ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಲಿದೆ ಬ್ಯಾಟರಿರಹಿತ ಮೊಬೈಲ್‌ಫೋನ್!

Last Updated 8 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬೈಲ್‌ಫೋನ್ ಇಂದು ಅಂಗೈಯನ್ನೇ ವಿಶ್ವವನ್ನಾಗಿಸಿದೆ. ಕರೆ ಮಾಡಿ ಮಾತನಾಡುವುದಕ್ಕೆ ಸೀಮಿತವಾಗಿದ್ದ ಮೊಬೈಲ್‌ ಫೋನ್‌, ‘ಸ್ಮಾರ್ಟ್‌ಫೋನ್‌’ ಆಗಿ ಪರಿವರ್ತನೆಯಾಗಿರುವುದೇ ಇದಕ್ಕೆ ಕಾರಣ. ಮೊಬೈಲ್‌ ಫೋನ್‌ನಲ್ಲಿ ಸೌಲಭ್ಯಗಳು ಹೆಚ್ಚಾಗಿ ಬಳಕೆ ಹೆಚ್ಚಿದಂತೆಲ್ಲ ಅದರ ಬ್ಯಾಟರಿಯಲ್ಲಿರುವ ಚಾರ್ಜ್‌ ಅನ್ನು ಹೆಚ್ಚು ಸಮಯದವರೆಗೆ ಕಾಯ್ದುಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ. ಇದಕ್ಕಾಗಿಯೇ ‘ಪವರ್‌ ಬ್ಯಾಂಕ್‌’ಗಳನ್ನು ಅಭಿವೃದ್ಧಿಪಡಿಸಿದ್ದಾಯಿತು. ಅದೂ ಸಾಲುತ್ತಿಲ್ಲ! ಹೀಗಿರುವಾಗ ಬ್ಯಾಟರಿಯೇ ಇಲ್ಲದ ಫೋನ್‌ ಇದ್ದರೆ ಒಳಿತು ಎನ್ನುವ ಯೋಚನೆ ಸುಳಿಯದೇ ಇರಲಾರದು ಅಲ್ವಾ?

ಹೌದು, ಬ್ಯಾಟರಿಯ ಅವಶ್ಯಕತೆಯೇ ಇಲ್ಲದೆ ಕನಿಷ್ಠ ವಿದ್ಯುತ್ ಬಳಸಿಕೊಂಡು ಕಾರ್ಯನಿರ್ವಹಿಸಬಲ್ಲ ಮೊಬೈಲ್‌ಫೋನ್ ಅನ್ನು ಅಮೆರಿಕದ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಕೆಲವೇ ಮೈಕ್ರೊವಾಟ್‌ಗಳಷ್ಟು ವಿದ್ಯುತ್ ಬಳಸಿಕೊಂಡು ಕರೆ ಮಾಡಬಲ್ಲ ಮತ್ತು ಕರೆ ಸ್ವೀಕರಿಸಬಲ್ಲಂಥ ಮೊಬೈಲ್‌ ದೂರವಾಣಿ ಇದಾಗಿದೆ.

ಇದು ಕಾರ್ಯನಿರ್ವಹಿಸಲು 100 ಮೈಕ್ರೊವಾಟ್‌ಗಿಂತಲೂ ಕಡಿಮೆ ವಿದ್ಯುತ್ ಸಾಕು. ಸಂಶೋಧಕರ ಪ್ರಕಾರ, ವಿದ್ಯುತ್‌ ಅನ್ನು ಪರಿಸರದಿಂದಲೇ ಹೀರಿಕೊಳ್ಳುವಂಥ ವ್ಯವಸ್ಥೆಯನ್ನು ಮೊಬೈಲ್‌ ಫೋನ್‌ನಲ್ಲಿ ಅಳವಡಿಸಲಾಗುತ್ತದೆ. ಇದಕ್ಕಾಗಿ ಅದರಲ್ಲಿ ಮಾನವನ ಉಗುರಿಗಿಂತಲೂ ಚಿಕ್ಕದಾದ ಫೋಟೊಡಯೋಡ್ ಅನ್ನು ಅಳವಡಿಸಲಾಗುತ್ತದೆ.

ಇದು ಮನೆಯಲ್ಲೇ ಕಂಪ್ಯೂಟರ್ ನೆರವಿನಿಂದ ಇಡಲಾಗುವ ಚಿಕ್ಕದಾದ ಸೆಲ್‌ ಟವರ್‌ ನೆರವಿನಿಂದ ವಿದ್ಯುತ್‌ ಅನ್ನು ಹೀರಿಕೊಳ್ಳುತ್ತದೆ. ವಾಷಿಂಗ್ಟನ್‌ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಇದನ್ನು ಅಭಿವೃದ್ಧಿಪಡಿಸಿದ್ದು, ಅದಕ್ಕಾಗಿ ಇತರ ಬ್ಯಾಟರಿರಹಿತ ಸಾಧನಗಳಲ್ಲಿ ಅಂತರ್ಗತವಾಗಿರುವ ವ್ಯವಸ್ಥೆಯನ್ನೂ ಅಧ್ಯಯನ ನಡೆಸಿದ್ದಾರೆ.

ಪರಿಸರದಿಂದಲೇ ವಿದ್ಯುತ್ ಹೀರಿಕೊಂಡು ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವಂತೆ ಮಾಡುವುದಕ್ಕಾಗಿ ‘ಬ್ಯಾಕ್‌ಸ್ಕ್ಯಾಟ್ಟರ್’ ಎಂಬ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. (ಇದು ಸಿಗ್ನಲ್ ಅನ್ನು ಪ್ರತಿಫಲಿಸುವ ತಂತ್ರಜ್ಞಾನ. ಸಿಗ್ನಲ್ ಸೃಷ್ಟಿಸುವುದಕ್ಕೆ ಬೇಕಾಗುಷ್ಟು ವಿದ್ಯುತ್ ಇದಕ್ಕೆ ಬೇಕಾಗುವುದಿಲ್ಲ. ಕನ್ನಡಿಯ ಸಹಾಯದಿಂದ ಬೆಳಕನ್ನು ಪ್ರತಿಫಲಿಸಿದಂತೆ ಇದು ಕೆಲಸ ಮಾಡುತ್ತದೆ.)

ಮೊಬೈಲ್‌ ಫೋನ್ ಅಭಿವೃದ್ಧಿಪಡಿಸಿದ ಸಂಶೋಧಕರ ತಂಡದ ಸದಸ್ಯರಾದ, ವಾಷಿಂಗ್ಟನ್‌ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಸಂಶೋಧನಾ ಸಹಾಯಕ ವಾಮ್ಸಿ ಟಲ್ಲಾ ಅವರು ನೀಡಿದ ಮಾಹಿತಿ ಪ್ರಕಾರ, ‘ಬ್ಯಾಕ್‌ಸ್ಕ್ಯಾಟ್ಟರ್’ ತಂತ್ರಜ್ಞಾನದ ಬಳಕೆಯಿಂದ ಅತಿ ಕಡಿಮೆ ವಿದ್ಯುತ್ ಸಾಕಾಗುತ್ತದೆ. ಮೊಬೈಲ್‌ ಫೋನ್‌ ಅನ್ನು ಸ್ವಿಚ್ ಆಫ್ ಮಾಡುವ ಅವಶ್ಯಕತೆಯೂ ಇರುವುದಿಲ್ಲ.

ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಯತ್ನಕ್ಕೆ ವಿಶ್ವದ ವಿವಿಧೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ. ‘ಕೆಲವೇ ಮೈಕ್ರೊವಾಟ್‌ ವಿದ್ಯುತ್ ಬಳಸಿಕೊಂಡು ಕರೆ ಮಾಡಬಲ್ಲಂಥ ಮೊಬೈಲ್‌ ಫೋನ್‌ ಅಭಿವೃದ್ಧಿಪಡಿಸಿರುವುದು ವಿಶ್ವದಲ್ಲೇ ಮೊದಲು’ ಎಂದು ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಸಂಶೋಧಕ ಪೆಂಗ್ಯು ಝಾಂಗ್ ಬಣ್ಣಿಸಿದ್ದಾರೆ. ಭವಿಷ್ಯದಲ್ಲಿ ಬ್ಯಾಟರಿರಹಿತ ಮೊಬೈಲ್‌ ಫೋನ್‌ಗಳು ಜನಪ್ರಿಯವಾಗಲಿವೆ ಎಂಬುದು ಅವರ ಅಂಬೋಣ.

ಮುಂದೊಂದು ದಿನ ಬ್ಯಾಟರಿರಹಿತ ಮೊಬೈಲ್‌ ಫೋನ್‌ಗಳು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವ ಬಗ್ಗೆ ಆಶಾವಾದ ವ್ಯಕ್ತಪಡಿಸಿರುವ ಝಾಂಗ್ ಅವರು, ಸ್ಮಾರ್ಟ್‌ಫೋನ್ ಜತೆಗೆ ಜನರು ಬ್ಯಾಟರಿರಹಿತ ಮೊಬೈಲ್‌ಫೋನ್ ಅನ್ನೂ ಇಟ್ಟುಕೊಂಡು ಓಡಾಡುವ ದಿನಗಳು ಬರಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತುರ್ತು ಬಳಕೆಗೆ ಪ್ರಯೋಜನ

ಎಳೆಯ ಮಕ್ಕಳಿಂದ ತೊಡಗಿ ವೃದ್ಧರವರೆಗೂ ಸ್ಮಾರ್ಟ್‌ಫೋನ್‌ ಅನ್ನೇ ನೆಚ್ಚಿಕೊಡಿರುವ ಈ ಕಾಲದಲ್ಲಿ ಕೇವಲ ಕರೆ ಮಾಡಬಲ್ಲ ಮೊಬೈಲ್‌ ಫೋನ್‌ಗೆ ಅಸ್ತಿತ್ವ ಇದೆಯೇ ಎಂಬ ಪ್ರಶ್ನೆ ಮೂಡುವುದೂ ಸಹಜ. ಆದರೆ, ಸ್ಮಾರ್ಟ್‌ಫೋನ್ ಹೊಂದಿರುವವರಿಗೂ ಅನಿವಾರ್ಯ ಸಂದರ್ಭಗಳಲ್ಲಿ ಬ್ಯಾಟರಿರಹಿತ ಮೊಬೈಲ್‌ಫೋನ್ ಉಪಯೋಗಕ್ಕೆ ಬರುವುದು ನಿಶ್ಚಿತ. ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಟರಿ ಮುಗಿದು ಅದು ಸ್ವಿಚ್ಡ್ ಆಫ್ ಆಗಿದ್ದಾಗ ತುರ್ತು ಸೇವೆಗಳಿಗೆ ಕರೆ ಮಾಡಬೇಕಾಗಿ ಬಂದರೆ? ಇಂಥ ಸಂದರ್ಭಗಳಲ್ಲಿ ಬ್ಯಾಟರಿರಹಿತ ಮೊಬೈಲ್‌ಫೋನ್ ನೆರವಿಗೆ ಬರಲಿದೆ ಎಂಬುದು ತಜ್ಞರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT