ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ವೈಫೈ ಸೌಲಭ್ಯದ ದುರ್ಬಳಕೆ

Last Updated 15 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಭಾರತದಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಒದಗಿಸಲಾಗಿರುವ ವೈಫೈ ಬಳಕೆ ಮಾಡುವ ಮೂವರಲ್ಲಿ ಒಬ್ಬರು ನೀಲಿ ಚಿತ್ರಗಳನ್ನು ವೀಕ್ಷಣೆ ಮಾಡುತ್ತಾರೆ ಎಂದು ಜಾಗತಿಕವಾಗಿ ಅಧ್ಯಯನ ನಡೆಸಿರುವ ನಾರ್ಟನ್ ಸಂಸ್ಥೆ ವರದಿ ಮಾಡಿದೆ.

ಭಾರತ ಸೇರಿದಂತೆ ವಿವಿಧ ದೇಶಗಳಲ್ಲೂ ಅಲ್ಲಿನ ಸರ್ಕಾರಗಳು ಅಥವಾ ಖಾಸಗಿ ಕಂಪೆನಿಗಳು ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈಫೈ ಅಳವಡಿಸಿವೆ. ಆದರೆ, ಬಹುತೇಕ ಜನರು ಈ ವೈಫೈ ಅನ್ನು ಅಶ್ಲೀಲ ಚಿತ್ರ ನೋಡಲು ಮಾತ್ರ ಬಳಕೆ ಮಾಡುತ್ತಾರೆ. ಜಾಗತಿಕವಾಗಿ ವೈಫೈ ಬಳಕೆ ಮಾಡುವ ಆರು ಜನರಲ್ಲಿ ಒಬ್ಬರು ನೀಲಿ ಚಿತ್ರಗಳನ್ನು ನೋಡಿದರೆ, ಭಾರತದಲ್ಲಿ ಮೂವರಲ್ಲಿ ಒಬ್ಬರು ಅಶ್ಲೀಲ ಚಿತ್ರಗಳು, ಸೆಕ್ಸ್ ಕಥೆಗಳು, ಆಡಿಯೊಗಳು, ವಿಡಿಯೊಗಳನ್ನು ನೋಡಲು ಬಳಕೆ ಮಾಡುತ್ತಾರೆ ಎಂದು ನಾರ್ಟನ್ ಸಂಸ್ಥೆ ತಿಳಿಸಿದೆ.

ವೈಫೈ ಉಚಿತವಾಗಿ ಲಭ್ಯವಿರುವ ರೈಲು ನಿಲ್ದಾಣಗಳು, ಬಸ್ ತಂಗುದಾಣಗಳು, ಹೋಟೆಲ್, ವಿಮಾನ ನಿಲ್ದಾಣ, ಗ್ರಂಥಾಲಯ ಸೇರಿದಂತೆ ಕೆಲಸ ಮಾಡುವ ಸ್ಥಳಗಳಲ್ಲೂ ನೀಲಿ ಚಿತ್ರಗಳನ್ನು ವೀಕ್ಷಣೆ ಮಾಡುವವರ ಸಂಖ್ಯೆ ಗರಿಷ್ಠ ಮಟ್ಟದಲ್ಲಿ ಇದೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಶ್ಲೀಲ ಚಿತ್ರಗಳ ವೀಕ್ಷಣೆ ಮಾಡುವುದು ಸರಿಯಲ್ಲ, ಇದರಿಂದ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ನಾರ್ಟನ್ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ನೀಲಿ ಚಿತ್ರಗಳನ್ನು ನೋಡುವವರಲ್ಲಿ ಭಾರತೀಯರೇ ಮುಂದು! ಜಾಗತಿಕ ಮಟ್ಟದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಜಪಾನ್, ಮೆಕ್ಸಿಕೊ, ನೆದರ್ಲೆಂಡ್‌, ಬ್ರೆಜಿಲ್, ಅಮೆರಿಕ ಮತ್ತು ಇಂಗ್ಲೆಂಡ್ ದೇಶಗಳಿವೆ. ಈ ಅಧ್ಯಯನ ವರದಿಗಾಗಿ ನಾರ್ಟನ್ ಸಂಸ್ಥೆಯು ಭಾರತದಲ್ಲಿ ಸಾವಿರ ಜನರನ್ನು ಸಂದರ್ಶನಕ್ಕೆ ಒಳಪಡಿಸಲಾಗಿತ್ತು. ಇವರಲ್ಲಿ 400 ಜನರು ಉಚಿತ ವೈಫೈ ಲಭ್ಯವಿರುವ ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ವಿಡಿಯೊಗಳನ್ನು ವೀಕ್ಷಣೆ ಮಾಡಲು ಬಳಸಿಕೊಂಡಿರುವುದಾಗಿ ತಿಳಿಸಿದ್ದಾರೆ ಎಂದು ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದಲ್ಲಿ ಶೇ 31ರಷ್ಟು ಜನರು ಸಾರ್ವಜನಿಕ ವೈಫೈ ಬಳಕೆ ಮಾಡಿಕೊಂಡು ಬೀದಿಗಳಲ್ಲಿ ನೀಲಿ ಚಿತ್ರಗಳನ್ನು ನೋಡಿದರೆ, ಶೇ 34 ರಷ್ಟು ಜನರು ಬಸ್‌,ರೈಲು,ವಿಮಾನ ನಿಲ್ದಾಣಗಳಲ್ಲಿ ಹಾಗೂ ಶೇ 24ರಷ್ಟು ಜನರು ಗ್ರಂಥಾಲಯಗಳ ವೈಫೈಗಳನ್ನು ಬಳಕೆ ಮಾಡಿಕೊಂಡು ಅಶ್ಲೀಲ ಚಿತ್ರಗಳು ಅಥವಾ ವಿಡಿಯೊಗಳನ್ನು ನೋಡುತ್ತಾರೆ.

ಭಾರತ ಮುಂದು

ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಿರುವ ಉಚಿತ ವೈಫೈ ಬಳಕೆ ಮಾಡುವವರಲ್ಲಿ ಭಾರತೀಯರೆ ಮುಂದೆ ಇದ್ದಾರೆ. ಶೇ 96 ರಷ್ಟು ಭಾರತೀಯರು ಉಚಿತ ವೈಫೈ ಬಳಸಿಕೊಂಡು ಸಾಮಾಜಿಕ ಜಾಲತಾಣಗಳ ಬಳಕೆ, ಇ-ಮೇಲ್ ಮಾಹಿತಿ ವರ್ಗಾವಣೆ, ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಾರೆ. ಇದರಿಂದ ಹ್ಯಾಕರ್‌ಗಳ ಸುಲಭವಾಗಿ ಖಾಸಗಿ ಮಾಹಿತಿ ಕದಿಯಲು ಸಾಧ್ಯವಿದೆ ಎಂದು ಅಧ್ಯಯನ ವರದಿ ಎಚ್ಚರಿಸಿದೆ. ಇಂತಹ ಸ್ಥಳಗಳಲ್ಲಿನ ಉಚಿತ ವೈಫೈ ಬಳಸಿಕೊಂಡು ಇ-ಮೇಲ್ ಮಾಡುವುದು, ಬ್ಯಾಂಕಿಂಗ್ ವ್ಯವಹಾರ ನಡೆಸುವುದನ್ನು ಮಾಡಬಾರದು ಎಂದೂ ಸಂಸ್ಥೆ ಸಲಹೆ ಮಾಡಿದೆ.

***

ಹಣ ಹೂಡಿಕೆಗೆ ಯಾವ ಕ್ಷೇತ್ರ ಸೂಕ್ತ?

ಷೇರುಪೇಟೆ ಉತ್ತುಂಗದಲ್ಲಿ ಇರುವ ಸದ್ಯದ ಪರಿಸ್ಥಿತಿಯಲ್ಲಿ ಲಾಭದಾಯಕವಾದ ಹಣ ಹೂಡಿಕೆಗೆ  ಯಾವ ವಲಯ ಹೆಚ್ಚು ಸೂಕ್ತ ಎನ್ನುವ ಗೊಂದಲವು ಸಾಮಾನ್ಯ ಹೂಡಿಕೆದಾರರನ್ನು ಸಹಜವಾಗಿಯೇ ಕಾಡುತ್ತಿದೆ. ರಿಯಲ್‌ ಎಸ್ಟೇಟ್‌, ಚಿನ್ನ ಖರೀದಿ, ಬಂಡವಾಳ ಪೇಟೆ, ಮ್ಯೂಚುವಲ್‌ ಫಂಡ್‌ಗಳಲ್ಲಿ ಯಾವುದು ಸೂಕ್ತ ಎನ್ನುವ ಗೊಂದಲದಲ್ಲಿ ಹೂಡಿಕೆದಾರರು ಇದ್ದಾರೆ.

ಅಮೆರಿಕ– ಉತ್ತರ ಕೊರಿಯಾ ಮಧ್ಯೆ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿ, ಬ್ರೆಕ್ಸಿಟ್‌, ಜಿಎಸ್‌ಟಿ ಜಾರಿ, ನಿಧಾನಗೊಂಡಿರುವ ಉದ್ಯೋಗ ಸೃಷ್ಟಿಯು ಹೂಡಿಕೆದಾರರು ಷೇರುಪೇಟೆಯಿಂದ ವಿಮುಖವಾಗಲು ಕಾರಣವಾಗಿವೆ.

ಯಾವುದೇ ಬಗೆಯ ಹೂಡಿಕೆ ನಿರ್ಧಾರ ಮಾಡುವ ಮೊದಲು ಪ್ರತಿಯೊಬ್ಬರೂ ಹಣಕಾಸಿನ ಯೋಜನೆ ಹೊಂದಿರಬೇಕು. ದಿಢೀರನೆ ಶ್ರೀಮಂತನಾಗಬೇಕು, ಹೂಡಿಕೆಯಿಂದ ಗರಿಷ್ಠ ಲಾಭ ಮಾಡಿಕೊಳ್ಳಬೇಕು ಎನ್ನುವುದು ಜಾಣ ಹಣಕಾಸಿನ ಯೋಜನೆ ಆಗಿರಲಾರದು. ನಿರ್ದಿಷ್ಟ ಗುರಿ ನಿಗದಿಪಡಿಸಿಯೇ ಉಳಿತಾಯವನ್ನು ಹೂಡಿಕೆ ಮಾಡುವ ನಿರ್ಧಾರಕ್ಕೆ ಬರಬೇಕು.

ಸೂಕ್ತ ಹಣಕಾಸು ಯೋಜನೆ ಕಾರ್ಯಗತಗೊಳಿಸಲು ಸಲಹೆಗಾರರ ನೆರವೂ  ಬೇಕು. ಉತ್ತಮ ಸಲಹೆಗಾರರು, ಅಲ್ಪಾವಧಿ, ದೀರ್ಘಾವಧಿ ಹೂಡಿಕೆ,  ಕಂಟಕಗಳು ಮತ್ತು ಲಾಭ, ನಿರೀಕ್ಷೆ ಹಾಗೂ ವಾಸ್ತವತೆ ಮಧ್ಯೆ ಸಮತೋಲನ ಸಾಧಿಸುತ್ತಾರೆ. ಸೂಕ್ತ ಹಣಕಾಸು ಯೋಜನೆ ಹೊಂದಿರದವರು, ತಮ್ಮ ಹೂಡಿಕೆಯ ಸಂಪೂರ್ಣ ಪ್ರಯೋಜನದಿಂದಲೂ ವಂಚಿತರಾಗುತ್ತಾರೆ.

ಷೇರು, ಚಿನ್ನ, ಸಾಲ ನಿಧಿ ಅಥವಾ ರಿಯಲ್‌ ಎಸ್ಟೇಟ್‌– ಇವೆಲ್ಲ ವಹಿವಾಟುಗಳು ಏರಿಳಿತದಿಂದ ಕೂಡಿರುತ್ತವೆ. ಸುರಕ್ಷತೆಗೆ ಹೆಚ್ಚು ಒತ್ತು ನೀಡಿದರೆ, ಲಾಭದ ಪ್ರಮಾಣ ಕಡಿಮೆ ಇರುತ್ತದೆ. ಗರಿಷ್ಠ ಲಾಭ ಬಯಸಿದರೆ ನಷ್ಟದ ಸಾಧ್ಯತೆ ಜತೆಯಲ್ಲಿಯೇ ಇರುತ್ತದೆ. ವಹಿವಾಟಿನ ಏರಿಳಿತದ ವಿರುದ್ಧ ರಕ್ಷಣೆ ಬಯಸಿದ್ದರೆ ಹೂಡಿಕೆದಾರರು ಶಿಸ್ತಿನ ವಿಧಾನ ಅನುಸರಿಸಬೇಕಾಗುತ್ತದೆ. ಎಲ್ಲ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇರಿಸಬಾರದು ಎನ್ನುವ ತತ್ವವು ಹೂಡಿಕೆಗೂ ಅನ್ವಯಿಸುತ್ತದೆ.

ಸರ್ಕಾರ ಜಾರಿಗೆ ತಂದ ಸುಧಾರಣಾ ಕ್ರಮಗಳ ಫಲವಾಗಿ ದೇಶಿ ಷೇರುಪೇಟೆ ಸದ್ಯಕ್ಕೆ ಉತ್ತುಂಗದಲ್ಲಿ ಇದೆ. ಜತೆಗೆ, ಸಾಕಷ್ಟು ಏರಿಳಿತವನ್ನೂ ಕಾಣುತ್ತಿದೆ.  ಇಂತಹ ಪರಿಸ್ಥಿತಿಯಲ್ಲಿ ಷೇರು ನಿಧಿಗಳಲ್ಲಿ ಹೂಡಿಕೆಯ ವ್ಯವಸ್ಥಿತ ವರ್ಗಾವಣೆ ಯೋಜನೆ (systematic transfer plan –STP) ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.

ಹೂಡಿಕೆಯ ಮೊತ್ತವನ್ನು 10 ರಿಂದ 20 ಕಂತುಗಳಲ್ಲಿ ವಿಭಜಿಸಿ, 6 ರಿಂದ 12 ತಿಂಗಳುಗಳ ಕಾಲ ನಿಯಮಿತ ಅಂತರದಲ್ಲಿ ಹೂಡಿಕೆ ಮಾಡಲು ಮುಂದಾಗಬೇಕು. ಪೇಟೆಯಲ್ಲಿ ಕುಸಿತ ಕಂಡು ಬಂದಾಗ ಅವಕಾಶ ಬಾಚಿಕೊಳ್ಳಲು  ತಕ್ಷಣ ಹೂಡಿಕೆ ಮಾಡಬೇಕು.ಪ್ರತಿ ತಿಂಗಳೂ ನಿಯಮಿತವಾಗಿ ಹೂಡಿಕೆ ಮಾಡುವ (Systematic Investment Plan–SIP) ಅವಕಾಶವನ್ನೂ ಬಳಸಿಕೊಳ್ಳಬಹುದು.

‘ಎಸ್‌ಐಪಿ’  ತುಂಬ ಸರಳ ಮತ್ತು ಪರಿಣಾಮಕಾರಿಯಾದ ಹೂಡಿಕೆ ವಿಧಾನವಾಗಿದೆ. ಮಾರುಕಟ್ಟೆಯ ಏರಿಳಿತದ ಹೊರತಾಗಿಯೂ ಇದು ಹೂಡಿಕೆಯಲ್ಲಿ ಶಿಸ್ತನ್ನು ರೂಢಿಸುತ್ತದೆ. ಜತೆಗೆ, ಪ್ರತಿಕೂಲ ಅಲೆಗಳ ವಿರುದ್ಧ ರಕ್ಷಣೆಯನ್ನೂ ನೀಡುತ್ತದೆ.

ದೀರ್ಘಾವಧಿಯಲ್ಲಿ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಮಾರುಕಟ್ಟೆಯ ಬಂಡವಾಳ ಮೌಲ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.  ದೇಶಿ ಜಿಡಿಪಿಯು ₹650 ಲಕ್ಷ ಕೋಟಿಗಳನ್ನು ದಾಟಿ ವಿಶ್ವದ ಮೂರನೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಿ ಬೆಳೆಯಲಿದೆ ಎಂದೂ ಅಂದಾಜಿಸಲಾಗಿದೆ.

ಅರ್ಥ ವ್ಯವಸ್ಥೆ ವಿಸ್ತರಣೆಯಾದಂತೆ ಷೇರುಪೇಟೆಯ ವಹಿವಾಟು ಕೂಡ ಬೆಳೆಯುತ್ತದೆ. ಇದರಿಂದ ಉದ್ದಿಮೆ ಸಂಸ್ಥೆಗಳ ಸಂಪತ್ತೂ ವೃದ್ಧಿಯಾಗುತ್ತದೆ. ದೀರ್ಘಾವಧಿ ಹೂಡಿಕೆಯು ಹೂಡಿಕೆದಾರರಿಗೆ ಗರಿಷ್ಠ ಲಾಭವನ್ನೂ ತಂದು ಕೊಡುತ್ತದೆ. ಮ್ಯೂಚುವಲ್‌ ಫಂಡ್‌ಗಳಲ್ಲಿ ‘ಎಸ್‌ಐಪಿ’ ಮೂಲಕ ಹಣ ತೊಡಗಿಸುವುದು ಕೂಡ ದೀರ್ಘಾವಧಿಯಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ ಎನ್ನುವುದನ್ನು ಸಾಮಾನ್ಯ ಹೂಡಿಕೆದಾರರು ಗಮನಿಸಬೇಕು.

–ನಿಲೇಶ್‌ ಶಹಾ

(ಕೋಟಕ್‌ ಮ್ಯೂಚುವಲ್‌ ಫಂಡ್‌ನ ವ್ಯವಸ್ಥಾಪಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT