ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನಮತ ಸಹಿಸಲ್ಲ: ಷಾ ಎಚ್ಚರಿಕೆ

ವಿಧಾನಸಭಾ ಚುನಾವಣೆ ತಂತ್ರ ರೂಪಿಸಲು ಪ್ರವಾಸ
Last Updated 12 ಆಗಸ್ಟ್ 2017, 19:39 IST
ಅಕ್ಷರ ಗಾತ್ರ

ಬೆಂಗಳೂರು: ‘ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟುಮಾಡುವ ವರ್ತನೆ ಸಹಿಸುವುದಿಲ್ಲ’ ಎಂದು ಭಿನ್ನಮತೀಯರಿಗೆ ಖಡಕ್‌ ಎಚ್ಚರಿಕೆ ಕೊಟ್ಟಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ, ‘ಸಮೀಕ್ಷೆ ಆಧರಿಸಿ ಟಿಕೆಟ್‌ ಹಂಚಲಾಗುವುದೇ ವಿನಾ ಯಾರ ಒತ್ತಡ ಅಥವಾ ಮರ್ಜಿಗೂ ಮಣಿಯುವುದಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

2018ರ ಚುನಾವಣೆ ತಂತ್ರ ರೂಪಿಸಲು ರಾಜ್ಯದಲ್ಲಿ ಮೂರು ದಿನ ಪ್ರವಾಸ ಕೈಗೊಂಡಿರುವ ಅವರು, ಬಿಜೆಪಿ ರಾಜ್ಯ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು.

ಪಕ್ಷದ ಕಚೇರಿಯಲ್ಲಿ ಒಂದೂವರೆ ತಾಸು ಪಕ್ಕಾ ಉಪಾಧ್ಯಾಯರಂತೆ ಪಾಠ ಮಾಡಲು ನಿಂತ ಅಮಿತ್‌ ಷಾ, ಸಂಸದರು, ಶಾಸಕರಿಗೆ ಶಿಸ್ತಿನ ಪಾಠ ಮಾಡಿದರು. ಮುಂದಿನ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಅನುಸರಿಸಬೇಕಾದ ಸೂತ್ರಗಳ ಚೌಕಟ್ಟು ಹಾಕಿಕೊಟ್ಟರು.

‘ಪಕ್ಷದ ವರ್ಚಸ್ಸು ಮತ್ತು ಘನತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಎಲ್ಲರೂ ಒಂದು ಕುಟುಂಬದವರಂತೆ ವರ್ತಿಸಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ದೊಡ್ಡದು ಮಾಡಿದರೆ ಗೆಲುವು ಸಾಧ್ಯವಿಲ್ಲ. ಇಂಥ ನಡವಳಿಕೆಯನ್ನು ಪಕ್ಷ ಸಹಿಸುವುದಿಲ್ಲ’ ಎಂದೂ ಎಚ್ಚರಿಸಿದರು.

‘ನಾವು (ವರಿಷ್ಠರು) ಹೇಳುವುದನ್ನು ಕೇಳುವುದಷ್ಟೇ ನಿಮ್ಮ ಕೆಲಸ, ನೀವು ಹೇಳುವುದನ್ನು ಕೇಳಿಸಿಕೊಳ್ಳಲು ನಾನು ಬಂದಿಲ್ಲ. ರಾಜ್ಯದ ಸ್ಥಿತಿಗತಿ ಅಳೆದು, ತೂಗಿ ಸೂತ್ರ ರೂಪಿಸುತ್ತೇವೆ. ಅದನ್ನು ಪಾಲಿಸುವುದು ನಿಮ್ಮ ಕರ್ತವ್ಯ’ ಎಂದು ನಿಷ್ಠುರವಾಗಿಯೇ ಷಾ ಹೇಳಿದರು.

‘ರಾಜ್ಯದಲ್ಲಿ ಈಗಾಗಲೇ ಎರಡು ಹಂತದಲ್ಲಿ ಸಮೀಕ್ಷೆ ನಡೆಸಲಾಗಿದೆ. ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಗೆಲ್ಲಲಿದ್ದಾರೆ, ಯಾರಿಗೆ ಹೆಚ್ಚು ಸಾಮರ್ಥ್ಯವಿದೆ ಎಂಬ ಮಾಹಿತಿ ಇದೆ. ಮತ್ತೊಂದು ಸಮೀಕ್ಷೆ ನಡೆಸುತ್ತೇವೆ. ಅದನ್ನು ಪರಿಗಣಿಸಿ ಟಿಕೆಟ್ ನೀಡಲಾಗುತ್ತದೆ’ ಎಂದು ಹೇಳುವ ಮೂಲಕ ಎಲ್ಲ ಹಾಲಿ ಶಾಸಕರು ಹಾಗೂ ಆಕಾಂಕ್ಷಿಗಳಿಗೆ ಟಿಕೆಟ್‌ ಸಿಗುವುದಿಲ್ಲ ಎಂಬ ಸಂದೇಶ ರವಾನಿಸಿದರು.

‘ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧ್ಯವೇ ಇಲ್ಲ ಎಂದು ಕೆಲವರು ಲೇವಡಿ ಮಾಡಿದ್ದರು. ಕೇಂದ್ರ ಸರ್ಕಾರದ ಯೋಜನೆಗಳು, ಪಕ್ಷದ ಕಾರ್ಯಕ್ರಮಗಳು ಹಾಗೂ ಗೆಲುವಿಗೆ ಹಾಕಿಕೊಟ್ಟ ಸೂತ್ರವನ್ನು ಪಾಲಿಸಿದ್ದರಿಂದಲೇ ಅಭೂತಪೂರ್ವ ಗೆಲುವು ದಕ್ಕಿತು. ಗೋವಾ ಚುನಾವಣೆಗೂ ಸೂತ್ರ ಹಾಕಿಕೊಟ್ಟಿತ್ತಾದರೂ ಅಲ್ಲಿನವರು ನಮ್ಮ ಮಾತು ಕೇಳಲಿಲ್ಲ. ಹಾಗಾಗಿ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಯಿತು. ದಕ್ಷಿಣ ಭಾರತದಲ್ಲಿ ಬಿಜೆಪಿಯ ಪತಾಕೆ ಹಾರಿಸಲು ಕರ್ನಾಟಕ ಹೆಬ್ಬಾಗಿಲು. ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಾಣಕ್ಕೆ ಕರ್ನಾಟಕದಲ್ಲಿನ ಪಕ್ಷದ ಗೆಲುವು ಅತ್ಯಂತ ಅನಿವಾರ್ಯ.ಇದನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದಲೇ ಕೆಲಸ ಮಾಡಿ’ ಎಂದು ಕಟ್ಟಪ್ಪಣೆ ನೀಡಿದರು.

‘ನಮ್ಮ ಮತದಾರರು ಯಾರು ಎಂದು ಮೊದಲು ಗುರುತಿಸಿಕೊಳ್ಳಿ.  ಅಲ್ಪಸಂಖ್ಯಾತರ ಎಲ್ಲ ಮತಗಳು ನಮಗೆ ಬೀಳುವುದಿಲ್ಲ. ಹಿಂದುಳಿದವರು, ದಲಿತರನ್ನೂ ಒಳಗೊಂಡಂತೆ ಎಲ್ಲ ಸಮುದಾಯದವರನ್ನು ಸೆಳೆಯಲು, ಅವರ ಒಲವು ಗಳಿಸಲು ಕ್ಷೇತ್ರವಾರು ಕಾರ್ಯಕ್ರಮ ರೂಪಿಸಿ’ ಎಂದು ಷಾ ತಾಕೀತು ಮಾಡಿದರು.

ಭಿನ್ನಮತದ ಪ್ರಸ್ತಾಪ: ‘ರಾಜ್ಯ ಮಟ್ಟದ ನಾಯಕರ ಮಧ್ಯದ ಭಿನ್ನಮತವನ್ನು ನಾವು ನೋಡಿಕೊಳ್ಳುತ್ತೇವೆ. ನಿಮ್ಮ ಕೆಲಸ ನೀವು ಮಾಡಿ’ ಎಂದು ಷಾ ವಿವಿಧ ಹಂತದ ಪ್ರಮುಖರಿಗೆ ಸೂಚಿಸಿದರು.

ಐಟಿಸಿ ಗಾರ್ಡೇನಿಯ ಹೋಟೆಲ್‌ನಲ್ಲಿ ಸಂಜೆ ನಡೆದ ಪದಾಧಿಕಾರಿಗಳು, ವಿವಿಧ ಮೋರ್ಚಾ, ಘಟಕಗಳು, ವಿಭಾಗಗಳ ಪ್ರಮುಖರ ಸಭೆಯಲ್ಲಿ, ನಾಯಕರ ಮಧ್ಯದ ಕಚ್ಚಾಟ ಪ್ರಸ್ತಾಪವಾಯಿತು.

‘ಮತಗಟ್ಟೆ ಮಟ್ಟದಲ್ಲಿ ಪಕ್ಷ ಸಂಘಟಿಸಿ ಎಂಬ ನಿಮ್ಮ ಸಲಹೆಯನ್ನು ಪಾಲಿಸುತ್ತಿದ್ದೇವೆ. ಎಲ್ಲಿ ಹೋದರೂ ನಾಯಕರ (ಯಡಿಯೂರಪ್ಪ–ಈಶ್ವರಪ್ಪ) ಮಧ್ಯದ ಜಗಳವೇ ಪ್ರಸ್ತಾಪವಾಗುತ್ತಿದೆ. ಅದಕ್ಕೆ ತೆರೆ ಎಳೆಯುವುದು ಯಾವಾಗ’ ಎಂದು ಕೆಲವರು ಪ್ರಶ್ನಿಸಿದರು.

‘ನಿಮ್ಮ ಪಾಡಿಗೆ ನೀವು ಕೆಲಸ ಮಾಡಿ, ಅವರನ್ನು (ಕಚ್ಚಾಡುವವರನ್ನು) ನಾವು ನೋಡಿಕೊಳ್ಳುತ್ತೇವೆ’ ಎಂದು ಷಾ ಹೇಳಿದರು ಎನ್ನಲಾಗಿದೆ.

ಬೆಳಿಗ್ಗೆ ನಡೆದ ಶಾಸಕರ ಸಭೆಯಲ್ಲಿ ಮಾತನಾಡಿದ್ದ ಷಾ, ‘ಮತಗಟ್ಟೆಯನ್ನು ಗೆದ್ದರೆ, ಇಡೀ ರಾಜ್ಯವನ್ನು ಗೆಲ್ಲಲು ಸಾಧ್ಯ. ವಿಸ್ತಾರಕ್‌ ಕಾರ್ಯಕ್ರಮದ ಕಾರ್ಯಕರ್ತರು ನಿಮ್ಮ ಕ್ಷೇತ್ರದಲ್ಲಿ ಪಾಲ್ಗೊಳ್ಳಲಿಲ್ಲ ಎಂದಾದರೆ, ಸಂಘಟನೆಯಲ್ಲಿ ನೀವು ಹಿಂದಿದ್ದೀರಿ ಎಂಬುದು ಸ್ಪಷ್ಟ. ಈ ಬಗ್ಗೆ ಎಚ್ಚರವಹಿಸಿ’ ಎಂದು ಸಲಹೆ ನೀಡಿದ್ದರು.

ಅವಕಾಶ ತಪ್ಪಿಸಿಕೊಂಡ ಈಶ್ವರಪ್ಪ

ಅಮಿತ್‌ ಷಾ ಜತೆ ವೇದಿಕೆ ಏರುವ ಅವಕಾಶವನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ತಪ್ಪಿಸಿಕೊಂಡರು.

ಬೆಳಿಗ್ಗೆ 11.47ಕ್ಕೆ ಪಕ್ಷದ ಕಚೇರಿಗೆ ಅಮಿತ್‌ ಷಾ ಬಂದರು. ಕೆಲ ಹೊತ್ತು ಮಾತನಾಡಿ, ಬೋಲೋ ಭಾರತ್‌ ಮಾತಾಕಿ ಎಂದು ಘೋಷಣೆ ಕೂಗಿ ಎಲ್ಲರನ್ನೂ ಹುರಿದುಂಬಿಸಿದರು. ಷಾ ವೇದಿಕೆಯಿಂದ ಇಳಿಯುವ ಹೊತ್ತಿಗೆ ಈಶ್ವರಪ್ಪ ಪಕ್ಷದ ಕಚೇರಿ ತಲುಪಿದರು.

‘ವಿಮಾನ ನಿಲ್ದಾಣದಿಂದ ವಾಹನದಲ್ಲಿ ಬರುವುದು ವಿಳಂಬವಾದ ಕಾರಣ ವೇದಿಕೆಯಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಈಶ್ವರಪ್ಪ ಅವರ ಆಪ್ತ ಮೂಲಗಳು ತಿಳಿಸಿವೆ.

ಬರಿಗೈಯಲ್ಲಿ ಬಂದಿದ್ದ ಶಾಸಕರು!

ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಸೂತ್ರಗಳನ್ನು ಷಾ ಹೇಳಿಕೊಡಲಿದ್ದಾರೆ ಎಂದು ಗೊತ್ತಿದ್ದರೂ ಬರಿಗೈನಲ್ಲಿ ಸಭೆಗೆ ಬಂದಿದ್ದ ಶಾಸಕರು, ಸಂಸದರಿಗೆ ಅಮಿತ್‌ ಷಾ ಚುರುಕು ಮುಟ್ಟಿಸಿದ್ದಾರೆ.

ಮಾಮೂಲಿ ಭಾಷಣ ಕೇಳುವಂತೆ ಕುಳಿತಿದ್ದ ಶಾಸಕರನ್ನು ಕಂಡ ಷಾ, ಕಚೇರಿ ಸಹಾಯಕರನ್ನು ಕರೆದು ಎಲ್ಲರಿಗೂ ಪೆನ್‌, ನೋಟ್‌ ಪುಸ್ತಕ ಕೊಡುವಂತೆ ಸೂಚಿಸಿದರು. ಬರೆದುಕೊಳ್ಳುವುದು ಏನೂ ಇರುವುದಿಲ್ಲ ಎಂಬ ಲೆಕ್ಕಾಚಾರದಲ್ಲಿದ್ದ ಶಾಸಕರು ಇದರಿಂದ ಮುಜುಗರಕ್ಕೆ ಒಳಗಾದರು.

ಯಡಿಯೂರಪ್ಪ ಮುಖ್ಯಮಂತ್ರಿ: ಷಾ ಸ್ಪಷ್ಟ ನುಡಿ

‘ಯಡಿಯೂರಪ್ಪನವರ ನೇತೃತ್ವದಲ್ಲೇ 2018ರ ಚುನಾವಣೆ ಎದುರಿಸಲಾಗುವುದು, ಅವರೇ ಮುಂದಿನ ಮುಖ್ಯಮಂತ್ರಿ’ ಎಂದು ಅಮಿತ್‌ ಷಾ ಸ್ಪಷ್ಟವಾಗಿ ಹೇಳಿದರು.

ಶಾಸಕರು, ಸಂಸದರ ಸಭೆಯಲ್ಲಿಯೂ ಇದನ್ನು ಪ್ರಸ್ತಾಪಿಸಿದ ಷಾ, ಈ ವಿಷಯದಲ್ಲಿ ಎದ್ದಿದ್ದ  ಎಲ್ಲ ಉಹಾಪೋಹ, ಗೊಂದಲಗಳಿಗೆ ತೆರೆ ಎಳೆದರು.

ಬೆಂಗಳೂರಿಗೆ ಷಾ ಕಾಲಿಡುತ್ತಲೇ ವಿಮಾನ ನಿಲ್ದಾಣ ಸಮೀಪದ ಸಾದಹಳ್ಳಿ ಟೋಲ್‌ಗೇಟ್‌ನಲ್ಲಿ ಅದ್ದೂರಿ ಸ್ವಾಗತ ನೀಡಿದ ಐದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

‘ಭಾವಿ ಮುಖ್ಯಮಂತ್ರಿ ಯಡಿಯೂರಪ್ಪನವರೇ’ ಎಂದು ಷಾ ಮಾತು ಆರಂಭಿಸಿದಾಗ, ಕಾರ್ಯಕರ್ತರು ಹರ್ಷೋದ್ಗಾರ ಮಾಡಿದರು. ‘ಯಡಿಯೂರಪ್ಪ ನೇತೃತ್ವದಲ್ಲೇ 2018ರ ಚುನಾವಣೆ ಎದುರಿಸುತ್ತೇವೆ. ಅವರೇ ಮುಂದಿನ ಮುಖ್ಯಮಂತ್ರಿ’ ಎಂದೂ ಅವರು ಪುನುರುಚ್ಚಿಸಿದರು.

ಷಾ ಅವರನ್ನು ಸ್ವಾಗತಿಸಿದ ಯಡಿಯೂರಪ್ಪ, ‘ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡಲು ಅಮಿತ್ ಷಾ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಷಾ ಅವರ ಚಾಣಾಕ್ಷತನದಿಂದ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಅದೇ ರೀತಿಯಲ್ಲೆ ರಾಜ್ಯದಲ್ಲೂ ಪಕ್ಷ ಗೆಲುವು ಸಾಧಿಸಲಿದೆ’ ಎಂದರು.

ಭ್ರಷ್ಟ ಕಾಂಗ್ರೆಸ್‌ ಮುಕ್ತ ಕರ್ನಾಟಕ: ಪ್ರತಿಜ್ಞೆ ಬೋಧಿಸಿದ ಷಾ

‘ಭ್ರಷ್ಟಾ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯುವ ಸಂಕಲ್ಪ ತೊಟ್ಟು ಎರಡೂ ಕೈಗಳನ್ನು ಎಲ್ಲರೂ ಮೇಲೆತ್ತಿ ಮುಷ್ಟಿ ಬಿಗಿ ಹಿಡಿಯಿರಿ’ ಎಂದು ಕರೆ ಕೊಟ್ಟ ಷಾ, ತಮ್ಮ ಬಲಗೈಯನ್ನು ಎತ್ತಿ ಹಿಡಿದು ಮುಷ್ಟಿ ಬಿಗಿ ಮಾಡಿ , ‘ಬೋಲೋ ಭಾರತ್‌ ಮಾತಾಕಿ’ ಎಂದು ಘೋಷಣೆ ಕೂಗಿದರು.

ವೇದಿಕೆಯ ಮೇಲಿದ್ದ ಪ್ರಮುಖರು, ಪಕ್ಷದ ಬಾವುಟ ಹಿಡಿದು ನಿಂತಿದ್ದ ನೂರಾರು ಕಾರ್ಯಕರ್ತರು ‘ಜೈ’ ಎಂದು ಮರು ಘೋಷಣೆ ಹಾಕಿದರು.

* ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರದಿಂದ ಕಿತ್ತು ಹಾಕುವವರೆಗೂ ಕಾರ್ಯಕರ್ತರು ಅರೆ ಕ್ಷಣವೂ ವಿರಮಿಸಬಾರದು

–ಅಮಿತ್‌ ಷಾ

ಮುಖ್ಯಾಂಶಗಳು

* ಸರಣಿ ಸಭೆಗಳಲ್ಲಿ ಗೆಲುವಿನ ಪಾಠ ಹೇಳಿದ ಷಾ

* ಉತ್ತರ ಪ್ರದೇಶದ ಮಾದರಿ ಅನುಸರಿಸಲು ಕರೆ

* ಮತಗಟ್ಟೆ ಮಟ್ಟದಿಂದ ಗೆಲುವು ಸಾಧಿಸಲು ಯತ್ನಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT