ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ವಿಶ್ವಕೋಶ

Last Updated 18 ಆಗಸ್ಟ್ 2017, 20:00 IST
ಅಕ್ಷರ ಗಾತ್ರ

ಬಾಲನಟರಾಗಿ ರಂಗ ಪ್ರವೇಶಿಸಿ, ಗಾಯಕ ನಟರಾಗಿ ಬೆಳೆದು, ಮೊದಲು ಪಾಲುದಾರಿಕೆಯಲ್ಲಿ, ನಂತರ ಸ್ವತಂತ್ರವಾಗಿ ನಾಟಕ ಕಂಪನಿ ಕಟ್ಟಿ ನಿರಂತರವಾಗಿ ಎಪ್ಪತ್ತು ವರ್ಷಗಳ ಕಾಲ ವೃತ್ತಿರಂಗಭೂಮಿಯ ಅವಿಚ್ಛಿನ್ನ ಭಾಗವೇ ಆಗಿದ್ದ ಬಾಳಪ್ಪ, ತಮ್ಮ ಕಲಾವೈಭವ ನಾಟ್ಯ ಸಂಘವನ್ನು 1983ರಲ್ಲಿ ಸ್ಥಗಿತಗೊಳಿಸಿದರಾದರೂ; ನಂತರವೂ ಉಪನ್ಯಾಸ, ಪ್ರಾತ್ಯಕ್ಷಿಕೆ, ರಂಗ ಗಾಯನ, ನಿರ್ದೇಶನದ ಮೂಲಕ ಹತ್ತಿರತ್ತಿರ ಒಂದು ಶತಮಾನ ಅವರು ವೃತ್ತಿರಂಗಭೂಮಿಗಾಗಿ 'ಬಾಳಿ'ದರು. ಅವರ ಹಾಡು, ಅಭಿನಯ, ನಿರ್ದೇಶನ, ಸಂಘಟನಾ ಸಾಮರ್ಥ್ಯ ಒಂದು ತೂಕವಾ ದರೆ; ಅವರ ಸ್ಮರಣಾಶಕ್ತಿಯದೇ ಮತ್ತೊಂದು ತೂಕ. ಉತ್ತರ ಕರ್ನಾಟಕದ ಒಂದು ಶತಮಾನದ ರಂಗ ಚಟುವಟಿಕೆಗಳನ್ನು ತಮ್ಮ ಅಗಾಧ ನೆನಪಿನ ಶಕ್ತಿಯಿಂದ ಸ್ವಾರಸ್ಯಕರವಾಗಿ ಬಣ್ಣಿಸುತ್ತಿದ್ದರು. ಹಾಗಾಗಿ ಅವರನ್ನು 'ನಡೆದಾಡುವ ವೃತ್ತಿರಂಗಭೂಮಿ' ಎಂದೇ ಬಣ್ಣಿಸಲಾಗುತ್ತದೆ.

ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕು ಏಣಗಿ ಗ್ರಾಮದ ಕೃಷಿಕ ಕುಟುಂಬದ ಕರಿಬಸಪ್ಪ ಲೋಕೂರ ಹಾಗೂ ಬಾಳಮ್ಮ ದಂಪತಿಗೆ 1914ರಲ್ಲಿ ಜನಿಸಿದ ಬಾಳಪ್ಪ ಬಾಲ್ಯದಿಂದಲೇ ಭಜನೆ, ಕೋಲಾಟ ಮುಂತಾದ ಜನಪದ ಕಲೆಗಳಲ್ಲಿ ಆಸಕ್ತಿ ತಳೆದರು. ಬಾಳಪ್ಪಗೆ ಒಬ್ಬ ಅಣ್ಣ ಒಬ್ಬ ಅಕ್ಕ. ಮೂರು ವರ್ಷ ಇದ್ದಾಗಲೇ ತಂದೆ ಕರಿಬಸಪ್ಪ ತೀರಿ ಹೋದರು. (ಮೂರು ವರ್ಷಕ್ಕೆ ತಂದೆಯನ್ನು ಕಳೆದುಕೊಂಡ ಬಾಳಪ್ಪ ನೂರಾ ಮೂರು ವರ್ಷ ಬದುಕಿ ದರು!) ಇದ್ದ ಅಲ್ಪಸ್ವಲ್ಪ ಆಸ್ತಿಯೆಂದರೆ ಊರ ಮುಂದಿನ ಹೊಲ. ತಾಯಿ ಬಾಳವ್ವ ಅವರಿವರ ಮನೆ ಕೆಲಸ ಮಾಡಿ ಮೂರು ಮಕ್ಕಳನ್ನೂ ಸಾಕಿದ್ದರು.

ಬಾಲಕನ ಪ್ರತಿಭೆ, ಚುರುಕುತನ ಗಮನಿಸಿದ ಊರ ಹಿರಿಯರು ನಾಟಕ ಕಂಪನಿಗೆ ಸೇರಿಕೊಳ್ಳುವಂತೆ ಸೂಚಿಸಿದ್ದರು. ಹುಕ್ಕೇರಿ ಬಸವಪ್ರಭು ನಾಯಕರ ಮೌಲಾಲಿ ಪ್ರಸಾದಿತ ನಾಟಕ ಮಂಡಳಿ ಸಮೀಪದ ಬೈಲಹೊಂಗಲದಲ್ಲಿ ಕ್ಯಾಂಪ್ ಮಾಡಿತ್ತು. ಬಾಳಪ್ಪ ನಟನಾಗಿ ಕಂಪನಿ ಸೇರಿದರು. 'ಪಾದುಕಾ ಪಟ್ಟಾಭಿಷೇಕ' ನಾಟಕದಲ್ಲಿ ಭರತನ ಪಾತ್ರ ದೊರೆಯಿತು. ಇಲ್ಲಿಂದ ಅವರು ಹಿಂದುರಿಗಿದ್ದೇ ಇಲ್ಲ.

1930ರ ದಶಕದಲ್ಲಿ ಅಸ್ತಿತ್ವದಲ್ಲಿದ್ದ ನಾಟಕ ಕಂಪನಿಗಳ ಪೈಕಿ ಗದಗದ ಯರಾಶಿ ಭರಮಪ್ಪ ಅವರ ವಾಣಿವಿಲಾಸ ಸಂಗೀತ ನಾಟಕ ಮಂಡಳಿ ತನ್ನ ಅದ್ಧೂರಿತನಕ್ಕೆ ಹಾಗೂ ಪ್ರಯೋಗಶೀಲತೆಗೆ ಹೆಸರಾಗಿತ್ತು. ಮಲ್ಲಿಕಾರ್ಜುನ ಮನ್ಸೂರು, ಬಸವರಾಜ ಮನ್ಸೂರು, ಹಂದಿಗನೂರು ಸಿದ್ಧರಾಮಪ್ಪ, ಅಮೀರ್‍ಜಾನ್ ಕರ್ನಾಟಕಿ, ಗೋಹರ್‍ಜಾನ್ ಕರ್ನಾಟಕಿ ಇಂತಹ ದಿಗ್ಗಜರುಗಳು ಆ ಕಾಲಕ್ಕೆ ವಾಣಿವಿಲಾಸ ಸಂಗೀತ ನಾಟಕ ಮಂಡಳಿಯಲ್ಲಿದ್ದರು.

ಈ ನಾಟಕ ಮಂಡಳಿ ಸೇರಿದ ಯುವಕ ಬಾಳಪ್ಪ ರಂಗಸಂಗೀತದ ಪಟ್ಟುಗಳನ್ನು ಕರಗತ ಮಾಡಿಕೊಂಡರು. ಎಳೆವಯದಲ್ಲಿಯೇ ಅವರದು ಮಧುರ ಕಂಠ ಬೇರೆ. ಬಾಳಪ್ಪ ನಂತರ ಶಿವಲಿಂಗ ಸ್ವಾಮಿಗಳ ನಾಟಕ ಕಂಪನಿ ಸೇರಿ ಬಿ.ಎ., ಸ್ತ್ರೀ, ಚಲ್ತಿ ದುನಿಯಾದಂತಹ ಸಮಕಾಲೀನ ಸಂವೇದನೆಯ ನಾಟಕಗಳಲ್ಲಿ ಅಭಿನಯಿಸಿದರು. ಸ್ವಾತಂತ್ರ್ಯ ಹೋರಾಟದ ಸಂದೇಶ ಹೊತ್ತ 'ಅಸ್ಪೃಶ್ಶತಾ ನಿವಾರಣೆ' ನಾಟಕದಲ್ಲಿ ನಟಿಸಿದರು. ಆ ಹೊತ್ತಿಗೆ ವೈವಿಧ್ಯಮಯವಾದ ಪಾತ್ರಗಳ ನಟನೆಯ ಪರಿಚಯ ಬಾಳಪ್ಪನವರಿಗಾಗಿತ್ತು. ಸಂಗೀತದಲ್ಲೂ ತಕ್ಕಮಟ್ಟಿನ ಸಾಧನೆ ಮಾಡಿದ್ದ ಬಾಳಪ್ಪ ಪರಿಪೂರ್ಣ ನಟನ ಹಂತ ತಲುಪಿದರು.

ಆಶಾ ಭೋಸಲೆ, ಲತಾ ಮೆಚ್ಚಿದ ಕಂಠ
ಶರೀರ ಹಾಗೂ ಶಾರೀರದ ಸಮತೋಲನ ಹೊಂದಿದ್ದ 30ರ ಹರೆಯದ ಯುವಕ ಬಾಳಪ್ಪ ಒಮ್ಮೆ ಮಹಾರಾಷ್ಟ್ರದ ಸಾಂಗಲಿಯಲ್ಲಿ ನಾಟಕ ಕಂಪನಿ ಕ್ಯಾಂಪ್ ಮಾಡಿದಾಗ 'ವೀರರಾಣಿ ರುದ್ರಮ್ಮ' ನ ಪಾತ್ರ ಮಾಡಿದ್ದರು. ಬಾಳಪ್ಪನವರು ದೇಶದ ಹೆಸರಾಂತ ಸಂಗೀತಗಾರ ದೀನಾನಾಥರ ಪದ್ಧತಿಯಲ್ಲಿ ರಂಗಗೀತೆ ಹಾಡಲಿದ್ದಾರೆ ಎಂದು ಮರಾಠಿ ಭಾಷೆಯಲ್ಲಿ ಪ್ರಚಾರ ಪಡಿಸಲಾಗಿತ್ತು. ಈ ವಿಷಯ ತಿಳಿದ ಧೀನಾನಾಥರು ತಮ್ಮ ಮಕ್ಕಳಾದ ಆಶಾ ಭೋಸಲೆ, ಲತಾ ಮಂಗೇಶ್ಕರ್ ಅವರೊಂದಿಗೆ ನಾಟಕ ನೋಡಲು ಬಂದು ಬಾಳಪ್ಪನವರ ಹಾಡುಗಾರಿಕೆಯನ್ನು ಮುಕ್ತ ಕಂಠದಿಂದ ಮೆಚ್ಚಿಕೊಂಡಾಡಿದ್ದರು.

ಸ್ತೀ, ಪುರುಷ ಸೇರಿದಂತೆ ಎಲ್ಲ ಪಾತ್ರಗಳಲ್ಲೂ ಪರಿಣತರಾದ ಬಾಳಪ್ಪ ಪಾಲುದಾರಿಕೆಯಲ್ಲಿ ಮೂರು ದಶಕ, ನಂತರ ಸ್ವಂತ ನಾಟಕ ಕಂಪನಿ ಕಲಾವೈಭವ ಸ್ಥಾಪಿಸಿ ನಾಲ್ಕು ದಶಕ ನಡೆಸಿದರು. ಅಭಿನೇತ್ರಿ ಲಕ್ಷ್ಮೀಭಾಯಿಯವರು ನಟಿಯಾಗಿ ಸೇರಿದ ನಂತರ ಬಾಳಪ್ಪ ಮಾಡುತ್ತಿದ್ದ ಎಲ್ಲ ಸ್ತ್ರೀ ಪಾತ್ರಗಳು ಅವರ ಪಾಲಾದವು.

ಏಣಗಿ ನಟರಾಜ
ಕಲಾಲೋಕ ಹಾಗೂ ಖಾಸಗಿ ಪ್ರಪಂಚವನ್ನು ಯಶಸ್ವಿಯಾಗಿ ನಿಭಾಯಿಸಿದವರು ವೃತ್ತಿ ರಂಗಭೂಮಿಯಲ್ಲಿ ವಿರಳ. ಅದಕ್ಕೆ ಅಪವಾದ ಬಾಳಪ್ಪನವರು. ಎಲ್ಲವನ್ನೂ ಸಮಚಿತ್ತದಿಂದ ಸರಿದೂಗಿಸಿದರು. ನೂರು ದಾಟಿದ ಬಾಳಪ್ಪ 54ನೇ ವಯಸ್ಸಿನ ಪುತ್ರ ಏಣಗಿ ನಟರಾಜ ಅಕಾಲಿಕವಾಗಿ ನಿಧನರಾದಾಗಲೂ ಅದನ್ನು ಅಷ್ಟೇ ಸಮಚಿತ್ತದಿಂದ ಸ್ವೀಕರಿಸಿದರು. ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದ ನಟರಾಜ ಕನ್ನಡ ರಂಗಭೂಮಿಯ ಅತ್ಯಂತ ಭರವಸೆದಾಯಕ ನಟ ಆಗಿದ್ದರು.

ಧಾರವಾಡ, ಬೆಳಗಾವಿ, ಬೆಂಗಳೂರು, ವಿಜಯಪುರಗಳಲ್ಲಿ ಎಲ್ಲ ಮಕ್ಕಳು, ಮೊಮ್ಮಕ್ಕಳ ಜತೆ ತಮ್ಮ ಇಳಿ ವಯಸ್ಸಿನಲ್ಲಿ ಕಾಲ ಕಳೆಯುತ್ತಿದ್ದ ಬಾಳಪ್ಪ ಕಳೆದ ನಾಲ್ಕು ವರ್ಷಗಳಿಂದ ಏಣಗಿಯಲ್ಲಿ ನೆಲೆಸಿದ್ದರು. ಪುತ್ರರಾದ ಅರವಿಂದ- ಶಾಂತಮ್ಮ, ಡಾ.ಬಸವರಾಜ- ಮಹಾದೇವಿ, ಸುಭಾಶ- ಶಕುಂತಲಾ, ಮೋಹನ- ಸುಶೀಲಮ್ಮ ಎಲ್ಲರೂ ಅವರನ್ನು ಕಳೆದ ಮೂರು ವರ್ಷ ಮಗುವಿನಂತೆ ನೋಡಿಕೊಂಡರು. ನೂರನೇ ವಯಸ್ಸಿನವರೆಗೂ ಬಾಳಪ್ಪ ಹಾಡುವುದನ್ನು ನಿಲ್ಲಿಸಿರಲಿಲ್ಲ. ಇದೀಗ ಅವರ ಮಧುರ ಕಂಠಕ್ಕೆ ವಿಶ್ರಾಂತಿ.



*
ಸ್ವಾತಂತ್ರ್ಯ, ಏಕೀಕರಣಕ್ಕೆ ಬೆಂಬಲ
ಅದು 1942ರ ಕ್ವಿಟ್ ಇಂಡಿಯಾ ಚಲೇಜಾವ್ ಚಳವಳಿಯ ಕಾಲ. ವಾಲಿ ಚನ್ನಪ್ಪ, ಚಿನ್ಮಯ ಸ್ವಾಮಿಗಳ ರೋಮಾಂಚಕ ಭಾಷಣ ಕೇಳಿದ ಸಹಸ್ರ ಸಂಖ್ಯೆಯ ಗ್ರಾಮೀಣರು ಸ್ವಾತಂತ್ರ್ಯ ಸೇನಾನಿಗಳಾಗಿ ಪರಿವರ್ತಿತರಾಗುತ್ತಾರೆ. ವಿದೇಶಿ ಬಟ್ಟೆ, ಕಚೇರಿಯ ಪೀಠೋಪಕರಣಗಳನ್ನು ಧ್ವಂಸ ಮಾಡುತ್ತಿದ್ದ ಸೇನಾನಿಗಳು ನಾಟಕ ಕಂಪನಿಯ ಆಸರೆ ಪಡೆಯುತ್ತಾರೆ. ಅವರೆಲ್ಲರಿಗೂ ಬಾಳಪ್ಪನವರ ವೈಭವಶಾಲಿ ನಾಟಕ ಕಂಪನಿ ರಕ್ಷಣೆ ಕೊಡುತ್ತದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕಿಕೊಂಡು ಪೊಲೀಸರು ಬಂದರೆ ಅವರೆಲ್ಲ ನಮ್ಮ ನಾಟಕ ಕಂಪನಿಯ ಕಲಾವಿದರು ಎಂದು ಹೇಳಿ, ಕೆಲವರಿಗೆ ಮೇಕಪ್ ಮಾಡಿ ರಕ್ಷಿಸಿದ್ದು- ಅದೆಲ್ಲಾ ಸ್ವಾತಂತ್ರ್ಯ ಹೋರಾಟಕ್ಕೆ ವೃತ್ತಿರಂಗಭೂಮಿ ನೀಡಿದ ಕೊಡುಗೆಯ ಮತ್ತೊಂದು ಪ್ರಮುಖ ಅಧ್ಯಾಯ.

ಸಮಕಾಲೀನ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ವೃತ್ತಿರಂಗಭೂಮಿ ಕನ್ನಡಿಗರದೇ ರಾಜ್ಯವಾದ ಅಖಂಡ ಕರ್ನಾಟಕದ ಕನಸು ಕಾಣುತ್ತದೆ. ಬಾಳಪ್ಪ ಅದಕ್ಕೂ ಸ್ಪಂದಿಸುತ್ತಾರೆ. 1949ರಲ್ಲಿ ತಮ್ಮ ಸಂಘಕ್ಕೆ 'ಕಲಾವೈಭವ ನಾಟ್ಯ ಸಂಘ, ಬೆಳಗಾವಿ (ಕರ್ನಾಟಕ ರಾಜ್ಯ)' ಎಂದೇ ಬೋರ್ಡ್ ಬರೆಸಿ ಸಾಕಷ್ಟು ಕಿರುಕುಳ ಅನುಭವಿಸುತ್ತಾರೆ, ನಷ್ಟವನ್ನೂ ಉಂಟುಮಾಡಿಕೊಳ್ಳುತ್ತಾರೆ. ಬಾಳಪ್ಪ ಎದೆಗುಂದುವುದಿಲ್ಲ, ಅಷ್ಟಕ್ಕೇ ನಿಲ್ಲುವುದೂ ಇಲ್ಲ. 'ಕರ್ನಾಟಕ ಏಕೀಕರಣ'ದ ಕುರಿತೇ ಇನಾಂದಾರರಿಂದ ಪ್ರತ್ಯೇಕ ನಾಟಕ ಬರೆಸಿ ಯಶಸ್ವಿಯಾಗಿ ಅದನ್ನು ಪ್ರದರ್ಶಿಸಿಸುತ್ತಾರೆ.

ಬಸವಣ್ಣ ಬಾಳಪ್ಪನವರ ಅಂತರಂಗದಲ್ಲೂ ಪರಿವರ್ತನೆ ತರುತ್ತಾನೆ. ನಾಟಕದ ನಂತರ ಜೋಳಿಗೆ ಹಿಡಿದು ಹಣ ಸಂಗ್ರಹಿಸುತ್ತಾರೆ. ಅದನ್ನು ಸತ್ಕಾರ್ಯಗಳಿಗೆ ವಿನಿಯೋಗಿಸುತ್ತಾರೆ. ಕನ್ನಡ ಸಾರಸ್ವತ ಲೋಕಕ್ಕೆ ಪ್ರಥಮವಾಗಿ ವಚನಗಳನ್ನು ಸಂಗ್ರಹಿಸಿ ವಚನ ಪಿತಾಮಹ ಎಂದೇ ಹೆಸರಾದ ಪ.ಗು. ಹಳಕಟ್ಟಿ ಹಾಗೂ ಸರ್ವಜ್ಞನ ವಚನಗಳನ್ನು ಸಂಗ್ರಹಿಸಿಕೊಟ್ಟ ರೆವರೆಂಡ್ ಉತ್ತಂಗಿ ಚನ್ನಪ್ಪ ಅವರಿಗೆ ಆ ಕಾಲದಲ್ಲಿ ತಲಾ ಒಂದು ಸಾವಿರ ರೂ. (ಈ ಕಾಲಕ್ಕೆ ಅದು ಲಕ್ಷಗಟ್ಟಲೆ ಹಣ) ದೇಣಿಗೆ ಸಂಗ್ರಹಿಸಿದ ಹಣದಿಂದ ಕೊಡುತ್ತಾರೆ.

ನಾಡು ನುಡಿಗೆ ತೋರುವ ಬದ್ಧತೆ ಮಾತ್ರವಲ್ಲ, ರಂಗದ ಮೇಲೂ ಬಾಳಪ್ಪ ಅಪಾರ ಸುಧಾರಣೆಗಳನ್ನು ಜಾರಿಗೆ ತರುತ್ತಾರೆ. ಅದೃಶ್ಶಪ್ಪ ಮಾನ್ವಿ, ಹಂದಿಗನೂರು ಸಿದ್ಧರಾಮಪ್ಪನವರಂತಹ ಅಪ್ರತಿಮ ಕಲಾವಿದರು ದೊರೆತಾಗ ಅವರ ಅಭಿನಯ ಬೆಳಗುವಂತೆ ಮಾಡಲು ನಾಟಕದಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಾರೆ. 'ಗಾಯನ ಪ್ರಧಾನ'ದ ಜತೆ 'ಅಭಿನಯವನ್ನೂ ಪ್ರಧಾನ'ವಾಗಿಸುತ್ತಾರೆ. ಇಂತಹ ಪ್ರಯೋಗಗಳನ್ನು ತಮ್ಮದೇ ಕಲಾವೈಭವದಲ್ಲಿ ನಿರಂತರವಾಗಿ ಅವರು ಮಾಡುತ್ತಿರುತ್ತಾರೆ. ಕನ್ನಡ ಸಾರಸ್ವತ ಪ್ರಪಂಚದ ಚಿಂತಕರು, ಸಾಹಿತಿಗಳು, ಪತ್ರಕರ್ತರು, ಕಲಾವಿದರೊಂದಿಗಿನ ಅವರ ನಿಕಟ ಸಂಪರ್ಕ ಆಗಾಗ ಇಂತಹ ಪ್ರಯೋಗಗಳಿಗೆ ಹಚ್ಚುತ್ತದೆ. ಹಂಸಭಾವಿಯಲ್ಲಿ ತಿರುಗುವ ರಂಗ ಆರಂಭಿಸಿ ಮುಂದಿನ ಹಲವು ಕ್ಯಾಂಪ್‍ಗಳಿಗೆ ಅದನ್ನು ಯಶಸ್ವಿಯಾಗಿ ಬಳಸುತ್ತಾರೆ.

*
'ಜಗಜ್ಯೋತಿ ಬಸವೇಶ್ವರ' ಬಾಳಪ್ಪನವರ ರಂಗಜೀವನದಲ್ಲಿ ಮತ್ತೊಂದು ಪ್ರಮುಖ ಅಧ್ಯಾಯ. ಹುಬ್ಬಳ್ಳಿಯಲ್ಲಿ ದಾಖಲೆಯ 200ಕ್ಕೂ ಮಿಕ್ಕಿದ ಪ್ರಯೋಗ ಕಂಡ ನಾಟಕ ನಾಡಿನ ಬಹುತೇಕ ಕಡೆ ಪ್ರವಾಸ ಮಾಡಿ ಹೊಸ ದಾಖಲೆ ಬರೆಯುತ್ತದೆ. ಬಸವಣ್ಣನ ಪಾತ್ರದ ಮನೋಜ್ಞ ಅಭಿನಯದಿಂದಾಗಿಯೇ ಅವರು ಮುಂದಿನ ದಿನಗಳಲ್ಲಿ ಅಭಿನವ ಬಸವಣ್ಣ, ಆಧುನಿಕ ಬಸವಣ್ಣ ಎಂದೆಲ್ಲ ಪ್ರತೀತಿಯಾಗುತ್ತಾರೆ. ಚಿತ್ರನಟ ಡಾ. ರಾಜಕುಮಾರ್ ಬಾಳಪ್ಪನವರ ಬಸವೇಶ್ವರ ನಾಟಕ ಪ್ರದರ್ಶನ ನೋಡಿ ಮಂತ್ರಮುಗ್ಧರಾಗುತ್ತಾರೆ. ಬಾಳಪ್ಪ ಎಲ್ಲೇ ಕಾಣಲಿ ಸಮಯ ಸಂದರ್ಭ ಏನೂ ಲೆಕ್ಕಿಸದೆ ಅವರ ಕಾಲಿಗೆ ಡಾ. ರಾಜ್ ಬೀಳುತ್ತಿದ್ದರು!
*
ರಂಗಭೂಮಿ ತಾತಾ...
ಏಣಗಿ ಬಾಳಪ್ಪ ಅವರ ನಿಧನದಿಂದ ರಂಗಭೂಮಿಯು ಅಜ್ಜನನ್ನು ಕಳೆದುಕೊಂಡಿದೆ. ನನ್ನ ತಾತ ಗುಬ್ಬಿ ವೀರಣ್ಣ ಅವರನ್ನು ಬಿಟ್ಟರೆ ನನಗೆ ಆ ರೀತಿಯ ಬಾಂಧವ್ಯ ಇದ್ದದ್ದು ಏಣಗಿ ಬಾಳಪ್ಪಜ್ಜ ಅವರೊಂದಿಗೆ. ಅವರಿಗೆ ಹುಷಾರಿಲ್ಲವೆಂದು ಸುದ್ದಿ ತಿಳಿದು ಹದಿನೈದು ದಿನಗಳ ಹಿಂದೆಯಷ್ಟೇ ಅವರೊಂದಿಗೆ ಮಾತನಾಡಿದ್ದೆ. ನೋಡಲು ಬರುತ್ತೇನೆ ಅಜ್ಜ ಎಂದು ಹೇಳಿದ್ದೆ. ಶನಿವಾರ ಅವರನ್ನು ನೋಡಿಕೊಂಡು ಬರಲು ಹೋಗಬೇಕೆಂದುಕೊಂಡಿದ್ದೆ. ಆದರೆ, ಅಷ್ಟರಲ್ಲಿ ಈ ಸುದ್ದಿ ಬಂತು. ತುಂಬಾ ದುಃಖವಾಯಿತು.

ಶುಕ್ರವಾರ ನನ್ನ ಪುಸ್ತಕದ ಮಾತಿನ ಕಾರ್ಯಕ್ರಮವನ್ನು ಅಜ್ಜನಿಗೆ ಅರ್ಪಿಸಿದೆ. ಕೆಲ ವರ್ಷಗಳ ಹಿಂದೆ ‘ಬಣ್ಣದ ಬದುಕಿನ ಚಿನ್ನದ ಹಾಡುಗಳು’ ಸಿ.ಡಿ ಕಾರ್ಯಕ್ರಮದ ಬಿಡುಗಡೆಗೆ ಅವರನ್ನು ಕರೆದಾಗ ತುಂಬಾ ಸಂತೋಷದಿಂದ ಬಂದು ಸಿ.ಡಿ. ಬಿಡುಗಡೆ ಮಾಡಿದ್ದರು. ಆಗ ನಮ್ಮ ತಾಯಿಯೂ ಇದ್ದರು. ಅದೊಂದು ಅಪರೂಪದ ಸಮಾಗಮವಾಗಿತ್ತು. ಬಾಳಪ್ಪಜ್ಜನೊಂದಿಗಿನ ಸಂಬಂಧಗಳನ್ನು ಬರೀ ಮಾತಿನಲ್ಲಿ ಹೇಳಲಾಗದು.
–ಬಿ. ಜಯಶ್ರೀ, ಹಿರಿಯ ರಂಗಕರ್ಮಿ
*

ಸರಳ ವ್ಯಕ್ತಿತ್ವ, ನಿಷ್ಠುರವಾದಿ
ಏಣಗಿ ಬಾಳಪ್ಪ ಅವರು ಒಳ್ಳೆಯ ಮಾಲೀಕರು. ತುಂಬಾ ವರ್ಷಗಳ ಕಾಲ ಯಶಸ್ವಿಯಾಗಿ ನಾಟಕ ಕಂಪೆನಿ ನಡೆಸಿದವರು. ಅವರ ಕಂಪೆನಿಯಲ್ಲಿ ಸಾವಿರಾರು ಕಲಾವಿದರು ತಯಾರಾಗಿದ್ದಾರೆ. ಯಾವುದೇ ಚಟಗಳಿಲ್ಲದ ಮಹಾನ್ ವ್ಯಕ್ತಿ ಅವರು. ಆಡಂಬರವಿಲ್ಲದ ಸರಳ ವ್ಯಕ್ತಿತ್ವ ಅವರದಾಗಿತ್ತು. ಅಂತೆಯೇ ನಿಷ್ಠುರವಾದಿಯಾಗಿದ್ದರು.

ನಾನು ಮತ್ತು ನನ್ನ ಪತಿ ಲಿಂಗರಾಜ ಮನ್ಸೂರ ಅವರು ಆದವಾನಿಯ ನಾಟಕ ಕಂಪೆನಿಯಲ್ಲಿದ್ದಾಗ ನಮ್ಮನ್ನು ತಮ್ಮ ಕಂಪೆನಿಗೆ ಕರೆಸಿಕೊಂಡರು. ಅವರ ಕಂಪೆನಿಯಲ್ಲಿ ನಾವಿಬ್ಬರು ಎಂಟು ವರ್ಷ ಕಲಾವಿದರಾಗಿದ್ದೆವು. ‘ಜಗಜ್ಯೋತಿ ಬಸವೇಶ್ವರ’ ನಾಟಕದಲ್ಲಿ ಬಾಳಪ್ಪಜ್ಜ ಅವರು ಬಸವಣ್ಣ ಪಾತ್ರ ಮಾಡುತ್ತಿದ್ದರೆ, ನನ್ನ ಪತಿ ಲಿಂಗರಾಜ ಅವರು ಬಿಜ್ಜಳನ ಪಾತ್ರ ಮಾಡುತ್ತಿದ್ದರು. ಅವರ ಕಂಪೆನಿಯ ನಾಟಕಗಳಲ್ಲಿ ನಾನು ಕಲಾವತಿ, ಗಂಗಾಂಬಿಕೆ, ನೀಲಾಂಬಿಕೆ, ಅಕ್ಕಮಹಾದೇವಿ ಮೊದಲಾದ ಪಾತ್ರಗಳನ್ನು ಮಾಡುತ್ತಿದ್ದೆ. ಇಂದಿನ ನನ್ನ ಸಾಧನೆಗೆ ಬಾಳಪ್ಪಜ್ಜ ಅವರೇ ಕಾರಣ.

ನಾಟಕದ ಪ್ರಾಕ್ಟೀಸ್ ಮಾಡಿಸುತ್ತಿದ್ದಾಗ ನಾವಿಬ್ಬರು ಗಂಡ ಹೆಂಡತಿ ಸರಿಯಾದ ಸಮಯಕ್ಕೆ ಹೋಗುತ್ತಿದ್ದೆವು. ಆಗ ಬಾಳಪ್ಪಜ್ಜ ಅವರು ತಮ್ಮ ಕೈಗಡಿಯಾರ ನೋಡಿಕೊಳ್ಳುತ್ತಿದ್ದರು. ನಮ್ಮ ಸಮಯ ಪಾಲನೆ ಅವರಿಗೆ ಬಹಳ ಮೆಚ್ಚುಗೆಯಾಗುತ್ತಿತ್ತು. ಅವರಿಂದಲೇ ನಾವು ರಂಗಶಿಸ್ತು ರೂಢಿಸಿಕೊಂಡೆವು. ಕಲಾವಿದರು ಹೇಗೆ ಬದುಕಬೇಕು? ಹೇಗೆ ಇರಬೇಕು? ಎಂಬುದಕ್ಕೆ ಅವರು ಮಾದರಿಯಾಗಿದ್ದರು.
–ಸುಭದ್ರಮ್ಮ ಮನ್ಸೂರ್‌, ಹಿರಿಯ ರಂಗಕರ್ಮಿ
(ನಿರೂಪಣೆ: ಮಂಜುಶ್ರೀ ಎಂ. ಕಡಕೋಳ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT