ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆಗಳ ಆಗರ ಗೋರಖಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜು; ಇಲ್ಲಿ ರೋಗಿಗಳು ಅನುಭವಿಸುತ್ತಿದ್ದಾರೆ ನಿತ್ಯ ನರಕ!

Last Updated 14 ಆಗಸ್ಟ್ 2017, 11:35 IST
ಅಕ್ಷರ ಗಾತ್ರ

ಲಖನೌ: ಗೋರಖಪುರದ ಬಾಬಾ ರಾಘವ್‌ ದಾಸ್‌ (ಬಿಆರ್‌ಡಿ) ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 60ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಆಮ್ಲಜನಕ ಕೊರತೆ ಕಾರಣ ಅಲ್ಲ, ಈ ಮಕ್ಕಳು ಮಿದುಳು ನಂಜಿನಿಂದ ಮೃತಪಟ್ಟಿದ್ದಾರೆ ಎಂಬುದು ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ನೀಡಿರುವ ಹೇಳಿಕೆ.

ಆದಿತ್ಯನಾಥ ಅವರ ಲೋಕಸಭಾ ಕ್ಷೇತ್ರ ಗೋರಖಪುರದಲ್ಲಿರುವ ಆಸ್ಪತ್ರೆಯಲ್ಲಿ 24 ಗಂಟೆಗಳಲ್ಲಿ 23 ಮಕ್ಕಳು ಸಾವಿಗೀಡಾದಾಗ ಅದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ಆದರೆ ಕಳೆದ ಕೆಲವು ವರ್ಷಗಳಿಂದ ಇಲ್ಲಿ ರೋಗಿಗಳು ನಿತ್ಯ ನರಕ ಅನುಭವಿಸುತ್ತಿದ್ದಾರೆ ಎಂದು ದ ವೈರ್ ಮಾಧ್ಯಮ ವರದಿ ಮಾಡಿದೆ.
ಒಂದು ದಿನದಲ್ಲಿ ಇಷ್ಟೊಂದು ಮಕ್ಕಳು ಸಾವಿಗೀಡಾಗಿದ್ದಾರೆ ಎಂಬ ಸುದ್ದಿ ಪ್ರಕಟವಾದಾಗಲೇ 'ಗೋರಖಪುರ ದುರಂತ' ಎಂಬುದು ಗಮನ ಸೆಳೆಯಿತು. ಆದರೆ ಇಲ್ಲಿ ಪ್ರತಿ ದಿನ ಎರಡು ಅಥವಾ ಮೂರು ಮಕ್ಕಳು ಮಿದುಳು ನಂಜಿನಿಂದ ಸಾವಿಗೀಡಾದರೆ, ಐದು ನವಜಾತ ಶಿಶುಗಳು ದಿನಾ ಇಲ್ಲಿ ಸಾವಿಗೀಡಾಗುತ್ತಿವೆ. ಇದು ಯಾವುದೂ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗುವುದೇ ಇಲ್ಲ.

ಆಗಸ್ಟ್  11ರಂದು ರಾತ್ರಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಗೋರಖಪುರ ಜಿಲ್ಲಾ ಮೆಜಿಸ್ಟ್ರೇಟ್ ರಾಜೀವ್ ರೌಟೇಲಾ ಅವರು ಒಂದು ದಿನದಲ್ಲಿ '20 ಸಾವುಗಳು' ಸರ್ವೇ ಸಾಮಾನ್ಯ ಎಂದಿದ್ದರು,  ಕಳೆದ ನಾಲ್ಕು ದಶಕಗಳಲ್ಲಿ ಪೂರ್ವಾಂಚಲದಲ್ಲಿರುವ ಆಸ್ಪತ್ರೆಗಳಲ್ಲಿ ದಿನ ನಿತ್ಯ 20 ಸಾವುಗಳು ಸಾಮಾನ್ಯ ಎಂಬಂತಾಗಿದೆ. 1978ರಿಂದ ಇಲ್ಲಿಯವರಿಗೆ ಈ ಆಸ್ಪತ್ರೆಯಲ್ಲಿ ಮಿದುಳು ನಂಜಿನಿಂದ ಸತ್ತವರ ಸಂಖ್ಯೆ 10,000 ದಾಟಿದೆ.

12 ವರ್ಷಗಳ ಹಿಂದೆ ಇದೇ ಬಿಆರ್‍‍ಡಿ ವೈದ್ಯಕೀಯ ಕಾಲೇಜಿನಲ್ಲಿ 1500ಕ್ಕಿಂತ ಹೆಚ್ಚು ಮಂದಿ ಮಿದುಳು ನಂಜಿನಿಂದ ಸಾವಿಗೀಡಾಗಿದ್ದಾರೆ. ಸಾವಿಗೀಡಾದವರಲ್ಲಿ ಶೇ.90ರಷ್ಟು ಮಕ್ಕಳು ಆಗಿದ್ದರು. ಆ ಹೊತ್ತಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಆಡಳಿತದಲ್ಲಿದ್ದು ವಿಪಕ್ಷಗಳು ಆಡಳಿತಾರೂಢ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದ್ದವು.

ಜಾಪನೀಸ್ ಇನ್ಸಿಫಲೈಟಿಸ್ ಎಂಬ ರೋಗವನ್ನು ತಡೆಯುಲು ಮಕ್ಕಳಿಗೆ ಲಸಿಕೆ ನೀಡಲಾಯಿತು. ಹಾಗಾಗಿ ರೋಗಬಾಧಿತರ ಸಂಖ್ಯೆಯೂ ಇಳಿಮುಖವಾಗುತ್ತಾ ಬಂತು. ಆದರೆ 12 ವರ್ಷಗಳ ನಂತರವೂ ಇಲ್ಲಿ ಸಾವುಗಳು ಸಂಭವಿಸುತ್ತಲೇ ಇವೆ.ಇದನ್ನು ನಿಯಂತ್ರಿಸಲು ತುರ್ತು ಕ್ರಮ ತೆಗೆದುಕೊಳ್ಳಬೇಕಿದ್ದರೂ ಇನ್ನೂ ಅಂಥಾ ಕ್ರಮಗಳನ್ನು ತೆಗೆದುಕೊಂಡಿಲ್ಲ.

ಬಿಆರ್‍‍ಡಿ ವೈದ್ಯಕೀಯ ಕಾಲೇಜಿನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಮನ್‍ಬೆಲಾ ಎಂಬಲ್ಲಿ ಚುನಾವಣಾ ರ‍್ಯಾಲಿ ನಡೆದಾಗ ನರೇಂದ್ರ ಮೋದಿ ಅವರು ಮಿದುಳು ನಂಜಿನಿಂದ ಸಾವಿಗೀಡಾಗುವ ಮಕ್ಕಳ ಬಗ್ಗೆ ಸಂತಾಪ ವ್ಯಕ್ತ ಪಡಿಸಿದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲವೂ ಸರಿಹೋಗುತ್ತದೆ ಎಂದು ಮೋದಿ ಭರವಸೆಯನ್ನೂ ನೀಡಿದ್ದರು.

ಲೋಕಸಭಾ ಚುನಾವಣೆ ನಡೆದು ನರೇಂದ್ರ ಮೋದಿ ಪ್ರಧಾನಿಯಾದರು. ಉತ್ತರಪ್ರದೇಶದಲ್ಲಿ ಮಿದುಳು ನಂಜು ರೋಗ ನಿಯಂತ್ರಣಕ್ಕೆ ಚಳವಳಿ ಆರಂಭಿಸಿದ್ದು ನಾನೇ ಎಂದು ಹೇಳಿ ಬೆನ್ನು ತಟ್ಟಿಕೊಳ್ಳುತ್ತಿದ್ದ ಆದಿತ್ಯನಾಥ ಯೋಗಿ ಉತ್ತರಪ್ರದೇಶದ ಮುಖ್ಯಮಂತ್ರಿಯೂ ಆಗಿ ಬಿಟ್ಟರು. ಇಷ್ಟೆಲ್ಲಾ ಆದ ಮೇಲೆ ಗೋರಖಪುರದಲ್ಲಿನ ಬಿಆರ್‍‍ಡಿ ಆಸ್ಪತ್ರೆಯಲ್ಲಿ  ಏನಾದರೂ ಬದಲಾವಣೆ ಆಯಿತೇ?.

ಅಲ್ಲಿನ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಲೇ ಇಲ್ಲ. ನಿಜ ಹೇಳಬೇಕೆಂದರೆ ಆಸ್ಪತ್ರೆಯ ಸ್ಥಿತಿ ಇನ್ನೂ ಹದಗೆಟ್ಟಿದೆ. ನಾಯಕರು ಹೇಳಿದ ಮಾತುಗಳು ಬರೀ ಮಾತುಗಳಾಗಿಯೇ ಉಳಿದು ಬಿಟ್ಟವು!

ಮಿದುಳು ನಂಜು ರೋಗ ನಿಯಂತ್ರಣಕ್ಕೆ ಬೇಕಾದ ನಿಧಿಗಾಗಿ ಪರದಾಟ
ಬಲ್ಲಮೂಲಗಳ ಪ್ರಕಾರ 2016, ಫೆ.14ರಂದು ಬಿಆರ್‍‍ಡಿ ಕಾಲೇಜಿನ ಪ್ರಾಂಶುಪಾಲರು ವೈದ್ಯಕೀಯ ಮತ್ತು ಆರೋಗ್ಯ ಸೇವೆಯ ಮಹಾ ನಿರ್ದೇಶಕರಿಗೆ ಪತ್ರ ಬರೆದು ಮಿದುಳು ನಂಜು ರೋಗದ ಚಿಕಿತ್ಸೆಗಳಿಗಾಗಿ ತುರ್ತಾಗಿ ₹37.99 ಕೋಟಿ ಬೇಕೆಂದು ಪತ್ರ ಬರೆದಿದ್ದರು. ಮಹಾ ನಿರ್ದೇಶಕರು ಆ ಪತ್ರವನ್ನು ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‍ಎಚ್‍ಎಂ) ನ ನಿರ್ದೇಶಕರಿಗೆ ರವಾನಿಸಿ ನಿಧಿಗಾಗಿ ಬೇಡಿಕೆಯೊಡ್ಡಿದ್ದರು.

ಆದರೆ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಅಷ್ಟೊಂದು ಹಣವನ್ನು ನೀಡಲು ಮುಂದಾಗಿಲ್ಲ. ದೇಶದಲ್ಲಿ ಮಿದುಳು ನಂಜು ರೋಗದಿಂದ ಬಳಲುತ್ತಿರುವ ಶೇ.60ಕ್ಕಿಂತಲೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳು ಅವ್ಯವಸ್ಥೆಯಿಂದ ಕೂಡಿವೆ. ಅಲ್ಲಿ ರೋಗಿಗಳಿಗೆ ನೀಡಲು ಸರಿಯಾದ ಚಿಕಿತ್ಸೆ, ಔಷಧಿ, ಆಮ್ಲಜನಕ ಮತ್ತು ಸೇವೆ ಒದಗಿಸಲು ವೈದ್ಯಕೀಯ ಸಿಬ್ಬಂದಿಗಳಿಲ್ಲ. ಎಲ್ಲ ವ್ಯವಸ್ಥೆಗಳನ್ನು ಒದಗಿಸಬೇಕಾದರೆ ಅಲ್ಲಿ ದುಡ್ಡಿನ ಅಗತ್ಯ ಇದ್ದೇ ಇರುತ್ತದೆ. ಹಣದ ಕೊರತೆ ಇರುವಾಗ ಸೌಕರ್ಯಗಳನ್ನು ಒದಗಿಸುವುದಾದರೂ ಹೇಗೆ?

ಬಿಆರ್‍‍ಡಿ ವೈದ್ಯಕೀಯ ಕಾಲೇಜಿನಲ್ಲಿ ಪ್ರತಿ ವರ್ಷ 2500ರಿಂದ 3000 ಮಿದುಳು ನಂಜು ರೋಗ ಪ್ರಕರಣಗಳು ದಾಖಲಾಗುತ್ತಿವೆ.ಈ ರೋಗದ ಪತ್ತೆಗೆ, ಚಿಕಿತ್ಸೆ, ಔಷಧಿ ಮತ್ತು ಆಮ್ಲಜನಕಕ್ಕಾಗಿ ಬೃಹತ್ ಮೊತ್ತದ ಅವಶ್ಯಕತೆ ಇದೆ. ಇಲ್ಲಿನ ಸ್ಥಳೀಯ ಜನರು ಚಿಕಿತ್ಸೆಗಾಗಿ ಈ ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಾರೆ. ಅದರ ಜತೆಗೇ ಬಸ್ತಿ, ಅಜಾಂಗಡ, ಬಿಹಾರ ಅಷ್ಟೇ ಯಾಕೆ ನೇಪಾಳದಿಂದಲೂ ಇಲ್ಲಿ ಚಿಕಿತ್ಸೆಗಾಗಿ ರೋಗಿಗಳು ಬರುತ್ತಿದ್ದಾರೆ. ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಇಲ್ಲಿ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಈ ತಿಂಗಳುಗಳಲ್ಲಿ  400ರಿಂದ 700 ರೋಗಿಗಳು ಇಲ್ಲಿ ದಾಖಲಾಗುತ್ತಾರೆ.
2016 ಆಗಸ್ಟ್ 28ರಂದು ಕೇಂದ್ರ ಆರೋಗ್ಯ ಸಚಿವೆ ಅನುಪ್ರಿಯಾ ಪಟೇಲ್  ಅವರು ಬಿಆರ್‍‍ಡಿ ಆಸ್ಪತ್ರೆಗೆ ಭೇಟಿ ನೀಡಿದಾಗ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ರೋಗಿಗಳು ದೂರು ನೀಡಿದ್ದರು. ಪ್ರಸ್ತುತ ಈ ಆಸ್ಪತ್ರೆಯಲ್ಲಿ ಔಷಧಿ ಪೂರೈಕೆಗೆ ಬೇಕಾದ ಹಣವೂ ಇಲ್ಲ.

ತಿಂಗಳಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಈ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆ ವೇಳೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೂ ಜತೆಯಲ್ಲಿದ್ದರು.ದಿನ ನಿತ್ಯ ಈ ಆಸ್ಪತ್ರೆಯಲ್ಲಿ ಸಂಭವಿಸುವ ಮಕ್ಕಳ ಸಾವನ್ನು ನಿಯಂತ್ರಿಸಲು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು.

ಈ ಆಸ್ಪತ್ರೆಯಲ್ಲಿ ಎಷ್ಟೊಂದು ಅವ್ಯವಸ್ಥೆ ಇದೆ ಎಂದರೆ ಮೂರು ನವಜಾತ ಶಿಶುಗಳನ್ನು ಒಂದೇ ವಾರ್ಮರ್‍‍ನಲ್ಲಿರಿಸಲಾಗಿದೆ. ಹೀಗೆ ಒಂದಕ್ಕಿಂತ ಹೆಚ್ಚು ನವಜಾತ ಶಿಶುಗಳನ್ನು ವಾರ್ಮರ್‍‍ನಲ್ಲಿ ಜತೆಯಾಗಿ ಇರಿಸುವುದರಿಂದ ಕಂದಮ್ಮಗಳಿಗೆ ಸೋಂಕು ತಗುಲಿ ಸಾವಿಗೀಡಾದರೆ ಅದಕ್ಕೆ ಆಸ್ಪತ್ರೆ ಜವಾಬ್ದಾರರಲ್ಲ ಎಂಬ ಸಮ್ಮತಿ ಪತ್ರಕ್ಕೆ ಹೆತ್ತವರು ಸಹಿ ಹಾಕಬೇಕಾಗುತ್ತದೆ.

ಮಕ್ಕಳ ಐಸಿಯುನಲ್ಲಿ 50 ಹಾಸಿಗೆಗಳಿವೆ. ಆದರೆ ಇಲ್ಲಿ ಪ್ರತಿ ತಿಂಗಳು ಸರಾಸರಿ 300 ಮಕ್ಕಳು ದಾಖಲಾಗುತ್ತಾರೆ. ಹೆಚ್ಚಿನ ವ್ಯವಸ್ಥೆ ಕಲ್ಪಿಸುವ ಸಲುವಾಗಿ 149 ವೈದ್ಯಕೀಯ ಸಿಬ್ಬಂದಿಗಳಿರುವ ಮೂರು ಹಂತದ ಐಸಿಯು ನಿರ್ಮಿಸಲು ಆಸ್ಪತ್ರೆ ಪ್ರಸ್ತಾಪ ಮುಂದಿಟ್ಟಿದೆ.  ಇದಕ್ಕಾಗಿ ₹10 ಕೋಟಿ ಮೊತ್ತದ ಅಗತ್ಯವಿದ್ದು,  ಆದಿತ್ಯನಾಥ ಅವರ ಸರ್ಕಾರ ಇನ್ನೂ ಈ ಬೇಡಿಕೆಯನ್ನು ಪರಿಗಣಿಸಿಲ್ಲ.

ಮೂಲಗಳ ಪ್ರಕಾರ ಆಸ್ಪತ್ರೆಯಲ್ಲಿ ಔಷಧಿ ಪೂರೈಕೆ, ಅಗತ್ಯ ವಸ್ತುಗಳ ನಿರ್ವಹಣೆ ಮತ್ತು ಪ್ರಯೋಗಾಲಯದ ನಿರ್ವಹಣೆಗಾಗಿ ಪ್ರತಿ ವರ್ಷ ₹7.5 ಕೋಟಿ ಮೊತ್ತದ ಬಜೆಟ್ ಅಗತ್ಯಲಿದೆ. ಪ್ರತಿ ವರ್ಷ ಇಲ್ಲಿ ಬೇಕಾಗುವ ಆಮ್ಲಜನಕದ ಖರ್ಚು ಕೂಡಾ ಔಷಧಿ ಬಜೆಟ್‍ನಲ್ಲಿಯೇ ಇರುತ್ತದೆ. ಹಾಗಾಗಿ ಇಲ್ಲಿ ಸದಾ ಆಮ್ಲಜನಕ ಮತ್ತು ಔಷಧಿ ಕೊರತೆ ಇದ್ದೇ ಇರುತ್ತದೆ. ಅದೇ ಎಲ್ಲ ಸಮಸ್ಯೆಗಳಿಗೆ ಕಾರಣವೂ ಆಗಿರುತ್ತದೆ.
2016 ನವೆಂಬರ್‍‍ನಲ್ಲಿ  ಆಮ್ಲಜನಕ ಪೂರೈಸುವ ಕಂಪನಿಗಳಿಗೆ ವೈದ್ಯಕೀಯ ಕಾಲೇಜು ಹಣ ಪಾವತಿ ಮಾಡಿರಲಿಲ್ಲ. ಮಾರ್ಚ್  2017ರ ಹೊತ್ತಿಗೆ ಕಂಪನಿಗಳಿಗೆ ಕೊಡಬೇಕಾದ ಬಾಕಿ ಹಣ ₹72 ಲಕ್ಷಕ್ಕೆ ತಲುಪಿದಾಗ ಆ ಕಂಪನಿಗಳು ಆಮ್ಲಜನಕ ಪೂರೈಸುವುದನ್ನೇ ಸ್ಥಗಿತಗೊಳಿಸಿದವು.

ಉಪಕರಣ ನಿರ್ವಹಣೆಗೆ ವ್ಯವಸ್ಥೆಯೇ ಇಲ್ಲ
ಇತ್ತೀಚಿನ ತಿಂಗಳುಗಳಲ್ಲಿ ಗೋರಖಪುರದ ಬಾಬಾ ರಾಘವ ದಾಸ್‌ (ಬಿಆರ್‌ಡಿ) ವೈದ್ಯಕೀಯ ಕಾಲೇಜು ಎದುರಿಸಿದ ಸಮಸ್ಯೆ ಆಮ್ಲಜನಕ ಪೂರೈಕೆ ವ್ಯತ್ಯಯ ಮಾತ್ರ ಅಲ್ಲ. ಸುಮಾರು 60 ಹಸುಗೂಸುಗಳ ಸಾವಿನಿಂದ ಸುದ್ದಿಯ ಕೇಂದ್ರವಾಗಿರುವ ಈ ಸರ್ಕಾರಿ ಆಸ್ಪತ್ರೆಯಲ್ಲಿರುವ ಮಹತ್ವದ ಉಪಕರಣಗಳ ಬಳಕೆಯೂ ಸರಿಯಾಗಿ ಆಗುತ್ತಿಲ್ಲ ಎಂದು ಜೂನ್‌ನಲ್ಲಿ ಮಹಾಲೇಖಪಾಲರು (ಸಿಎಜಿ) ನೀಡಿದ ವರದಿ ಹೇಳಿದೆ.

ವಿಚಿತ್ರ ಎಂದರೆ, ಭಾರತೀಯ ವೈದ್ಯಕೀಯ ಮಂಡಳಿ ನಿಗದಿ ಮಾಡಿರುವ ನಿಯಮಗಳ ಪ್ರಕಾರ ಇರಬೇಕಾದ ಎಲ್ಲ ಪ್ರಮುಖ ಉಪಕರಣಗಳೂ ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಇವೆ ಎಂದು ವರದಿ ಹೇಳಿದೆ. ಮೂಳೆ ಚಿಕಿತ್ಸೆ ಮತ್ತು ಕಣ್ಣು ಚಿಕಿತ್ಸೆ ವಿಭಾಗಳಲ್ಲಿರುವ ಉಪಕರಣಗಳ ನಿರ್ವಹಣೆ ಸರಿ ಇಲ್ಲ ಎಂದು ಸಿಎಜಿ ವರದಿ ಆಕ್ಷೇಪಿಸಿದೆ.

ಗೋರಖಪುರ ಮತ್ತು ಸುತ್ತಲಿನ ಪ್ರದೇಶದಲ್ಲಿ ಮುಂಗಾರು ಸಮಯದಲ್ಲಿ ಮಿದುಳು ನಂಜು ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆ. ಹಾಗಾಗಿ ತೀವ್ರವಾದ ಮಿದುಳು ನಂಜು ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಆಸ್ಪತ್ರೆಗೆ ದಾಖಲಾಗುತ್ತಾರೆ.

ಗರ್ಭಕಂಠದ ಕ್ಯಾನ್ಸರ್‌ ಪತ್ತೆ ಯಂತ್ರ, ಲೇಸರ್‌ ಚಿಕಿತ್ಸೆ ಯಂತ್ರ, ಹೆರಿಗೆ ಸಂದರ್ಭದಲ್ಲಿ ಭ್ರೂಣದ ಮೇಲೆ ನಿಗಾ ಇರಿಸುವ ಯಂತ್ರ ಮುಂತಾದವುಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿ ಇಲ್ಲ. ನಿರ್ವಹಣೆ ಸರಿಯಾಗಿ ಮಾಡದ ಕಾರಣ ಇವು ನಿಷ್ಕ್ರಿಯವಾಗಿವೆ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT