ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಕನಿ, ಕಿಟಕಿ ಬಳಿ ಬಳ್ಳಿ

Last Updated 17 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ತಾಜಾ ಮತ್ತು ಸಾವಯವ ತರಕಾರಿಗಳು ನಗರದಲ್ಲಿ ಸಿಗುವುದು ಕಡಿಮೆ. ಸಿಕ್ಕರೂ ದುಬಾರಿ. ಮನೆಯಲ್ಲೇ ಏನಾದರೂ ಬೆಳೆಯಬೇಕೆಂದರೆ ಸ್ಥಳಾವಕಾಶ ಕೊರತೆ. ನೋಡಿಕೊಳ್ಳುವವರು ಯಾರು ಎಂಬ ಪ್ರಶ್ನೆ. ಇದಕ್ಕೆ ಉತ್ತರವೂ ಇದೆ. ಕಡಿಮೆ ಸ್ಥಳಾವಕಾಶ ಇರುವ ಕಡೆ ಪುಟ್ಟದೊಂದು ಕುಂಡದಲ್ಲಿ ಯಾವೆಲ್ಲಾ ತರಕಾರಿ ಬೆಳೆಯಬಹುದು ಎಂಬ ಮಾಹಿತಿ ಇಲ್ಲಿದೆ.

ಈರುಳ್ಳಿ ಹೂವು (ಸ್ಪ್ರಿಂಗ್ ಆನಿಯನ್)

ಈ ಡಯಟ್‌ ಕಾಲದಲ್ಲಿ ಈರುಳ್ಳಿ ಹೂವು ತುಂಬಾ ಉಪಯೋಗಿ. ಸಲಾಡ್, ಪಲ್ಯ, ಸಾರು, ಪಲಾವ್, ಉಪ್ಪಿಟ್ಟು ಹೀಗೆ ಯಾವುದೇ ತಿನಿಸು ಮಾಡುವಾಗ ಒಂದಿಷ್ಟು ಈರುಳ್ಳಿ ಹೂ ಹಾಕಿ ಮಾಡಿದರೆ ರುಚಿ ಹೆಚ್ಚು.

ಬೆಳೆಯುವ ವಿಧಾನ: ನೀರಿನಲ್ಲಿ ನೆನೆದು ಚೆನ್ನಾಗಿ ಹದವಾದ ಮಣ್ಣು, ಬೀಜ ಬಿತ್ತನೆಗೆ ಸೂಕ್ತ. ಉದ್ದನೆಯ ಸಾಲಿನಲ್ಲಿ ಒಂದು ಇಂಚು ಆಳ ಮತ್ತು 12 ಇಂಚು ಅಂತರದಲ್ಲಿ ಬೀಜಗಳನ್ನು ಬಿತ್ತಬೇಕು. ದಿನ ಬಿಟ್ಟು ದಿನ ನೀರನ್ನು ಚುಮ್ಮುಕಿಸಿದರೆ ಸಾಕು. ಹೆಚ್ಚು ನೀರು ಹಾಕಿದರೆ ಬೀಜ ಕೊಳೆಯುವ ಸಾಧ್ಯತೆ ಇರುತ್ತದೆ. ಮೊಳke ಒಡೆಯುವವರೆಗೆ ಜಾಗ್ರತೆಯಿಂದ ನೋಡಿಕೊಳ್ಳಬೇಕು. ಮಣ್ಣು ಒಣಗದಂತೆ, ಹೆಚ್ಚು ನೀರಿನ ಪಸೆಯೂ ಇರದಂತೆ ನೋಡಿಕೊಳ್ಳಿ.

*

ಸೊಪ್ಪು

ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು ಇಲ್ಲದೆ ಅಡುಗೆ ಸಾಗುವುದಿಲ್ಲ. ಇವುಗಳ ನಾಟಿ ವಿಧ ಇನ್ನೂ ಸುವಾಸನೆ ರುಚಿ ಹೆಚ್ಚು. ಬಹುತೇಕ ಅಡುಗೆಗೆ ಈ ಸೊಪ್ಪು ಬೇಕು. ಈ ಸಾಂಬಾರು ಸೊಪ್ಪಿನ ಜೊತೆ ಸಬ್ಬಸಿಗೆ, ಉಪ್ಪುಸಾರು ಸೊಪ್ಪು, ಪಾಲಕ್, ಪುದೀನ, ಒಂದೆಲಗ ಸೊಪ್ಪುಗಳನ್ನು ಒಂದು ಟ್ರೇಯಲ್ಲಿ ಬೆಳೆಯಬಹುದು.

ಬೆಳೆಯುವ ವಿಧಾನ: ಹಳೆಯದಾದ ಟ್ರೇಯಲ್ಲಿ ಒಂದು ಪದರ ತೆಂಗಿನ ನಾರು, ಅದರ ಮೇಲೆ ಅರ್ಧ ಟ್ರೇ ತುಂಬಿಕೊಳ್ಳುವಷ್ಟು ಮಣ್ಣು, ತರಕಾರಿ ಸಿಪ್ಪೆ, ಮಣ್ಣು ಹಾಕಿ. ನಂತರ ಸೊಪ್ಪಿನ ಬೀಜಗಳನ್ನು ಸ್ವಲ್ಪ ಅಂತರದಲ್ಲಿ ಹರಡಿ. ನಂತರ ತೆಳುವಾಗಿ ಒಂದು ಮಣ್ಣಿನ ಪದರ ಹಾಕಿ. ಒಟ್ಟಾರೆ ಮಣ್ಣು ಟ್ರೇಯ ಮುಕ್ಕಾಲು ಭಾಗದವರೆಗೆ ಮಾತ್ರ ಬರಲಿ. ದಿನ ಬಿಟ್ಟು ದಿನ ನೀರುಣಿಸಿ.

*

ಸೋಂಪು ಕಾಳು

ಸುವಾಸನೆ ಭರಿತ ಕಾಳು. ಬಿರಿಯಾನಿ, ಪಲಾವ್, ಸಲಾಡ್, ಬಜ್ಜಿ, ಹಲವು ಅಡುಗೆಗೆ ಬೇಕಾಗುತ್ತದೆ. ಇದನ್ನು ಮನೆಯಲ್ಲೇ ಸರಳವಾಗಿ ಬೆಳೆಯಬಹುದು.

ಬೆಳೆಯುವ ವಿಧಾನ: ಎರಡು ದಿನ ಮೊದಲು ನೀರಿನಲ್ಲಿ ಮಣ್ಣನ್ನು ನೆನೆಸಿ ಹದ ಮಾಡಿ. ಬೀಜ ಬಿತ್ತನೆ ಮಾಡುವಾಗ ನಾಲ್ಕೈದು ಬೀಜಗಳನ್ನು ಒಟ್ಟಿಗೆ ಹಾಕಿ ಬಿತ್ತನೆ ಮಾಡಿ. ಸಸಿಯಾದ ನಂತರ ಗೊಬ್ಬರವನ್ನು ತೆಳು ಪದರವಾಗಿ ಹರಡಿ.

*

ಬಳ್ಳಿಗಳೂ ಇರಲಿ

ಸೌತೆಕಾಯಿ, ಸೋರೆಕಾಯಿ, ಹಾಗಲಕಾಯಿ, ಹೀರೇಕಾಯಿಯಂತಹ (ಸ್ಥಳಾವಕಾಶವಿದ್ದರೆ ಕುಂಬಳಕಾಯಿ ಸಹ!) ಬಳ್ಳಿಗಳಲ್ಲಿ ಬೆಳೆಯುವ ತರಕಾರಿಗಳನ್ನು ಬೆಳೆಯಲು ಈಗ ಹೆಚ್ಚು ಸ್ಥಳ ಬೇಡ. ಬಾಲ್ಕನಿಯಲ್ಲಿ ಬೆಳೆಸಿ ಕಿಟಕಿ ಸರಳಿಗೆ ಬಳ್ಳಿಬಿಡಬಹುದು.

ಬೆಳೆಯುವ ವಿಧಾನ: ಗೊಬ್ಬರ, ತೆಂಗಿನ ನಾರು, ಮರಳು, ಮಣ್ಣನ್ನು ಮಿಶ್ರಣ ಮಾಡಿ ಕುಂಡದಲ್ಲಿ ಹಾಕಿ. ಹದಗೊಂಡ ಮಣ್ಣಿನಲ್ಲಿ ಐದಾರು ಬೀಜ ಬಿತ್ತನೆ ಮಾಡಿ, ಮೊಳಕೆಯೊಡೆದು ಸಸಿಯಾದ ನಂತರ ಕಿತ್ತು ಎರಡು ಸಸಿಗಳನ್ನು ಒಟ್ಟಿಗೆ ನೆಡಿ. ಸಸಿಯ ಪಕ್ಕ ಸಣ್ಣ ಸರಳನ್ನು ನೆಡಿ. ಸರಳಿನಿಂದ ಕಿಟಕಿಗೆ ತಂತಿಯನ್ನು ಕಟ್ಟಿ ಈ ಅಂಬು ಹಬ್ಬಲು ತಂತಿ ಸಹಕಾರಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT