ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸು ಬಿಟ್ಟುಕೊಡದ ಬೋಪಣ್ಣ

Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮೂ‌ವತ್ತೇಳರ ವಯಸ್ಸಿನಲ್ಲಿ ಭಾರತದ ಪರವಾಗಿ ಟೆನಿಸ್‌ ಗ್ರ್ಯಾಂಡ್‌ ಸ್ಲ್ಯಾಮ್ ಪ್ರಶಸ್ತಿ ಗೆದ್ದವರು ರೋಹನ್ ಬೋಪಣ್ಣ. ಇಂಥ ಗೌರವಕ್ಕಾಗಿ ಸುದೀರ್ಘಾವಧಿ ನಡೆಸಿದ ಹೋರಾಟಕ್ಕೆ ತಡವಾಗಿಯೇ ಫಲ ಸಿಕ್ಕಿತೆನ್ನಬೇಕು. ಫ್ರೆಂಚ್‌ ಓಪನ್ ಟೆನಿಸ್‌ನಲ್ಲಿ ಅವರು ಇತ್ತೀಚೆಗೆ ಸಿಹಿಯುಂಡರು. ಕನಸುಗಳನ್ನು ಎಂದಿಗೂ ಬಿಟ್ಟುಕೊಡಬಾರದು ಎನ್ನುವ ಪಾಠವನ್ನು ಅವರು ಈ ಗೆಲುವಿನಿಂದ ಮಾಡಿದರು.

ಬೋಪಣ್ಣ ಗ್ರ್ಯಾಂಡ್‌ ಸ್ಲ್ಯಾಮ್‌ ಟೆನಿಸ್‌ ಪ್ರಶಸ್ತಿ ಗೆಲ್ಲಲು 14 ವರ್ಷ ಕಾಯಬೇಕಾಗಿ ಬಂತು. 2010ರಲ್ಲಿ ಯುಎಸ್‌ ಓಪನ್ ಟೆನಿಸ್‌ನಲ್ಲಿ ಪ್ರಶಸ್ತಿಗೆ ಅವರು ಹತ್ತಿರವಾಗಿದ್ದರು. ಪಾಕಿಸ್ತಾನದ ಐಸಮ್–ಹಕ್–ಕುರೇಷಿ ಜೊತೆಗೆ ಆಡಿ, ಆಗ ಫೈನಲ್ಸ್‌ ಪ್ರವೇಶಿಸಿದ್ದರು. ಅಂತಿಮ ಹಣಾಹಣಿಯಲ್ಲಿ ಗೆಲುವು ಸಿಗಲಿಲ್ಲ.

ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಹಾಗೂ ಸಾನಿಯಾ ಮಿರ್ಜಾ ಅವರನ್ನು ಬಿಟ್ಟರೆ ಗ್ರ್ಯಾಂಡ್‌ ಸ್ಲ್ಯಾಮ್ ಪ್ರಶಸ್ತಿ ಗೆದ್ದ ಭಾರತೀಯ ರೋಹನ್ ಮಾತ್ರ. ಈ ಸಾಧನೆ ಮಾಡಿದ ದೇಶದ ನಾಲ್ಕನೆಯವರು ಅವರು. ಕೆನಡಾದ ಗೇಬ್ರಿಯೆಲಾ ದಬ್ರೋಸ್ಕಿ ಜೊತೆಗೂಡಿ ಆಡಿ, ಅವರು ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ವಿಜಯ ಸಾಧಿಸಿದ್ದು. ರಾಬರ್ಟ್‌ ಫರಾ ಹಾಘೂ ಅನ್ನಾ–ಲೆನಾ ಗ್ರೋನ್‌ಫೆಲ್ಡ್‌ ಜೋಡಿ ವಿರುದ್ಧ 2–6, 6–2, 12–10ರಲ್ಲಿ ಸಾಕಷ್ಟು ಹೋರಾಡಿಯೇ ಅವರು ಗೆಲುವು ಸಾಧಿಸಿದ್ದು.

ಕಠಿಣ ಶ್ರಮದಿಂದ ಬೋಪಣ್ಣ ಬಾಲ್ಯದ ತಮ್ಮ ಕನಸನ್ನು ನನಸು ಮಾಡಿಕೊಂಡರು. ಅವರು 11ನೇ ವಯಸ್ಸಿನಲ್ಲಿ ಟೆನಿಸ್‌ ಆಡಲು ಪ್ರಾರಂಭಿಸಿದ್ದು. ಫುಟ್‌ಬಾಲ್‌ ಹಾಗೂ ಹಾಕಿಯಲ್ಲಿ ಅಷ್ಟು ಹೊತ್ತಿಗಾಗಲೇ ಒಂದು ಕೈ ನೋಡಿ ಆಗಿತ್ತು. 2002ರಲ್ಲಿ ಡೇವಿಸ್‌ ಕಪ್‌ನಲ್ಲಿ ಭಾರತದ ಪರವಾಗಿ ಆಡುವ ಅವಕಾಶ ಸಿಕ್ಕಿದ್ದು ಮೊದಲ ಬ್ರೇಕ್. ಡೇವಿಸ್‌ ಕಪ್‌ ಸಿಂಗಲ್ಸ್‌ ಹಾಗೂ ಡಬಲ್ಸ್‌ನಲ್ಲಿ ಭಾರತದ ಪ್ರಮುಖ ಗೆಲುವುಗಳಿಗೆ ಬೋಪಣ್ಣ ಕಾಣ್ಕೆ ನೀಡಿದರು. 2010ರಲ್ಲಿ ಬ್ರೆಜಿಲ್‌ ವಿರುದ್ಧ ಡೇವಿಸ್‌ ಕಪ್‌ನ ಮಹತ್ವದ ಪಂದ್ಯ ಗೆದ್ದುಕೊಟ್ಟು, ಭಾರತವು ‘ವರ್ಲ್ಡ್‌ ಗ್ರೂಪ್‌’ ಹಂತಕ್ಕೆ 19 ವರ್ಷಗಳ ನಂತರ ಏರಲು ಕಾರಣರಾಗಿದ್ದರು.

2007ರಿಂದ ಪಾಕಿಸ್ತಾನದ ಕುರೇಷಿ ಜೊತೆ ಆಡಲಾರಂಭಿಸಿದ ನಂತರ ಅವರಿಗೆ ಅದೃಷ್ಟ ಖುಲಾಯಿಸಿತು. ಮೂರೇ ವರ್ಷಗಳಲ್ಲಿ ಈ ಜೋಡಿಯನ್ನು ‘ಇಂಡೊ–ಪಾಕ್ ಎಕ್ಸ್‌ಪ್ರೆಸ್’ ಎಂದು ಕರೆದರು. 2010ರಲ್ಲಿ ಜೋಡಿಯು ವಿಬಲ್ಡನ್‌ ಕ್ವಾರ್ಟರ್‌ಫೈನಲ್ಸ್‌ ತಲುಪಿದ್ದೇ ಅಲ್ಲದೆ ಯುಎಸ್‌ ಓಪನ್‌ನಲ್ಲಿ ರನ್ನರ್ಸ್‌ ಅಪ್ ಆದರು. ಜೊಹಾನ್ಸ್‌ಬರ್ಗ್‌ ಓಪನ್‌ ಗೆದ್ದದ್ದೂ ಅದೇ ವರ್ಷ. ಐದು ಎಟಿಪಿ ಟೂರ್ನಿಗಳ ಫೈನಲ್ಸ್‌ ಪ್ರವೇಶಿಸಿದ ಸಾಧನೆ ಮಾಡಿದರು. 2013ರಲ್ಲಿ ಡಬಲ್ಸ್‌ನಲ್ಲಿ ವಿಶ್ವದ ಮೂರನೇ ರ‍್ಯಾಂಕ್‌ಗೆ ಏರಿದ್ದು ಅವರ ಜೀವಮಾನದ ಶ್ರೇಷ್ಠ ಸಾಧನೆ.

ಹುಲ್ಲು ಹಾಸಿನ ಅಂಗಳದಲ್ಲಿ ಹೆಚ್ಚು ಸುಲಲಿತವಾಗಿ ಆಡುತ್ತಿದ್ದ ಬೋಪಣ್ಣ ಎರಡು ವರ್ಷಗಳಿಂದೀಚೆಗೆ ಆವೆಮಣ್ಣಿನ ಅಂಗಳದಲ್ಲೂ ಉತ್ತಮವಾಗಿ ಆಡಲಾರಂಭಿಸಿದರು. ಅದರ ಫಲವೇ ಫ್ರೆಂಚ್‌ ಓಪನ್‌ ವಿಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT