ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋರಖ್‍ಪುರ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಕೊರತೆ; ಸರ್ಕಾರದ ನಿರ್ಲಕ್ಷ್ಯವೇ ಕಾರಣ?

Last Updated 13 ಆಗಸ್ಟ್ 2017, 16:17 IST
ಅಕ್ಷರ ಗಾತ್ರ

ಗೋರಖ್‍ಪುರ: ಉತ್ತರ ಪ್ರದೇಶದ ಗೋರಖಪುರ ಬಿಆರ್‌ಡಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿನ ಮುಗ್ಧ ಮಕ್ಕಳ ಸಾವಿನ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ ಎಂದು ಡಾ. ರಾಜೀವ್ ಮಿಶ್ರಾ ಹೇಳಿದ್ದಾರೆ.

48ಗಂಟೆಗಳಲ್ಲಿ  30 ಮಕ್ಕಳು ಸಾವಿಗೀಡಾಗಿರುವ ಬಿಆರ್‌ಡಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಮುಖ್ಯಸ್ಥರಾಗಿದ್ದ  ಡಾ. ರಾಜೀವ್ ಮಿಶ್ರಾ ಅವರನ್ನು ಉತ್ತರಪ್ರದೇಶ ಸರ್ಕಾರ ಅಮಾನತು ಮಾಡಿದೆ.

ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಮಾಡುತ್ತಿದ್ದವರಿಗೆ ಕೊಡಲು ಹಣ ಇರಲಿಲ್ಲ. ಆದಿತ್ಯನಾಥ ಅವರ ಸರ್ಕಾರ ಅಗತ್ಯ ನಿಧಿ ನೀಡುವುದಕ್ಕೂ ವಿಳಂಬ ಮಾಡಿದೆ ಎಂದು ಮಿಶ್ರಾ ಆರೋಪಿಸಿದ್ದಾರೆ.

ಗೋರಖ್‍ಪುರದಲ್ಲಿರುವ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜಿನಲ್ಲಿ ಕಳೆದ ಐದು ದಿನಗಳಲ್ಲಿ ನವಜಾತ ಶಿಶುಗಳು ಸೇರಿದಂತೆ 63 ಮಕ್ಕಳು ಸಾವಿಗೀಡಾಗಿದ್ದಾರೆ. ಈ ನಡುವೆ ಪ್ರಧಾನಿ ಸೂಚನೆಯ ಮೇರೆಗೆ ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್‌ ಮತ್ತು ಆರೋಗ್ಯ ಇಲಾಖೆ ಕಾರ್ಯದರ್ಶಿ ಸಿ.ಕೆ. ಮಿಶ್ರಾ ನೇತೃತ್ವದ ತಜ್ಞರ ತಂಡ ಗೋರಖ್‍ಪುರಕ್ಕೆ ಧಾವಿಸಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಉತ್ತರ ಪ್ರದೇಶ ಆರೋಗ್ಯ ಇಲಾಖೆಯಿಂದಲೂ ವರದಿ ಕೇಳಿದ್ದಾರೆ.

ಆದಾಗ್ಯೂ, ಆಕ್ಸಿಜನ್ ಪೂರೈಕೆಗೆ ತಡೆಯುಂಟಾಗಿದ್ದರಿಂದ ಮಕ್ಕಳ ಸಾವು ಸಂಭವಿಸಿಲ್ಲ ಎಂದು ಸರ್ಕಾರ ಹೇಳಿದೆ. ಅದೇ ವೇಳೆ ಕಳೆದ ವರ್ಷ ಆಗಸ್ಟ್‌ನಲ್ಲಿ ಸಂಭವಿಸಿದ ಮಕ್ಕಳ ಸಾವಿನ ಸಂಖ್ಯೆಗೆ ಹೋಲಿಸಿದರೆ ಈ ಆಗಸ್ಟ್‌ನಲ್ಲಿ ಸಾವಿನ ಸಂಖ್ಯೆ ಅಂಥ ದೊಡ್ಡದೇನಲ್ಲ’ ಎಂದು ಆರೋಗ್ಯ ಸಚಿವ ಸಿದ್ಧಾರ್ಥನಾಥ್‌ ಸಿಂಗ್‌ ಹೇಳಿದ್ದಾರೆ.

ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಮತ್ತು ಆರೋಗ್ಯ ಸಚಿವ ಸಿದ್ಧಾರ್ಥನಾಥ್‌ ಸಿಂಗ್‌  ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಅಶುತೋಷ್ ಟಂಡನ್, ಡಾ. ಮಿಶ್ರಾ ಅವರು ಆಗಸ್ಟ್ 4ರಂದು ಆಡಳಿತಾಧಿಕಾರಿಗಳನ್ನು ಸಂಪರ್ಕಿಸಿದ್ದರು. ಅದರ ಮರುದಿನವೇ ನಿಧಿ ನೀಡಲು ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

ನಾನು ಸರ್ಕಾರಕ್ಕೆ ನೀಡಿರುವ ಕೊನೆಯ ಪತ್ರದ ಬಗ್ಗೆ ಮಾತ್ರ ಸರ್ಕಾರ ಉಲ್ಲೇಖಿಸುತ್ತಿದೆ. ರಾಜ್ಯದಲ್ಲಿನ ಆರೋಗ್ಯ ಇಲಾಖೆಯ ನಿಧಿಯ ಕೊರತೆ ಇದೆ ಎಂದು ಡಾ. ಮಿಶ್ರಾ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಜುಲೈ 3, ಜುಲೈ 19 ಮತ್ತು ಆಗಸ್ಟ್ 1 ರಂದು ನಾನು ಆರೋಗ್ಯ ಇಲಾಖೆಗೆ ಪತ್ರ ಬರೆದಿದ್ದೆ. ಸಮಯಕ್ಕೆ ಸರಿಯಾಗಿ ನಮಗೆ ನಿಧಿ ಸಿಕ್ಕಿಲ್ಲ. ಆಗಸ್ಟ್ 5 ರಂದು ನಿಧಿ ಬಿಡುಗಡೆಯಾಗಿತ್ತು. ನಾವು ಆಗಸ್ಟ್ 11ನೇ ತಾರೀಖಿಗೆ ಹಣವನ್ನು ಪಾವತಿ ಮಾಡಿದ್ದೇವೆ. ಇದರಲ್ಲಿ ನಮ್ಮ ತಪ್ಪೇನಿದೆ ಎಂದು ಮಿಶ್ರಾ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT