ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲಿ ನಿನ್ನ ತುಟಿಗಳನು...

Last Updated 8 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಹುಟ್ಟು ಅಳುವಿನೊಂದಿಗೆ ಪ್ರಾರಂಭ, ಅಳಿಸುವುದರೊಂದಿಗೆ ಆರಂಭ. ನವಜಾತ ಶಿಶು ದನಿಯೆತ್ತಿ ಅಳದಿದ್ದರೆ ಸೂಲಗಿತ್ತಿಗೂ, ನೋವು ತಿಂದು ಹೆತ್ತ ತಾಯಿಗೂ ಆತಂಕ. ಪುಪ್ಪಸವರಳಿ ಉಸಿರೆಳೆದು ದೊಡ್ಡದನಿಯಲ್ಲಿ ಆ ಉಸಿರನ್ನು ಹೊರಹಾಕುವುದರೊಂದಿಗೆ ಉಸಿರ ಲೆಕ್ಕ - ಎದೆಯ ಏರಿಳಿತ ಆರಂಭ.

ಅಳು ಬದುಕಿನಧರ್ಮ ಎಂದಮಾತ್ರಕ್ಕೆ ಜೀವನವಿಡೀ ಅಳುತ್ತಲೇ ಬಾಳಬೇಕಿಲ್ಲ. ಏಕೆಂದರೆ ನಗುವು ಸಹಜದಧರ್ಮ. ಈ ಸಹಜದಧರ್ಮ ಕಂಡುಕೊಳ್ಳಬೇಕಾದರೆ ಅಳುವ ಕಡಲನ್ನು ದಾಟಿಯೇ ಬರಬೇಕು. ಇದೆಲ್ಲ ಕವಿವಾಣಿಯ ಝಲಕು, ತತ್ತ್ವಚಿಂತನೆಯ ಪಲುಕು. ನಾವುಗಳು ಮೇಘನಾದ ( ರಾವಣನ ಮಗನಾದ ಇಂದ್ರಜಿತುವಿನ ಇನ್ನೊಂದು ಹೆಸರು. ಅವನು ಹುಟ್ಟಿದಾಗ ಅತ್ತ ದನಿ ಗುಡುಗಿನ ದನಿಯನ್ನೂ ಮೀರಿಸುವಂತಿತ್ತಂತೆ; ಅದಕ್ಕೇ ಅವನಿಗೆ ‘ಮೇಘನಾದ’ ಎಂಬ ಹೆಸರು) ಅಲ್ಲವಾದರೂ ಒಂದು ಕೀರಲುಧ್ವನಿಯನ್ನಾದರೂ ಹೊರಹಾಕಿ ಹುಟ್ಟಿದ್ದೇವೆ. ಆ ಅಸಹಾಯಕ ಅವಸ್ಥೆಯಲ್ಲೇ ಅಷ್ಟು ದನಿಗೈದವರು ಜೀವನವಿಡೀ ಸದ್ದು ಮಾಡುತ್ತಲೇ ಇರುತ್ತೇವೆ!

ಸದ್ದು ಮಾಡುವುದೇ ಬದುಕು ಎಂಬ ನಿಲುವಿಗೆ ಬರಲು ಬಹಳ ಸಮಯವೇನೂ ಬೇಕಾಗಿಲ್ಲ. ಇಪ್ಪತ್ತನೆಯ ವಯಸ್ಸಿಗಾಗಲೇ ನಮ್ಮ ಹೆಗ್ಗಳಿಕೆ ಹಿಗ್ಗಿರುತ್ತದೆ. ‘ಅದು ಮಾಡಿದೆ, ಇದು ಮಾಡಿದೆ, ಅವನನ್ನು ಬಲಿಹಾಕಿದೆ, ಮತ್ತೊಮ್ಮೆ ಬರಲಿ, ಸಿಗಿದು ಹಾಕಿಬಿಡುತ್ತೇನೆ’ ಎಂಬೀ ಅಬ್ಬರದ ಅಲೆಗಳ ಮೇಲೆ ನಮ್ಮ ಬದುಕಿನಯಾನ ಸಾಗುತ್ತದೆ. ಜಗತ್ತಿನ ವೀರಾಧಿವೀರರೂ ಭೂಮಿಯನ್ನು ತಮ್ಮ ಕತ್ತಿ ಹರಿತಗೊಳಿಸುವ ಮಸೆಗಲ್ಲಾಗಿ ಬಳಸಿಕೊಂಡರೇ ಹೊರತು ಮನುಕುಲದ ಹಿತಕ್ಕಾಗಿ ಏನು ಮಾಡಿದರು ಎಂಬುದು ಶೇಷಪ್ರಶ್ನೆ. ವಂದಿಮಾಗಧರಿಂದ ಹೊಗಳಿಸಿಕೊಂಡು ಮಣ್ಣಲ್ಲಿ ಮರೆಯಾದವರ ನಡುವೆ ಚಂದ್ರಗಿರಿಯ ಗೊಮ್ಮಟ ಎತ್ತರವಾಗಿ ಕಾಣುತ್ತಾನೆ, ಜಗತ್ತಿಗೆ ಮೌನಮುಗುಳ್ನಗೆಯ ಸಂದೇಶ ಬೀರುವ ರಮಣರು ಹತ್ತಿರದವರಾಗಿ ಕಾಣುತ್ತಾರೆ, ಜಗದಗಲ ಎದೆಯ ಪ್ರೀತಿಯನ್ನು ವಿಸ್ತರಿಸಿಕೊಂಡ ಬುದ್ಧ ಆತ್ಮೀಯವಾಗಿ ಗೋಚರಿಸುತ್ತಾನೆ. ಇವರೆಲ್ಲರ ಸಾಧನೆಗೆ ಮೌನದ ಭಾಷ್ಯವೇ ಕಲಶ.

ಜಗದ ಗದ್ದಲದ ನಡುವೆ ತೆಪ್ಪಗಿರಬೇಕೆಂಬ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ ಅವು ಹೆಚ್ಚು ಮಂದಿಯಲ್ಲಿ ಯಶಸ್ವಿಯಾಗಿಲ್ಲ ಎಂಬುದು ಖೇದದ ಸಂಗತಿ. ಕಥೆಯೊಂದನ್ನು ನೋಡಿ:

ಒಂದು ಮಠದಲ್ಲಿ ನಾಲ್ಕು ಮಂದಿ ಶಿಷ್ಯರು ಮೌನಸಾಧನೆಯ ವ್ರತತೊಟ್ಟು ಕುಳಿತರಂತೆ. ಹಗಲಿಡೀ ಅದು ಯಶಸ್ವಿಯಾಗಿ ಸಾಗಿತು. ಸಂಜೆ ಜಾರಿ ಕತ್ತಲಾವರಿಸಿತು. ಇವರ ಮೌನವೂ ದಟ್ಟೈಸಿದೆ. ಆದರೆ ದೀಪದಎಣ್ಣೆ ಕುಂದಿ ಅದರ ಬೆಳಕು ಮಂಕಾಗುತ್ತಿದೆ. ತಡೆಯಲಾಗದೆ ಮೊದಲ ಶಿಷ್ಯ ಚೀರಿದ, “ಯಾರಾದ್ರೂ ದೀಪಕ್ಕೆ ಎಣ್ಣೆ ಹಾಕಿ!”. ಎರಡನೆಯ ಶಿಷ್ಯ ಆಶ್ಚರ್ಯದಿಂದ ನುಡಿದ, “ಅಯ್ಯೋ, ನಾವು ಮೌನವ್ರತಧಾರಿಗಳು ಎಂಬುದನ್ನು ಮರೆತೆಯಾ?”. ಮೂರನೆಯವನೆಂದ - “ನೀವಿಬ್ಬರು ಮೂರ್ಖರು! ಮಾತಾಡಿಬಿಟ್ಟಿರಿ!” ನಾಲ್ಕನೆಯವನು ಹೆಮ್ಮೆಯಿಂದ ಹೇಳಿದ, “ಮಾತಾಡದವನು ನಾನೊಬ್ಬನೇ!”.

ಚಿಂತಕ ಗಿಬ್ರಾನನ ಪ್ರಕಾರ ‘ಮೌನವೇ ಮನುಷ್ಯನ ನೈಜಗುಣ; ವಾಚಾಳಿತನ ಅವನು ಪಡೆದುಕೊಂಡಿದ್ದು’. ಗಿಬ್ರಾನ್ ಮತ್ತೂ ಹೇಳುತ್ತಾನೆ: “ಆಲೋಚನೆ ಎಂಬುದು ಆಗಸದ ಬಾನಾಡಿ. ಅದು ಪದಪಂಜರದಲ್ಲಿ ರೆಕ್ಕೆಗಳನ್ನು ಮುದುಡಿಕೊಳ್ಳಬಹುದಾದರೂ ಹಾರಲಾರದು.” ಜಗತ್ತಿನ ಶ್ರೇಷ್ಠಸತ್ಯಗಳು ನಮ್ಮವಾಗಬೇಕಾದರೆ ನಾವು ತೆಪ್ಪಗಿರುವುದನ್ನು ಕಲಿಯಬೇಕು. ಆದುದರಿಂದಲೇ ತಿಮ್ಮ ಗುರು, ‘ಹೊಲಿ ನಿನ್ನ ತುಟಿಗಳನು’ ಎನ್ನುತ್ತಾನೆ.

ಮೆರವಣಿಗೆಯ ಮದುವಣಿಗರಂತೆ ಪ್ರದರ್ಶನೀಯ ಬದುಕನ್ನು ಮಾತಿನ ಗದ್ದಲದಲ್ಲಿ ಬಿಚ್ಚಿಡುತ್ತಾ ಸಾಗುವ ಮನುಷ್ಯನಿಗೆ ತೆಪ್ಪಗಿರುವ ಯಾನವೂ ಸಾಧ್ಯ ಎಂಬ ಅರಿವು ಮೂಡಿದಾಗ ಸತ್ಯದ ಹೊಳಹು ಕಾಣುತ್ತದೆ. ಇದು ಅಧ್ಯಾತ್ಮದ ಅಂತರಂಗ ಪಯಣದ ಆರಂಭ. ಇದುವರೆವಿಗೂ ಬದುಕಿನ ಗದ್ದಲಗಳಿಗೆ ತೆರೆದುಕೊಂಡಿದ್ದ ಕಿವಿಗಳು ಈಗ ಒಳಗಿನ ಮೌನವನ್ನು ಆಲಿಸುವ ಕಡೆಗೆ ತಿರುಗುತ್ತವೆ. ಗದ್ದಲದ ಪ್ರಾರ್ಥನೆಯ, ಶಂಖ-ಜಾಗಟೆಗಳ, ಮಂಡನೆ-ಖಂಡನೆಗಳ, ವಾದ-ವಿವಾದಗಳ, ಪವಾಡ-ಸಿದ್ಧಿಗಳ ಆಚಿಗಿನ ಅಧ್ಯಾತ್ಮ ಇದು. ಇದಕ್ಕೊಂದು ಉದಾಹರಣೆ ನೋಡಿ:

ಶೃಂಗೇರಿಯ ಚಂದ್ರಶೇಖರ ಭಾರತಿ ಮಹಾಸ್ವಾಮಿಗಳ ಮೆರವಣಿಗೆ, ಪಲ್ಲಕ್ಕಿಉತ್ಸವ. ಒಳ್ಳೆಯ ಜರತಾರಿ ಶಾಲು ಹೊದಿಸಿದ್ದಾರೆ. ಮೆರವಣಿಗೆ ಮುಗಿದ ಬಳಿಕ ಸ್ವಾಮಿಗಳ ಪರಿಚಾರಕ ಶಾಲು ತೆಗೆಯಲು ಬಂದಾಗ ಹೌಹಾರಿದ. ಶಾಲು ಉಲ್ಟಾ ಹೊದಿಸಲಾಗಿದೆ! ಅಂದರೆ ಒಳಮುಖವಾಗಬೇಕಿದ್ದ ಭಾಗ ಹೊರಮುಖವಾಗಿದ್ದು, ಹೊರಮುಖವಾಗಬೇಕಿದ್ದ ಭಾಗ ಒಳಮುಖವಾಗಿದೆ.

ಅಪಚಾರವನ್ನು ಮನ್ನಿಸಬೇಕೆಂದು ಕೋರಿದ ಪರಿಚಾರಕರನ್ನು ಸಮಾಧಾನಪಡಿಸಿದ ಸ್ವಾಮಿಗಳು, “ಪರವಾಗಿಲ್ಲ ಬಿಡಿ. ಹೊರಜಗತ್ತಿಗೆ ಅಂದಕಾಣುವ ಶಾಲಿನ ಒಳಭಾಗದ ಕುಸುರಿಯ ಮೊನೆಗಳು ಒಳಗೆ ಚುಚ್ಚುತ್ತವೆ. ಈ ಬಾರಿ ನೀವು ತಿರುವು ಮುರುವಾಗಿ ಹೊದಿಸಿದ್ದರಿಂದ ಒಂದು ಬಗೆಯಲ್ಲಿ ಈ ತೊಂದರೆಯಿಂದ ಪಾರಾದ ಅನುಭವವಾಯಿತು” ಎಂದು ನಕ್ಕರಂತೆ. ಹೊರಮುಖವಾದ ಇಂದ್ರಿಯಗಳನ್ನು ಒಳಮುಖವಾಗಿಸಿಕೊಂಡು ಅಂತರಂಗದ ಆನಂದದಲ್ಲಿ ತಲ್ಲೀನರಾದವರಿಗೆ ಈ ಬಾಹ್ಯಾಡಂಬರಗಳ ಮಿತಿ ತಿಳಿಯದೆ? ಗದ್ದಲದ ಸಂತೆಯಲ್ಲಿ ಮೌನದಜಾತ್ರೆ ಹೀಗೆ ಬಣ್ಣಕಟ್ಟುತ್ತದೆ. ಹಾಗಾಗಿಯೇ ಶರಣರು, ‘ಎನ್ನ ಕುರುಡನ್ನ ಮಾಡಯ್ಯ, ಕಿವುಡನ್ನ ಮಾಡಯ್ಯ, ಹೆಳವನ್ನ ಮಾಡಯ್ಯತಂದೆ’ ಎಂದು ಕೋರುತ್ತಾರೆ.

ಭಗವಂತ ಆನಂದಸ್ವರೂಪಿ, ಸೌಂದರ್ಯದ ಘನಿ. ಅವನನ್ನು ಭಾವಿಸುತ್ತ ಭಾವಿಸುತ್ತ ಭಕ್ತನೂ ಅಂತೆಯೇ ಆಗಿಬಿಡುತ್ತಾನೆ. ಅವನ ಸುತ್ತ ನೆರೆದ ಅದೇ ಗದ್ದಲದ ಜಗಕೆ ಅವನ ಸೌಂದರ್ಯ, ಆನಂದಗಳೇ ಆಕರ್ಷಣೆಯಾಗಿಬಿಡುತ್ತದೆ. ಕೆಲವೊಮ್ಮೆ ಭಕ್ತರ ಅನುಷ್ಠಾನವೆಂಬುದು ಆ ಮಟ್ಟಕ್ಕೆ ನಿಂತುಬಿಡುತ್ತದೆ. ಈ ಕಾರಣದಿಂದಾಗಿಯೇ ಮಹಾತ್ಮರು ತಮ್ಮ ಈ ಅಲೌಕಿಕ ಆನಂದವನ್ನಾಗಲೀ, ಸೌಂದರ್ಯವನ್ನಾಗಲೀ ವ್ಯಕ್ತವಾಗಲು ಅವಕಾಶ ಕೊಡದೆ ಅದನ್ನು ಮೂಲಕ್ಕೇ ಹಿಂದಿರುಗಿಸಲು ನಿಶ್ಚಯಿಸುತ್ತಾರೆ.

ದಕ್ಷಿಣೇಶ್ವರದ ದೇವಮಾನವ ಶ್ರೀರಾಮಕೃಷ್ಣರ ಅರ್ಚನೆಯಿಂದ ವಿಗ್ರಹವಾಗಿದ್ದ ಮೃಣ್ಮಯ ಕಾಳೀಮಾತೆ ಚಿನ್ಮಯಳಾಗುತ್ತಿದ್ದಾಳೆ. ಇತ್ತ ಅರ್ಚಕ, ಭಕ್ತ, ಸಾಧಕ ಶ್ರೀರಾಮಕೃಷ್ಣರಲ್ಲಿಯೂ ಅಭೂತಪೂರ್ವ ಬದಲಾವಣೆಗಳು. ದೇವಾಲಯಕ್ಕೆ ಬಂದ ಭಕ್ತರು ದೇವಿಯನ್ನು ನೋಡುತ್ತಾರೆ - ಸುಂದರವಾಗಿದ್ದಾಳೆ, ಹೃದಯವೇದ್ಯ ಆಗುವಂತಹ ಚೈತನ್ಯಮೂರ್ತಿಯಾಗಿ ಕಾಣುತ್ತಾಳೆ; ಪೂಜಾರಿಯನ್ನು ನೋಡುತ್ತಾರೆ – ನಯನಮನೋಹರವಾಗಿ ಇಹಲೋಕದ ಪರಿವೆಯೇ ಇಲ್ಲದಂತಹ ಅವನ ಪರಿಚಾರಿಕೆಯಲ್ಲಿ ಅನುಭಾವದ ಹೊಳಹಿದೆ. ಮೈ ಬಂಗಾರದ ಕಾಂತಿಯಿಂದ ಕೂಡಿದೆ, ಮನಸ್ಸು ಸ್ಫಟಿಕ ಶುಭ್ರವಾಗಿರುವಂತೆ ಭಾಸವಾಗುತ್ತಿದೆ.

ದೇವಿಯ ಸೌಂದರ್ಯ ಅತ್ತ, ಪೂಜಾರಿಯ ಪ್ರಭಾವಳಿ ಇತ್ತ! ಭಕ್ತರಿಗೊಂದು ಬಗೆಯ ರೋಮಾಂಚನ. ಮುಂದೆ ಶ್ರೀರಾಮಕೃಷ್ಣರ ಈ ಕಾಂತಿಯನ್ನು ಕುರಿತು ಶ್ರೀಮಾತೆ ಶಾರದಾದೇವಿಯವರು ಹೇಳುತ್ತಾರೆ: “ಅವರ ದೇಹಕಾಂತಿ ಚಿನ್ನದಂತೆ ಇತ್ತು. ಇದು ಉತ್ಪ್ರೇಕ್ಷೆಯಲ್ಲ, ಸತ್ಯವಾದ ಮಾತು. ಅವರ ತೋಳಿಗೆ ಕಟ್ಟಿದ್ದ ಬಂಗಾರದ ತಾಯಿತ, ತೀವ್ರವಾಗಿ ಗಮನಿಸದ ಹೊರತು ಗೋಚರವಾಗದಷ್ಟು ಅವರ ಮೈ ಸುವರ್ಣಕಾಂತಿಯಿಂದ ಹೊಳೆಯುತಿತ್ತು. “ಒಮ್ಮೆ ಶ್ರೀರಾಮಕೃಷ್ಣರು ತಮ್ಮ ಹುಟ್ಟೂರಾದ ಕಾಮಾರಪುಕುರಕ್ಕೆ ಹೋಗಿರುತ್ತಾರೆ. ಒಂದು ಮಧ್ಯಾಹ್ನ ಊಟದ ಬಳಿಕ ಸಂಜೆಯಲ್ಲಿ ಪಕ್ಕದೂರಿಗೆ ಹೊರಡುವುದೆಂದು ನಿಗದಿಯಾಗಿರುತ್ತದೆ.

ಅವರು ಪಲ್ಲಕ್ಕಿ ಏರಲು ಹೊರಬರುತ್ತಿದ್ದಂತೆ ಊರಜನರೆಲ್ಲ ಅವರ ಸುತ್ತ ನೆರೆಯುತ್ತಿರುವುದನ್ನು ಕಂಡು ಅವರೆಲ್ಲ ಏನನ್ನು ನೋಡಲು ಹಾಗೆ ನೆರೆಯುತ್ತಿದ್ದಾರೆ ಎಂದು ಪ್ರಶ್ನಿಸಿದಾಗ ಬಂಧುವೊಬ್ಬರು - “ತಾವು ಅಪ್ರತಿಮ ಸುಂದರವಾಗಿ ಕಾಣುತ್ತಿದ್ದೀರಿ. ಮುಖ, ಮೈಯಿಂದ ಕಾಂತಿ ಹೊಮ್ಮುತ್ತಿದೆ. ಎಲೆ ಅಡಿಕೆ ಮೆದ್ದ ನಿಮ್ಮ ತುಟಿಗಳ ಕೆಂಬಣ್ಣ ನಿಮ್ಮ ಸೌಂದರ್ಯವನ್ನು ಇಮ್ಮಡಿಸಿದೆ:” ಎಂದು ಉತ್ತರಿಸುತ್ತಾರೆ. ಶ್ರೀರಾಮಕೃಷ್ಣರು ಮರುಮಾತಾಡದೆ ಮನೆಗೆ ಹಿಂದಿರುಗಿ ತಮ್ಮ ಪ್ರಯಾಣ ರದ್ದುಪಡಿಸುತ್ತಾರೆ.

ಉಟ್ಟಿದ್ದ ಬಟ್ಟೆ, ಹೊದೆದ ಶಾಲುಗಳನ್ನು ಕಿತ್ತೆಸೆದು, “ಅಯ್ಯೋ, ನಶ್ವರವಾದ ಈ ಶರೀರದ ಸೌಂದರ್ಯಕ್ಕೆ ಜನ ಮರುಳಾಗುತ್ತಿದ್ದಾರಲ್ಲ. ಅನಂತನೂ ಅತಿ ಸುಂದರನೂ ಆದ ಈಶ್ವರನನ್ನು ಇವರು ಭಾವಿಸುತ್ತಿಲ್ಲವಲ್ಲ” ಎಂದು ಬಹಳ ದುಃಖಿಸುತ್ತಾರೆ. ಶ್ರೀಮಾತೆಯವರು ತಿಳಿಸುತ್ತಾರೆ, “ಶ್ರೀರಾಮಕೃಷ್ಣರು ತಮ್ಮ ದೇಹಕಾಂತಿಯಿಂದ ಚಿಂತಿತರಾಗಿ ಅದನ್ನು ಹಿಂಪಡೆಯುವಂತೆ ಕಾಳಿಯಲ್ಲಿ ಬಹಳವಾಗಿ ಬೇಡಿಕೊಂಡರು. ತಮ್ಮ ದೇಹದ ಮೇಲೆ ತಟ್ಟುತ್ತ, ‘ಒಳ ಸರಿ, ಒಳಕ್ಕೆ ಸರಿ’ ಎಂದು ಹೇಳುತ್ತಿದ್ದರು.” ಬಾಹ್ಯದ ಯಾವ ಆಡಂಬರ, ಆದರ, ಸಮ್ಮಾನಗಳತ್ತ ಗಮನವೇ ಇಲ್ಲದ ಒಳಪಯಣ ಇದು. ಗದ್ದಲದ ಜಗದ ನಡುವಣ ಮೌನಯಾನವೆಂದರೆ ಇದು.

ಅಬ್ಬರದ ನದಿ ಉಬ್ಬರವಿಳಿದ ಬಳಿಕ ಮರಳ ತೊರೆ. ಆದರೆ ನಿರಂತರವಾಗಿ ಹರಿಯುವ ಝರಿ ಇಂತಹ ಅಬ್ಬರದ ಉಬ್ಬರಕ್ಕಿಂಥ ಸಾವಿರ ಪಾಲು ವಾಸಿ. ಹತ್ತು ತಲೆಗಳೂ, ಹತ್ತು ಕಿರೀಟಗಳೂ, ಸುವರ್ಣ ನಗರಿಯೂ ಹಗುರ; ನಾರುಡುಗೆಯ ರಾಮತತ್ತ್ವದ ಮುಂದೆ. ನಮ್ಮ ಬದುಕು ಅಬ್ಬರದ ಉಬ್ಬರವಾಗದೆ ಸಿಹಿನೀರ ಝರಿಯಾಗಿರಲಿ.→ ⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT