ. ಎಷ್ಟೇ ಬಿಸಿಯಲ್ಲಿ ಬೇಯಿಸಿದರೂ ಮಾಂಸ ಚೂರಾಗುವುದಿಲ್ಲ ಎಂಬುದು ಈ ಮೀನಿನ ವಿಶೇಷ.

ಸುಮಾರು ಒಂದೂವರೆ ಅಡಿ ಉದ್ದದವರೆಗೂ ಬೆಳೆಯುವ ಹಾವ್‌ಬತ್ತಿ ಮೀನುಗಳು ಬಾಣದಂತೆ ಚೂಪಾದ ತಲೆ ಹೊಂದಿರುತ್ತವೆ. ಸೂಜಿಯಂತಹ ಮೂತಿ ಹೊಂದಿರುವ ಇವು ಕಲ್ಲು ಪೊಟರೆಗಳಲ್ಲಿ ಸಿಗುವ ಎರೆಹುಳು, ಮೀನಿನ ಮರಿ, ಶಂಕದ ಹುಳುವಿನ ತಿರುಳು ತಿಂದು ಬದುಕುತ್ತವೆ. ಇತರ ಮೀನುಗಳಂತೆ ಹರಿಯುವ ನೀರಿಗೆ ಎದುರಾಗಿ ಈಜುತ್ತವೆ. ಹಾಗಾಗಿ ಹಾವ್‌ಮೀನು ಹಿಡಿಯುವವರು ಹರಿಯುವ ನೀರಿಗೆ ಅಭಿಮುಖವಾಗಿ ಕೊಡಪೆಗಳನ್ನು ಇಟ್ಟು ಅವುಗಳ ಬೇಟೆಯಾಡುತ್ತಾರೆ. ಹಾವ್‌ಮೀನು ಶಿಕಾರಿ ಮಾಡುವ ಸ್ಥಳದಲ್ಲಿ ಅತಿಯಾದ ನೀರಿನ ಹರಿವು ಇರಬಾರದು. ತೀರಾ ಕಡಿಮೆಯೂ ಇರಕೂಡದು. ಹಾಗಿದ್ದರೆ ಮಾತ್ರ ಒಂದಿಷ್ಟು ಬೇಟೆ ಖಚಿತ.

ಬಲಿತ ಹಾವ್‌ ಮೀನು ಮುಕ್ಕಾಲು ಕೆ.ಜಿ.ವರೆಗೂ ತೂಗುತ್ತದೆ. ಸಾಮಾನ್ಯವಾಗಿ ಅರ್ಧ ಕೆ.ಜಿ, ಕಾಲು ಕೆ.ಜಿ ತೂಕದ ಮೀನುಗಳು ಹೆಚ್ಚು ಸಿಗುತ್ತವೆ. ಶಿಕಾರಿಗೆ ಹೊರಟರೆ ಇಂತಿಷ್ಟೇ ಮೀನು ಸಿಗುತ್ತವೆ ಎಂಬ ಖಚಿತತೆ ಇರುವುದಿಲ್ಲ. ಒಮ್ಮೆ 3ರಿಂದ 4 ಕೆ.ಜಿಯಷ್ಟು ಸಿಕ್ಕರೆ ಕೆಲವು ಸಲ ಅರ್ಧ ಕೆ.ಜಿಯೂ ಸಿಗುವುದಿಲ್ಲ. ಹಾಗಾಗಿ ಹಾವ್‌ಬತ್ತಿ ಬೇಟೆಗಾರರು ಅದೃಷ್ಟವನ್ನು ನಂಬಿ ಅವುಗಳ ಶಿಕಾರಿಗೆ ಹೊರಡುತ್ತಾರೆ. ಗೌರಿ ಹಬ್ಬದ ತಿಂಗಳಿನಲ್ಲಿ ಹೆಚ್ಚು ಹಾವ್‌ಮೀನು ಮೀನು ಸಿಗುತ್ತವೆ ಎಂಬುದು ಅನುಭವಿ ಮೀನುಗಾರರ ಮಾತು. ಪ್ರತಿ ಕೆ.ಜಿ ಹಾವ್‌ಬತ್ತಿ ಮೀನುಗಳನ್ನು ₹ 150ರಿಂದ ₹ 200ರವರೆಗೆ ಮಾರಾಟ ಮಾಡಲಾಗುತ್ತದೆ. ಹಳ್ಳಿ, ಪಟ್ಟಣಗಳಲ್ಲಿ ಬೀದಿ ತಿರುಗಿ ಮಾರಾಟ ಮಾಡಿದರೆ ಒಂದಷ್ಟು ಗಿಟ್ಟುತ್ತದೆ ಎಂದು ನಾಲ್ಕು ದಶಕಗಳಿಂದ ಹಾವ್‌ಮೀನು ಬೇಟೆಯಾಡುತ್ತಿರುವ ಶ್ರೀರಂಗಪಟ್ಟಣ ತಾಲ್ಲೂಕು ಮಹದೇವಪುರದ ನಾಗಯ್ಯ ಹೇಳುತ್ತಾರೆ.

ಕಾಟ್ಲಾ, ರೂಹು (ರಘು), ಜಿಲೇಬಿ, ಕೊರಮ, ಬಳ್ಳಿ ಗೆಂಡೆ ಮೀನುಗಳು ನದಿಯಲ್ಲಿ ಮಾತ್ರವಲ್ಲದೆ ಕೆರೆ, ಕಟ್ಟೆ, ಬಾವಿಗಳಲ್ಲೂ ಸಿಗುತ್ತವೆ. ಕೃತಕ ಕೊಳ ನಿರ್ಮಿಸಿ ಇವುಗಳನ್ನು ಸಾಕುವುದು ಉದ್ಯಮವಾಗಿ ಬೆಳೆದಿದೆ. ಆದರೆ ಹಾವ್‌ಬತ್ತಿಗಳು ಬೇಕೆಂದರೆ ಹರಿಯುವ ಹೊಳೆಯಲ್ಲೇ ಶಿಕಾರಿ ಮಾಡಬೇಕು. ನದಿಯಲ್ಲಿನ ಜೊಂಡಿನ ಆಸುಪಾಸಿನಲ್ಲಿ, ಜರಿಗಳು ಸೇರುವ ಸ್ಥಳಗಳಲ್ಲಿ ಹಾವ್‌ ಮೀನುಗಳನ್ನು ಹಿಡಿಯಬೇಕು.

ಕೊಡಪೆ ಸಿದ್ಧಪಡಿಸುವ ವಿಧಾನ: ಹಾವ್‌ಬತ್ತಿ ಶಿಕಾರಿಗೆ ಬಳಸುವ ಕೊಡಪೆಗಳನ್ನು ಬಿದಿರಿನಿಂದ ಸಿದ್ಧಪಡಿಸ ಲಾಗುತ್ತದೆ. ನುರಿತವರು ಮಾತ್ರ ಈ ಕೊಡಪೆ ಹೆಣೆಯಲು ಸಾಧ್ಯ. ಒಳಗೆ ಹೋದ ಹಾವ್‌ಬತ್ತಿ ವಾಪಸ್‌ ಬಾರದಂತೆ ವ್ಯೂಹ ರಚಿಸಿ ಹೆಣೆಯಬೇಕು. ಹೊರ ನೋಟಕ್ಕೆ ಡೋಲಿನಂತೆ ಕಾಣುವ ಈ ಕೊಡಪೆ ಎರಡರಿಂದ ಮೂರು ಕೆ.ಜಿಯಷ್ಟು ಹಾವ್‌ಬತ್ತಿ ಮೀನುಗಳನ್ನು ತನ್ನ ಒಡಲಲ್ಲಿ ಇಟ್ಟುಕೊಳ್ಳವಷ್ಟು ಗಾತ್ರ ಹೊಂದಿರುತ್ತದೆ. ಹೆಚ್ಚು ಹೊತ್ತು ನೀರಿನಲ್ಲೇ ಮುಳುಗಿಸಿ ಇಡುವುದರಿಂದ ಒಮ್ಮೆ ಹೆಣೆದ ಕೊಡಪೆ ಅಬ್ಬಬ್ಬಾ ಎಂದರೆ ಏಳರಿಂದ ಎಂಟು ತಿಂಗಳಷ್ಟೇ ಬಾಳಿಕೆ ಬರುತ್ತದೆ.

ಬಲಿತ ಹಾವ್‌ ಮೀನು ಮುಕ್ಕಾಲು ಕೆ.ಜಿ. ವರೆಗೂ ತೂಗುತ್ತದೆ. ಸಾಮಾನ್ಯವಾಗಿ ಅರ್ಧ ಕೆ.ಜಿ, ಕಾಲು ಕೆ.ಜಿ ತೂಕದ ಮೀನುಗಳು ಹೆಚ್ಚು ಸಿಗುತ್ತವೆ. ಶಿಕಾರಿಗೆ ಹೊರಟರೆ ಇಂತಿಷ್ಟೇ ಮೀನು ಸಿಗುತ್ತವೆ ಎಂಬ ಖಚಿತತೆ ಇರುವುದಿಲ್ಲ. ಒಮ್ಮೆ 3ರಿಂದ 4 ಕೆ.ಜಿಯಷ್ಟು ಸಿಕ್ಕರೆ ಕೆಲವು ಸಲ ಅರ್ಧ ಕೆ.ಜಿಯೂ ಸಿಗುವುದಿಲ್ಲ. ಹಾಗಾಗಿ ಹಾವ್‌ಬತ್ತಿ ಬೇಟೆಗಾರರು ಅದೃಷ್ಟವನ್ನು ನಂಬಿ ಅವುಗಳ ಶಿಕಾರಿಗೆ ಹೊರಡುತ್ತಾರೆ. ಗೌರಿ ಹಬ್ಬದ ತಿಂಗಳಿನಲ್ಲಿ ಹೆಚ್ಚು ಹಾವ್‌ಮೀನು ಮೀನು ಸಿಗುತ್ತವೆ ಎಂಬುದು ಅನುಭವಿ ಮೀನುಗಾರರ ಮಾತು. ಪ್ರತಿ ಕೆ.ಜಿ ಹಾವ್‌ಬತ್ತಿ ಮೀನುಗಳನ್ನು ₹ 150ರಿಂದ ₹ 200ರವರೆಗೆ ಮಾರಾಟ ಮಾಡಲಾಗುತ್ತದೆ. ಹಳ್ಳಿ, ಪಟ್ಟಣಗಳಲ್ಲಿ ಬೀದಿ ತಿರುಗಿ ಮಾರಾಟ ಮಾಡಿದರೆ ಒಂದಷ್ಟು ಗಿಟ್ಟುತ್ತದೆ ಎಂದು ನಾಲ್ಕು ದಶಕಗಳಿಂದ ಹಾವ್‌ಮೀನು ಬೇಟೆಯಾಡುತ್ತಿರುವ ಶ್ರೀರಂಗಪಟ್ಟಣ ತಾಲ್ಲೂಕು ಮಹದೇವಪುರದ ನಾಗಯ್ಯ ಹೇಳುತ್ತಾರೆ.

ಕಾಟ್ಲಾ, ರೂಹು (ರಘು), ಜಿಲೇಬಿ, ಕೊರಮ, ಬಳ್ಳಿ ಗೆಂಡೆ ಮೀನುಗಳು ನದಿಯಲ್ಲಿ ಮಾತ್ರವಲ್ಲದೆ ಕೆರೆ, ಕಟ್ಟೆ, ಬಾವಿಗಳಲ್ಲೂ ಸಿಗುತ್ತವೆ. ಕೃತಕ ಕೊಳ ನಿರ್ಮಿಸಿ ಇವುಗಳನ್ನು ಸಾಕುವುದು ಉದ್ಯಮವಾಗಿ ಬೆಳೆದಿದೆ. ಆದರೆ ಹಾವ್‌ಬತ್ತಿಗಳು ಬೇಕೆಂದರೆ ಹರಿಯುವ ಹೊಳೆಯಲ್ಲೇ ಶಿಕಾರಿ ಮಾಡಬೇಕು. ನದಿಯಲ್ಲಿನ ಜೊಂಡಿನ ಆಸುಪಾಸಿನಲ್ಲಿ, ಜರಿಗಳು ಸೇರುವ ಸ್ಥಳಗಳಲ್ಲಿ ಹಾವ್‌ ಮೀನುಗಳನ್ನು ಹಿಡಿಯಬೇಕು.

ಕೊಡಪೆ ಸಿದ್ಧಪಡಿಸುವ ವಿಧಾನ: ಹಾವ್‌ಬತ್ತಿ ಶಿಕಾರಿಗೆ ಬಳಸುವ ಕೊಡಪೆಗಳನ್ನು ಬಿದಿರಿನಿಂದ ಸಿದ್ಧಪಡಿಸಲಾಗುತ್ತದೆ. ನುರಿತವರು ಮಾತ್ರ ಈ ಕೊಡಪೆ ಹೆಣೆಯಲು ಸಾಧ್ಯ. ಒಳಗೆ ಹೋದ ಹಾವ್‌ಬತ್ತಿ ವಾಪಸ್‌ ಬಾರದಂತೆ ವ್ಯೂಹ ರಚಿಸಿ ಹೆಣೆಯಬೇಕು. ಹೊರ ನೋಟಕ್ಕೆ ಡೋಲಿನಂತೆ ಕಾಣುವ ಈ ಕೊಡಪೆ ಎರಡರಿಂದ ಮೂರು ಕೆ.ಜಿಯಷ್ಟು ಹಾವ್‌ಬತ್ತಿ ಮೀನುಗಳನ್ನು ತನ್ನ ಒಡಲಲ್ಲಿ ಇಟ್ಟುಕೊಳ್ಳವಷ್ಟು ಗಾತ್ರ ಹೊಂದಿರುತ್ತದೆ. ಹೆಚ್ಚು ಹೊತ್ತು ನೀರಿನಲ್ಲೇ ಮುಳುಗಿಸಿ ಇಡುವುದರಿಂದ ಒಮ್ಮೆ ಹೆಣೆದ ಕೊಡಪೆ ಅಬ್ಬಬ್ಬಾ ಎಂದರೆ ಏಳರಿಂದ ಎಂಟು ತಿಂಗಳಷ್ಟೇ ಬಾಳಿಕೆ ಬರುತ್ತದೆ.

ಶಿಕಾರಿ ಹೇಗೆ: ಆಯಕಟ್ಟಿನ ಜಾಗ ನೋಡಿ ಕೊಡಪೆಗಳನ್ನು ಇಟ್ಟು ಹತ್ತಾರು ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ಅವುಗಳನ್ನು ಬಿಡಬೇಕು. ಅದಕ್ಕೂ ಮುನ್ನ ಕೊಡಪೆಯ ಒಂದು ತುದಿಗೆ ಎರೆಹುಳ ಇರುವ ಗಂಟು ಸೇರಿಸಬೇಕು. ತೆಂಗಿನ ಕಾಯಿಯ ಚರಟದ ಮಧ್ಯೆ ಹತ್ತಾರು ಎರೆಹುಳ ಅಥವಾ ಕುಂಬಾತಿ ಹುಳು ಇಟ್ಟು ಅದರ ಮೇಲೆ ಬಟ್ಟೆಯ ಗಂಟು ಇರಿಸಿ ಮುಚ್ಚಬೇಕು. ಕೊಡಪೆಯ ಮತ್ತೊಂದು ಬಾಯಿಯನ್ನು ಹರಿಯುತ್ತಿರುವ ನೀರಿಗೆ ಎದುರಾಗಿ ಇಟ್ಟು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗದಂತೆ ಅದರ ಮೇಲೆ ಭಾರವಾದ ಕಲ್ಲು ಇಡಬೇಕು. ಮಂಡಿಯುದ್ದ ನೀರಿನಿಂದ ಎದೆಮಟ್ಟದ ನೀರು ಇರುವ ಸ್ಥಳಗಳಲ್ಲಿ ಈ ಕೊಡಪೆಗಳನ್ನು ಇಡಲಾಗುತ್ತದೆ.

ಹರಿಯುವ ನೀರಿನಲ್ಲಿ ಮೇಲ್ಮುಖವಾಗಿ ಈಜಿಕೊಂಡು ಬರುವ ಹಾವ್‌ಬತ್ತಿಗಳು ಆಹಾರದ ವಾಸನೆಯ ಜಾಡು ಹಿಡಿದು ಕೊಡಪೆಗಳ ಒಳಕ್ಕೆ ನುಗ್ಗುತ್ತವೆ. ಹಾಗೆ ಹೋದ ಹಾವ್‌ಬತ್ತಿಗಳು ಬಿದಿರು ಬುಟ್ಟಿಗಳ ಚಕ್ರಸುಳಿಯಲ್ಲಿ ಸಿಕ್ಕಿ ಬೀಳುವುದರಿಂದ ವಾಪಸ್‌ ಬರಲಾರವು. ಹಾವ್‌ಮೀನು ಹಿಡಿಯುವವರು ಹಿಂದಿನ ದಿನವೇ ಕೊಡಪೆಗಳನ್ನು ನೀರಿನಲ್ಲಿ ಮುಳುಗಿಸಿಡುತ್ತಾರೆ. ಅದರ ಮಾರನೇ ದಿನ ಮುಂಜಾನೆ ಹೋಗಿ ಹಾವ್‌ಬತ್ತಿಗಳನ್ನು ಸಂಗ್ರಹಿಸುತ್ತಾರೆ. ‘ಕಲ್ಕುರಿ’ (ಪುಡಿ ಮೀನು) ಹೊರತುಪಡಿಸಿದರೆ ಇತರ ಮೀನುಗಳು ಈ ಕೊಡಪೆಗಳ ಒಳಗೆ ನುಸುಳುವುದಿಲ್ಲ. ಕೆಲವೊಮ್ಮೆ ಒಳ್ಳೇಕಾಟಿಗಳು (ನೀರಾವು) ಕೊಡಪೆಗಳಿಗೆ ಬೀಳುವುದುಂಟು. ಅವು ವಿಷಕಾರಿ ಅಲ್ಲದೇ ಇರುವುದರಿಂದ ಹಾವ್‌ಬತ್ತಿ ಬೇಟೆಗಾರರು ನಿರಾಳ.

‘ನಲವತ್‌ ವರ್ಷದಿಂದ ಹಾವ್‌ಬತ್ತಿ ಹಿಡೀತೀವ್ನಿ. ಒಂಜಿನ ಮೂರ್ಕೇಜಿ ಸಿಕ್ಕುದ್ರೆ ಇನ್ನೊಂಜಿನ ಒಂದ್‌ ಸೀಗ್ಡಿ ಸತ್ತೆಯೂ ಸಿಗೋಲ್ಲ. ಹೆಚ್ಚಿದ್ರೆ ಪಟ್ಣದಲ್ಲಿರುವ ಹೋಟ್ಲುಗೆ ಹಾಕ್ತೀನಿ. ಕಮ್ಮಿ ಸಿಕ್ರೆ ಪರಿಚಯದೋರ ಮನೆಗೆ, ಇಲ್ದಿದ್ರೆ ಬೀದಿ ಮೇಲೆ ಮಾರಿ ಕಾಸು ಈಸ್ಕತ್ತೀನಿ. ಹಾವ್‌ಬತ್ತಿ ಹಿಡಿಯೋಕೆ ಕೊಡಪೆನ ನಾನೇ ಎಣಿತೀನಿ. ನನ್‌ ಮಕ್ಳುಗೆ ಹಾವ್‌ಬತ್ತಿ ಹಿಡಿಯೋದು ಏನೇನೂ ಗೊತ್ತಿಲ್ಲ. ಬಲೆ ಹಾಕಿ ಮೀನು ಹಿಡಿಯೋದೂ ಅವರಿಗೆ ಬರೋಲ್ಲ. ಏನ್ಮಾಡಾದು, ಕಾಲ ಬದಲಾಗ್ತಾದೆ. ಇದು ನನ್‌ ತಲೆಗೇ ಕೊನೆ ಅಂತ ಕಾಣ್ತದೆ’ ಎನ್ನುವುದು 40 ವರ್ಷಗಳಿಂದ ಹೊಳೆ ಸಾಲುಗಳಲ್ಲಿ ಹಾವ್‌ಬತ್ತಿ ಹಿಡಿಯುತ್ತಿರುವ 70 ವರ್ಷದ ನಾಗಯ್ಯ ಅವರ ಮಾತು.

⇒ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT