ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡಿಗೆಯ ಕಡು ವ್ಯಾಮೋಹಿ

Last Updated 16 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮಗೆ ಕಾಲುಗಳಿವೆ; ಬೇರುಗಳಿಲ್ಲ! ಇದಕ್ಕಿಂತ ಬೇರೇನು ಐಡಿಯಾ ಬೇಕು, ನಡೆಯುತ್ತ ಮುಂದೆ ಸಾಗಲು! ಆದರೆ ಒಂದೊಳ್ಳೆ ಉದ್ದೇಶ ಇದ್ದರೆ ಆ ನಡಿಗೆಗೆ ಬೇರೊಂದು ಉದಾತ್ತ ಅರ್ಥ ಬಂದೀತು...’

ಬ್ರಿಟನ್ನಿನ ಯುವಕ ಡೇವಿಡ್ ಅತೊವ್ (27) ‘ನಡೆದಾಡುವ ಸಂತಸ’ವನ್ನು (ವಾಕ್ ಆಫ್ ಜಾಯ್) ಸಾಮಾಜಿಕ ಉದ್ದೇಶಕ್ಕೆ ಬಳಸಿಕೊಂಡ ಬಗೆ ಹೀಗೆ ಭಿನ್ನ. ಈ ವಯಸ್ಸಿನ ಯುವಕ, ಯುವತಿಯರು ತಮ್ಮ ಜೀವನದ ಮುಖ್ಯ ಘಟ್ಟದ ಅವಧಿಯನ್ನು ಹಾಳು ಮಾಡಿಕೊಂಡಿದ್ದೂ ನೋಡಿದ್ದೇವೆ; ಇರುವ ಉದ್ಯೋಗ ತೊರೆದು ಸಮಾಜಕ್ಕೆ ಒಳಿತು ಮಾಡುವ ಕೆಲಸಕ್ಕೆ ಮುಂದಾಗಿದ್ದನ್ನೂ ನೋಡಿದ್ದೇವೆ. ಈ ಪಟ್ಟಿಯ ಎರಡನೇ ಸಾಲಿಗೆ ಸೇರುವ ಡೇವಿಡ್, ನಡೆಯುತ್ತ ನಡೆಯುತ್ತ ಹೊಸ ಹಾದಿಯನ್ನು ಹುಡುಕುತ್ತ ಸಾಗುತ್ತಿದ್ದಾರೆ.

ನಡಿಗೆ- ಈ ಪದದ ಕಡುವ್ಯಾಮೋಹಿ ಡೇವಿಡ್. ಅವರು ಈವರೆಗೆ ಸಾವಿರಾರು ಕಿಲೋ ಮೀಟರ್ ನಡೆದೇ ಕ್ರಮಿಸಿದ್ದಾರೆ. ಎರಡೇ ಕಾಲುಗಳು ಅಥವಾ ಪಾದಗಳು ಮಾವನ ಸಮುದಾಯದ ವಿಕಾಸದಲ್ಲಿ ವಹಿಸಿದ ಮಹತ್ವ ಗಮನಿಸಿದರೆ ಈಗ ಅವುಗಳನ್ನು ಎಷ್ಟರಮಟ್ಟಿಗೆ ಕಡೆಗಣಿಸಲಾಗಿದೆ ಎಂಬುದು ಅರಿವಾದೀತು. ಇದನ್ನೇ ಪ್ರತಿಪಾದಿಸುವ ಡೇವಿಡ್, ‘ನಮಗೆ ಸಿಕ್ಕ ಇಂಥ ಅದ್ಭುತ ಕೊಡುಗೆಯನ್ನು ಯಾಕೋ ನಿರ್ಲಕ್ಷ್ಯಿಸಿಬಿಟ್ಟಿದ್ದೇವೆ! ನಮ್ಮ ಪೂರ್ವಜರು ಈ ಎರಡು ಕಾಲುಗಳಿಂದ ಜಗತ್ತಿನಾದ್ಯಂತ ಹಾಕಿದ ಹೆಜ್ಜೆಗಳನ್ನಾದರೂ ಯಾಕೆ ಮರೆತಿದ್ದೇವೆ!’ ಎಂದು ಉದ್ಗರಿಸುತ್ತಾರೆ.

ಡೇವಿಡ್‍ಗೆ ನಡೆಯುವುದು ಹೊಸತೇನಲ್ಲ. ಆಸ್ಟ್ರೇಲಿಯಾದಲ್ಲಿ ಕಂಪೆನಿಯೊಂದರ ಜಾಹೀರಾತಿಗಾಗಿ ಕರಪತ್ರಗಳನ್ನು ಹಂಚುತ್ತ ರಸ್ತೆ ರಸ್ತೆ ಅಲೆದಾಡುವುದು ಅವರ ಉದ್ಯೋಗವಾಗಿತ್ತು. ಹೀಗೆ ನಿತ್ಯ ನಡೆಯುತ್ತಿದ್ದ ದೂರ ಸುಮಾರು 50 ಕಿ.ಮೀ. ಒಂದಷ್ಟು ತಿಂಗಳ ಕಾಲ ಅವರು ಇದೇ ಕೆಲಸ ಮಾಡಿದರು. ಒಂದು ದಿನ ಕೆಲಸ ಮುಗಿಸಿ ಮನೆಗೆ ಹೋದಾಗ ಅವರ ಸ್ನೇಹಿತ ಈ ತರಹ ಒಂದೇ ಪಟ್ಟಣದಲ್ಲಿ ನಡೆದಾಡುವ ಬದಲಿಗೆ ನೇರವಾಗಿ ನಡೆಯುತ್ತ ದೇಶ ದೇಶ ನೋಡಬಹುದಲ್ಲ?’ ಎಂದು ತಮಾಷೆ ಮಾಡಿದ.

ಆ ರಾತ್ರಿ ಅದನ್ನೇ ಗಂಭೀರವಾಗಿ ಯೋಚಿಸಿದ ಡೇವಿಡ್, ಮರುದಿನ ಆ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು ‘ದೇಶ- ದೇಶ ಸುತ್ತಲು ಇದೋ ಹೊರಟೆ...’ ಎಂದು ಹೇಳಿ ಸ್ನೇಹಿತನನ್ನು ದಂಗುಬಡಿಸಿದರು! ಇದಕ್ಕಾಗಿಯೇ ಅವರು ಸ್ಥಾಪಿಸಿದ್ದು- ‘ನೊಮ್ಯಾಡಿಕ್ ಲಯನ್’ ಎಂಬ ಸಂಸ್ಥೆಯನ್ನು. ಸುಮ್ಮನೇ ಹೆಜ್ಜೆ ಹಾಕುವ ಬದಲಿಗೆ ಆ ನಡಿಗೆಗೆ ಒಂದು ಅರ್ಥ ಕೊಡುವುದೂ ಡೇವಿಡ್‍ನ ಮನದಲ್ಲಿ ಮೂಡಿತ್ತು. ಅದಕ್ಕಾಗಿ ಅವರು ಸಾಕಷ್ಟು ಯೋಚಿಸಿದರು.

ಇದಕ್ಕಾಗಿ ಮೊದಲು ಮಲೇಷ್ಯಾದ ಮಳೆಕಾಡುಗಳ ಬಗ್ಗೆ ಜಾಗೃತಿ ಮೂಡಿಸಲು ಪಾದಯಾತ್ರೆ ಶುರು ಮಾಡಿದರು. ಅಲ್ಲಿಂದ ಬುರ್ನ್ರೈದಲ್ಲಿ ಅದೇ ವಿಷಯದ ಮೇಲೆ ಪಾದಯಾತ್ರೆ ನಡೆಸಿದರು. ಮೂರನೇ ಸಲ ಇಂಗ್ಲೆಂಡಿನ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಿಗೆ ಸಂಗೀತ ಹಾಗೂ ಕಲೆ ಕಲಿಕೆಗೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಪಾದಯಾತ್ರೆ ಕೈಗೊಂಡರು. ಹೀಗೆ ಸುಮಾರು ಮೂರೂವರೆ ಸಾವಿರ ಕಿ.ಮೀ ದೂರ ಹೆಜ್ಜೆ ಹಾಕಿದ ಡೇವಿಡ್‍ಗೆ ನಾಲ್ಕನೇ ಸಲ ಕಂಡಿದ್ದು ಭಾರತ.

ಇದೇನೂ ಆತನ ಮೊದಲ ಭಾರತ ಭೇಟಿಯಲ್ಲ. ಈಗಾಗಲೇ ಮೂರು ಸಲ ಇಲ್ಲಿಗೆ ಬಂದು ಹೋಗಿದ್ದಾರೆ. ‘ನಾನು ಐದು ವರ್ಷಗಳ ಹಿಂದೆ ಪಾಂಡಿಚೇರಿಯ ಅರೊವಿಲ್‍ನಲ್ಲಿ ಪರ್ಮಾಕಲ್ಚರ್ ಕೃಷಿ ವಿಧಾನದ ತರಬೇತಿ ಪಡೆಯಲು ಬಂದಿದ್ದೆ. ಅದಾದ ಬಳಿಕ ದಕ್ಷಿಣ ಭಾರತದಲ್ಲಿ ಮೂರು ತಿಂಗಳ ಕಾಲ ನಡೆದಾಡುತ್ತಲೇ ಸುಸ್ಥಿರ ಕೃಷಿ ಅನುಸರಿಸುತ್ತಿದ್ದ ರೈತರನ್ನು ಭೇಟಿ ಮಾಡಿದ್ದೆ’ ಎಂದು ನೆನಪಿಸಿಕೊಳ್ಳುವ ಡೇವಿಡ್, ಇಲ್ಲಿ ಕಾಣಿಸಿದ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ, ಸಾವಯವ ಕೃಷಿ, ಸಾಂಪ್ರದಾಯಿಕ ಜಲಸಂರಕ್ಷಣಾ ವಿಧಾನಗಳ ಜತೆಗೆ ಅಗಾಧ ಪ್ರಮಾಣದ ಕೃಷಿ ಜೀವ ವೈವಿಧ್ಯ ಕಂಡು ಬೆರಗಾಗಿದ್ದನ್ನು ಖುಷಿಯಿಂದ ಹಂಚಿಕೊಳ್ಳುತ್ತಾರೆ. ಈ ಸಲ ಪಾದಯಾತ್ರೆ ಮಾಡಲು ನಿರ್ಧರಿಸಿದ ಕೂಡಲೇ ಭಾರತ ತನ್ನನ್ನು ಕೈಬೀಸಿ ಕರೆಯಿತು ಎನ್ನುತ್ತಾರೆ ಡೇವಿಡ್.

ನಡಿಗೆಯನ್ನು ಸಂತಸದಾಯಕ, ಉಲ್ಲಾಸದಾಯಕ, ಆಹ್ಲಾದಕರ ಚಟುವಟಿಕೆ ಎಂದು ಬಣ್ಣಿಸುತ್ತಾರೆ ಡೇವಿಡ್. ಅದಕ್ಕೆ ತಮ್ಮದೇ ವಿಶ್ಲೇಷಣೆಯನ್ನು ಹೀಗೆ ಕೊಡುತ್ತಾರೆ: ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಭೇಟಿ ಕೊಡುವಾಗ ನಡೆಯುವುದನ್ನು ಆಯ್ಕೆ ಮಾಡಿಕೊಂಡರೆ ಅದರಿಂದ ಏನೆಲ್ಲ ಪ್ರಯೋಜನಗಳಿವೆ! ಜನರನ್ನು ಭೇಟಿ ಮಾಡುತ್ತ, ಅವರ ಕಷ್ಟ ಸುಖ ಅರಿಯುತ್ತ, ಸುತ್ತಲೂ ಕಾಣುವ ಸ್ಥಿತಿಯನ್ನು ಪರಿಶೀಲಿಸುತ್ತ ಸಾಗಿದರೆ ಹೊಸದೊಂದು ಜಗತ್ತು ನಮ್ಮೆದುರು ತೆರೆದುಕೊಳ್ಳುತ್ತದೆ. ವೇಗ ಎಂಬ ಸೌಲಭ್ಯ ನಮ್ಮೆದುರು ಕಾಣಿಸಿದ ದಿನದಿಂದ ಏನೆಲ್ಲ ಸಂತಸವನ್ನು ಕಳೆದುಕೊಂಡಿದ್ದೇವೆ, ಗೊತ್ತೇ? ಅದರಲ್ಲೂ ಭಾರತದಂಥ ದೇಶವನ್ನು ನಡೆಯುತ್ತ ಅರಿಯುವುದು ಒಂದು ಸುಂದರ ಅನುಭವ. ಹಾಗೆಂದು ಇಡೀ ಭಾರತವನ್ನು ಅರಿಯಲು ಏಳೆಂಟು ಜನ್ಮವಾದರೂ ಬೇಕು. ಅಷ್ಟು ಸಮೃದ್ಧತೆಯ ಆಗರ ಇದು.

ಭಾರತದಲ್ಲಿ ಹಸಿರು ಕ್ರಾಂತಿಯ ತರುವಾಯ ಕೃಷಿ ಬಿಕ್ಕಟ್ಟು ಗಂಭೀರವಾಗಿರುವುದು ಡೇವಿಡ್‍ಗೆ ಗೊತ್ತಿದೆ. ಕೃಷಿ ಸಮೃದ್ಧವಾಗಿದ್ದ ಹಾಗೂ ಜಗತ್ತಿಗೆ ಕೃಷಿ ಪಾಠ ಹೇಳಿಕೊಡುವ ಸ್ಥಿತಿಯಲ್ಲಿದ್ದ ಭಾರತವು ಯಾವುದೋ ಹಂತದಲ್ಲಿ ಕೆಳ ಜಾರಿದ್ದೂ ಅರಿವಿದೆ. ಈಗಂತೂ ರೈತರ ಆತ್ಮಹತ್ಯೆ ಇಲ್ಲದ ದಿನವೇ ಇಲ್ಲ ಎಂಬಂತಾದ ಸ್ಥಿತಿಯಲ್ಲಿ ಭಾರತದ ಕೃಷಿವಲಯ ಆತಂಕದ ಕ್ಷಣ ಎದುರಿಸುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದ ಗತಿ ಏನು? ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಡೇವಿಡ್ ಭಾರತ ಪಾದಯಾತ್ರೆ ನಡೆಸುತ್ತಿದ್ದಾರೆ.

‘ಯುನೈಟೆಡ್ ಸಿಖ್’ ಎಂಬ ಅಂತರರಾಷ್ಟ್ರೀಯ ಸಂಘಟನೆ ಸಹಯೋಗದಲ್ಲಿ ‘ರೆಸ್ಕ್ಯೂ ಎ ಫ್ಯಾಮಿಲಿ’ ಯೋಜನೆಗೆ ದೇಣಿಗೆ ಸಂಗ್ರಹಿಸಲು ಪಾದಯಾತ್ರೆ ನಡೆಸುತ್ತಿರುವ ಡೇವಿಡ್‍ಗೆ ಜತೆಯಾಗಿರುವವರು ಪಂಜಾಬಿನ ಜಸ್ವೀರ್ ಸಿಂಗ್ ಹಾಗೂ ಬಹದೂರ್ ಸಿಂಗ್. ಪಂಜಾಬ್‍ನ ಇನ್ನೂರು ರೈತ ಕುಟುಂಬಗಳಿಗೆ (ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಸದಸ್ಯರಿಗೆ) ನಾಲ್ಕು ವರ್ಷಗಳವರೆಗೆ ಪ್ರತಿ ತಿಂಗಳೂ ಸಾವಿರ ರೂಪಾಯಿ ಮಾಸಾಶನ ದೊರಕುವಂತೆ ಮಾಡುವುದು ಯಾತ್ರೆಯ ಉದ್ದೇಶ. ಕರ್ನಾಟಕದಲ್ಲಿ ‘ಸಹಜ ಸಮೃದ್ಧ’ ಬಳಗ ಹಾಗೂ ‘ಕನೆಕ್ಟ್ ಫಾರ್ಮರ್‌’ ಸಂಸ್ಥೆ ಡೇವಿಡ್ ಪಾದಯಾತ್ರೆಗೆ ಸಹಯೋಗ ನೀಡುತ್ತಿವೆ.

ಸುಸ್ಥಿರ ಕೃಷಿ ವಿಧಾನಗಳನ್ನು ಅನುಸರಿಸಿ ಯಶಸ್ವಿಯಾದ ಸಾವಯವ ಕೃಷಿಕರ ಜತೆ ಚರ್ಚೆ, ದೇಸಿ ಕೃಷಿ ಬೆಳೆಗಳ ಪರಿಚಯವನ್ನು ಡೇವಿಡ್ ಮಾಡಿಕೊಳ್ಳಲಿದ್ದಾರೆ. ರಾಜ್ಯದಲ್ಲಿ ಪಾದಯಾತ್ರೆ ಮಾಡುವ ದಾರಿಯುದ್ದಕ್ಕೂ ಸಾವಯವ ಕೃಷಿಕರೇ ಡೇವಿಡ್ ಅವರ ಆತಿಥೇಯರಾಗಲಿದ್ದಾರೆ.

ಜನರ ಜತೆ ಸಂವಹನ
ನಾಲ್ಕನೇ ಪಾದಯಾತ್ರೆಯ ಆರಂಭದಲ್ಲಿ ತಮಿಳುನಾಡು ಹಾಗೂ ಕೇರಳದಲ್ಲಿ ಪಡೆದ ಅನುಭವಗಳು ಅವರಿಗೆ ಸಂತಸ ಮೂಡಿಸಿವೆ. ‘ಭತ್ತ ಉಳಿಸಿ ಆಂದೋಲನ’ದ ಜತೆ ಕೆಲಸ ಮಾಡುತ್ತಿರುವ ಭತ್ತದ ಕೃಷಿಕರನ್ನು ಅವರು ಭೇಟಿ ಮಾಡಿದ್ದಾರೆ. ‘ನಾನು ನೋಡಿದ್ದನ್ನು ಬಹುತೇಕವಾಗಿ ನಿತ್ಯವೂ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಿದ್ದೇನೆ. ಇದು ಕೃಷಿ ಸಂಕಟಕ್ಕೆ ಪರಿಹಾರ ಕೊಡಬಹುದು ಅಥವಾ ಆ ದಿಕ್ಕಿನತ್ತ ದಾರಿ ತೋರಿಸಲೂಬಹುದು’ ಎನ್ನುತ್ತಾರೆ ಡೇವಿಡ್.

ನಡೆಯುತ್ತ ಸಾಗುತ್ತಿದ್ದರೆ ವಾತಾವರಣದ ವೈಪರೀತ್ಯ ಎದುರಿಸುವುದು ಸಮಸ್ಯೆ ಎನಿಸುವು ದಿಲ್ಲವೇ? ಈ ಪ್ರಶ್ನೆಗೆ ಡೇವಿಡ್ ಜೋರಾಗಿ ನಕ್ಕುಬಿಡುತ್ತಾರೆ. ‘ಅದನ್ನು ಸಮಸ್ಯೆ ಎನ್ನುವುದಕ್ಕಿಂತ ಸವಾಲು ಎಂದು ಪರಿಗಣಿಸುತ್ತೇನೆ. ಮಳೆ- ಗಾಳಿ ಕೆಲವೊಮ್ಮೆ ದಿಢೀರನೇ ಎದುರಾಗಬಹುದು. ಆದರೆ ಅದೇನೂ ಕೆಟ್ಟದ್ದಲ್ಲ. ಹೊಂದಿಕೊಂಡು ಹೋಗಬೇಕಷ್ಟೇ’ ಎನ್ನುತ್ತಾರೆ.

ಈ ಪಾದಯಾತ್ರೆಗೆ ಡೇವಿಡ್ ಕೊಟ್ಟಿರುವ ಹೆಸರು ‘ವಾಕ್ ಆಫ್ ಜಾಯ್’. ನಡೆಯುವುದೆಂದರೆ ಸಂತಸ ಮೂಡಿಸುವ ಚಟುವಟಿಕೆಯಂತೆ. ಸದ್ಯ ಮೈಸೂರಿನಿಂದ ಹೊರಟು ಬೆಂಗಳೂರು ರಸ್ತೆಯಲ್ಲಿರುವ ಡೇವಿಡ್, ‘ಐ ಆಮ್ ಎಂಜಾಯಿಂಗ್ ದ ವಾಕ್... ಇಫ್ ಯೂ ವಾಂಟ್ ಟು ಫೀಲ್ ದ ಜಾಯ್, ದೆನ್ ಕಮ್ ವಿತ್ ಮಿ’ ಎಂದು ಆಹ್ವಾನ ಕೊಡುತ್ತಾರೆ.

ಕರ್ನಾಟಕದಲ್ಲಿ ಹೆಜ್ಜೆ ಗುರುತು
ಸುಸ್ಥಿರ ಕೃಷಿ ಕುರಿತು ಜಾಗೃತಿ, ಗ್ರಾಹಕರ ಜತೆ ರೈತರ ಸಂಪರ್ಕ ಹಾಗೂ ‘ರೆಸ್ಕ್ಯೂ ಎ ಫ್ಯಾಮಿಲಿ’ ಅಭಿಯಾನಕ್ಕೆ ದೇಣಿಗೆ ಸಂಗ್ರಹಿಸುವ ಉದ್ದೇಶದಿಂದ ಡೇವಿಡ್ ಅತ್ತೊವ್ ಭಾರತದಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ. ಪ್ರಸ್ತುತ ಕೇರಳದ ಮೂಲಕ ರಾಜ್ಯವನ್ನು ಪ್ರವೇಶಿಸಿರುವ ಅವರು, ಮುಂದಿನ ಒಂದು ತಿಂಗಳ ಕಾಲ ಕರ್ನಾಟಕದಲ್ಲಿ ಹೆಜ್ಜೆ ಹಾಕಲಿದ್ದಾರೆ.

ಪಂಜಾಬಿನ ಪಟಿಯಾಲಾದ ಯೂತ್ ಅಂಡ್ ಕಲ್ಚರಲ್ ಡೆವಲಪ್‍ಮೆಂಟ್ ಅಕಾಡೆಮಿ ಮತ್ತು ದೇವ ರತ್ನ ಟ್ರಸ್ಟ್ ಸಹಯೋಗ ದೊಂದಿಗೆ ಡೇವಿಡ್ ಈ ಪಾದಯಾತ್ರೆ ಕೈಗೊಂಡಿದ್ದಾರೆ. ಜುಲೈ 15ರಂದು ಕನ್ಯಾಕುಮಾರಿಯಿಂದ ಹೊರಟಿರುವ ಡೇವಿಡ್, 13 ರಾಜ್ಯಗಳಲ್ಲಿ 10 ತಿಂಗಳ ಕಾಲ ಪಾದಯಾತ್ರೆ ನಡೆಸಿ 2018ರ ಮೇ ತಿಂಗಳಲ್ಲಿ ಪಂಜಾಬಿನ ಅಮೃತಸರ ತಲುಪಲಿದ್ದಾರೆ.

ಭಾರತದಲ್ಲಿ ಎರಡು ಮಾರ್ಗಗಳ ಮೂಲಕ ಪಾದಯಾತ್ರೆ ಮಾಡುವ ಡೇವಿಡ್ ನಾಲ್ಕೂ ದಿಕ್ಕುಗಳನ್ನು ಜೋಡಿಸುವ ನಕ್ಷೆ ರೂಪಿಸಿದ್ದಾರೆ. ಮೊದಲ ಐದು ತಿಂಗಳ ಅವಧಿಯಲ್ಲಿ ಡಿಸೆಂಬರ್ 2017ರವರೆಗೆ ತಮಿಳುನಾಡು, ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ್ ರಾಜ್ಯ ಕ್ರಮಿಸಲಿದ್ದಾರೆ. ಜನವರಿ 2018ರಲ್ಲಿ ಶುರುವಾಗುವ ಎರಡನೇ ಹಂತದಲ್ಲಿ ಕೋಲ್ಕತ್ತದಿಂದ ಶುರುವಾಗುವ ಪಾದಯಾತ್ರೆಯು ಬಿಹಾರ್, ಜಾರ್ಖಂಡ್, ಉತ್ತರ ಪ್ರದೇಶ ಹಾಗೂ ಹರಿಯಾಣದ ಮೂಲಕ ಪಂಜಾಬ್ ತಲುಪಿ ಅಮೃತಸರದಲ್ಲಿ ಮುಕ್ತಾಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT