ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡಿದ್ದೀರಾ ಬಾಳೆಯ ಪೆನ್ನು?

Last Updated 14 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನಮ್ಮ ಮುಂದಿದ್ದ ಟೇಬಲ್‌ ಮೇಲೆ ಥರಾವರಿ ಪೆನ್ನು–ಪೆನ್ಸಿಲ್‌ಗಳ ದೊಡ್ಡ ಕಟ್ಟುಗಳಿದ್ದವು. ಅವುಗಳ ಪಕ್ಕದಲ್ಲಿ ಅಷ್ಟೇ ಸೊಗಸಾದ ಫೈಲುಗಳು. ತಲೆ ಮೇಲೆತ್ತಿ ನೋಡಿದರೆ ಕಟ್ಟಿಗೆಯ ತುಂಡೊಂದನ್ನು ಕೊರೆದು ಜೋತು ಬಿಟ್ಟಂತಿದ್ದ ತಟ್ಟೆಯಾಕಾರದ ಗಡಿಯಾರ. ಅರೆರೆ ಎಲ್ಲವುಗಳ ಬಣ್ಣವೂ ಒಂದೇ.‌

ಏನಿದರ ಮಜಕೂರು ಎಂದು ಎದುರಿಗೆ ಕುಳಿತಿದ್ದ ಡಾ. ಮಾಲಾ ಗಿರಿಧರ ಅವರನ್ನು ಕೇಳಿದಾಗ ಶಿರಸಿಯ ಚೇತನಾ ಎಂಬ ಸಂಸ್ಥೆಯ ಯಶಸ್ಸಿನ ಕಥೆಗಳು ಒಂದೊಂದಾಗಿ ಕಣ್ಣಮುಂದೆ ಮೆರವಣಿಗೆ ಹೊರಟವು. ಅಂದಹಾಗೆ, ಈ ಸಾಮಗ್ರಿಗಳೆಲ್ಲ ಬಾಳೆಯ ನಾರಿನಿಂದ ತಯಾರು ಆದಂಥವು. ಮತ್ತೂ ವಿಶೇಷವೆಂದರೆ ಅಂಗವೈಕಲ್ಯಕ್ಕೆ ಒಳಗಾದ ಮಕ್ಕಳು ಅವುಗಳನ್ನು ತಯಾರಿಸಿದ್ದು.

ಹೌದು, ಶಿರಸಿಯ ಚೇತನಾ ಕೇಂದ್ರದಲ್ಲಿರುವ ಕೆಲವರಿಗೆ ಮಾತು ಬರುವುದಿಲ್ಲ. ಕಿವಿಯೂ ಕೇಳಿಸುವುದಿಲ್ಲ. ಇನ್ನು ಕೆಲವರನ್ನು ಅಂಗವೈಕಲ್ಯ ಕಾಡುತ್ತಿದೆ. ಆದರೂ ಅವರು ಹಾಡುತ್ತಾರೆ, ಕುಣಿಯುತ್ತಾರೆ, ಕೌಶಲ ಮೆರೆಯುತ್ತಾರೆ. ಶಿರಸಿಯಿಂದ ಬನವಾಸಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಇರುವ ಕೈಗಾರಿಕಾ ಕೇಂದ್ರದಲ್ಲಿ ವಿಶೇಷ ಮಕ್ಕಳ ಬದುಕು ಅರಳಿಸಲು ತೆರೆಯಲಾದ ಕೇಂದ್ರ ಇದು. ಅದಕ್ಕೀಗ ದಶಕದ ಸಂಭ್ರಮ.

ವಿಶೇಷ ಮಕ್ಕಳ ಸಮಸ್ಯೆಯನ್ನು ಅರಿತು ಪರಿಹಾರ ಕಂಡುಕೊಳ್ಳುವ, ವೈವಿಧ್ಯ ಕಾರ್ಯಕ್ರಮಗಳ ಮೂಲಕ ಅವರ ಬದುಕಿಗೆ ಸಾಂತ್ವನ ಹೇಳುವ ಉದ್ದೇಶದಿಂದ ಹತ್ತು ವರ್ಷಗಳ ಹಿಂದೆ ಈ ಸಂಸ್ಥೆಯನ್ನು ಆರಂಭಿಸಲಾಗಿದೆ.

‘ಅಂಗವೈಕಲ್ಯದಿಂದ ಬಳಲುವ ಮಕ್ಕಳು ಮಾನಸಿಕ ವಾಗಿ ಕುಗ್ಗುತ್ತಿದ್ದರು. ಅವರನ್ನು ಒಂದು ಕಡೆ ಸೇರಿಸಿ ಉತ್ಸಾಹ, ಹುಮ್ಮಸ್ಸು ತುಂಬಿ, ಬದುಕುವ ದಾರಿ ತೋರಿಸಬೇಕು ಎಂಬ ಉದ್ದೇಶದಿಂದ ಈ ಸಂಸ್ಥೆಯನ್ನು ಹುಟ್ಟು ಹಾಕಿದೆವು. ಸಾಮಾಜಿಕ ಕಳಕಳಿ ಇರುವ ಹೆಣ್ಣು ಮಕ್ಕಳು ನಮ್ಮ ಸಂಸ್ಥೆಗೆ ಬೆಂಬಲವಾಗಿ ನಿಂತಿದ್ದಾರೆ’ ಎನ್ನುತ್ತಾರೆ ಡಾ. ಮಾಲಾ ಗಿರಿಧರ. ಅಂದಹಾಗೆ, ಅವರು ಮನೋರೋಗ ತಜ್ಞರೂ ಹೌದು.

ನೊಂದ ಹೆಣ್ಣು ಮಕ್ಕಳಿಗೂ ಮನೆಯಲ್ಲಿಯೇ ಕುಳಿತು ಬಾಳೆನಾರಿನಿಂದ ಪೇಪರ್ ಬ್ಯಾಗ್, ಹಳೆಯ ಬಟ್ಟೆಗಳಿಂದ ನಾನಾವಿಧದ ಬ್ಯಾಗ್, ಫೈಲ್‌ಗಳನ್ನು ತಯಾರಿಸುವ ಅವಕಾಶ ಕಲ್ಪಿಸಿದೆ ಚೇತನ.

ಪೆನ್ನು, ಫೈಲ್, ಮೊಬೈಲ್ ಸ್ಟ್ಯಾಂಡ್, ಪೆನ್ಸಿಲ್, ಜ್ಯುವೆಲ್ಲರಿ ಬಾಕ್ಸ್, ಚೀಲ, ಶುಭಾಶಯ ಪತ್ರ, ನೋಟಿಸ್ ಬೋರ್ಡ್, ಗಡಿಯಾರ... ಹೀಗೆ ನಾನಾ ರೀತಿಯ ವಸ್ತುಗಳನ್ನು ಬಾಳೆನಾರಿನಿಂದ ತಯಾರಿಸಲಾಗುತ್ತಿದೆ. ಬಾಳೆ ನಾರಿನ ಪೆನ್ ಅಂತೂ ಬಹಳ ಆಕರ್ಷಕವಾಗಿದೆ. ಜನ ಉಡುಗೊರೆಯಾಗಿ ಕೊಡಲು ಈ ಪೆನ್‌ಗಳನ್ನು ಹೆಚ್ಚಾಗಿ ಖರೀದಿ ಮಾಡುತ್ತಾರೆ.

ಬಾಳೆನಾರನ್ನು ಕೊಂಡುಕೊಳ್ಳಲು ಬಹಳ ಶ್ರಮಪಡಬೇಕಾಗುತ್ತದೆ. ಬಾಳೆ ತೋಟಗಳಿಗೆ ಹೋಗಿ ಗುತ್ತಿಗೆ ಪಡೆದು ತಂದು ಅದರ ಪದರುಗಳನ್ನು ತೆಗೆದು ಒಣಗಿಸಿ ಶೇಖರಿಸಿ ಇಟ್ಟುಕೊಳ್ಳಬೇಕು. ಬೇಕಾದಾಗ ಬಾಳೆನಾರನ್ನು ನೀರಿನಲ್ಲಿ ಕೆಲವು ಗಂಟೆಗಳ ಕಾಲ ನೆನೆಸಿದಾಗ ಮೃದುಗೊಳ್ಳುತ್ತದೆ. ನಂತರ ಆಯಾ ವಸ್ತುವಿಗೆ ಬೇಕಾದ ರೀತಿಯಲ್ಲಿ ಕತ್ತರಿಸಿ ಬಳಸಬಹುದು ಎಂದು ಇಲ್ಲಿನ ತರಬೇತುದಾರರು ತಿಳಿಸುತ್ತಾರೆ.

‘ಹಬ್ಬ-ಹರಿದಿನಗಳಲ್ಲಿ ನೀವು ಬಾಳೆಗಿಡಗಳನ್ನು ಬಳಸಿ ಬೀದಿಗೆ ಬಿಸಾಡುತ್ತೀರಿ, ಅಲ್ಲವೇ? ಆದರೆ ನಾವು ಬಾಳೆತೋಟದವರಿಗೆ ಹಣವನ್ನು ನೀಡಿ ತರಬೇಕಾಗುತ್ತದೆ. ಯಾರಾದರೂ ದಾನಿಗಳು ಬಾಳೆನಾರನ್ನು ನೀಡಿದರೆ ಒಳ್ಳೆಯದು’ ಎಂದು ಹೇಳುತ್ತಾರೆ. ನಮ್ಮ ಸಂಸ್ಥೆಯೇ ಪ್ರತಿಯೊಬ್ಬರಿಗೂ ಇಂತಿಷ್ಟು ಸಂಬಳ ಕೊಡುತ್ತಿದೆ. ಮಕ್ಕಳು ತಯಾರಿಸಿದ ವಸ್ತುಗಳು ನಾನಾ ಊರುಗಳಿಗೆ ಸರಬರಾಜು ಆಗುತ್ತದೆ. ಅಲ್ಲಿ ಈ ವಸ್ತುಗಳನ್ನು ಮಾರಾಟವಾಗಿ ಬಂದ ಹಣದಿಂದ ಸಂಸ್ಥೆ ನಡೆಯುತ್ತಿದೆ ಎಂದು ವಿವರಿಸುತ್ತಾರೆ.

ವಿದ್ಯಾನಾಯ್ಕ, ಸರಸ್ವತಿ ಹೆಗಡೆ, ನಿರ್ಮಲಾ ಪಟಗಾರ್, ಸುಮಾ ಲಲಿತ ಅವರು ಇಲ್ಲಿ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಗೆ ₹200ರಿಂದ ₹500ವರೆಗೆ ಆದಾಯ ಸಿಗುತ್ತದೆ. ಜೊತೆಗೆ ಉಚಿತವಾಗಿ ಮಧ್ಯಾಹ್ನ ಬಿಸಿ ಊಟವನ್ನೂ ನೀಡಲಾಗುತ್ತದೆ. ಇವರೆಲ್ಲರೂ ಶಿರಸಿಯ ಅಕ್ಕಪಕ್ಕದ ಹಳ್ಳಿಗಳಿಂದ ಬಂದು ಹೋಗುತ್ತಾರೆ. ಬಂದುಹೋಗಲು ಅವರಿಗೆ ಉಚಿತವಾಗಿ ವಾಹನದ ವ್ಯವಸ್ಥೆಯನ್ನೂ ಮಾಡಲಾಗಿದೆ.

ವಿಶೇಷ ಮಕ್ಕಳು ಸಾಮಾನ್ಯವಾಗಿ ಕುಳಿತಲ್ಲಿ ಕುಳಿತುಕೊಳ್ಳುವುದು ಕಷ್ಟ. ಸಹನೆ ಕೂಡ ಕಡಿಮೆ. ಹೀಗಿದ್ದೂ ಅಂದದ ಸಾಮಗ್ರಿ ತಯಾರಿಯಲ್ಲಿ ತೊಡಗುವುದು ವಿಶೇಷವೇ ಆಗಿದೆ. ಚೇತನಾ ಸಂಸ್ಥೆ ನಿಜಕ್ಕೂ ಇವರ ಬದುಕಿಗೆ ಹೊಸ ಚೇತನವನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT