ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇದರಲ್ಲಿ ಅಸಭ್ಯವೇನಿದೆ?’

Last Updated 17 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನನ್ನ ಫೋಟೊ ಅಸಭ್ಯವಾಗಿದೆ ಎಂದು ಯಾರು ಹೇಳಿದ್ದು? ಹಾಗೆ ಹೇಳಲು ಸಾಧ್ಯವೇ ಇಲ್ಲ. ಯಾಕೆಂದರೆ ಅದರಲ್ಲಿ ಅಸಭ್ಯವಾದುದು ಏನೂ ಇಲ್ಲ’... ಹೀಗೆ ಸಂದರ್ಶನವೊಂದರಲ್ಲಿ ಕಿಡಿಕಾರಿದವರು ಇಶಾ ಗುಪ್ತಾ.

ಕಳೆದ ವಾರ ಇಶಾ ಗುಪ್ತಾ ಅವರ ಟಾಪ್‌ಲೆಸ್‌ ಫೋಟೊ ಶೂಟ್‌ ವೈರಲ್‌ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊ ಸಾವಿರಾರು ಲೈಕ್ ಮತ್ತು ಶೇರ್ ಪಡೆದಿತ್ತು. ಹಾಗೇ ಈ ಫೋಟೊ ಕುರಿತು ಹಲವರು ಟೀಕೆ ಮಾಡಿದ್ದರು. ಕೆಲವೇ ಗಂಟೆಯಲ್ಲಿ ಇಶಾ ಅವರ ಇನ್‌ಸ್ಟಾಗ್ರಾಮ್‌ ಪೇಜ್‌ ಅಸಭ್ಯ ಕಮೆಂಟ್‌ಗಳಿಂದ ತುಂಬಿಹೋಗಿತ್ತು. ಆದರೆ ಇದರಿಂದ ಇಶಾ ಅವರೇನೂ ವಿಚಲಿತರಾದಂತೆ ಕಾಣಲಿಲ್ಲ. ಈ ಫೋಟೊಗಳು ಅಸಭ್ಯವಾಗೇನೂ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ತಮ್ಮ ಫೋಟೊ ಶೂಟ್‌ಗೆ ಬಂದ ಟ್ರೋಲ್, ಕಮೆಂಟ್‌ಗಳಿಗೆ ಪ್ರತಿಕ್ರಿಯಿಸಿರುವ ಇಶಾ ‘ನಮ್ಮ ದೇಶದಲ್ಲಿ ಏನೇ ಆದರೂ ಮಹಿಳೆಯರನ್ನು ಬೈಯುವುದು ನಿಲ್ಲುವುದಿಲ್ಲ. ಹೆಣ್ಣು ಮಗು ಹುಟ್ಟಿದರೆ ಅದಕ್ಕೂ ತಾಯಿಯನ್ನೇ ಬೈಯುತ್ತಾರೆ, ಅತ್ಯಾಚಾರವಾದರೂ ಹುಡುಗಿಯರನ್ನು ಬೈಯುತ್ತಾರೆ. ಯಾವುದಕ್ಕೆ ಬೈಗುಳ ನಿಲ್ಲುತ್ತದೆ ಹೇಳಿ. ನಾನೇನೂ ಇದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವಕಾಶ ಸಿಕ್ಕರೆ ಸಾಕು ಸೆಲೆಬ್ರಿಟಿಗಳನ್ನು ಬೈಯಲು ಹಲವರು ಕಾಯುತ್ತಿರುತ್ತಾರೆ’ ಎಂದು ಕಿಡಿಕಾರಿದ್ದಾರೆ.

‘ನಾನು ರೂಪದರ್ಶಿಯಾಗಿದ್ದಾಗ ಇಂಥ ಟಾಪ್‌ಲೆಸ್‌ ಫೋಟೊ ಶೂಟ್‌ ಮಾಡಿಸಿದ್ದೇನೆ. ನೇಕೆಡ್‌ (ಬೆತ್ತಲೆ) ಫೋಟೊಶೂಟ್‌ಗಳನ್ನೂ ಕೂಡ ಮಾಡಿಸಿದ್ದೇನೆ. ಆವಾಗ ಯಾರೂ ಏಕೆ ಮಾತನಾಡಲಿಲ್ಲ, ಟಾಪ್‌ಲೆಸ್‌ ಫೋಟೊ ಶೂಟ್‌ ಅನ್ನು ಅಸಭ್ಯವಾಗೇ ನೋಡಬೇಕಾಗಿಲ್ಲ. ಅದಕ್ಕೊಂದು ಕಲಾತ್ಮಕ ಸ್ಪರ್ಶವಿದೆ. ಅಸಭ್ಯತೆ ಮತ್ತು ಸೌಂದರ್ಯದ ನಡುವೆ ತೆಳುವಾದ ಗೆರೆ ಇದೆ ಅದನ್ನು ಅರ್ಥ ಮಾಡಿಕೊಳ್ಳಬೇಕು. ಈ ಫೋಟೊ ಶೂಟ್‌ನಿಂದ ನನ್ನನ್ನು ದ್ವೇಷಿಸುವವರಿಗಿಂತ ಪ್ರೀತಿಸುವವರು ಹೆಚ್ಚಾಗಿದ್ದಾರೆ. ಈವಾಗಲ್ಲದೆ ಇನ್ಯಾವಾಗ ಈ ರೀತಿಯ ಫೋಟೊ ಶೂಟ್‌ ಮಾಡಿಸಿಕೊಳ್ಳಲಿ’ ಎಂದಿದ್ದಾರೆ.

ಫೋಟೊ ಶೂಟ್‌ ಅತ್ಯಂತ ಸೌಂದರ್ಯದಿಂದ ಕೂಡಿವೆ ಎನಿಸಿದ್ದರಿಂದಲೇ ಈ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ಮಹಿಳೆಯ ಬೋಲ್ಡ್‌’ ನಡೆಯನ್ನು ಖಂಡಿಸುವುದೇ ಗಂಡಸರ ಕೆಲಸ. ಇಂಥ ಕೆಲಸಗಳು ಅವರ ಪುರುಷತ್ವಕ್ಕೆ ಸವಾಲು ಎಂದುಕೊಳ್ಳುತ್ತಾರೆ. ಕೆಲ ಮುಗ್ಧ ಗಂಡಸರು ಇದ್ದಾರೆ ಈ ಫೋಟೊಗಳನ್ನು ತಮ್ಮ ಫೋನಿನಲ್ಲಿ ಸೇವ್‌ ಮಾಡಿಕೊಂಡಿರುತ್ತಾರೆ. ಅಜಂತಾ, ಎಲ್ಲೋರಾದ ಶಿಲ್ಪಗಳನ್ನು, ಕಾಮಸೂತ್ರವನ್ನು ಕಂಡಿರುವ ಈ ದೇಶದಲ್ಲಿ ಒಬ್ಬ ಮಹಿಳೆಯ ಟಾಪ್‌ಲೆಸ್‌ ಫೋಟೊಶೂಟ್‌ಗೆ ಇಷ್ಟೆಲ್ಲಾ ಪ್ರತಿಕ್ರಿಯೆ ಬೇಕಾ. ನನ್ನ ದೇಹ ಸೌಂದರ್ಯದ ಬಗ್ಗೆ ನನಗೆ ಆತ್ಮವಿಶ್ವಾಸವಿದೆ. ನನ್ನ ಇಚ್ಛೆಯಿಂದಲೇ ಈ ಫೋಟೊ ಮಾಡಿಸಿದ್ದೇನೆ. ಇಷ್ಟು ಚೆಂದವಾದ ಫೋಟೊಗಳನ್ನು ಹಂಚಿಕೊಳ್ಳದೆ ಇರಲು ಸಾಧ್ಯವಾಗಲಿಲ್ಲ’ ಎನ್ನುವುದು ಇಶಾ ಅಭಿಪ್ರಾಯ.

ಇದು ಭಾರತೀಯ ಮಹಿಳೆ ಇರುವ ರೀತಿಯಲ್ಲ ಎಂದು ದೂಷಿಸುತ್ತಾ ಇನ್‌ಸ್ಟಾಗ್ರಾಂನಲ್ಲಿ ನೂರಾರು ಮಂದಿ ಗೇಲಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಇಶಾ ‘ನಾನೇನು ಮಾಡುತ್ತಿದ್ದೇನೆ ನನಗೆ ಗೊತ್ತು. ನಾನೇನು ಕಾಡಿನಿಂದ ಬಂದು, ಈಗ ಸಿನಿಮಾ ಉದ್ಯಮಕ್ಕೆ ಕಾಲಿಡುತ್ತಿರುವ ಹುಡುಗಿಯಲ್ಲ. ನಾನು ಹೇಗೆ ನಡೆದುಕೊಳ್ಳಬೇಕು ಎಂದು ಬೇರೆಯವರಿಂದ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ಈ ಪಾಠ ಮಾಡುವವರಿಗಿಂತ ನಿಜವಾದ ಭಾರತೀಯಳು ನಾನು. ನನ್ನ ತಂದೆ ಈ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಹಲವು ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ದೇಶವನ್ನು ಪ್ರತಿನಿಧಿಸಿದ್ದೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT