ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 18–8–1967

Last Updated 17 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಕೃಷ್ಣಾ–ಗೋದಾವರಿ ನೀರು ಹಂಚಿಕೆ ಬಗ್ಗೆ (ನಾರಾಯಣಸ್ವಾಮಿ ಅವರಿಂದ)

ನವದೆಹಲಿ, ಆ. 17– ಕೃಷ್ಣಾ–ಗೋದಾವರಿ ನದಿ ನೀರಿನ ಹಂಚಿಕೆಯನ್ನು ಕುರಿತ ವಿವಾದವನ್ನು ಬಗೆಹರಿಸಿಕೊಳ್ಳಲು ಇಂದು ಇಲ್ಲಿ ಸಭೆ ಸೇರಿದ್ದ ಮೈಸೂರು, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳು ಯಾವ ನಿರ್ಧಾರಕ್ಕೂ ಬರಲಿಲ್ಲ.

ಪ್ರಧಾನಮಂತ್ರಿಯವರು ಕರೆದಿದ್ದ ಈ ಸಮ್ಮೇಳನವು 210 ನಿಮಿಷಗಳ ಕಾಲ ಚರ್ಚೆಗಳನ್ನು ನಡೆಸಿ, ಸೆಪ್ಟೆಂಬರ್‌ ಕೊನೆಯವಾರದಲ್ಲಿ ಪುನಃ ಸಭೆ ಸೇರಬೇಕೆಂದು ನಿಶ್ಚಯಿಸಿ, ಮುಕ್ತಾಯವಾಯಿತು.

ಇಂದಿನ ಸಭೆಯಲ್ಲಿ ಹೊಸ ವಿಷಯಗಳನ್ನೇನೂ ಹೆಚ್ಚಾಗಿ ಪ್ರಸ್ತಾಪಿಸಲಿಲ್ಲವೆಂದು ಗೊತ್ತಾಗಿದೆ. ಎಲ್ಲರಿಗೂ ತಿಳಿದ ತಮ್ಮ ಹಳೆಯ ನಿಲುವುಗಳನ್ನೇ ಮುಖ್ಯಮಂತ್ರಿಗಳು ಮತ್ತೆ ವಿವರಿಸಿದರೆನ್ನಲಾಗಿದೆ.

ಮುಖ್ಯಮಂತ್ರಿಯಾಗಿ ಮುಂದುವರಿಯಲು ಚರಣ್‌ಸಿಂಗ್‌ ಒಪ್ಪಿಗೆ
ಲಕ್ನೊ, ಆ. 17–
ಸಂಯುಕ್ತ ವಿಧಾಯಕ ದಳದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಲು ಇಚ್ಛಿಸಿ ಬರೆದಿದ್ದ ಪತ್ರವನ್ನು ಹಿಂತೆಗೆದುಕೊಳ್ಳಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಚರಣ್‌ಸಿಂಗ್‌ ಅವರು ಇಂದು ಸಂಜೆ ಒಪ್ಪಿಕೊಂಡರು.

ದಳದ ಸಮನ್ವಯ ಸಮಿತಿಯ ಸಭೆಯು ಎಂಟು ಗಂಟೆಗಳಿಗೂ ಹೆಚ್ಚು ಕಾಲ ನಡೆದು ಶ್ರೀ ಚರಣ್‌ಸಿಂಗ್‌ ಅವರು ನಾಯಕರಾಗಿ ಮುಂದುವರಿಯಬೇಕೆಂದು ಒತ್ತಾಯಪಡಿಸುವ ನಿರ್ಣಯವನ್ನು ಅಂಗೀಕರಿಸಿತು.

ಶಿವಸೇನೆಯ ಪ್ರಚೋದಕ ಚಟುವಟಿಕೆಯ ಬಗ್ಗೆ ಪ್ರಧಾನಿ ಖಂಡನೆ
ನವದೆಹಲಿ, ಆ. 17–
ಒಂದು ಅಥವಾ ಇನ್ನೊಂದು ಸಮಾಜವನ್ನು ಪ್ರಚೋದಿಸುವ ಮಹಾರಾಷ್ಟ್ರದ ಶಿವಸೇನೆ ಹಾಗೂ ರಾಷ್ಟ್ರದ ಇತರೆ ಅಂತಹ ಸಂಸ್ಥೆಗಳ ಚಟುವಟಿಕೆಗಳನ್ನು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಹಾಗೂ ರಾಜ್ಯ ಸಭೆಯ ಅನೇಕ ಮಂದಿ ಸದಸ್ಯರು ಇಂದು ಖಂಡಿಸಿದರು.

ಶಿವಸೇನೆಗೆ ಗೃಹ ಸಚಿವ ಶ್ರೀ ಚವಾಣ್‌ ಅವರ ಆಶೀರ್ವಾದವಿದೆ ಎಂದು ಶ್ರೀ ಲೋಕನಾಥ ಮಿತ್ರಾ ಹಾಗೂ ಈ ಚಟುವಟಿಕೆಯ ಹಿಂದೆ ಮಹಾರಾಷ್ಟ್ರ ಕಾಂಗ್ರೆಸ್‌ ಪಕ್ಷವು ಕೈವಾಡವಿದೆ ಎಂಬ ಅಭಿಪ್ರಾಯ ಉಂಟಾಗಿದೆ ಎಂದು ಶ್ರೀ ಪಿ.ಕೆ. ಕುಮಾರನ್‌ ಅವರೂ ಆಪಾದಿಸಿದಾಗ ಸಭೆಯಲ್ಲಿ ಕೆಲವು ಕಾಲ ಗೊಂದೊಲ ಉಂಟಾಯಿತು.

ಗ್ರಾಮಾಂತರ ಉಳಿತಾಯ ಸಾಧ್ಯತೆ ಕುರಿತು ಸಚಿವ ಶ್ರೀ ಹೆಗಡೆ
ಬೆಂಗಳೂರು, ಆ. 17–
ಅಲ್ಪ ಉಳಿತಾಯ ಯೋಜನೆಯನ್ನು ಹಣದುಬ್ಬರದ ವಿರುದ್ಧ ಹೋರಾಟದ ಒಂದು ಕ್ರಮವೆಂದು ಪರಿಗಣಿಸುವಂತೆ ರಾಜ್ಯದ ಅರ್ಥಮಂತ್ರಿ ಶ್ರೀ ರಾಮಕೃಷ್ಣ ಹೆಗ್ಗಡೆಯವರು ಇಂದು ಇಲ್ಲಿ ಸಲಹೆ ಮಾಡಿದರು.

ಇಂದಿರಾ–ಚವಾಣ್‌ ನಡುವೆ ವಿರಸ? (‘ಪ್ರಜಾವಾಣಿ’ ಪ್ರತಿನಿಧಿಯಿಂದ)
ನವದೆಹಲಿ:
ಕೇಂದ್ರ ಸಂಪುಟದಲ್ಲಿ ಭಿನ್ನಾಭಿಪ್ರಾಯಗಳುಂಟಾಗಿವೆಯೆಂದು ಬಹಿರಂಗವಾಗಿಯೇ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸತ್ಯ ಮಸುಕಾಗಿ ಗೋಚರಿಸುತ್ತಿದೆ.

ಸಂಪುಟದ ಸದಸ್ಯರೊಳಗಿನ ಮನಸ್ತಾಪಗಳಿಗೆ ಅವಕುಂಠನ ಹಾಕಲು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಮತ್ತು ಸಂಬಂಧಿಸಿದ ಇತರರು ಪ್ರಯತ್ನಿಸಬಹುದು. ಆದರೆ ಮನಸ್ತಾಪಗಳಿಲ್ಲವೆಂದು ನಿರಾಕರಿಸಿದಾಕ್ಷಣ ವಾಸ್ತವಿಕ ಸಂಗತಿಗಳನ್ನು ಅಳಿಸಿ ಹಾಕಿದಂತಾಗುವುದಿಲ್ಲ.

ಇದರಿಂದಾಗಿ ಕೇಂದ್ರ ಸಂಪುಟವು ಈಗ ಭಗ್ನ ಮನೋರಥರ ಕೂಟವಾಗಿ ಪರಿಣಮಿಸಿದೆ. ಹಿಂದೂ ಸಮಾಜದಂತೆ, ವಿರುದ್ಧ ನಂಬಿಕೆಗಳು ಹಾಗೂ ತತ್ವಗಳನ್ನುಳ್ಳ ವ್ಯಕ್ತಿಗಳು ವಿವಿಧೋದ್ದೇಶಗಳಿಗಾಗಿ ಕಾರ್ಯಾಚರಣೆ ನಡೆಸುವಂತಾಗಿದೆ.

ಸಂಪುಟದ ಸಭೆಗಳಲ್ಲಿ ವ್ಯಕ್ತಪಡಿಸಲಾದ ವಿವಿಧ ಅಭಿಪ್ರಾಯಗಳೂ ಸಹ ಒಂದೆರಡು ದಿನಗಳಲ್ಲಿಯೇ ಬಹಿರಂಗವಾಗಿ ಎಲ್ಲರ ಬಾಯಿಂದಲೂ ಕೇಳಿಬರುತ್ತಿರುವುದಾದರೂ ಹೇಗೆ ಎಂಬುದು ಆಶ್ಚರ್ಯವನ್ನುಂಟುಮಾಡುತ್ತಿದೆ.

ಆರ್‌.ಕೆ. ನಾರಾಯಣ್‌ರಿಗೆ ಲೀಡ್ಸ್‌ ವಾರ್ಸಿಟಿಯ ಗೌರವ ಪ್ರಶಸ್ತಿ
ನವದೆಹಲಿ, ಆ. 17–
ಭಾರತದ ಖ್ಯಾತ ಕಾದಂಬರಿಕಾರ ಶ್ರೀ ಆರ್‌.ಕೆ. ನಾರಾಯಣ್‌ ಅವರು ಲೀಡ್ಸ್‌ ವಿಶ್ವವಿದ್ಯಾನಿಲಯದ ಡಾಕ್ಟರ್‌ ಆಫ್‌ ಲೆಟರ್ಸ್‌, ಗೌರವ ಪ್ರಶಸ್ತಿಯನ್ನು ಪಡೆಯಲಿದ್ದಾರೆ.

ಲೀಡ್ಸ್‌ನಲ್ಲಿ ಆಗಸ್ಟ್‌ 30 ರಂದು ನಡೆಯಲಿರುವ ವಿಶೇಷ ಸಮಾರಂಭವೊಂದರಲ್ಲಿ ಅವರು ಈ ಗೌರವ ಪ್ರಶಸ್ತಿ ಸ್ವೀಕರಿಸಿವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT