ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳಬಹುದು

Last Updated 11 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

l ನನ್ನ ಹೆಸರು ಪಾಟೀಲ್. ವಯಸ್ಸು 21. ನನ್ನ ಕೈ, ಎದೆ, ಬೆನ್ನು ಹಾಗೂ ಕಾಲುಗಳ ಮೇಲೆ ತುಂಬಾ ಕೂದಲು ಬೆಳೆದಿದೆ. ಸ್ನೇಹಿತರು ನನ್ನನ್ನು ‘ಗೊರಿಲ್ಲಾ ಗೊರಿಲ್ಲಾ’ ಎಂದು ರೇಗಿಸುತ್ತಾರೆ. ಹೀಗೆ ರೇಗಿಸುವಾಗ ನನಗೆ ತುಂಬಾ ಕಿರಿ ಕಿರಿ ಅನ್ನಿಸುತ್ತದೆ. ದಯವಿಟ್ಟು ನನಗೆ ಏನಾದರೂ ಸಲಹೆ ನೀಡಿ...

ನಿಮ್ಮ ಸಮಸ್ಯೆ ನನಗೆ ಅರ್ಥವಾಗುತ್ತದೆ. ಆದರೆ ನಿಮಗೆ ಕೂದಲ ಬೆಳವಣಿಗೆ ಮೇಲೆ ಯಾವುದೇ ನಿಯಂತ್ರಣ ಸಾಧ್ಯವಿಲ್ಲ. ಈ ರೀತಿ ಕೂದಲು ಬೆಳೆಯುವುದಕ್ಕೆ ಹಾರ್ಮೋನು ಹಾಗೂ ವಂಶವಾಹಿ ಗುಣಗಳ ಪ್ರಭಾವ ಇರುತ್ತದೆ. ಹಾಗೆಯೇ ಹಲವು ಪುರುಷರಲ್ಲಿ ಕೂದಲು ಸಹಜವಾಗಿಯೇ ಹೆಚ್ಚಾಗಿರುತ್ತದೆ. ನಿಮ್ಮ ಸ್ನೇಹಿತರು ರೇಗಿಸಿದರೆ ಆ ಬಗ್ಗೆ ಚಿಂತೆ ಮಾಡಬೇಡಿ. ಅದನ್ನು ನಿರ್ಲಕ್ಷಿಸುವುದೇ ಒಳ್ಳೆಯದು.

ಜೊತೆಗೆ ಟ್ರೈಕೊಲಾಜಿಸ್ಟ್ ಅಥವಾ ಚರ್ಮರೋಗ ತಜ್ಞರನ್ನು ಭೇಟಿ ಮಾಡಿ. ಆಗ ನಿಮಗೆ ಕೂದಲ ಹೆಚ್ಚಳದ ಕಾರಣ ತಿಳಿಯುತ್ತದೆ. ಇದು ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನೆರವಾಗಬಹುದು.

***

l ಮದುವೆಯಾಗಿ ಎರಡು ವರ್ಷಗಳಾಗಿವೆ. ತಲೆ ನೋವು, ಕಾಲು ನೋವು ಎಂದು ಕೂಡಲು ನಿರಾಕರಿಸುತ್ತಾಳೆ. ರಾತ್ರಿ ಮಲಗಿದಾಗ, ಮೂರ್ಛೆ ರೋಗ ಬಂದು ಸಿಕ್ಕಾಪಟ್ಟೆ ಒದ್ದಾಡುತ್ತಾ ಸುಸ್ತಾಗಿರುತ್ತಾಳೆ. ನನ್ನ ಮನೆಯಲ್ಲಿ ಮೂರು ತಿಂಗಳೂ ವಾಸವಿರುವುದಿಲ್ಲ. ಏನಾದರೂ ನೆವ ಹೇಳಿ ತವರು ಮನೆಯವರು ಕರೆದುಕೊಂಡು ಹೋಗುತ್ತಾರೆ. ಅಲ್ಲಿಂದ ತಂದ ಗುಳಿಗೆಗಳನ್ನು ನುಂಗುತ್ತಾಳೆ. ಈ ಬಗ್ಗೆ ವೈದ್ಯರಲ್ಲಿ ವಿಚಾರಿಸಿದಾಗ, ಅದರಿಂದ ಆಗುವ ಪರಿಣಾಮಗಳನ್ನು ಹೇಳಿದ್ದಾರೆ. ಈಗ ತವರು ಮನೆಗೆ ಹೋಗಿ 10–12 ತಿಂಗಳಾದವು. ಆರೋಗ್ಯ ಸುಧಾರಿಸಿದ ನಂತರ ಬರುತ್ತೇನೆ ಎಂದು ಹೇಳುತ್ತಲೇ ಇದ್ದಾಳೆ. ನನಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಈಗ ನಾನು ಏನು ಮಾಡಬೇಕು?

ಸಂಬಂಧದಲ್ಲಿ ಸಂವಹನ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಮತ್ತು ಹೊಂದಾಣಿಕೆ ಮುಖ್ಯವಾದ ಅಂಶಗಳು. ಇವು ಗಂಡ-ಹೆಂಡತಿ ವಿಷಯದಲ್ಲಿ ಮತ್ತಷ್ಟು ಮುಖ್ಯವಾಗುತ್ತವೆ. ನಿಮ್ಮ ಪತ್ನಿಯೊಂದಿಗೆ ಮುಕ್ತವಾಗಿ ಮಾತನಾಡಲು ಪ್ರಯತ್ನಿಸಿ. ನೀವು ಅವರೊಂದಿಗೆ ಸದಾ ಜೊತೆಯಾಗಿರುವಿರಿ, ಹಾಗೂ ಬೆಂಬಲವಾಗಿ ನಿಲ್ಲುವಿರಿ ಎಂದು ಮನವರಿಕೆ ಮಾಡಿ. ಅವರ ಪೋಷಕರೊಂದಿಗೂ ಮಾತನಾಡಿ, ಅವರ ಆರೋಗ್ಯದ ಜವಾಬ್ದಾರಿಯನ್ನು ನೀವೇ ವಹಿಸಿಕೊಳ್ಳಿ. ಇವೆಲ್ಲಾ ಅತಿ ಸೂಕ್ಷ್ಮ ವಿಚಾರಗಳು. ಜಾಗರೂಕವಾಗಿ ನಡೆದುಕೊಂಡರೆ ಅವರು ತಮ್ಮೆಲ್ಲಾ ಸಮಸ್ಯೆಗಳನ್ನು ನಿಮ್ಮ ಬಳಿ ಹೇಳಿಕೊಳ್ಳುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳಿ. ಆರೋಗ್ಯಕರ ಸಂವಹನವೊಂದೇ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾದ ಮಾರ್ಗ.

***

l 2013ರಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವೆ. ಇನ್ನೂ ಕೆಲಸ ಸಿಕ್ಕಿಲ್ಲ. ಮನೆಯವರು ನನಗೆ ಮದುವೆ ಮಾಡಲು ಸಂಬಂಧ ಹುಡುಕುತ್ತಿದ್ದಾರೆ. ನಾನೊಬ್ಬ ಹುಡುಗನನ್ನು ಇಷ್ಟಪಟ್ಟಿದ್ದೆ. ಆದರೆ, ಅವನ ಮನೆಯವರು ನನ್ನನ್ನು ಒಪ್ಪಿಕೊಳ್ಳಲಿಲ್ಲ. ಆ ಹುಡುಗನ ಹಂಬಲದಲ್ಲಿ ಬೇರೆ ಮದುವೆಯ ಪ್ರಸ್ತಾಪಗಳು ಇಷ್ಟವಾಗುತ್ತಿಲ್ಲ. ಕೆಲಸ ಹುಡುಕಲೂ ಆಸಕ್ತಿಯಿಲ್ಲ. ಅಪ್ಪ ನನ್ನನ್ನು ಬೇಗ ಮನೆಯಿಂದ ಕಳುಹಿಸುವ ಪ್ರಯತ್ನದಲ್ಲಿದ್ದಾರೆ. ಎಲ್ಲರಿಂದ ಓಡಿಹೋಗಬೇಕು ಎನ್ನಿಸುವಷ್ಟು ದುಃಖವಾಗುತ್ತಿದೆ...

ನೀವು ನಿಮ್ಮ ಜೀವನದಲ್ಲಿ ಏನನ್ನು ಎದುರುನೋಡಬೇಕು ಎಂಬುದರ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಇದು ಸೂಕ್ತ ಸಮಯ. ನೀವು ಈಗಾಗಲೇ ಏನೂ ಮಾಡದೇ ನಾಲ್ಕು ವರ್ಷಗಳನ್ನು ವೃಥಾ ಕಳೆದಿದ್ದೀರಿ. ನೀವು ವಾಸ್ತವವನ್ನು ಒಪ್ಪಿಕೊಂಡು ಮುನ್ನಡೆಯಲೇಬೇಕು.

ನಿಮ್ಮ ಪೋಷಕರೊಂದಿಗೆ ಮಾತನಾಡಿ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಇದು ನಿಮ್ಮನ್ನು ದ್ವಂದ್ವದಿಂದ ಹೊರತರಲು ಸಹಾಯ ಮಾಡಬಹುದು. ಒಂದು ನೌಕರಿಯನ್ನು ಹುಡುಕಿಕೊಳ್ಳಿ. ಇದು ನಿಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಹಾಗೂ ನಿಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಭೂತಕಾಲವನ್ನು ಮರೆತು ಭವಿಷ್ಯವನ್ನು ಎದುರುನೋಡಿ. ಅಲ್ಲಿ ಜೀವನ ಅತಿ ಸುಂದರವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT