ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನಂಚಲಿ ಬಾನಾಡಿಯಾಗಿ...

Last Updated 12 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ವೈಶಾಲಿ ಹೆಗಡೆ, ಬಾಸ್ಟನ್

ಮಾರು ಹದಿನೆಂಟು ವರ್ಷಗಳ ಹಿಂದಿನ ಮಾತು. ಅಮೆರಿಕಕ್ಕೆ ಬಂದ ಹೊಸತು. ಅದೊಂದು ಸಿನಿಮಾ ‘ಡ್ರಾಪ್ ಜೋನ್’. ಆ ಸಿನಿಮಾದ ಕತೆ ಏನೆಂಬುದು ಚೂರೂ ನೆನಪಿಲ್ಲ ಈಗ. ಆದರೆ, ಅಂದಿನಿಂದ ತಲೆಯಲ್ಲಿ ಕೂತಿದ್ದು ಒಂದೇ ದೃಶ್ಯ. ಸಾವಿರಾರು ಅಡಿಗಳ ಎತ್ತರದಿಂದ ಹಾರುತ್ತಿರುವ ವಿಮಾನದ ಬಾಗಿಲಿನಿಂದ ಪುಟಪುಟನೆ ಹಾರುವ ಐದಾರು ಹಾರಾಟಗಾರರು ಆಗಸದಲ್ಲಿ ಭರ್ರೆಂದು ಬೀಳುತ್ತಾ ಒಬ್ಬರದೊಬ್ಬರು ಕೈ ಕೈ ಜೋಡಿಸುತ್ತ ಭಗ್ಗೆಂದು ಬಿಚ್ಚಿಕೊಳ್ಳುವ ಪ್ಯಾರಾಶೂಟ್‌ನೊಂದಿಗೆ ತೇಲುತ್ತ ಭೂಮಿಗಿಳಿಯುವ ದೃಶ್ಯ.

ಅಂದಿನವರೆಗೂ ಹೀಗೊಂದು ಸಾಹಸವನ್ನು ಆಟವೆಂದು ಯಾರೊಬ್ಬರು ಬೇಕಾದರೂ ನಡೆಸಬಹುದೆಂಬ ಕಲ್ಪನೆ ಕೂಡ ಇರಲಿಲ್ಲ ನನಗೆ. ಬರೀ ಯುದ್ಧವೀರರಿಗಷ್ಟೇ ಮೀಸಲಿದ್ದ ಸಾಹಸವೆಂಬಂತಹ ಕಲ್ಪನೆಯಿತ್ತು. ಆಗ ಹೊತ್ತಿಕೊಂಡ ನನ್ನೊಳಗಿನ ಹಾರುವ ಕಿಚ್ಚು ಮೊನ್ನೆಯಷ್ಟೇ ತಣ್ಣಗೆ ತೇಲಿ ಸದಾ ಒಳಗೆ ಉರಿವ ಜ್ಯೋತಿಯಾಗಿದೆ ಈಗ.

ಹೌದು ನಾನು ಹೇಳುತ್ತಿರುವುದು ‘ಸ್ಕೈ ಡೈವಿಂಗ್’ ಬಗ್ಗೆ.  ಜೀವನದಲ್ಲಿ ಒಮ್ಮೆಯಾದರೂ ಸ್ಕೈ ಡೈವಿಂಗ್ ಮಾಡಬೇಕು ಎಂಬ ಅದಮ್ಯ ಆಸೆಯಿತ್ತು. ನನಗೂ ಕೈಗೆಟಕುವ ಸಾಹಸ ಎಂದು ಅರಿವಿಗೆ ಬರುತ್ತಿದ್ದಂತೆಯೇ ಆ ಬಗೆಗಿನ ತುಡಿತ ಕೂಡ ಹೆಚ್ಚಾಗುತ್ತ ಹೋಯಿತು. ಆದರೆ, ಪ್ರತಿ ಬಾರಿ ಈ ವಿಷಯ ಎತ್ತಿದಾಗಲೂ ನನ್ನವನಿಂದ ವಿಚಿತ್ರ ಪ್ರತಿಭಟನೆ. ಹಾರಿ ಸಾಯುವ ಹೊಸ ಆಟ! ಇದೆಂಥ ಹುಚ್ಚು ನಿನಗೆ ಎಂಬಂಥ ಆಕ್ಷೇಪ. ದಬ್ಬಿ ಒಳದೂಡಿದಷ್ಟೂ, ವರ್ಷ ವರ್ಷಕ್ಕೆ ಹೆಚ್ಚಿನ ಶಕ್ತಿಯಿಂದ ನನ್ನೀ ಆಸೆ ಪುಟಿದೆದ್ದು ಬರತೊಡಗಿತು. ಈ ಬಾರಿಯ ಹುಟ್ಟಿದ ಹಬ್ಬದಂದು ಮತ್ತೊಮ್ಮೆ ಹುಟ್ಟಿಬಿಡೋಣ ಎನಿಸಿಬಿಟ್ಟಿತು. ಹಾಗಾಗಿ, ಯಾರಿಗೂ ಹೇಳಲಿಲ್ಲ. ನೇರ ಅಪಾಯಿಂಟ್‌ಮೆಂಟ್ ತೆಗೆದುಕೊಂಡೆ.

ಶನಿವಾರ ಜುಲೈ ಹದಿನೈದರ ಸಂಜೆ 4ಗಂಟೆಗೆ ನಾನು ಆ ಪುಟ್ಟ ಏರ್‌ರ್ಪೋರ್ಟಿನಲ್ಲಿರಬೇಕಿತ್ತು. ಬೆಳಗಿನಿಂದ ಹೊಟ್ಟೆಯಲ್ಲಿ ಸಣ್ಣಗೆ ಸಂಕಟ. ಎದೆಯಲ್ಲಿ ತಳಮಳ. ಗಂಡನನ್ನೂ ಮಕ್ಕಳನ್ನೂ ಕರೆದೆ. ‘ನಾನು ಇಂದು ಸಂಜೆ ಸ್ಕೈ ಡೈವಿಂಗ್‌ಗೆ ಹೊರಟಿದ್ದೇನೆ’ ಎನ್ನುತ್ತ ಇದೇನು ಯಾರೂ ಮಾಡಿರದ ಆಟವಲ್ಲ. ಜಗತ್ತಿನಾದ್ಯಂತ ನಿತ್ಯ ಸುಮಾರು 5 ಲಕ್ಷ ಜನ ಸ್ಕೈ ಡೈವಿಂಗ್ ಮಾಡುತ್ತಾರೆ. ಈ ಸಾಹಸಕ್ರೀಡೆ ಇಂದು ಜನಪ್ರಿಯ ಆಟ ಮತ್ತು ಇದಕ್ಕೆ ಸುರಕ್ಷಿತ ಸುಧಾರಣೆಗಳಾಗಿವೆ. ಇಷ್ಟಕ್ಕೂ ನಾನೇನು ಒಬ್ಬಳೇ ಹಾರುವುದಿಲ್ಲ, ಬೆನ್ನಿಗೊಬ್ಬ ಪರಿಣತ ಸ್ಕೈ ಡೈವರ್ ನನ್ನ ಕಟ್ಟಿಕೊಂಡೇ ಇರುತ್ತಾನೆ. ಇದಕ್ಕೆ ಟ್ಯಾನ್ಡೆಂ ಜಂಪಿಂಗ್‌ ಎನ್ನುತ್ತಾರೆ. ನಿಮ್ಮ ಮಾತಿನಿಂದ ನನ್ನ ನಿರ್ಧಾರ ಬದಲಾಗದು. ಪ್ರೀತಿಯಿಂದ ಹೋಗಿ ಬಾ ಎನ್ನಿ ಎಂದೆಲ್ಲ ಹೇಳಿದೆ. ಮಕ್ಕಳು ಒಂದು ಬಗೆಯ ಹೆಮ್ಮೆಯಲ್ಲಿ ಅಮ್ಮ ‘ಕೂಲ್ ಮಂ’  ಇರಲು ಸಾಧ್ಯವೇ ಎಂಬಂತೆ ನೋಡಿ ನಕ್ಕರು. ‘ಗುಡ್ ಲಕ್ ಅಮ್ಮ’ ಎಂದರು. ಇವ ಹತಾಶೆಯಿಂದಲೇ ‘ನಿಂಗೆ ಹೋಗಲೇಬೇಕಾ? ಸರಿ ಹೋಗಿ ಬಾ’ ಎಂದ.

ನಾನು ವಿಚಿತ್ರ ಬೇಗೆಯಲ್ಲಿ ಒಬ್ಬಳೇ ಡ್ರೈವ್ ಮಾಡಿಕೊಂಡು ಹೊರಟು ಅಲ್ಲಿ ಹೋಗಿ ತಲುಪಿದಾಗ ಮೂರೂಮುಕ್ಕಾಲು. ಒಂದು ಚಿಕ್ಕ ಕಟ್ಟಡ. ಸುತ್ತೆಲ್ಲ ಚಪ್ಪರ ಹಾಕಿದಂತಹ ವ್ಯವಸ್ಥೆ. ಅಲ್ಲಲ್ಲಿ ಹರಡಿರುವ ಪ್ಯಾರಶೂಟ್‌ ಅನ್ನು ಒರೆಸಿ, ಮಡಚುತ್ತಿರುವ ಒಂದಷ್ಟು ಜನ. ಶಸ್ತ್ರಸನ್ನದ್ಧರಾಗಿ ನಿಂತಂತಹ ಒಂದಷ್ಟು ದೇಹಾಕೃತಿಗಳು. ಎದುರಿನ ವಿಶಾಲ ಬಯಲಲ್ಲಿ ಪಟಪಟಿಸುತ್ತಿರುವ ದಿಕ್ಸೂಚಿ ಬಾವುಟಗಳು. ಪಕ್ಕದ ಬಯಲಲ್ಲಿ ನಿಂತ ಲಟಾರಿಯಂತೆ ತೋರುವ ಎರಡು ವಿಮಾನಗಳು. ಒಂದು ಕ್ಷಣ ಇದೆಂಥ ಹರಕು ಮುರುಕಿನ ಜಾಗ, ನಿಜಕ್ಕೂ ಇವರ ವೆಬ್‌ಸೈಟಿನ ಅಂಕಿಅಂಶಗಳಂತೆ ಸುರಕ್ಷಿತವೆ ಎಂದು ಅನುಮಾನವಾಯಿತು. ಸಾಹಸಕ್ಕೆ ಸಜ್ಜಾಗಿರುವ ಒಂದಷ್ಟು ಜನರನ್ನು ನೋಡಿ ಧೈರ್ಯವೂ ಬಂತು. ವ್ಯಾವಹಾರಿಕ ಕೆಲಸಗಳೆಲ್ಲ ಮುಗಿದು ಸರಿಯಾಗಿ ನಾಲ್ಕು ಗಂಟೆಗೆ ಇನ್ನಿತರ ನಾಲ್ವರೊಂದಿಗೆ ನನ್ನನ್ನೊಂದು ಚಿಕ್ಕಕೋಣೆಗೆ ಕಳಿಸಿದರು.

ಅಲ್ಲೊಂದಿಷ್ಟು ಕಬ್ಬಿಣದ ಕುರ್ಚಿಗಳು. ಪ್ರತಿ ಕುರ್ಚಿಯ ಮೇಲೆ ಇದ್ದ ಒಂದು ರೈಟಿಂಗ್‌ ಪ್ಯಾಡ್, ಪೆನ್ನು, ಮತ್ತೊಂದಿಷ್ಟು ಕಾಗದಪತ್ರಗಳು. ನಾವು ಕುಳಿತ ಕೂಡಲೇ ಒಬ್ಬಾಕೆ ಬಂದು ಏನೇ ಪ್ರಶ್ನೆಗಳಿದ್ದರೂ ಮುಜುಗರವಿಲ್ಲದೆ ಕೇಳಿ ಎನ್ನುತ್ತಾ ಎದುರಿದ್ದ ಟಿ.ವಿಯಲ್ಲಿ ಒಂದು ವಿಡಿಯೋ ಆರಂಭಿಸಿ ಹೋದಳು. ನಿಜಕ್ಕೂ ಎಂದೂ ಯಾವತ್ತೂ ಸಾಯುವ ಹೆದರಿಕೆಯಿಲ್ಲದ ನಂಗೆ ಮೊದಲ ಬಾರಿಗೆ ಆ ಟಿ.ವಿಯಲ್ಲಿ ನಿರುದ್ವಿಗ್ನವಾಗಿ ಒದರುತ್ತಿದ್ದ ಲಾಯರಿಣಿ ಸಣ್ಣಗೆ ನಡುಕ ಹುಟ್ಟಿಸಿದಳು. ನಾವು ಅಲ್ಲಿನ ಕಾಗದಪತ್ರಗಳಲ್ಲಿ, ಸತ್ತರೆ, ಅಂಗವಿಕಲವಾದರೆ, ಯಾವುದೇ ಬಗೆಯಲ್ಲೂ ಜೀವ ಅಥವಾ ದೇಹ ಹಾನಿಯಾದರೆ ಸ್ಕೈ ಡೈವಿಂಗ್ ಕಂಪೆನಿ ಜವಾಬ್ದಾರಿಯಲ್ಲ. ಅಷ್ಟೇ ಅಲ್ಲ ಅವರದ್ದೇ ತಪ್ಪಿದ್ದರೂ ನಾವಾಗಲೀ, ನಮ್ಮ ಕುಟುಂಬದವರಾಗಲೀ ಅಥವಾ ನಮ್ಮ ಪರವಾಗಿ ಯಾರೇ ಆಗಲೀ ಆ ಕಂಪೆನಿಯ ಮೇಲೆ ಕೇಸು ಹಾಕುವಂತಿಲ್ಲ ಎಂಬುದರ ಬಗ್ಗೆ ಪುಟಗಟ್ಟಲೇ ಸಹಿ ಹಾಕಬೇಕಿತ್ತು. ಜೊತೆಗೆ ಇತರೆ ಸುರಕ್ಷಿತ ಕ್ರಮಗಳ ಪಾಲನೆ ನಮ್ಮ ಜವಾಬ್ದಾರಿಯಾಗಿತ್ತು. ಒಂದು ನಿಟ್ಟುಸಿರುಬಿಟ್ಟು ಸಾಯುವುದೇ ಆದಲ್ಲಿ ಅದ್ಭುತವಾಗಿ ಸತ್ತರಾಯ್ತು ಬಿಡು ಎಂದುಕೊಳ್ಳುತ್ತ ಬಡ ಬಡ ಎಲ್ಲ ಕಡೆ ಸಹಿ ಹಾಕಿದೆ.

ಆ ಕೋಣೆಯಿಂದ ಹೊರಬರುತ್ತಿದ್ದಂತೆ ಮೊದಲು ಬಂದು ಕೂರಿಸಿ ಹೋಗಿದ್ದವಳು ಬಂದು ಮತ್ತೆ ಕೇಳಿದಳು, ಇದು ನಿಮ್ಮ ಕೊನೆಯ ನಿರ್ಧಾರವೇ? ನಗುತ್ತ ನನ್ನ ಕಾಗದಪತ್ರಗಳನೆಲ್ಲ ಕೊಟ್ಟೆ.  ಅಲ್ಲಿಂದ ಮುಂದೆ ಒಂದು ಬಗೆಯಲ್ಲಿ ನಿರುಮ್ಮಳ ಭಾವ ಆವರಿಸಿತು. ಅಂತೂ ಕೊನೆಗೂ ನನ್ನ ಮಹದಾಸೆ ಈಡೇರುವ ಕ್ಷಣಗಣನೆ ಆರಂಭವಾಗಿತ್ತು. ಆಕೆ ಒಂದು ಉದ್ದನೆಯ ಜಂಪರ್ ಸೂಟ್ ಕೊಟ್ಟು ನಾನು ಹಾಕಿಕೊಂಡ ಬಟ್ಟೆಯ ಮೇಲೆಯೇ ತೊಟ್ಟುಕೊಳ್ಳಲು ಹೇಳಿದಳು. ಇನ್ನೊಬ್ಬಾಕೆ ಬಂದು ಹಾರ್ನೆಸ್ ತೊಡಿಸಿದಳು. ಅದರ ಕೊಂಡಿ, ಬೆಲ್ಟುಗಳನೆಲ್ಲ ಸೊಂಟದ ಸುತ್ತ, ತೊಡೆಗಳ ಸುತ್ತ, ಬೆನ್ನಿಗೆಲ್ಲ ಬಿಗಿದಳು. ತಲೆಗೊಂದು ಚರ್ಮದ ಟೊಪ್ಪಿ ತೊಡಿಸಿದಳು.

ಟ್ಯಾನ್ಡೆಂ ಜುಮ್ಪಿಂಗ್ ಹಾಗೆ ನೋಡಿದರೆ ನಿಜಕ್ಕೂ ಸ್ಕೈ ಡೈವಿಂಗ್ ಮಾಡಿಯೂ ಮಾಡದಂತೆ. ಯಾಕೆಂದರೆ ನಾವು ಹಾರಿದರೂ, ಹಾರಿಸುವವ, ತೇಲಿಸುವವ ಬೇರೆಯೇ. ಇದೊಂತರ ನಮ್ಮ ಅಧೀನದಲ್ಲೀ ಯಾವೊಂದು ಕಾರ್ಯವೂ- ತಂತ್ರವೂ ಇರದ “ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ” ಎಂಬಂಥ ಪರಿಸ್ಥಿತಿ. ಆತನ ಪರಿಣಿತಿಯ ಮೇಲೆ ನಮ್ಮ ಜೀವ ಆಧರಿತವಾಗಿದೆ. ಪ್ಯಾರಶೂತ್ ಇರುವ ಬ್ಯಾಗನ್ನು ಆತ ತನ್ನ  ಬೆನ್ನಿಗೆ ಕಟ್ಟಿಕೊಂಡಿರುತ್ತಾನೆ.  ಆ ಬ್ಯಾಗಿನಲ್ಲಿ ೨ ಪ್ಯಾರಚೂಟ್ಗಲಿರುತ್ತವೆ.  ಸಮಯಕ್ಕೆ ತಕ್ಕಂತೆ ಒಂದು ಬಿಚ್ಚಿಕೊಳ್ಳದಿದ್ದರೆ ಎಮರ್ಜೆನ್ಸಿ ಪ್ಯಾರಾಚೂಟ್ ಎಳೆಯಬೇಕು. ಅವೆರಡೂ ಬಿಚ್ಚಿಕೊಳ್ಳದಿದ್ದಲ್ಲಿ ನಮ್ಮ ಹಣೆಬರಹ ಅಷ್ಟೇ.  ಆದರೆ ಹಾಗೆ ಆಗುವುದು ತುಂಬ ಅಪರೂಪ. ಪ್ರತಿ ಬಾರಿಯೂ ಪ್ಯಾರಾಶೂಟ್ ಪ್ಯಾಕ್ ಮಾಡುವಾಗ “ಯುನೈಟೆಡ್ ಸ್ಟೇಟ್ಸ್  ಪ್ಯಾರಶೂಟ್ ಅಸೋಸಿಯೇಶನ್” ನಿಂದ ಅಧಿಕೃತವಾಗಿ ನೇಮಕವಾದ ಸದಸ್ಯರ ಸೀಲು ಒತ್ತಿದ ಮೇಲೆ ಅವರಿಂದ ಪರೀಕ್ಷಿತವಾದ ಮೇಲೆಯೇ ಆ ಪ್ಯಾರಶೂಟ್ ಬ್ಯಾಗು ಸಿದ್ಧವಾಗುತ್ತದೆ. ಅಲ್ಲಿ ಸ್ಕೈ ಡೈವಿಂಗ್ ನಡೆಸುವ ಬಹುತೇಕ ಪರಿಣತರು ಈ ಅಧಿಕೃತ ಪ್ರಮಾಣಪತ್ರ ಹೊಂದಿದವರು.  ಹಾಗಾಗಿ ಇಂಥ ಸಹಸಕ್ರೀಡೆಗಳನ್ನು ನಡೆಸುವಾಗ ನಾವು ಆರಿಸಿಕೊಳ್ಳುವ ಜಾಗ, ಕಂಪನಿಯ ಸುರಕ್ಷತೆಯನ್ನೊಮ್ಮೆ ಪರಿಶೀಲಿಸುವುದು, ಅಲ್ಲಿನ ಅಂಕಿಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ.

ನಾನು ಹಾರುವ ತೇಲುವಸರಂಜಾಮುಗಳನೆಲ್ಲ ಬಿಗಿದು ನಿಂತಿರುವಾಗ  ಅದೇ ಸುಂದರಿ ಬಂದು ಹೇಳಿದಳು. ನೀನು ಶಾನ್ ಎಂಬುವನ ಜೊತೆ ಹೋಗಲಿದ್ದೀಯೇ.  ವಿಮಾನದಿಂದ ಹಾರುವಾಗ, ಗಾಳಿಯಲ್ಲಿ ಬೀಳುವಾಗ ಮತ್ತು ನೆಲಕ್ಕೆ ಇಳಿಯುವಾಗ ಕೈ ಕಾಲುಗಳನ್ನು ಹೇಗಿಟ್ಟುಕೊಳ್ಳಬೇಕೆಂಬುದನ್ನು ಶಾನ್ ತಿಳಿಸುತ್ತಾನೆ. ಏನೂ ತೊಂದರೆಯಿಲ್ಲ, ತುಂಬಾ ಸಿಂಪಲ್.. ಮಜಾ ಮಾಡು ಎಂದು ಬೆನ್ನುತಟ್ಟಿ ಹೋದಳು.  ಕೆಲ ಹೊತ್ತಿನಲ್ಲೇ ಮೈಕಿನಲ್ಲಿ ನನ್ನ ಹೆಸರು ಕರೆದರು. ಶಾನ್ ಎದುರಿಗೆ ನಿಂತಿದ್ದ. ನನ್ನ ಹಾರ್ನೆಸ್ಗಳನೆಲ್ಲ ಆತನೊಮ್ಮೆ ಪರೀಕ್ಷಿಸಿದ. ಆರ್ ಯೂ ರೆಡಿ ಟು ಹ್ಯಾವ್ ಫ್ಯಾನ್? ಎಂದ. ನಾನು ಉತ್ಸಾಹದ ಅಷ್ಟೇ ಉದ್ವಿಗ್ನದ ನಗೆ ನಕ್ಕೆ.  ನಾನು ಈ ಒಂದು ಅನುಭವದ ಫೋಟೋ ಮತ್ತು ವಿಡಿಯೋ ಬೇಕು ಎಂಬ ಕಾರಣಕ್ಕೆ ಹೆಚ್ಚಿನ ಹಣ ನೀಡಿದ್ದಕ್ಕಾಗಿ ನಮ್ಮೊಂದಿಗೆ ಸ್ಕೈ ಡೈವಿಂಗ್ ಮಾಡಲು ಒಬ್ಬ ವಿಡಿಯೋಗ್ರಾಫರ್ ಕೂಡ ಹಾರುತ್ತಾರೆ ಎಂದು ಹೇಳಿದ.

ಜೆನೀನ್ ಎಂದು ಆತ ಒಂದು ಕೂಗು ಹಾಕಿದ ಕೂಡಲೇ ಇಷ್ಟೊತ್ತು ಎಲ್ಲ ಹೇಳಿದ್ದ ಸುಂದರಿ ಬಡಬಡನೆ ತನ್ನ ಹಾರ್ನೆಸ ಹಾಕಿ ತಲೆಗೊಂದು ಹೆಲ್ಮೆಟ್ ಅದಕ್ಕೆ ಕಟ್ಟಿಕೊಂಡ ಒಂದು ದೊಡ್ಡ ಕ್ಯಾಮೆರ ಏರಿಸಿ ಎದುರು ಬಂದು ನಿಂತಳು! ನನ್ನ ಅವಾಕ್ಕಿಗೆ ಎಣೆಯಿಲ್ಲ. ಜೆನೀನ್ ಳೊಂದಿಗೆ ಸುಮ್ಮನೆ ಲೋಕಭಿರಾಮ ಆಹಾರತುತ್ತ ನನ್ನ ಉದ್ವೇಗ ಕಡಿಮೆ ಮಾಡಿಕೊಳ್ಳಲು ನೋಡಿದೆ. ಜೆನೀನ್ ಇನ್ನೂ ಯಾರನ್ನೂ  ಟ್ಯಾನ್ಡೆಂ ಜಂಪಿಂಗ್ ಮಾಡಿಸಿರಲಿಲ್ಲ ಆದರೆ ಅದು ಆಕೆಯ ಸುಮಾರು ೩೦೦೦ನೆ ಜಂಪ್ ಆಗಿತ್ತು. ಟ್ಯಾನ್ಡೆಂ ಜಂಪಿಂಗ್ ಮಾಡಿಸಲು ಇನ್ನೊಂದು ಟ್ರೇನಿಂಗ್ ಬಾಕಿ ಇದೆ ಎಂದಳು. ಆಕೆ ನಾವೆಲ್ಲಾ ವಾಕಿಂಗ್ ಹೋಗಿ ಬಂದ ಲೆಕ್ಕ ಹೇಳುವಷ್ಟು ಸುಲಭದಲ್ಲಿ ಜಂಪಿನ ಲೆಕ್ಕ ಕೊಡುತ್ತಿದ್ದಳು! ಅಷ್ಟರಲ್ಲಿ ನನ್ನ ಜೊತೆ ಸತ್ತರೆ ಸಾಯಲಿ ಎಂಬಂಥ ಪತ್ರಗಳಿಗೆಲ್ಲ ಸಹಿ ಹಾಕಿದ್ದ ಇನ್ನಿಬ್ಬರು ಅವರೊಂದಿಗಿನ ಪರಿಣತರು ತಯಾರಾಗಿ ನಿಂತರು. ನಮ್ಮನ್ನೆಲ್ಲ ಒಂದು ಚಿಕ್ಕ ವಿಮಾನದ ಬಳಿ ಕರೆದೊಯ್ದರು. ಆ ವಿಮಾನವೋ ಆಟಿಗೆ ವಿಮಾನಕ್ಕಿಂತ ಕೊಂಚ ದೊಡ್ದದು ಎಂಬಂತಿತ್ತು. ಒಳಗೆ ಎರಡು ಬೆಂಚ್.

ನನ್ನನ್ನು ಮೋಟಾರುಸೈಕಲ್ಲಿನ ಮೇಲೆ ಕುಳಿತಂತೆ ಬೆಂಚಿನ ಎರಡೂ ಬದಿ ಕಾಲು ಹಾಕಿ ತುದಿಯಲ್ಲಿ ಕುಳಿತುಕೊಳ್ಳಲು ಹೇಳಿದ ಶಾನ್. ನನ್ನ ಬೆನ್ನಿಗೆ ಬಂದು ಆತ ಕುಳಿತ.  ಈಗ ನನ್ನ ಬೆನಿನ ಬೆಲ್ಟು, ಕುಣಿಕೆಗಳನೆಲ್ಲ ತನ್ನ ಬೆಲ್ಟು ಕುಣಿಕೆಗಳಿಗೆ ಬಿಗಿದು ಭದ್ರಗೊಳಿಸತೊಡಗಿದ. ನನಗೋ ಸಣ್ಣಗೆ ಅನುಮಾನ. ಆತ ಬಿಗಿದಿದ್ದಾನೆಂದು ಹೇಳುವುದಷ್ಟೇ, ಆದರೆ ನನಗೆ ಖಾತ್ರಿ ಏನು? ಏನಾದರೊಂದು ಕುಣಿಕೆ ಕಳಚಿದರೆ? ನನ್ನ ಬೆನ್ನಿಗೆ ಪ್ಯಾರಶೂಟ ಬ್ಯಾಗ್ ಇಲ್ಲ! ದೇವರೇ ಕುಣಿಕೆಯೊಂದೂ ಕಳಚದಿರಲಿ! ಇಷ್ಟೊತ್ತಲ್ಲಿ ಭಾರೀ ಸಾಹಸಿ ಎನ್ನುತ್ತಾ ನನಗೆ ನಾನೇ ಪೋಸುಕೊಟ್ಟುಕೊಳ್ಳುತ್ತಿದ್ದವಳಿಗೆ  ಅಂತೂ ದೇವರ ನೆನಪಾಯ್ತು. ಅಷ್ಟರಲ್ಲಿ ಶಾನ್ ಹೇಳಿದ” ರಿಲ್ಯಾಕ್ಸ್, ನೌ ಯೂ ಆರ್ ಅಟ್ಟಚಡ್ ಟು ಮಿ. ಹಾರುವಾಗ ನಿನ್ನೆದೆಯ ಬೆಲ್ಟನ್ನು ಹಿಡಿದುಕೊ, ನನ್ನಾಗಲೀ ವಿಮಾನವಾಗಲೀ ಅಲ್ಲ. ನಿನ್ನ ತಲೆಯನ್ನ ನನ್ನ ಭುಜಕ್ಕೆ ಒರಗಿಸಿಕೋ, ಒಮ್ಮೆ ಗಾಳಿಗೆ ಮುಖ ಬಡಿದೊಡನೆಯೇ ಕೈ ಚಾಚಿ ಕಾಲುಗಳನ್ನು ಹಿಮ್ಮುಖ ಮಡಿಸು ಅಷ್ಟೇ, ಮುಂದೆ ನೋಡು, ತಲೆಯೆತ್ತು, ನಿನಗೆ ಬೀಳುವ ಅನುಭವವಾಗುವುದಿಲ್ಲ, ಬದಲಿಗೆ ತೇಲುತ್ತೀಯೇ. ಅನುಭವಿಸು”  ನಾನು ಆತನ ಸೂಚನೆಗಳನೆಲ್ಲ ಮನನ ಮಾಡಿಕೊಳ್ಳುವಷ್ಟರಲ್ಲಿ, ವಿಮಾನದ ಬಾಗಿಲು ತೆರೆದುಕೊಂಡು, ತಣ್ಣನೆ ಗಾಳಿ ಒಳನುಗ್ಗಿ ಬಂತು. ನಾವೀಗ ಸುಮಾರು ೧೧ ಸಾವಿರ ಅಡಿ ಎತ್ತರದಲ್ಲಿದ್ದೆವು.

ಸುತ್ತಲೂ ಬೆಳ್ಮೋಡ! ಬಾನಂಚಲ್ಲಿ ಸೂರ್ಯ ಬಂಗಾರವಾಗಿ ಹೊಳೆಯುತ್ತಿದ್ದ. ನನ್ನೆದೆ ಬಡಿತ ನನಗೀಗ ನಗಾರಿಯಂತೆ ಸ್ಪಷ್ಟ ಕೇಳಿಸುತ್ತಿತ್ತು. ಜೆನೀನ್ ಆಕೆಯ ಕ್ಯಾಮೆರಾ ತಲೆಯನ್ನು ಗಟ್ಟಿಪಡಿಸಿಕೊಳ್ಳುತ್ತ ಫೋಟೋ ವೀಡಿಯೋ ಎಂದು ಕ್ಲಿಕ್ಕಿಸುತ್ತಲೇ ಇದ್ದಳು. ಪೈಲಟ್ ಇಟ್ಸ್ ಟೈಮ್ ಎಂದು ಹೇಳಿದ. ಶಾನ್ ನನ್ನನು ಬೆಂಚಿನಿಂದ ಎಬ್ಬಿಸಿ ಬಾಗಿಲ ತುದಿಗೆ ತಂದು ಕೂರಿಸಿದ. ಇಡೀ  ಸ್ಕೈ ಡೈವಿಂಗ್ ಅನುಭವದಲ್ಲಿ ಹೃದಯ ಬಡಿತ ತಪ್ಪಿಯೇ ಹೋಯ್ತೇನೋ ಎಂಬಂತ ಅನುಭವವಾಗಿದ್ದು ಈ ಕ್ಷಣ ಮಾತ್ರ. ಜೀವ ಬಾಯಿಗೆ ಬಂತು ಎನ್ನುವ ನುಡಿಗಟ್ಟಿನ ಸ್ಪಷ್ಟ ಅನುಭವ ಅದು. ಎಂಥಾ ಕ್ಷಣ ಅದು! ಜುಮ್ ಅನ್ನಲಿಲ್ಲ, ಧಿಂ ಎನ್ನಲಿಲ್ಲ, ನನ್ನ ತಲೆಯಲ್ಲಿ ಏನೂ ಹೊಳೆಯಲೇ ಇಲ್ಲ. ಎದುರಿನ ಅಗಾಧ ಆಕಾಶ, ಮೋಡ, ಗಾಳಿ ಏನೂ ತಲೆಯೊಳಗೆ ಹೊಕ್ಕಲಿಲ್ಲ, ಯಾವುದೇ ವಿಚಾರವೂ ಬರಲಿಲ್ಲ. ಯಾರ ನೆನಪೂ ಆಗಲಿಲ್ಲ. ಯಾವ ಬೇಡಿಕೆ, ಮೊರೆ, ದೇವರು ಏನೂ ಅನಿಸಲಿಲ್ಲ. “ಬ್ಲಾಂಕ್” ಎನ್ನುವಂತ ಕ್ಷಣ.  ಜೆನೀನ್ ಚಕ್ಕನೆ ಹೊರ ಹಾರಿದಳು. ಶಾನ್ ನನಗೆ ಜಂಪ್ ಅಂದ.

ನಾನು ಹಾರಿದೆನೋ ಆತನೇ ದೂಡಿದನೋ, ಎಲ್ಲ ಒಂದೇ ಎಂಬಂತೆ ವಿಮಾನದಿಂದ ಅಗಾಧ ಆಗಸಕ್ಕೆ ಧುಮುಕಿದ್ದೆವು. ಅಬ್ಬಾ ವರ್ಣಿಸಲು ಸಾಧ್ಯವೇ ಇಲ್ಲ ಆ ಕ್ಷಣವನ್ನು. ಭರ್ರೆಂದು ಮುಖಕ್ಕೆ ಹೊಡೆಯುವ ಗಾಳಿ, ತಣ್ಣನೆ ಮುಖ ತೀಡುವ ಮೋಡ, ದೈವೀಕವಾಗಿ ಹೊಳೆಯುವ ಸೂರ್ಯ!  ಕೈ ಬಿಚ್ಚಿ ಕಾಲು ಮಡಚಿ ಹಕ್ಕಿಯಂತೆ ತೇಲುತ್ತಿದ್ದೆ ನಾನು. ಒಂದು ಕ್ಷಣವೂ ಬೀಳುವ ಅಥವಾ ಬಿದ್ದ ಅನುಭವವಾಗುವುದಿಲ್ಲ. ನಾನು ಆ ೪೫ ಸೆಕೆಂಡು ಫ್ರೀ ಫಾಲ್ನಲ್ಲಿ ಅನುಭವಿಸಿದ ಅದ್ವಿತೀಯ ಶಾಂತಿ ಮಾತ್ರ ಕಣ್ಮುಚ್ಚಿಕೊಂಡರೆ ಮರುಕಳಿಸುತ್ತದೆ.  ನಾನು ನಗುತ್ತ ಕಿರಿಚುತ್ತಿದ್ದರೆ ಆಗಾಳಿಯಲ್ಲಿ ನನ್ನ ದನಿ ಕೂಡ ನನಗೆ ಕೇಳಿಸುತ್ತಿರಲಿಲ್ಲ. ಎದುರಿಗೆ ಜೆನೀನ್ ಪಕಪಕನೆ ಫೋಟೋ ಕ್ಲಿಕ್ಕಿಸುತ್ತ  ತೇಲುತ್ತಿದ್ದಳು! ಎದುರಿಗೆ ಸೂರ್ಯ ಜಗಮಗನೆ ಹೊಳೆಯುತ್ತಿದ್ದ.

ನಾವು ತಣ್ಣನೆಯ ಮೋಡದೊಳಗೆ ತೇಲುತ್ತ ಮೋಡದಿಂದ ಮೋಡಕ್ಕೆ ಜಾರುತ್ತ ಬೀಳುತ್ತಿದ್ದೆವು. ಶಾನ್ ಗಾಳಿಯಲ್ಲಿ ಈಜುತ್ತಾ ದಿಕ್ಕನ್ನು ಪಳಗಿಸುತ್ತಿದ್ದ. ಅದು ಅಕ್ಷರಶ ಈಜುಕೊಳಕ್ಕೆ ಧುಮುಕಿದಂತೆಯೇ! ನೀರಿಲ್ಲ ಅಷ್ಟೇ. ಧುಮುಕುವ ತೇಲುವ ಎಲ್ಲ ಅನುಭವವೂ ಹತ್ತಿಯಷ್ಟು ಹಗುರ. ಮೋಡಗಳೊಂದಿಗೆ ಮೋಡವಾಗಿದ್ದ ಆ ಒಂದು ನಿಮಿಷಕ್ಕೂ ಕಮ್ಮಿ ಸಮಯ ಇನ್ನಷ್ಟು ಇರಬೇಕಿತ್ತು ಎನ್ನುವುದರೊಳಗೆ  ಮೋಡಗಳ ಪರದೆಯೆಲ್ಲ ಮುಗಿದು ಈಗ ಕೆಳಗಿನ ಹಸಿರು ಭೂಮಿ ಚಿಕ್ಕಪೆಟ್ಟಿಗೆಯಂಥ ಮನೆಗಳ ದರ್ಶನಾಗುತ್ತಿತ್ತು, ನಾವಿನ್ನೂ ಬೀಳುತ್ತಾ ತೇಲುತ್ತಿದ್ದೆವು. ನಾನು ಅದ್ಭುತ ಶಾಂತಿಯನ್ನು ಎದೆ ತುಂಬಿಕೊಳ್ಳುತ್ತಿದ್ದೆ.  ಅಷ್ಟರಲ್ಲಿ ಜಗ್ಗನೆ ಯಾರೋ ಮೇಲೆಳೆದಂತಾಗಿ, ಸಮತಳವಾಗಿದ್ದ ನಮ್ಮ ದೇಹ ಭೂಮಿಗೆ ಲಂಬವಾಗಿ ಜೋಲತೊಡಗಿತು. ಮೇಲೆ ಬಣ್ಣಬಣ್ಣದ ಪ್ಯಾರಶೂಟ್ ಬಿಚ್ಚಿಕೊಂಡಿತ್ತು. ಛೆ ಇನ್ನೊಂಚೂರು ಫ್ರೀ ಫಾಲ್ ಇರಬೇಕಿತ್ತು ಎನಿಸಿಬಿಟ್ಟಿತು.
ಪ್ಯಾರಶೂಟ್ ಬಿಚ್ಚಿಕೊಂಡ ಮೇಲೆ ಅದನ್ನು ಗ್ಲೈಡರ್ ನಂತೆ ಆ ಕಡೆ ಈಕಡೆ ಹಗ್ಗ ಎಳೆಯುತ್ತ ಅದನ್ನು ಪಳಗಿಸುತ್ತ ದಾರಿಗನುಗುಣವಾಗಿ, ಗಾಳಿಗನುಗುಣವಾಗಿ ನಡೆಸಬಹುದು. ಅದು ನಿಧಾನ ಓಲಾಡಿ ಎಲ್ಲಿಗೆ ಎಂದು ನಾವು ಹೇಳಿದಂತೆ ನಮ್ಮನ್ನು ಕರೆದೊಯ್ಯುತ್ತದೆ.

ಈಗ ಪ್ಯಾರಾಶೂಟ್ ನಲ್ಲಿ ಜೋತಾಡುತ್ತಾ ಸುತ್ತಲೂ ತೋರುವ ಗುಂಡನೆಯ ಭೂಮಿ, ದೂರದ ಅಪಲೆಶಿಯನ್ ಬೆಟ್ಟಶ್ರೇಣಿ, ಕಾಡು, ಊರು, ಗದ್ದೆ, ಈಜುಕೊಳ, ರಸ್ತೆ, ನಡುವೆ ಹೆಬ್ಬಾವಿನಂತೆ ಹರಿದ ನದಿ ಎಲ್ಲ ಪದತಲದಲ್ಲಿ ಗೋಚರಿಸುತ್ತಿದ್ದವು. ಗಾಳಿಯಲ್ಲಿ ನಿಧಾನ ಜೋಲಿಯಲ್ಲಿ ತೂಗಿದಂತೆ ನಿದ್ದೆ ಹೋಗಿಬಿಡಬಹುದೇನೋ ಎಂಬಂತ ನಿರುಮ್ಮಳ ಅನುಭವ. ಕಣ್ಣು ಹಾಯಿಸಿದಷ್ಟೂ ಕಾಣುವ ವೃತ್ತಾಕಾರದ ಕ್ಷಿತಿಜ! ತಲೆಯೆತ್ತಿದರೆ ದೂರದಲ್ಲಿ ಬೈ ಎಂದಂತೆ ಕೈಬೀಸಿ ಸಾಗುತ್ತಿದ್ದ ಮೋಡ ರಾಶಿ. ಒಂದು ನಿಮಿಷದ ಹಿಂದೆ ನಾನೂ ಆ ಎತ್ತರದಲ್ಲಿದ್ದೆನಲ್ಲವೇ!  ಇಳಿಯುತ್ತ ಇಳಿಯುತ್ತ ಸಾಗುತ್ತಿದ್ದಂತೆ ಕಾಲಡಿಯ ಭೂಮಿ ಮೇಲೆ ಮೇಲೆದ್ದು  ಅಪ್ಪಿಕೊಳ್ಳಲು ಬರುವಂತೆ ತೋರುತ್ತಿತ್ತು. ಇದೊಂದು ಆಪ್ಟಿಕಲ್ ಇಲ್ಯೂಶನ್. ಇದನ್ನು ಗ್ರೌಂಡ್ ರಶ್ ಎನ್ನುತ್ತಾರೆ. ಪ್ಯಾರಾಶೂತ್ ಭೂಮಿಗೆ ಹತ್ತಿರ ಬರುತ್ತಿದ್ದಂತೆಯೇ ಶಾನ್ ನನ್ನ ಕಾಲನ್ನು ಮೇಲೆಳೆದುಕೊಳ್ಳಲು ಹೇಳಿದ. ನಿಧಾನಕ್ಕೆ ಅದರ ಹಗ್ಗಗಳನ್ನು ಜಗ್ಗುತ್ತ ಇಳಿಯತೊಡಗಿದೆವು ನಾವು. ನೆಲಕ್ಕೆ ಆತನೆ ಚೂರು ಹಿಮ್ಮಡಿತಾಗಿಸಿ, ಜಾರುಬಂಡಿಯಂತೆ ಜಾರಿ ಇಳಿದು ಎದ್ದು ನಿಂತೆವು.

ನಿಮಗೆ ಸ್ಕೈ ಡೈವಿಂಗ್ ಮಾಡುವ ಅವಕಾಶ ಸಿಕ್ಕಲ್ಲಿ, ಇಂಥದ್ದೊಂದು ಪುಟ್ಟ ಆಸೆಯಿದ್ದಲ್ಲಿ, ಖಂಡಿತ ಪೂರ್ತಿಗೊಳಿಸಿಕೊಳ್ಳಿ. ಸುರಕ್ಷಿತ ಇತಿಹಾಸವಿರುವ ಪರಿಣಿತ ಕೇಂದ್ರಗಳನ್ನು ಆರಿಸ್ಕೊಳ್ಳಿ.  ಸ್ಕೈ ಡೈವಿಂಗ್ ನೀಡುವ ಮತ್ತೊಮ್ಮೆ ಹುಟ್ಟಿ ಬಂದಂಥ, ಬಾನಂಚಲ್ಲಿ ತೇಲಿ ಭೂಮಿಗಿಳಿದಾಗ ದಕ್ಕುವ ಅನನ್ಯ ಅನುಭವ ಖಂಡಿತ ಬರೀ ಭೂಮಿ ಮೆಲೆಲ್ಲೂ ಸಿಗದು. ವರ್ಷಗಳವರೆಗೆ ತಪಸ್ಸಿನಂತೆ ಎದೆಯೊಳಗೆ ಅವಿತಿಟ್ಟು ಬೆಳೆಸಿದ್ದ ಆಸೆಯೊಂದು ನಾಲ್ಕೈದು ನಿಮಿಷಗಳಲ್ಲಿ ಮುಗಿದು ಹೋಗಿತ್ತು. ಜನ್ಮಾಂತರಕ್ಕೂ ಸಾಕಾಗುವಷ್ಟು ತೃಪ್ತಿಯನ್ನು ಶಾಂತಿಯನ್ನು ಮೊಗೆದು ಕೊಟ್ಟಿತ್ತು.  ಬದುಕಿನ ಉತ್ಸಾಹವನ್ನು ನೂರ್ಮಡಿಗೊಳಿಸಿ ಹೋಗಿತ್ತು. ಸಾಹಸದ ಸಂತೃಪ್ತಿಯೊಂದನ್ನು ಮೂಡಿಸಿ ಹೋಗಿತ್ತು.

***

ಟ್ಯಾನ್ಡೆಂ ಜಂಪಿಂಗ್ ಹಾಗೆ ನೋಡಿದರೆ ನಿಜಕ್ಕೂ ಸ್ಕೈ ಡೈವಿಂಗ್ ಮಾಡಿಯೂ ಮಾಡದಂತೆ. ಯಾಕೆಂದರೆ ನಾವು ಹಾರಿದರೂ, ಹಾರಿಸುವವ, ತೇಲಿಸುವವ ಬೇರೆಯೇ. ಇದೊಂಥರ ನಮ್ಮ ಅಧೀನದಲ್ಲಿ ಯಾವೊಂದು ಕಾರ್ಯವೂ- ತಂತ್ರವೂ ಇರದ ‘ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ’ ಎಂಬಂಥ ಪರಿಸ್ಥಿತಿ. ಆತನ ಪರಿಣಿತಿಯ ಮೇಲೆ ನಮ್ಮ ಜೀವ ಆಧರಿತವಾಗಿದೆ. ಪ್ಯಾರಶೂ್‌ಟ್‌ ಇರುವ ಬ್ಯಾಗನ್ನು ಆತ ತನ್ನ ಬೆನ್ನಿಗೆ ಕಟ್ಟಿಕೊಂಡಿರುತ್ತಾನೆ. ಆ ಬ್ಯಾಗಿನಲ್ಲಿ ಎರಡು ಪ್ಯಾರಾಶೂಟ್‌ಗಳಿರುತ್ತವೆ. ಸಮಯಕ್ಕೆ ತಕ್ಕಂತೆ ಒಂದು ಬಿಚ್ಚಿಕೊಳ್ಳದಿದ್ದರೆ ಎಮರ್ಜೆನ್ಸಿ ಪ್ಯಾರಾಶೂಟ್ ಎಳೆಯಬೇಕು. ಅವೆರಡೂ ಬಿಚ್ಚಿಕೊಳ್ಳದಿದ್ದಲ್ಲಿ ನಮ್ಮ ಹಣೆಬರಹ ಅಷ್ಟೇ. ಆದರೆ ಹಾಗೆ ಆಗುವುದು ತುಂಬ ಅಪರೂಪ. ಪ್ರತಿ ಬಾರಿಯೂ ಪ್ಯಾರಾಶೂಟ್ ಪ್ಯಾಕ್ ಮಾಡುವಾಗ ‘ಯುನೈಟೆಡ್ ಸ್ಟೇಟ್ಸ್ ಪ್ಯಾರಶೂಟ್ ಅಸೋಸಿಯೇಶನ್’ನಿಂದ ಅಧಿಕೃತವಾಗಿ ನೇಮಕವಾದ ಸದಸ್ಯರ ಸೀಲು ಒತ್ತಿದ ಮೇಲೆ ಅವರಿಂದ ಪರೀಕ್ಷಿತವಾದ ಮೇಲೆಯೇ ಆ ಪ್ಯಾರಶೂಟ್ ಬ್ಯಾಗು ಸಿದ್ಧವಾಗುತ್ತದೆ. ಅಲ್ಲಿ ಸ್ಕೈ ಡೈವಿಂಗ್ ನಡೆಸುವ ಬಹುತೇಕ ಪರಿಣತರು ಈ ಅಧಿಕೃತ ಪ್ರಮಾಣಪತ್ರ ಹೊಂದಿದವರು. ಹಾಗಾಗಿ ಇಂಥ ಸಾಹಸಕ್ರೀಡೆಗಳನ್ನು ನಡೆಸುವಾಗ ನಾವು ಆರಿಸಿಕೊಳ್ಳುವ ಜಾಗ, ಕಂಪನಿಯ ಸುರಕ್ಷತೆಯನ್ನೊಮ್ಮೆ ಪರಿಶೀಲಿಸುವುದು, ಅಲ್ಲಿನ ಅಂಕಿ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT