ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಲ್ಶಿ ಎಂಟ್ರಣ್ಣ...

Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

–ಛಾಯಾ ಭಟ್‌

*

ತನಗೂ ಕಾಮಿಗೂ ವರುಷ, ಜೇಸೀಬಿಗೆ ನಿಮಿಷ ಎಂದು ಮರುಗುತ್ತ ಕುಳಿತ ಎಂಟ್ರಣ್ಣ ನೋಡನೋಡುತ್ತಿದ್ದಂತೆಯೇ ಜೇಸೀಬಿಯ ಚೂಪು ಬೆರಳಿನಂತಹ ಬಾಹು ಅವನ ಅಂಗಡಿಯನ್ನೆಲ್ಲ ಪುಡಿಗಟ್ಟುತ್ತಿತ್ತು. ಐದು ವರ್ಷಗಳ ಹಿಂದೆ ಇಟ್ಟಿಗೆಗಳನ್ನು ಒಂದೊಂದಾಗಿ ನೆಗ್ಗಿ ಎಂಟ್ರಣ್ಣನ ಕೈಗಿಟ್ಟಿದ್ದಳು ಕಾಮಿ, ಎಂಟ್ರಣ್ಣ ಭಕ್ತಿಯಿಂದ ಸಿಮೆಂಟು, ರೇತಿಯನ್ನು ಮಿಲಾಯಿಸಿ ಮಾಡಿದ ಮಸಾಲೆಯನ್ನು ಇಟ್ಟಿಗೆಗಳ ಮಧ್ಯೆ ಹೂಡಿ ಕಟ್ಟಿದ್ದ ಗಟ್ಟಿ ಗೋಡೆಗಳು ಇಂದು ಜೇಸೀಬಿಯ ಒಂದು ಕೆರೆತಕ್ಕೂ ಸೆಟೆದು ನಿಲ್ಲದೆ ತುಪತುಪನೆ ಉರುಳಿ ಮಣ್ಣಿನ ಗುಡ್ಡೆಗಳಾಗುತ್ತಿದ್ದವು. ಅಂಗಡಿಯಿದ್ದ ಜಾಗ ಕ್ಷಣ ಮಾತ್ರದಲ್ಲಿ ಮಣ್ಣಿನ ರಾಶಿಯಾಗುತ್ತಿತ್ತು.

ಎಂಟ್ರಣ್ಣನ ಹಿತ್ತಲಿನ ಪಕ್ಕದಲ್ಲೇ ರಸ್ತೆ ಹಾದು ಹೋಗಿದೆ. ಅದೆಂತಹ ರಸ್ತೆ ಗೊತ್ತೇ, ಕುಮಟೆಯಿಂದ ಅಘನಾಶಿನಿವರೆಗಿನ ಜನರಿಗೆಲ್ಲ ಅದು ಒಂದು ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಇದ್ದಂತಿತ್ತು. ಅಂತಹ ರಸ್ತೆಯ ಪಕ್ಕದಲ್ಲಿ ಅಂಗಡಿ ಇದ್ದರೆ ಚೆನ್ನ ಎಂದು ಮನೆಯಲ್ಲೇ ಮಾಡುತ್ತಿದ್ದ ಕ್ಷೌರ ವೃತ್ತಿಯನ್ನು ರಸ್ತೆಯ ಪಕ್ಕದಲ್ಲಿ ಎಂದರೆ ತನ್ನ ಹಿತ್ತಲ ತುದಿಗೆ ಹೊಸ ಅಂಗಡಿ ಕಟ್ಟಿ ಅಲ್ಲಿಗೇ ವರ್ಗಾಯಿಸಿದ್ದ ಎಂಟ್ರಣ್ಣ. ಕುಮಟೆ-ಕಾಗಾಲು ಬಸ್ಸುಗಳೆಲ್ಲ ಹಳಕಾರ್ ಕ್ರಾಸಿನ ರಸ್ತೆ ಅಂಚಿಗಿರುವ ಎಂಟ್ರಣ್ಣನ ಅಂಗಡಿ ಎದುರಿಗೆ ನಿಂತು ಹಜಕಾಡಲೂ ಆಗದಷ್ಟು ಜನರನ್ನು ಗಿಡಿದುಕೊಂಡು ತೊಣಪನಂತಾಗಿ ನಿಧಾನಕ್ಕೆ ಚಿತ್ರಗಿಯತ್ತ ಹೊರಳುತ್ತಿದ್ದವು. ತನ್ನ ಅಂಗಡಿಗೆ ಜನ ಕೊಡುವ ಕಿಮ್ಮತ್ತು ನೋಡಿ ಎಂಟ್ರಣ್ಣ ಕೂದಲು-ಗಡ್ಡ ಬೋಳಿಸಿಕೊಳ್ಳಲು ಬಂದವರ ಬಳಿಯೆಲ್ಲ ಊರಿನ ಕೋತ್ವಾಲನಂತೆ ಎಲ್ಲರ ಮನೆಯ ದೋಸೆಯ ತೂತಿನ ಬಗ್ಗೆ ಕೇಳಿ ತಿಳಿಯುತ್ತ, ತೂತನ್ನು ಮುಚ್ಚಬಹುದಾಗಿದ್ದ ಪರಿ ಪರಿಯ ಮಾರ್ಗಗಳ ಬಗ್ಗೆ ತನಗೆ ಅಗಾಧ ಅನುಭವ ಜ್ಞಾನವಿರುವಂತೆ ಸಲಹೆ ಕೊಡುತ್ತಿದ್ದ. ಎಂಟ್ರಣ್ಣನ ಸಕಲ ಸುದ್ದಿಗಳನ್ನು ಪ್ರತಿದಿನ ಕೇಳಿ ಕೇಳಿ ಅಂಗಡಿಯ ಗೋಡೆಯ ಮೇಲೆ ಅಂಗಿಯಿಲ್ಲದೆ ನಿಂತಿದ್ದ ಎದೆ ಬೋಳ ಸಲ್ಮಾನನೂ, ಮುಖ ಬೋಳ ಶಾರೂಖನೂ, ಬೆಕ್ಕಿನ ಮುಖದ ಹೃತಿಕನೂ ಎಂದೆಂದಿಗೂ ನಗುತ್ತಲೇ ಇರುತ್ತಿದ್ದರು.

ಜೇಸೀಬಿಯ ಮೊರೆತದಲ್ಲಿ ಗೋಡೆ ಮೇಲೆ ನಿಂತು ನಗುತ್ತಿದ್ದವರೆಲ್ಲ ಇಂದು ಮಣ್ಣಿನಲ್ಲಿ ಮುದ್ದೆಯಾಗಿ ಬಿದ್ದಿದ್ದರು. ಅಂಗಡಿಯಲ್ಲಿದ್ದ ಸಾಗವಾನಿಯ ಮೇಜಿನ ಮೇಲಿನ ಕತ್ತರಿ, ರೇಜರ್ರು, ಬಾಚಣಿಕೆ, ಕ್ರಿಮಿ ನಾಶಕ ಸಿಂಪಡಿಸುವಂತೆ ತಲೆಗೆ ನೀರನ್ನು ಸಿಡಿಸುವ ಹಳೆಯ ಕೋಲಿನ್ ಬಾಟಲಿ, ಒಂದಿಷ್ಟು ನಮೂನೆಯ ಎಣ್ಣೆ, ಕ್ರೀಮುಗಳೆಲ್ಲ ಮೊದಲೇ ಎಂಟ್ರಣ್ಣನ ಮನೆಯ ಆಶ್ರಯ ಪಡೆದಿದ್ದವಾದ್ದರಿಂದ ಅವೆಲ್ಲ ಬಚಾವಾಗಿಬಿಟ್ಟವು.

ಮೊದಲಿನಿಂದಲೂ ರೋಡನ್ನು ಅಗಲ ಮಾಡುವುದರ ಬಗ್ಗೆ ಎಂಟ್ರಣ್ಣನಿಂದ ತಕರಾರು ಇದ್ದೇ ಇತ್ತು. ಇರುವ ಕಚ್ಚೆ ಪಂಚೆಯಷ್ಟು ಜಮೀನು, ಈಗ ರಸ್ತೆ ಅಗಲ ಮಾಡಿದರೆ ಅದೂ ಹರಿದು ಬೀದಿ ಪಾಲಾಗುತ್ತದೆ. ಅಲ್ಲದೆ ರಸ್ತೆಯಲ್ಲೇನು ಯಾರು ಬಂದು ಮಲಗುತ್ತಾರೆಯೇ ಇಷ್ಟಗಲ ಮಾಡಲು, ರಸ್ತೆ ಹಾಳಾದರೆ ಮುಂದೊಂದು ದಿನ ಕಾಲ ಕೂಡಿ ಬಂದಾಗ ಡಾಂಬರ್ರು ಬಳಿದರೆ ಆಗಿತ್ತಪ್ಪ. ಊರವರ ಜಾಗ ತಿಂದು ರಸ್ತೆ ಅಗಲ ಮಾಡಿ ವೋಟು ಹೊಡೆಯುವ ರಾಜಕೀಯದ ಮಂದಿಗೆಲ್ಲ ಏನು ಗೊತ್ತು ಸೂಜಿ ಮೊನೆಯಷ್ಟು ದೊಡ್ಡ ಜಾಗದ ಬೆಲೆ?! ಕುಣಿಯಲು ಬರದವಳು ನೆಲ ಡೊಂಕು ಎಂದಂತೆ ಗಾಡಿ ಓಡಿಸಲು ಗೊತ್ತಿಲ್ಲದವರು ರಸ್ತೆ ಸರಿಯಿಲ್ಲ ಎಂದು ಹುಯಿಲು ಹಾಕುತ್ತಾರೆ ಅಂತ ತಲೆ, ಗಡ್ಡ ಮೀಸೆ ಹೆರೆಸಿಕೊಳ್ಳಲು ಬರುತ್ತಿದ್ದವರ ಬಳಿಯೆಲ್ಲ ಹೇಳಿ ಎತ್ತಿ ಕಟ್ಟಲು ಎಂಟ್ರಣ್ಣ ಬಹಳ ಪ್ರಯತ್ನಪಟ್ಟಿದ್ದ. ಆದರೇನು, ರಸ್ತೆ ಅಗಲ ಆಗಲೇ ಬೇಕೆಂದು ಊರವರ ಹಣೆಯಲ್ಲಿ ಬರೆದಿತ್ತಾದರೆ ಹತ್ತು ಎಂಟ್ರಣ್ಣರು ಬಂದರೂ ತಪ್ಪಿಸಲಾಗುತ್ತಿತ್ತೇ!!

ರಸ್ತೆಯಂಚಿಗಿನ ಜಾಗದಲ್ಲಿ ಸಣ್ಣ ಗೂಡಂಗಡಿ ಕಟ್ಟಿಕೊಂಡು ಸುತ್ತಲ ಊರಿಗೊಬ್ಬನೇ ಕ್ಯಾಲ್ಶಿ ಎಂದು ನಿಶ್ಚಿಂತನಾಗಿದ್ದ ಎಂಟ್ರಣ್ಣನಿಗೆ ಕನಸಿನಲ್ಲಿಯೂ ಎಣಿಸಿರದ ಈ ಸಮಸ್ಯೆ ನಿದ್ರೆಗೆಡಿಸಿತ್ತು. ರಸ್ತೆ ಅಗಲೀಕರಣಕ್ಕೆ ಹಳಕಾರಿನ ಮೊದಲನೆಯ ಹರಕೆಯ ಕುರಿ ಎಂಟ್ರಣ್ಣನ ಅಂಗಡಿ. ಅಂಗಡಿ ಚಿಕ್ಕದಾದರೂ ಅದನ್ನು ಕಟ್ಟಿಸಲು ಅವನು ಪಟ್ಟ ಕಟಪಟೆ ಹೇಳಿತೀರುವಂಥದ್ದಲ್ಲ. ಪಾಯಿಖಾನೆ ಕಟ್ಟಿಸುತ್ತೇನೆಂದು ಪಂಚಾಯ್ತಿಯಿಂದ ಪುಕ್ಕಟೆ ಹಣ ಪಡೆದು, ಫೋಟೊ ತೆಗೆಸಿ ಪಂಚಾಯ್ತಿಗೆ ಕೊಡಬೇಕೆಂದು ಪಾಯಿಖಾನೆಯ ಶಂಕುಸ್ಥಾಪನೆ ಮಾಡಿ ಅಂತೂ ಇಂತೂ ಒಂದು ಅಂಗಡಿಯನ್ನಂತೂ ಕಟ್ಟಿಕೊಂಡಿದ್ದ. ಎಂಟ್ರಣ್ಣನ ಅಂಗಡಿಯ ಒಂದು ಮೂಲೆಯಲ್ಲಿ ಈಗಲೂ ಪಾಯಿಖಾನೆಯಿದೆ, ಯಾರೂ ಬಳಸುತ್ತಿಲ್ಲ ಅಷ್ಟೇ, ಸಿಮೆಂಟಿನ ಚೀಲದಿಂದ ಮುಚ್ಚಿ ಮೇಲೊಂದು ಕಲ್ಲು ಹೇರಿಟ್ಟಿದ್ದಳು ಕಾಮಿ.

ಅಂಗಡಿ ಹೋಯ್ತು ಅಂತ ತಲೆ ಕೆಡಿಸಿಕೊಳ್ಳೂದರ ಬದಲು ಹೊರ ಜಗುಲಿಯ ತುದಿಗೆ, ತುಳಸಿ ಕಟ್ಟೆಯ ಬಗಲಲ್ಲಿ ಕುಳಿತು ಕ್ಷೌರಿಕ ವೃತ್ತಿ ಮಾಡಿದರಾಯ್ತಪ್ಪ, ಅಂಗಡಿ ಅಂತ ಕಟ್ಟುವ ಮುಂಚೆ ಅಲ್ಲೇ ಕುಳಿತು ಗಡ್ಡ ಹೆರೆದದ್ದಲ್ಲವೇ? ಅಂತ ಕಾಮಾಕ್ಷಿ ಅರ್ಥಾತ್ ಕಾಮಿ ಹಿತ ನುಡಿದಳು.

ಕಾಮಿ ಆಡಿದ್ದೇನು ಸುಳ್ಳಲ್ಲ. ಆದರೆ, ಎಂಟ್ರಣ್ಣನಿಗೆ ಅಂಗಡಿ ಹೋಗಿದ್ದರ ಚಿಂತೆಯ ಜೊತೆಗೆ ಮನೆಯಲ್ಲಿ ಕ್ಷೌರ ವೃತ್ತಿ ಹಚ್ಚಿಕೊಂಡರೆ ಏನು ಚೆಂದ, ಮಗಳು ಬೇರೆ ದೊಡ್ಡವಳಾಗಿದ್ದಾಳೆ ಎಂಬ ಯೋಚನೆ ಬೇರೆ.

ಕಾಮಾಕ್ಷಿ ಎಂಟ್ರಣ್ಣನ ಮೌನಕ್ಕೆ ಬೇರೆ ಅರ್ಥ ಕಂಡುಕೊಂಡಳು, ಮಳೆಗಾಲ ಶುರುವಾಗುವ ಹೊತ್ತಿಗೆ ಚಪ್ಪರವೋ ಅಥವಾ ಬೇರೆ ಏನಾದರೂ ವ್ಯವಸ್ಥೆ ಮಾಡಿಕೊಳ್ಳುವ. ಸದ್ಯಕ್ಕೆ ತುಳಸಿಕಟ್ಟೆಯ ಬಗಲಲ್ಲೇ ಕ್ಷೌರದ ಹಡಪ ಹಾಕಿಕೊಳ್ಳಿ ಎಂದಳು.

ಗಿರಾಕಿಗಳಿಗೆ ತುಳಸಿ ಕಟ್ಟೆಯ ಬಗಲಲ್ಲಿನ ಜಾಗ ಹೊಸದೇನಲ್ಲ ಎಂದು ಎಂಟ್ರಣ್ಣನಿಗೂ ಎನ್ನಿಸಿತು. ನಗು ಮುಖದ ಸಿನೇಮಾ ನಟರ ಚಿತ್ರ ಮಾತ್ರ ಇರುವುದಿಲ್ಲ ಬಿಟ್ಟರೆ ಮತ್ತೇನೂ ಭಾರಿ ವ್ಯತ್ಯಾಸ ಕಾಣಿಸದು ಅಂತ ಎಂಟ್ರಣ್ಣನೂ ಥಂಡಾದ. ಕೆಲಸದ ಹಡಪ ಪೇರಿಸುತ್ತ ಕುಳಿತ.

ಮರುದಿನ ಬೆಳಿಗ್ಗೆ ಬೋಣಿಗೆ ಮಾಡಲು ಗೋವಿಂದ ಬಂದ. ಬಡೀ ಮನುಷ್ಯ ಗೋವಿಂದ, ಅವನು ಎಲ್ಲಿ ನೋಡುತ್ತಾನೆ, ಯಾರೊಂದಿಗೆ ಮಾತನಾಡುತ್ತಿದ್ದಾನೆ ಎಂದು ಯಾರಿಗೂ ಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ. ಮೆಳ್ಳೆಗಣ್ಣಿನ ಗೋವಿಂದ ಅಮವಾಸ್ಯೆ ರಾತ್ರಿಯ ಮಳೆಯಲ್ಲಿ ಗುಡುಗುವಾಗ ಕಾಲು ಮುಂದಾಗಿ ಹುಟ್ಟಿದ್ದರಿಂದಲೇ ಮೆಳ್ಳೆಗಣ್ಣಾಗಿರುವುದು ಅಂತ ಊರಿನವರೆಲ್ಲ ನಂಬಿದ್ದರು. ಯಾರ ನಂಬಿಕೆ ಹೇಗೇ ಇರಲಿ ಗೋವಿಂದನ ಕಣ್ಣಿನ ಗುಡ್ಡೆಗಳು ಪೂರ್ವ ಪಶ್ಚಿಮಗಳನ್ನು ಒಮ್ಮೆಲೇ ನೋಡುತ್ತಿದ್ದವು.

ಎಂಟ್ರಣ್ಣ ಗೋವಿಂದನ ಕ್ಷೌರ ಮಾಡುತ್ತ ತನ್ನ ದುಃಖವನ್ನೆಲ್ಲ ಹೇಳಿಕೊಂಡು ಕರುಬಿಕೊಂಡ.

ತಲೆ, ದಾಡಿ ಮಾಡಿಯಾದ ಮೇಲೆ ಕಂಕುಳಿನ ಕೂದಲನ್ನೂ ತೆಗೆ ಎಂದು ಅಂಗಿ ಕಳಚಿ ಕೈ ಮೇಲೆತ್ತಿ ಕುಳಿತ ಗೋವಿಂದ. ವಯಸ್ಸಿಗೆ ಬಂದ ಮಗಳು ಅಲ್ಲೇ ಬಾವಿಯ ಪಕ್ಕ ಇರುವಾಗ ಗೋವಿಂದ ಅಂಗಿ ಬಿಚ್ಚಿ ಕೈ ಎತ್ತಿ ಕುಳಿತಿದ್ದು ಎಂಟ್ರಣ್ಣನಿಗೆ ತುಸು ಇರುಸುಮುರುಸು ಆಯ್ತು, ಆದರೂ ಗತಿಯಿಲ್ಲ.. ಗಿರಾಕಿಯಲ್ಲವೇ ಗೋವಿಂದ..!

ಎಂಟ್ರಣ್ಣ ಹೊಸ ಬ್ಲೇಡನ್ನು ರೇಜರ್ರಿಗೆ ಏರಿಸಿ ಗೋವಿಂದನ ಕಂಕುಳನ್ನು ಹೆರೆಯಬೇಕೆನ್ನುವಷ್ಟರಲ್ಲಿ ಎಂಟ್ರಣ್ಣನ ಮಗಳು ನಾಗವೇಣಿ ನೀರು ತುಂಬಿದ್ದ ಬಿಂದಿಗೆಯನ್ನು ಸೊಂಟದಿಂದಿಳಿಸಿ ರಸ್ತೆ ಮಾಡುವ ಮೇಸ್ತ್ರಿಯ ತಂಬಿಗೆಗೆ ಸುರಿಯುತ್ತಿದ್ದಿದ್ದು ಕಾಣಿಸಿತು.

ಎಂಟ್ರಣ್ಣನ ಮೈಯೆಲ್ಲ ಕಾವೇರಿ ಕೆಂಡವಾಗಿಹೋಯ್ತು, ಅಂಗಡಿ ಕೆಡವಿದ್ದಲ್ಲದೆ ನಮ್ಮನೆಯ ನೀರೇ ಬೇಕಾ ಗಂಟಲಿಗೆ ಹೊಯ್ಯಲು, ನನ್ನ ಮಗಳ ಮೇಲೆ ಎಷ್ಟು ದಿನಗಳಿಂದ ಕಣ್ಣು ಹಾಕಿದ್ದೆ ನಾಯಿ ಜಾತಿಯವನೆ.. ಅಂತ ತನ್ನ ಕೈಲಿದ್ದ ರೇಜರ್ರನ್ನು ಎಸೆದು ರಸ್ತೆ ಮಾಡುವ ಮೇಸ್ತ್ರಿಯ ಕೈ ಸಾರಿ ಮೈ ಸಾರಿ ಹೋದ ಎಂಟ್ರಣ್ಣ. ಎಂಟ್ರಣ್ಣನ ಮಗಳು ನಾಗವೇಣಿ ಗಲಿಬಿಲಿಗೊಂಡು ಹಿತ್ತಲಕಡೆಗೆ ಓಡಿದಳು.

ತಿಂಗಳುಗಟ್ಟಲೆಯಿಂದ ಊರಿನಲ್ಲಿ ರಸ್ತೆ ಅಳೆಯುತ್ತ, ಗುರುತು ಹಾಕುತ್ತಿದ್ದ ಮೇಸ್ತ್ರಿ ಎಂಟ್ರಣ್ಣನಿಗೆ ಹೊಸಬನೇನಲ್ಲ, ದಿನಾಲು ಎಂಟ್ರಣ್ಣನ ಅಂಗಡಿಗೆ ಬಂದು, ನಿನ್ನ ಅಂಗಡಿವರೆಗೆ ರಸ್ತೆ ಬರೂದಿಲ್ಲ, ಚಿಂತೆ ಮಾಡ್ಬೇಡ. ಅಂಗಡಿ ಆಚಿಗಿದ್ದ ಆಲದ ಮರ ಹೋಗ್ತದೆ ಎಂದು ಪೂಸಿ ಹೊಡೆದು ನಾಗವೇಣಿ ಕೈಲಿ ತಣ್ಣಗೆ ಒಂದು ಕೊಡಪಾನ ನೀರು ತರಿಸಿಕೊಂಡು ಎರಡು ಬಾಟಲಿಯಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದ.

ಅಂಗಡಿ ಕೆಡವಿದ ಮೇಸ್ತ್ರಿಗೆ ಎರಡು ಬಾರಿಸಲು ಎಂಟ್ರಣ್ಣನಿಗೆ ಒಂದು ಕಾರಣ ಬೇಕಿತ್ತು ಇಂದು. ಒಳ್ಳೇ ಅವಕಾಶ ಎಂದು ಇದೇ ವಿಷಯವನ್ನು ಮುಂದೆ ಮಾಡಿ ಗದ್ದಲ ಎಬ್ಬಿಸಿಬಿಟ್ಟ, ನಾಗವೇಣಿ ನೀರು ಕೊಟ್ಟರೆ ಕೈ ಹಿಡಿದು ಎಳೆತೀಯಾ ಹಲ್ಕಟ್ ಮೇಸ್ತ್ರಿ, ನಮ್ಮನೆ ಕಡೆ ಮುಖ ಹಾಕಿ ಮಲಗು ನಿನ್ನ ತಲೆ, ಮೀಸೆಯನ್ನು ಅರ್ಧ ಬೋಳಿಸಿ ನಿಮ್ಮೂರಿಗೆ ಓಡಿಸ್ತೇನೆ ಅಂತ ಗೌಜಿ ಹಾಕುತ್ತ ರಸ್ತೆವರೆಗೂ ತೌರಿಕೊಂಡು ಹೋದ.

ಇಷ್ಟು ಹೊತ್ತು ಕಂಕುಳನ್ನು ಹೆರೆಸಿಕೊಳ್ಳಲು ಕೈ ಮೇಲೆತ್ತಿ ಸುಮ್ಮನೆ ಕುಳಿತಿದ್ದ ಗೋವಿಂದ ಓಡಿ ಹೋಗಿ ಎಂಟ್ರಣ್ಣನನ್ನು ಹಿಡಿದು ಅಂಪಾಯಿಸುತ್ತ, ಎಂಟ್ರಣ್ಣ ಹೀಗೆಲ್ಲ ಗಲಾಟೆ ಮಾಡಿ ಹೊಡೆಯಲು ಹೋದರೆ ಊರಲ್ಲಿ ಮರ್ಯಾದಿ ಹೋಗೂದು ನಿಂದು. ಮೇಸ್ತ್ರಿ ಇನ್ನೊಂದೆರಡು ತಿಂಗಳು ಇಲ್ಲಿ ಹಡಬೆ ತಿರುಗಿ ಕಡೆಗೆ ಮತ್ತೊಂದು ಊರಿನ ಹಾದಿ ಹಿಡಿಯುತ್ತಾನೆ. ಎಂದು ಪ್ರಕರಣ ಅಲ್ಲಿಯೇ ಮುಗಿಯುವಂತೆ ಮಾಡಿದ.

ಎಂಟ್ರಣ್ಣನ ಮಾನ ಬಚಾವು ಮಾಡಿದ ಹಿರಿಮೆ ಗೋವಿಂದನಲ್ಲಿ ಬಂದಿತ್ತೋ, ಅಂಗಡಿ ಕಳೆದುಕೊಂಡ ಎಂಟ್ರಣ್ಣನಿಗೆ ದುಃಖ ಹೇಳಿಕೊಳ್ಳಲು ಒಬ್ಬರು ಬೇಕಾಗಿತ್ತೋ, ಒಟ್ಟಿನಲ್ಲಿ ಟೆಂಪೋ ಬಾಗಿಲಿಗೆ ಒರಗಿ ನಿಂತು ಅರ್ಧ ದೇಹವನ್ನು ಕಿಡಕಿಯ ಹೊರಗೆ ಹಾಕಿ ಜನ ಕಂಡಲ್ಲೆಲ್ಲ ಹೋಲ್ಡೇ ಎಂದು ಅರಚುವ ಮೆಳ್ಳೆಗಣ್ಣಿನ ಕಂಡಕ್ಟರ್ ಗೋವಿಂದ ಎಂಟ್ರಣ್ಣನಿಗೆ ಹತ್ತಿರನಾದ. ದಿನ ಬಿಟ್ಟು ದಿನವಾದರೂ ಗೋವಿಂದ ಗಡ್ಡ ಹೆರೆಸಿಕೊಳ್ಳಲು ಎಂಟ್ರಣ್ಣನ ಅಂಗಳಕ್ಕೆ ಎಡತಾಕತೊಡಗಿದ. ಗಡ್ಡ ಬೆಳೆಯದಿದ್ದರೆ ತಲೆಗೊಂದು ಮಸಾಜಿನ ನೆಪದಲ್ಲಾದರೂ ಎಂಟ್ರಣ್ಣನ ಜೊತೆ ಸುದ್ದಿಗಿಳಿಯಲು ಹಾಜರ್ರಾಗುತ್ತಿದ್ದ.

ಎಲ್ಲಿ ಏನೇ ಹರಿದುಬಿದ್ದರೂ, ಹೊಸ ದೋಸ್ತಿ ದೊರೆತರೂ ಎಂಟ್ರಣ್ಣನ ಕಣ್ಣು ಮಾತ್ರ ಹೊಲಸು ಮೇಸ್ತ್ರಿ ಮೇಲೇ, ಅಷ್ಟೇ ಅಲ್ಲ ಮೆಳ್ಳೆಗಣ್ಣು ಗೋವಿಂದನ ಮೇಲೂ ಇತ್ತು.. ಗೋವಿಂದ ಕ್ಷೌರ ಮಾಡಿಸಿಕೊಳ್ಳಲು ಬಂದ ಎಂದರೆ ತನ್ನ ಮಗಳನ್ನು ಒಂದಲ್ಲ ಒಂದು ಸಬೂಬು ಕೊಟ್ಟು ಆಚೆಮನೆಗೆ ಸಾಗಿಹಾಕಿಬಿಡುತ್ತಿದ್ದ. ಆಚೆಮನೆಯ ನಾಗಮ್ಮನ ಎರಡು ಪುಟ್ಟ ಮಕ್ಕಳೊಂದಿಗೆ ತನ್ನ ಮಗಳು ಎರಡು ತಾಸು ಕಳೆದರೂ ಚಿಂತೆಯಿಲ್ಲ, ಗೋವಿಂದನ ಕಣ್ಣಿಗೋ ಮೇಸ್ತ್ರಿ ಕಣ್ಣಿಗೋ ಬೀಳುವುದು ಬೇಡ ಎಂದು ಎಂಟ್ರಣ್ಣನ ಕಾಳಜಿ.

ಎಂಟ್ರಣ್ಣನಿಗೆ ಯಾವಾಗಲೂ ಇವರಿಬ್ಬರಲ್ಲಿ ಯಾರು ತನ್ನ ಮಗಳ ಮೇಲೆ ಬಲೆ ಬೀಸಿ ಹಾರಿಸಿಕೊಂಡು ಹೋಗುವ ಹುನ್ನಾರದಲ್ಲಿದ್ದಾರೋ ಏನೋ ಎಂಬ ಆತಂಕ!! ಎಂಟ್ರಣ್ಣನ ಮಗಳು ಬೇರೆ ಸಮವಸ್ತ್ರ ಧರಿಸುವ ದಿನಗಳನ್ನು ಕಳೆದು, ದೊಡ್ಡ ಕುತ್ತಿಗೆಯ ಬಣ್ಣದ ಚೂಡಿದಾರ್ ತೊಟ್ಟು, ಗಂಟಲಿಗೆ ದುಪಟ್ಟ ಉಡಿಸಿ ಹೋಗಬಹುದಾದ ಕಾಲೇಜಿನ ಮೆಟ್ಟಿಲನ್ನು ವರ್ಷದ ಹಿಂದೆ ದಣಿ ತುಳಿದಿದ್ದಾಳೆ. ಕಾಕಪೋಕನಂತ ಮೇಸ್ತ್ರಿ, ದಿನ ಬೆಳಗಾದರೆ ಮನೆಗೆ ಬರುವ ಗೋವಿಂದ, ಇವರಿಬ್ಬರ ಕಣ್ಣಿಗೆ ಮಗಳು ಬೀಳದಂತೆ ಎಚ್ಚರಿಕೆ ವಹಿಸುವುದೇ ತನ್ನ ಜವಾಬ್ದಾರಿ ಎಂದು ಮನಸ್ಸಲ್ಲಿ ಗಟ್ಟಿಮಾಡಿಕೊಂಡಿದ್ದ ಎಂಟ್ರಣ್ಣ. ತನ್ನ ಅಂಗಡಿಯನ್ನಂತೂ ಉಳುಚಿ ಹಾಕಿದ್ದಾಯಿತು, ಬೇಗ ಬೇಗ ರಸ್ತೆ ಕಾಮಗಾರಿಯೂ ಮುಗಿದು ಹೋಗಲಿ, ಮೇಸ್ತ್ರಿ ಕಾಟ ಖಾಯಂ ಆಗಿ ತಪ್ಪುತ್ತದೆ ಎಂಬುದು ಎಂಟ್ರಣ್ಣನ ಗ್ರಹಿಕೆ.

ನಾಗವೇಣಿ ಕೊಡಪಾನ ಸೊಂಟಕ್ಕೆ ಇಟ್ಟರೆ ಸಾಕು ಎಂಟ್ರಣ್ಣನ ಕಣ್ಣು ನಾಗವೇಣಿಯನ್ನು ಮತ್ತು ರಸ್ತೆ ಬದಿಗೆ ನಿಲ್ಲುವ ಮೇಸ್ತ್ರಿಯ ಎಮ್ಮೇಟಿ ಬೈಕನ್ನು ಹಿಂಬಾಲಿಸುತ್ತಿತ್ತು. ಕಾಮಾಕ್ಷಿಗೂ ಇರದಷ್ಟು ಸಂದೇಹ ಎಂಟ್ರಣ್ಣನಿಗೆ, ಮಗಳ ಮೇಲಲ್ಲ, ಮಗಳ ವಯಸ್ಸಿನ ಮೇಲೆ ಮತ್ತೆ ಅಪಾಪೋಲಿ ಮೇಸ್ತ್ರಿ ಮತ್ತು ಮೆಳ್ಳೆಗಣ್ಣಿನ ಗೋವಿಂದನ ಮೇಲೆ.

ಆವತ್ತು ಗೋವಿಂದನೂ ಇಲ್ಲ, ಬೇರೆ ಯಾವ ಗಿರಾಕಿಗಳೂ ಇಲ್ಲ ಎಂದು ಒಂದು ದಿನ ಆರಾಮಾಗಿ ರೇಡಿಯೋದಲ್ಲಿ ಬರುತ್ತಿದ್ದ ರಿಕಾರ್ಡು ಕೇಳುತ್ತ ಆರಾಮು ಖುರ್ಚಿಯಲ್ಲಿ ಕುಳಿತಿದ್ದ ಎಂಟ್ರಣ್ಣನ ಮನೆಗೆ ರೋಡ್ ರಿಪೇರಿ ಮೇಸ್ತ್ರಿ ಬಂದ. ಸ್ಪೇಷಲ್ ಕ್ಲಾಸಿದೆ ಎಂದು ಕಾಲೇಜಿಗೆ ಹೋದ ಮಗಳು ಮನೆಯಲ್ಲಿಲ್ಲ ಎಂದು ತಣ್ಣಗಿನ ಸ್ವರದಲ್ಲಿಯೇ ಮೇಸ್ತ್ರಿಯನ್ನು ಮಾತಾಡಿಸಿ ಎದುರಿಗಿದ್ದ ಕುರ್ಚಿಯಲ್ಲಿ ಕುಳ್ಳಲು ಹೇಳಿದ ಎಂಟ್ರಣ್ಣ.

ಹಳೆಯದೆಲ್ಲ ಮರೆತನವಂತೆ ಮೇಸ್ತ್ರಿ ತನ್ನ ಲಗ್ನ ಪತ್ರಿಕೆ ಕೊಡುತ್ತ, ನಿಮ್ಮನೆ ನೀರಿನ ಋಣ ಇತ್ತು ಕಾಣಿಸ್ತದೆ, ಉರಿಬಿಸಿಲಲ್ಲಿ ದಣಿದವನಿಗೆ ನೀರು ಕೊಟ್ರಿ ನೀವು. ನಾಗವೇಣಿ ಬೇರೆ, ನನ್ನ ತಂಗಿ ಬೇರೆ ಅಲ್ಲ. ಮನ್ಸಿಗೆ ಯಾವ್ದೂ ತಕ್ಕೊಳ್ಳದೆ ಮುಹೂರ್ತಕ್ಕೆ ಮುದ್ದಾಂ ಬರಬೇಕು. ಅಂತ ಅಕ್ಷತೆ ತಟ್ಟೆಯನ್ನು ಎಂಟ್ರಣ್ಣನ ಎದುರಿಗೆ ಮೆಸ್ತ್ರಿ ಹಿಡಿದಿದ್ದನೋ ಇಲ್ಲವೋ ಅಷ್ಟೊತ್ತಿಗೆ ಕಾಮಿ ಮನೆಯೊಳಗಿಂದ ದೌಡಾಯಿಸಿ ಬಂದಳು, ಯಾವ್ ಪೇಶಲ್ ಕ್ಲಾಸೂ ಇಲ್ಲಂತೆ. ಗೋಕರ್ಣ ಬ್ಯಾಲೇಲಿ ಯವ್ದೋ ಗಂಡ್ಸಿನ ಸಂತಿಗೆ ನಾಗ್ವೇಣಿ ಓಡಾಡ್ತಿದ್ದಿದ್ದು ನೋಡ್ದೆ ಅಂದ್ಕಂಡಿ ಮಂಜ ಫೋನ್ ಮಾಡಿದ್ದ ಅಂತ ಕಂಗಾಲು ಬಿದ್ದು ಹೇಳಿದಳು.

ಗೋವಿಂದಾ.. ಸಂತಿಗಿದ್ದವ ಗೋವಿಂದನೇ ಆಗಿರುದು, ಮೂರ್ಕಾಸಿನ ಗೋವಿಂದ ಇಂದು ಅದ್ಕಾಗೇ ಬರ್ಲಿಲ್ಲಮಾಂಗೆ ಕಾಣ್ತದೆ.. ಗೋವಿಂದನ ಸೊಂಟ ಮುರೀದೆಗಿದ್ರೆ ಕೇಳು ಎಂದು ಬೊಬ್ಬೆ ಕೊಡುವಷ್ಟರಲ್ಲಿ ಆಚೆಮನೆಯ ನಾಗಮ್ಮನ ಅರಚಾಟವೂ ಶುರುವಾಯ್ತು, ಎರ್ಡ್ ಮಕ್ಳ ಅಪ್ಪಾದ್ರೂ ಹೆಂಗ್ಸರ ಚಟ ಮಾತ್ರ ಬಿಡ್ಲಿಲ್ಲ.. ಆ ಹಾಳ್ಬಿದ್ದ ಹುಡ್ಗೀಗೇನ್ ರೋಗ ಹಿಡ್ದಿತ್ತು ಈ ಮುದ್ಕನ್ನ ನೋಡ್ಕಳ್ಳೂಕೆ. ಗೋಕರ್ಣಕ್ಕೋದ್ರೆ ಯಾರಿಗೂ ತಿಳಿಯೂದಿಲ್ಲಾ ಅಂದ್ಕಂಡ್ರಾ..

ಎಂಟ್ರಣ್ಣಂಗೆ ಅಂದಾಜಗೋಯ್ತು..

ಕಣ್ಣಲ್ಲಿ ಕಣ್ಣಿಟ್ಟು ಗಿಳಿ ಸಾಕ್ದ ಹಾಂಗೆ ಸಾಕ್ತೆ ಇದ್ದಿದ್ದೆ ಮಗ್ಳನ್ನ. ಆ ಎರ್ಡ ಮಕ್ಕಳಪ್ಪಂಗೆ ಏನು ಕಾಲ ಬಂದದೆ, ನಮ್ಮ ಹುಡ್ಗಿ ತಲೆ ಕೆಡ್ಸಿ ಜೀವನ ಹಾಳು ಮಾಡ್ಲಿಕ್ಕೆ ಹೊಂಚ್ತೆ ಇದ್ದಾ. ಸಾಯಿಲತ್ಲಾಗೆ, ಮೇಸ್ತ್ರಿನೋ, ಮೆಳ್ಳೆಗಣ್ಣು ಗೋವಿಂದನ್ನೋ ಕಟ್ಕಂಡಿದ್ರೂ ಇಷ್ಟು ಬೇಜಾರಾಗುಲ್ಲಾಗಿದ್ದೆ.. ನನ್ನ ಮಾನಾ ಹರಾಜಾಯ್ತಲ್ರೋ.. ನನ್ನ ಜೀವ್ನ ಸತ್ನಾಶ್ನ ಆಯ್ತಲ್ರೋ ಎಂದು ಎದೆ ಎದೆ ಬಡಿದುಕೊಳ್ಳುತ್ತ ಎಂಟ್ರಣ್ಣ ಮೇಸ್ತ್ರಿಯೊಂದಿಗೆ ಮೇಸ್ತ್ರಿಯ ಎಮ್ಮೇಟಿಯಲ್ಲಿ ಕುಳಿತು ಗೋಕರ್ಣಕ್ಕೆ ಧಾವಿಸಿದ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT