ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಮೆರಾ ಕಣ್ಣಿನ ಒಳಗಿಂದ..

Last Updated 16 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನೈನಿಕಾ ಗುಪ್ತ
ಗೊಂಬೆಗಳ ಹಿಡಿದು ಆಟ ಆಡುವ ವಯಸ್ಸಿನಲ್ಲಿ ಕ್ಯಾಮೆರಾ ಹಿಡಿದು ದೇಶದ ಗಮನ ಸೆಳೆದ ಬಾಲಕಿ ನೈನಿಕಾ ಗುಪ್ತ. ಅತಿ ಕಿರಿಯ ವಯಸ್ಸಿಗೆ ಫೋಟೊಗ್ರಫಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ 5 ವರ್ಷದ ಬಾಲಕಿ ನೈನಿಕಾಗೆ ಹಲವಾರು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ.

ದೆಹಲಿ ಮೂಲದ ನೈನಿಕಾ ಗುಪ್ತ ಎರಡು ವರ್ಷದವಳಿರುವಾಗಲೇ ಕ್ಯಾಮೆರಾ ಕ್ಲಿಕ್ಕಿಸಲು ಆರಂಭಿಸಿದ್ದು! ವಾರಾಂತ್ಯದಲ್ಲಿ ಪೋಷಕರ ಜೊತೆ ಪಿಕ್ನಿಕ್‌ ಹೋಗುತ್ತಿದ್ದ ನೈನಿಕಾ ಅಪ್ಪನ ಡಿ.ಎಸ್‌.ಎಲ್‌.ಆರ್ ಕ್ಯಾಮೆರಾ ಹಿಡಿದು ರಸ್ತೆಗಳು, ಸಸ್ಯಗಳು, ಪಕ್ಷಿಗಳನ್ನು ಸೂಕ್ಷ್ಮವಾಗಿ ಸೆರೆ ಹಿಡಿಯುವುದನ್ನು ಕಲಿತರು. ಮಗಳ ಫೋಟೊಗ್ರಫಿ ಹವ್ಯಾಸಕ್ಕೆ ಪ್ರೋತ್ಸಾಹ ನೀಡಿದ ಪೋಷಕರು ನುರಿತ ಛಾಯಾಗ್ರಾಹಕರಿಂದ ತರಬೇತಿ ಕೊಡಿಸಿದರು. ಆಸ್ಥೆಯಿಂದ ಫೋಟೊಗ್ರಫಿ ಕಲಿತ ನೈನಿಕಾ ಇಂದು ಅಂತರರಾಷ್ಟ್ರೀಯ ಮಟ್ಟದ ಛಾಯಾಗ್ರಾಹಕಿಯಾಗಿ ಗುರುತಿಸಿಕೊಂಡಿದ್ದಾರೆ.

ನೈನಿಕಾ 2014 ಮತ್ತು 2015ರ ನಡುವೆ 2000ಕ್ಕೂ ಹೆಚ್ಚು ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಇವುಗಳಲ್ಲಿ ನೈಸರ್ಗಿಕ, ಸಮಾಜಮುಖಿ, ಬಾಲಕಾರ್ಮಿಕ, ಮಹಿಳೆ, ಕಾರ್ಮಿಕರ ನೋವು–ನಲಿವು, ಅವರ ಕಾಯಕದ ಚಿತ್ರಗಳು ಸೇರಿವೆ. 2016ರ ಮಾರ್ಚ್‌ ನಲ್ಲಿ 150 ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟು ವಿಮರ್ಶಕರು ಮತ್ತು ವೃತ್ತಿಪರ ಛಾಯಾಗ್ರಾಹಕರ ಮೆಚ್ಚುಗೆಗೂ ಪಾತ್ರರಾಗಿದ್ದರು.

ಈ ಚಿತ್ರಗಳಿಗೆ ರತನ್-ಹಿಂದೂಸ್ತಾನ್ ಸಂಸ್ಥೆ ಅತ್ಯುತ್ತಮ ಚಿತ್ರಗಳು ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. 2016ರ ಆಗಸ್ಟ್‌ ತಿಂಗಳಲ್ಲಿ ಉತ್ತರಪ್ರದೇಶದ ಲಖನೌದಲ್ಲಿ ನಡೆದ ವಿಶ್ವ ಛಾಯಾಚಿತ್ರ ಪ್ರದರ್ಶನ ಮೇಳದಲ್ಲಿ ಭಾಗವಹಿಸಿದ ಅತಿ ಕಿರಿಯ ಛಾಯಾಗ್ರಾಹಕಿ ಎಂಬ ಖ್ಯಾತಿಗೂ ನೈನಿಕಾ ಪಾತ್ರರಾದರು. ಈ ಪ್ರದರ್ಶನದಲ್ಲಿ ‘ಹೆಣ್ಣು ಮಕ್ಕಳ ರಕ್ಷಣೆ’ ಎಂಬ ಶೀರ್ಷಿಕೆ ಅಡಿಯಲ್ಲಿ ಕೆಲವು ಚಿತ್ರಗಳನ್ನು ಪ್ರದರ್ಶನ ಮಾಡುವ ಮೂಲಕ ಬಹುಮಾನ ಪಡೆದಿದ್ದಾರೆ. ಫೋಟೊಗ್ರಫಿ ಕ್ಷೇತ್ರದಲ್ಲಿ ಹಿರಿದಾದ ಸಾಧನೆ ಮಾಡಬೇಕು ಎಂಬುದು ನೈನಿಕಾ ಅವರ ಜೀವನದ ಕನಸು.

ದಿವ್ಯಾ ಅಗರವಾಲ್
ಯುವತಿ ದಿವ್ಯಾ ಅಗರ್‌ ವಾಲ್‌ ಗೆ ಫೋಟೊಗ್ರಫಿ ಅಂದ್ರೆ ಪಂಚಪ್ರಾಣ! ರೂರ್ಕಿಯ ಐಐಟಿಯಲ್ಲಿ ಎಂಜಿನಿಯರಿಂಗ್ ಪದವಿ ಓದುತ್ತಿದ್ದ ದಿವ್ಯಾಗೆ ಸದಾ ಫೋಟೊಗ್ರಫಿಯದ್ದೆ ಧ್ಯಾನ! ಓದಿನ ಬಗ್ಗೆ ಹೆಚ್ಚು ಆಸಕ್ತಿ ತೋರದ ದಿವ್ಯಾ ಕಾಲೇಜಿನಲ್ಲಿ ಫೋಟೊಗ್ರಫಿ ಕ್ಲಬ್ ಕಟ್ಟಿಕೊಂಡು ಊರೂರು ಸುತ್ತುವುದು, ಕಾಡು ಮೇಡು ಅಲೆಯುತ್ತ ಫೋಟೊ ತೆಗೆಯತ್ತಿದ್ದರು. ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡದ ದಿವ್ಯಾ ಇಂದು ಫೋಟೊಗ್ರಫಿ ಹೇಳಿಕೊಡುವ ಸಂಸ್ಥೆಯನ್ನು ತೆರೆದಿದ್ದಾರೆ. ಅದೇ ಎಐಇ ಫೋಟೊಗ್ರಫಿ ತರಬೇತಿ ಸಂಸ್ಥೆ.

ದಿವ್ಯಾ ಅಗರವಾಲ್‌ ಉತ್ತರಾಖಂಡ ರಾಜ್ಯದ ರೂರ್ಕಿಯವರು. ಕಾಲೇಜು ದಿನಗಳಲ್ಲಿ ಪಠ್ಯ ಕಲಿಯುವುದಕ್ಕಿಂತ ಹೆಚ್ಚಾಗಿ ಫೋಟೊಗ್ರಫಿ ಕಲಿತವರು. ವಿದ್ಯಾರ್ಥಿ ದೆಸೆಯಲ್ಲೇ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಛಾಯಾಚಿತ್ರ ಕಾರ್ಯಗಾರ ಮತ್ತು ಪ್ರದರ್ಶನಗಳನ್ನು ಏಪರ್ಡಿಸುತ್ತಿದ್ದರು. ಎಂಜಿನಿಯರಿಂಗ್ ಪದವಿಯ ಕೊನೆಯ ವರ್ಷದಲ್ಲಿ ‘ಇಂಡಿಯಾ ಅನ್‌ಸೀನ್‌’ ಎಂಬ ಚಿತ್ರ ಪ್ರದರ್ಶನ ಏರ್ಪಡಿಸಿದ್ದರು. ಈ ಪ್ರದರ್ಶನಕ್ಕೆ ಭಾರತ ಸೇರಿದಂತೆ ವಿದೇಶಗಳ ನುರಿತ ಛಾಯಾಗ್ರಾಹಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು.

ಪದವಿ ಮುಗಿದ ಬಳಿಕ ಗೆಳೆಯರ ಜತೆಗೂಡಿ ಫೋಟೊಗ್ರಫಿಯಲ್ಲಿ ಆಸಕ್ತಿ ಇರುವ ಯುವಕ ಮತ್ತು ಯುವತಿಯರಿಗೆ ತರಬೇತಿ ನೀಡುವ ಎಐಇ ಫೋಟೊಗ್ರಫಿ ಸಂಸ್ಥೆ ಸ್ಥಾಪಿಸಿದರು. ಇಲ್ಲಿ ಫೋಟೊಗ್ರಫಿ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದರ ಜತೆಗೆ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ. ದೇಶದ 30 ನಗರಗಳಲ್ಲಿ ಎಐಇ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಪ್ರತಿ ವರ್ಷ ಸಾವಿರಕ್ಕೂ ಹೆಚ್ಚು ಜನರ ಫೋಟೊಗ್ರಫಿ ಕಲಿಯುತ್ತಿದ್ದಾರೆ ಎಂದು ದಿವ್ಯಾ ಹೇಳುತ್ತಾರೆ.

ಛಾಯಾಚಿತ್ರ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ತೀರ ಕಡಿಮೆ ಇದೆ. ಆಗಾಗಿ ಯುವತಿಯರನ್ನು ಹೆಚ್ಚು ಆಕರ್ಷಿಸುವ ಸಲುವಾಗಿ ನಮ್ಮ ಸಂಸ್ಥೆ ಶುಲ್ಕದಲ್ಲಿ ರಿಯಾಯಿತಿ ನೀಡುವುದರ ಜತೆಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ. ಫೋಟೊಗ್ರಫಿ ಎಂದರೆ ಕೇವಲ ಹವ್ಯಾಸವಲ್ಲ, ಇದರಿಂದ ಕೀರ್ತಿ, ಗೌರವ ಪಡೆಯುವುದರ ಜತೆಗೆ ಹಣವನ್ನು ಸಂಪಾದನೆ ಮಾಡಬಹುದು ಎಂದು ದಿವ್ಯಾ ಹೇಳುತ್ತಾರೆ.

ತಪಸ್ ಚಾಂದ್
ಅದು ಲ್ಯಾಕ್ಮೆ ಫ್ಯಾಶನ್ ಶೋ ಸಮಾರಂಭ. ಈ ಕಾರ್ಯಕ್ರಮಕ್ಕೆ ಸಾವಿರಾರು ಫ್ಯಾಷನ್ ಪ್ರಿಯರು ಬಂದಿದ್ದರು. ಇವರ ದೃಷ್ಟಿ ನೆಟ್ಟಿದ್ದು ವಿವಿಧ ವಿನ್ಯಾಸದ ಉಡುಗೆ ತೊಟ್ಟು ಬೆಕ್ಕಿನ ನಡಿಗೆಯಲ್ಲಿ ಬರುತ್ತಿದ್ದ ರೂಪದರ್ಶಿಗಳ ಮೇಲಲ್ಲ! ಬದಲಿಗೆ ಅವರ ವೈಯಾರದ ನಡಿಗೆಯನ್ನು ಕ್ಯಾಮೆರಾ ಮೂಲಕ ಸೆರೆ ಹಿಡಿಯುತ್ತಿದ್ದ ಅಂಗವಿಕಲ ಛಾಯಾಗ್ರಾಹಕ ತಪಸ್ ಕಡೆ! ಆ ರಾತ್ರಿ ಕ್ಲಿಕ್ಕಿಸಿದ್ದ ಹಲವು ಫೋಟೊಗಳು ಹಿಂದಿ ಮತ್ತು ಇಂಗ್ಲಿಷ್‌ ದಿನ ಪತ್ರಿಕೆಗಳಲ್ಲಿ ರಾರಾಜಿಸುವ ಮೂಲಕ ತಪಸ್‌ ದೇಶದ ಗಮನ ಸೆಳೆದರು.

30ರ ಹರೆಯದ ತಪಸ್ ಒಡಿಶಾದವರು. ಚಿಕ್ಕ ವಯಸ್ಸಿನಲ್ಲಿ ಬೆನ್ನುಹುರಿ ಸಮಸ್ಯೆಯಿಂದಾಗಿ ಶಾಶ್ವತ ಅಂಗವಿಕಲತೆಗೆ ಒಳಗಾದರು. ಬಳಿಕ ಅವರ ಪೋಷಕರು ಚಾಂದ್‌ನನ್ನು ಮನೆಯಿಂದ ಹೊರಗೆ ಕಳುಹಿಸಲೇ ಇಲ್ಲ! ಶಾಲೆಗೂ ಹೋಗದೇ ಚಾಂದ್ 27 ವರ್ಷಗಳನ್ನು ಒಂದೇ ಕೊಠಡಿಯಲ್ಲಿ ಕಳೆದರು! 2007ರಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಇವರಿಗೆ ವರದಾನವಾಯಿತು.

ಯಾಕೆಂದರೆ ಇವರು ಮನೆಯಿಂದ ಹೊರ ಬಂದು ಮೊಟ್ಟ ಮೊದಲ ಬಾರಿಗೆ ತನ್ನ ಗೆಳೆಯನ ಜೊತೆ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿದರು. 

ಈ ವೇಳೆ ಚಾಂದ್‌ ದೃಷ್ಟಿ ಕ್ರಿಕೆಟ್‌ ಪಂದ್ಯ ಚಿತ್ರಿಕರಿಸುತ್ತಿದ್ದ ಛಾಯಾಚಿತ್ರಗ್ರಾಹಕರ ಮೇಲೆ ಬಿತ್ತು. ನಂತರ ಫೋಟೊಗ್ರಫಿ ಕಲಿಯುವ ಯೋಚನೆ ಮಾಡಿದರೂ ಅವರ ಮನೆಯವರು ಅವಕಾಶ ಮಾಡಿಕೊಡಲಿಲ್ಲ. ಕೊನೆಗೆ ಚಾಂದ್ ತನ್ನ ಸಹೋದರಿ ನೆಲೆಸಿದ್ದ ಹೈದರಾಬಾದ್‌ಗೆ ತೆರಳಿ ಫೋಟೊಗ್ರಫಿ ಕಲಿತರು.

ಇಂದು ಛಾಯಾಗ್ರಹಣವನ್ನು ವೃತ್ತಿಯಾಗಿಸಿಕೊಂಡಿರುವ ಚಾಂದ್ ಕಳೆದ ಮೂರು ವರ್ಷಗಳಲ್ಲಿ ಮೂರು ಸಾವಿರಾಕ್ಕೂ ಹೆಚ್ಚು ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಗಾಲಿಕುರ್ಚಿಯಲ್ಲಿ ಕುಳಿತು ಕತ್ತಿಗೆ ಕ್ಯಾಮೆರಾ ನೇತು ಹಾಕಿಕೊಂಡು ರಸ್ತೆಗೆ ಇಳಿದರೆ ಮನೋಹರ ಚಿತ್ರಗಳನ್ನು ತೆಗೆಯುವ ಕಲೆ ಚಾಂದ್‌ಗೆ ಕರಗತವಾಗಿದೆ ಎಂದು ಚಾಂದ್‌ ಸಹೋದರಿ ಹೇಳುತ್ತಾರೆ. ಚಾಂದ್ ಛಾಯಾಚಿತ್ರಗಳು ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಜನಪ್ರಿಯತೆ ಗಳಿಸಿವೆ. ರಿಸ್ಕ್ ತೆಗೆದುಕೊಂಡು ಒಂಟಿಯಾಗಿ ಕಾಡಿಗೆ ತೆರಳಿ ಕಾಡುಪ್ರಾಣಿಗಳ ಚಿತ್ರಗಳನ್ನು ಚಾಂದ್ ಸೆರೆಹಿಡಿದಿದ್ದಾರೆ. ಅವರ ಈ ಸಾಧನೆಗೆ ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT