ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಸ್‌ ಲೀಡರ್‌’ನ ಗನ್‌ ಸಂಭಾಷಣೆ!

Last Updated 11 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಚಿತ್ರ: ಮಾಸ್‌ ಲೀಡರ್‌
ನಿರ್ಮಾಪಕರು: ತರುಣ್‌ ಶಿವಪ್ಪ, ಹಾರ್ದಿಕ್‌ ಗೌಡ
ನಿರ್ದೇಶನ: ನರಸಿಂಹ
ತಾರಾಗಣ: ಶಿವರಾಜ್‌ಕುಮಾರ್‌, ವಿಜಯರಾಘವೇಂದ್ರ, ಗುರು ಜಗ್ಗೇಶ್‌, ಗಿರಿಜಾ ಲೋಕೇಶ್‌, ಶರ್ಮಿಳಾ ಮಾಂಡ್ರೆ, ಯೋಗೀಶ್‌, ಪ್ರಣೀತಾ, ಪ್ರಕಾಶ್‌ ಬೆಳವಾಡಿ

ಭಾರತದೊಳಕ್ಕೆ ಅಕ್ರಮವಾಗಿ ನುಸುಳುತ್ತಿರುವ ಬಾಂಗ್ಲಾ ವಲಸಿಗರು, ಜಮ್ಮು ಮತ್ತು ಕಾಶ್ಮೀರದ ಜಿಹಾದಿಗಳ ಅಟ್ಟಹಾಸವನ್ನು ‘ಮಾಸ್‌ ಲೀಡರ್‌’ ಮೂಲಕ ಬಗ್ಗುಬಡಿಯುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ನರಸಿಂಹ. ಆದರೆ, ಪ್ರೇಕ್ಷಕರಿಗೆ ಈ ವಿಷಯ ಹೇಳುವ ದಾಟಿಯಲ್ಲಿ ಎಡವಿದ್ದಾರೆ.

ವಸ್ತುವಿನ ಆಯ್ಕೆಯಲ್ಲಿ ಅವರು ತೋರಿರುವ ಸೂಕ್ಷ್ಮತೆಯು ಪರದೆಯ ಮೇಲಿನ ಪ್ರಸ್ತುತಿಯಲ್ಲಿ ಕಾಣಸಿಗುವುದಿಲ್ಲ. ನಿರೀಕ್ಷೆ ಹೊತ್ತು ಚಿತ್ರಮಂದಿರದ ಒಳಹೊಕ್ಕುವ ಪ್ರೇಕ್ಷಕರಿಗೆ ನಿರಾಸೆ ಕಾಡಿದರೆ ಅಚ್ಚರಿಪಡಬೇಕಿಲ್ಲ.

ಸಡಿಲವಾದ ಚಿತ್ರಕಥೆ, ದುರ್ಬಲ ನಿರೂಪಣೆಯಿಂದಾಗಿ ಕಥಾ ವಸ್ತುವಿನಲ್ಲಿನ ತಾಜಾತನವು ನೋಡುಗರಿಗೆ ಕುತೂಹಲ ಹುಟ್ಟಿಸುವುದಿಲ್ಲ. ನಾಯಕ ಮತ್ತು ಅವನ ಸ್ನೇಹಿತರ ಕೈಯಲ್ಲಿನ ಗನ್‌ ಉಗುಳುವ ಬುಲೆಟ್‌ಗಳು, ಅವರ ಬಾಯಿಂದ ಸಿಡಿಯುವ ದೇಶಪ್ರೇಮ ಸಾರುವ ಖಡಕ್‌ ಡೈಲಾಗ್‌ಗಳು ಒಂದು ಹಂತದಲ್ಲಿ ಪ್ರೇಕ್ಷಕರಿಗೆ ರೇಜಿಗೆ ಹುಟ್ಟಿಸುತ್ತವೆ.

ಶಿವರಾಜ್‌ನದು(ಶಿವರಾಜ್‌ಕುಮಾರ್‌) ಸೇನೆಯಲ್ಲಿ ಕ್ಯಾಪ್ಟನ್‌ ಹುದ್ದೆ. ಎಲ್ಲ ಕಾರ್ಯಾಚರಣೆಗೂ ಸದಾ ಬೆನ್ನೆಲುಬಾಗಿ ನಿಲ್ಲುವ ವಿಜಿ(ವಿಜಯರಾಘವೇಂದ್ರ) ಮತ್ತು ಗುರು(ಗುರು ಜಗ್ಗೇಶ್‌) ಕ್ಯಾಪ್ಟನ್‌ನ ಸ್ನೇಹಿತರು. ಈ ಇಬ್ಬರು ಕೂಡ ಯೋಧರು.

ಕಾಶ್ಮೀರದಲ್ಲಿ ಸೇವೆ ಸಲ್ಲಿಸುವಾಗ ಜಿಹಾದಿ ಹರ್ಷದ್‌ ಮತ್ತು ಶಿವರಾಜ್‌ನ ತಂಗಿ ನಡುವೆ ಪ್ರೇಮಾಂಕುರವಾಗುತ್ತದೆ. ಹರ್ಷದ್‌ನ ಕುತಂತ್ರಕ್ಕೆ ಶಿವರಾಜ್‌ ಕುಟುಂಬ ಬಲಿಯಾಗುತ್ತದೆ. ಮಗಳೊಬ್ಬಳೇ ಬದುಕುಳಿಯುತ್ತಾಳೆ.

ದೇಶದಲ್ಲಿ ಬಾಂಗ್ಲಾ ವಲಸಿಗರ ಉಪಟಳ ಹೆಚ್ಚುತ್ತಿದೆ. ಚುನಾವಣೆಯಲ್ಲಿ ರಾಜಕಾರಣಿಗಳಿಗೆ ಇವರ ಮತಗಳು ಅನಿವಾರ್ಯ. ಗೆಲ್ಲುವ ಛಲಕ್ಕೆ ಬಿದ್ದ ಧುರೀಣರೇ ವಲಸಿಗರಿಗೆ ಶ್ರೀರಕ್ಷೆ. ಇನ್ನೊಂದೆಡೆ ವೇಶ್ಯಾವಾಟಿಕೆಯ ಕರಾಳದಂಧೆಗೆ ಸಿಲುಕಿ ಬದುಕು ಕಳೆದುಕೊಳ್ಳುವ ಬಾಂಗ್ಲಾ ದೇಶದ ಮಹಿಳೆಯರು ಇದ್ದಾರೆ.

ಅಕ್ರಮ ನುಸುಳುವಿಕೆಗೆ ಕಡಿವಾಣ ಹಾಕಲು ಶಿವರಾಜ್‌ ಮುಂದಾಗುತ್ತಾನೆ. ಕಾರ್ಯಾಚರಣೆ ಮೂಲಕ ಈ ಅಕ್ರಮಕ್ಕೆ ಅಂತ್ಯ ಹಾಡುವಲ್ಲಿಯೂ ಯಶಸ್ವಿಯಾಗುತ್ತಾನೆ. ಕೊನೆಯಲ್ಲಿ ಜಿಹಾದಿಗಳ ಹತ್ಯೆಯೊಂದಿಗೆ ಚಿತ್ರ ಮುಗಿದುಹೋಗುತ್ತದೆ.

ಚಿತ್ರದ ಮೊದಲಾರ್ಧವು ಗನ್‌ನಲ್ಲಿ ಸಿಡಿಯುವ ಬುಲೆಟ್‌ಗಳ ಭೋರ್ಗರೆತ ಮತ್ತು ದೇಶ ಪ್ರೇಮದ ಸಂಭಾಷಣೆ ಒಪ್ಪಿಸುವಲ್ಲಿಯೇ ಮುಗಿದುಹೋಗುತ್ತದೆ. ದ್ವಿತೀಯಾರ್ಧದಲ್ಲಿ ಜಿಹಾದಿಗಳ ವಿರುದ್ಧದ ಹೋರಾಟ ಬಿಚ್ಚಿಕೊಳ್ಳುತ್ತದೆ.

ಶಿವರಾಜ್‌ಕುಮಾರ್‌, ವಿಜಯರಾಘವೇಂದ್ರ, ಗುರು ಜಗ್ಗೇಶ್‌ ಯೋಧರಾಗಿ ಇಷ್ಟವಾಗುತ್ತಾರೆ. ಅವರ ಪಾತ್ರವನ್ನು ಮತ್ತಷ್ಟು ಬಿಗಿಗೊಳಿಸಿದ್ದರೆ ಇಡೀ ಸಿನಿಮಾವು ಮತ್ತೊಂದು ಮಜಲಿಗೆ ಏರುವ ಸಾಧ್ಯತೆ ಇತ್ತು. ಆದರೆ, ನಿರ್ದೇಶಕರು ಈ ಸಾಧ್ಯತೆಯನ್ನು ದಕ್ಕಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಕಾಶ್ಮೀರದ ಹಿಮಚ್ಛಾದಿತ ದೃಶ್ಯಗಳು ಗುರುಪ್ರಶಾಂತ ರೈ ಅವರ ಕ್ಯಾಮೆರಾದಲ್ಲಿ ಸೊಗಸಾಗಿ ಸೆರೆಸಿಕ್ಕಿವೆ. ಯೋಗೀಶ್‌, ಶರ್ಮಿಳಾ ಮಾಂಡ್ರೆ, ಪ್ರಕಾಶ್‌ ಬೆಳವಾಡಿ, ಗಿರಿಜಾ ಲೋಕೇಶ್‌ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಪ್ರಣೀತಾ ಪಾತ್ರಕ್ಕೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ವೀರಸಮರ್ಥ್‌ ಸಂಯೋಜನೆಯ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT