ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೋದ್ರಾ’ ಹೆಸರಿನಲ್ಲಿ ದಕ್ಷಿಣ ಕನ್ನಡದ ಪ್ರೇಮಕಥೆ

Last Updated 17 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಸತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ಅಭಿನಯದ ಹೊಸ ಸಿನಿಮಾವೊಂದು ಸೆಟ್ಟೇರಿದೆ. ಸಿನಿಮಾ ಸೆಟ್ಟೇರಿರುವುದರಲ್ಲಿ ವಿಶೇಷವೇನೂ ಇಲ್ಲ. ಆದರೆ, ಸಿನಿಮಾದ ಹೆಸರು ಹಾಗೂ ಕಥಾವಸ್ತುವಿನಲ್ಲಿ ತುಸು ವಿಶೇಷ ಇದೆ.

ಅಂದಹಾಗೆ, ಈ ಸಿನಿಮಾದ ಹೆಸರು ‘ಗೋದ್ರಾ’. ಈ ಪದ ಕೇಳಿದ ತಕ್ಷಣ ನೆನಪಿಗೆ ಬರುವುದು ಗುಜರಾತ್‌ನಲ್ಲಿ 2002ರಲ್ಲಿ ನಡೆದ ಗೋಧ್ರಾ ಹತ್ಯಾಕಾಂಡ ಹಾಗೂ ನಂತರದ ಕೋಮುಗಲಭೆ. ಆ ಹತ್ಯಾಕಾಂಡ ಹಾಗೂ ಕೋಮುಗಲಭೆಗಳ ಕಥೆ ಹೇಳುವ ಚಿತ್ರ ಇದಲ್ಲವಂತೆ. ಆದರೂ ಈ ಸಿನಿಮಾಕ್ಕೆ ‘ಗೋದ್ರಾ’ ಎಂಬ ಹೆಸರಿಡಲಾಗಿದೆ.

ಇದೇಕೆ ಹೀಗೆ ಎಂದು ಪ್ರಶ್ನಿಸಿದರೆ, ‘ಗೋದ್ರಾ ಘಟನೆಯ ತೀವ್ರತೆಗೂ, ಈ ಸಿನಿಮಾದ ಕಥಾವಸ್ತುವಿನ ತೀವ್ರತೆಗೂ ಸಾಮ್ಯ ಇದೆ. ಹಾಗಾಗಿ ಈ ಹೆಸರು’ ಎಂಬ ಉತ್ತರ ನೀಡುತ್ತಾರೆ ನಿರ್ದೇಶಕ ನಂದೀಶ್. ಈ ಸಿನಿಮಾದ ಚಿತ್ರೀಕರಣ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇದೇ 25ರಿಂದ ಆರಂಭವಾಗಲಿದೆಯಂತೆ. ಸತೀಶ್ ಅವರು ಈ ಚಿತ್ರಕ್ಕೆಂದೇ ದಾಡಿ ಬಿಟ್ಟಿದ್ದಾರೆ!

‘ಗೋದ್ರಾ’ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ‘ನಿರ್ದೇಶಕರು ನನಗೆ ಎರಡು ವರ್ಷಗಳ ಹಿಂದೆ ಈ ಕಥೆ ಹೇಳಿದ್ದರು. ಕೆಲವು ವಾರಗಳ ಹಿಂದೆ ಮತ್ತೆ ಇದರ ಕಥೆ ಹೇಳಿದರು. ಆಸಕ್ತಿಕರವಾಗಿದೆ ಅಂತ ಅನಿಸಿತು’ ಎನ್ನುತ್ತ ಮಾತಿಗೆ ಇಳಿದ ಸತೀಶ್, ‘ಈ ಸಿನಿಮಾಕ್ಕಾಗಿ ನಾವು ಹೊಸ ಮುಖಗಳನ್ನು ಹುಡುಕುತ್ತಿದ್ದೇವೆ’ ಎಂದರು.

(ನಂದೀಶ್)

ಕ್ಲೈಮ್ಯಾಕ್ಸ್‌ ಭಾಗವನ್ನು ಮೊದಲಿಗೆ, ಸಿನಿಮಾದ ಆರಂಭದ ಭಾಗವನ್ನು ಕೊನೆಯಲ್ಲಿ ಚಿತ್ರೀಕರಿಸಲಾಗುವುದು ಎಂದರು ಸತೀಶ್. ಏಕೆ ಹೀಗೆ ಎಂದು ಪ್ರಶ್ನಿಸಿದರೆ, ‘ಆರಂಭದ ಭಾಗಕ್ಕಾಗಿ ನಾನು ತುಸು ತೆಳ್ಳಗಾಗಬೇಕು’ ಎಂದು ಉತ್ತರಿಸಿದರು. ಸಿನಿಮಾದ ಕೆಲವು ಭಾಗಗಳ ಚಿತ್ರೀಕರಣ ಛತ್ತೀಸಗಡದಲ್ಲಿಯೂ ನಡೆಯಲಿದೆ. ಪಾತ್ರಧಾರಿಗಳಿಗಾಗಿ ಅಲ್ಲಿಯೂ ಆಡಿಷನ್ ನಡೆಸಲಾಗುವುದು ಎಂದರು.

ಈ ಚಿತ್ರದಲ್ಲಿ ಸತೀಶ್ ಹಾಗೂ ಶ್ರದ್ಧಾ ಅವರು ಕಾಲೇಜೊಂದರಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಾಗಿರುತ್ತಾರೆ, ಇಬ್ಬರೂ ಪರಸ್ಪರ ಪ್ರೀತಿಸುತ್ತಿರುತ್ತಾರೆ. ಸಮಾಜದಲ್ಲಿ ನಡೆಯುವ ಕೆಲವು ಘಟನೆಗಳನ್ನು ಕಂಡು ಇವರು ಕ್ರಾಂತಿಕಾರಿಗಳಾಗಿ ಬದಲಾಗುತ್ತಾರೆ ಎನ್ನುವ ಮೂಲಕ ಕಥೆಯ ಎಳೆಯೊಂದನ್ನು ಬಹಿರಂಗಪಡಿಸಿದರು ನಿರ್ದೇಶಕ ನಂದೀಶ್. ಇದು ಕಮರ್ಷಿಯಲ್ ಹಾಗೂ ಪ್ರಯೋಗಾತ್ಮಕ ಸಿನಿಮಾ ಎಂದು ಅವರು ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT