ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಹಿರಿಯ ಕಲಾವಿದ ನಾಡೋಜ ಏಣಗಿ ಬಾಳಪ್ಪ ನಿಧನ

Last Updated 18 ಆಗಸ್ಟ್ 2017, 8:52 IST
ಅಕ್ಷರ ಗಾತ್ರ

ಬೆಳಗಾವಿ: ‘ನಡೆದಾಡುವ ರಂಗಭೂಮಿಯ ವಿಶ್ವಕೋಶ’ ಎನ್ನುವ ಖ್ಯಾತಿ ಹೊಂದಿದ್ದ ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ (103) ಜಿಲ್ಲೆಯ ಸವದತ್ತಿ ತಾಲ್ಲೂಕಿನ ಏಣಗಿಯಲ್ಲಿ ಶುಕ್ರವಾರ ಬೆಳಿಗ್ಗೆ ವಿಧಿವಶರಾದರು.

ನೂರಾರು ನಾಟಕಗಳಲ್ಲಿ, ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದರು. ಅದ್ಭುತ ಕಂಠಸಿರಿಯನ್ನು ಹೊಂದಿದ್ದ ಅವರು ಹಲವು ರಂಗಗೀತೆಗಳಿಗೆ ಮರುಜೀವ ನೀಡಿದ್ದರು.

ಏಣಗಿ ಗ್ರಾಮದ ಲೋಕೂರ ಮನೆತನದ ಕರಿಬಸಪ್ಪ ಮತ್ತು ಬಾಳಮ್ಮ ದಂಪತಿಯ ಪುತ್ರನಾಗಿ 1914ರಲ್ಲಿ ಜನಿಸಿದ್ದರು. ಸುಮಾರು 12ನೇ ವಯಸ್ಸಿನಲ್ಲಿಯೇ ‘ಪಾದುಕಾ ಪಟ್ಟಾಭಿಷೇಕ’ ನಾಟಕದ ಮೂಲಕ ರಂಗಭೂಮಿಯನ್ನು ಪ್ರವೇಶಿಸಿದ್ದರು.

ಇವರ ಅಂತ್ಯಸಂಸ್ಕಾರ ಶನಿವಾರ ಬೆಳಿಗ್ಗೆ 11ಕ್ಕೆ ನೆರವೇರಲಿದೆ. ಮೃತರಿಗೆ ಎರಡನೇ ಪತ್ನಿ, ನಾಲ್ಕು ಜನ ಪುತ್ರರು, ನಾಲ್ಕು ಜನ ಪುತ್ರಿಯರು ಇದ್ದಾರೆ.

9 ಜನ ಮಕ್ಕಳು
ಬಾಳಪ್ಪ ಅವರಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಸಾವಿತ್ರಮ್ಮ ಹಲವು ವರ್ಷಗಳ ಹಿಂದೆ ಮೃತರಾಗಿದ್ದಾರೆ. ಇವರಿಗೆ ನಾಲ್ಕು ಜನ ಗಂಡು ಮಕ್ಕಳು (ಬಸವರಾಜ, ಸುಭಾಷ, ಅರವಿಂದ, ಮೋಹನ) ಹಾಗೂ ಮೂವರು ಹೆಣ್ಣು ಮಕ್ಕಳು (ರುದ್ರಮ್ಮ, ಶಕುಂತಲಾ, ಬಾಳಮ್ಮ) ಇದ್ದಾರೆ. ಎರಡನೇ ಪತ್ನಿ, ರಂಗಕಲಾವಿದೆ ಲಕ್ಷ್ಮೀ ಬಾಯಿ ಪ್ರಸ್ತುತ ಧಾರವಾಡದಲ್ಲಿ ವಾಸವಾಗಿದ್ದಾರೆ. ಇವರ ಮಗಳು ಭಾಗ್ಯಶ್ರೀ ಕೋಲ್ಹಾಪುರದಲ್ಲಿ ವಾಸವಾಗಿದ್ದಾರೆ. ಇವರ ಮಗ, ರಂಗ ಕಲಾವಿದ ಏಣಗಿ ನಟರಾಜ್‌ ಆರು ವರ್ಷಗಳ ಹಿಂದೆ ಮೃತರಾಗಿದ್ದಾರೆ.

ಬಾಲನಟನಾಗಿ ಪ್ರವೇಶ:
ಚಿಕ್ಕ ವಯಸ್ಸಿನಲ್ಲಿಯೇ ಬಾಳಪ್ಪ ಅವರು ತಂದೆಯನ್ನು ಕಳೆದುಕೊಂಡಿದ್ದರು. ಕುಟುಂಬದ ಹೊಣೆಯು ತಾಯಿಯ ಮೇಲೆ ಬಿದ್ದಿತ್ತು. ಕುಟುಂಬದ ಆರ್ಥಿಕ ಚೆನ್ನಾಗಿರಲಿಲ್ಲ. ಇದೇ ಸಮಯದಲ್ಲಿ ಪಕ್ಕದ ಬೈಲಹೊಂಗಲದಲ್ಲಿ ‘ಪಾದುಕಾ ಪಟ್ಟಾಭಿಷೇಕ’ ನಾಟಕ ಬಂದಿತ್ತು. ನಾಟಕದ ಪ್ರಮುಖ ಪಾತ್ರಧಾರಿ ಲವ ಪಾತ್ರಕ್ಕೆ ಬಾಲನಟನ ಅವಶ್ಯಕತೆ ಇತ್ತು. ಉತ್ತಮ ಕಂಠಸಿರಿ ಹೊಂದಿದ್ದ ಬಾಳಪ್ಪ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಲಾಯಿತು. ಈ ಮೂಲಕ ಬಾಳಪ್ಪ ತಮ್ಮ 12ನೇ ವಯಸ್ಸಿನಲ್ಲಿ ರಂಗಪ್ರವೇಶಿಸಿದರು. 

ಬಾಳಪ್ಪ ಅವರ ಪ್ರತಿಭೆಯನ್ನು ಗುರುತಿಸಿದ ಚಿಕ್ಕೋಡಿಯ ನಾಟಕ ಕಲಾವಿದ ಶಿವಲಿಂಗ ಸ್ವಾಮಿ ಹಲವು ನಾಟಕಗಳಲ್ಲಿ ಅವಕಾಶ ನೀಡಿದರು.  ಹಲವು ನಾಟಕಗಳಲ್ಲಿ ನಟಿಸಿದ ನಂತರ ಬಾಳಪ್ಪ ಅವರು ‘ಕಲಾವೈಭವ ನಾಟಕ ಸಂಘ’ವನ್ನು ಸ್ಥಾಪಿಸಿದರು. ಹಲವು ನಾಟಕಗಳನ್ನು ಆಡಿದರು. ಅಲ್ಲದೇ, ಸಮಕಾಲೀನ ಸಮಸ್ಯೆಗಳನ್ನು ಇಟ್ಟುಕೊಂಡ ಹೊಸ ಹೊಸ ನಾಟಕಗಳನ್ನು ಬರೆಯಿಸಿದರು. ಸ್ತ್ರೀ– ಪುರುಷ ನಾಟಕಗಳಲ್ಲಿ ಮಿಂಚಿದ ಅವರು, ‘ಜಗಜ್ಯೋತಿ ಬಸವೇಶ್ವರ’ ನಾಟಕದ ಮೂಲಕ ಜನಪ್ರಿಯತೆ ಗಳಿಸಿದರು.

ಹಲವು ಪ್ರಶಸ್ತಿ
1973ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ, 1976ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, 1978ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್‌ ಪ್ರಶಸ್ತಿ, 1995ರಲ್ಲಿ ಕೇಂದ್ರ ಸರ್ಕಾರದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1995ರಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿ, 2005ರಲ್ಲಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, 2006ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಪದವಿ, ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಪದವಿ ಸಂದಿವೆ.

ರಂಗಭೂಮಿಗೆ ಅನುಪಮ ಸೇವೆ ಸಲ್ಲಿಸಿರುವ ಏಣಗಿ ಬಾಳಪ್ಪ ಅವರು ಹಲವು ಸಿನಿಮಾಗಳಲ್ಲೂ ಅಭಿನಯಿಸಿದ್ದರು.

ರಂಗಕರ್ಮಿ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ರಂಗಭೂಮಿ(ನಾಟಕ) ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಗೆ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿದೆ.

2013ರ ಮೈಸೂರು ದಸರಾ ಮಹೋತ್ಸ­ವದ ಸಾಂಸ್ಕೃತಿಕ ಕಾರ್ಯ­ಕ್ರಮ­ಗಳನ್ನು ಅಂಬಾ ವಿಲಾಸ ಅರಮನೆಯಲ್ಲಿ ಬಾಳಪ್ಪ ಅವರು ಉದ್ಘಾಟಿಸಿದ್ದರು.

2013ರ ಜನವರಿ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯು ಏರ್ಪಡಿಸಿದ್ದ `ಅನುಭವ ಅಭಿವ್ಯಕ್ತಿ - ಸಾಹಿತ್ಯ ಕಲಾ ರಸಗ್ರಹಣ ಶಿಬಿರ'ದಲ್ಲಿ ಹಿರಿಯ ರಂಗಕರ್ಮಿಗಳಾದ ಏಣಗಿ ಬಾಳಪ್ಪ ಮತ್ತು ಮಾಸ್ಟರ್ ಹಿರಣ್ಣಯ್ಯ ಸಮಾಲೋಚನೆ ನಡೆಸಿದ್ದ ಕ್ಷಣ - ಪ್ರಜಾವಾಣಿ ಸಂಗ್ರಹ ಚಿತ್ರ

ವರನಟ ಡಾ.ರಾಜಕುಮಾರ್‌ ಜತೆ ರಂಗಕಲಾವಿದ ಏಣಗಿ ಬಾಳಪ್ಪ.

ಬೆಳಗಾವಿಯಲ್ಲಿ 2014ರ ಮಾರ್ಚ್‌ 2ರಂದು ನಡೆದ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಏಣಗಿ ಬಾಳಪ್ಪ ಅವರನ್ನು ಅಕ್ಕರೆಯಿಂದ ತಬ್ಬಿಕೊಂಡ ರಂಗಕಲಾವಿದೆ ಬಿ.ಜಯಶ್ರೀ.

ಬೆಳಗಾವಿಯಲ್ಲಿ 2014ರ ಮಾರ್ಚ್‌ 2ರಂದು ನಡೆದ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಏಣಗಿ ಬಾಳಪ್ಪ ಅವರಿಗೆ ಮರಾಠಿ ಕಲಾವಿದ ಅಮೋಲ್‌ ಪಾಲೇಕರ್‌ ಬೆಳ್ಳಿ ಕಿರೀಟ ತೊಡಿಸಿದರು. ಮಾಸ್ಟರ್‌ ಹಿರಣ್ಣಯ್ಯ, ನಾಗನೂರ ಸಿದ್ದರಾಮ ಸ್ವಾಮೀಜಿ, ಕಲಾವಿದೆ ಬಿ.ಜಯಶ್ರೀ, ಉಮಾಶ್ರೀ ಭಾಗವಹಿಸಿದ್ದರು.

1995ರಲ್ಲಿ ಕೇಂದ್ರ ಸರ್ಕಾರದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಅಂದಿನ ರಾಷ್ಟ್ರಪತಿ ಶಂಕರ ದಯಾಳ ಶರ್ಮಾ ಅವರು ಏಣಗಿ ಬಾಳಪ್ಪ ಅವರಿಗೆ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT