ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷದ ನಡುವೆ ‘ಸನ್ನಡತೆ’ ಸಿಕ್ಕಿಕೊಂಡಾಗ...

Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನನಗೆ, ಕಕ್ಷಿದಾರರೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತುಕೊಳ್ಳುವುದೆಂದರೆ- ವಿವಿಧ ಜಾತಿ, ವರ್ಗ, ಗುಣಸ್ವಭಾವ, ರೂಪ ಮತ್ತು ಮನಸ್ಥಿತಿಯ ವ್ಯಕ್ತಿಗಳ ಅನಾವರಣವಾದಂತೆ. ಈ ಕಾರಣಕ್ಕಾಗಿ ನಾನು ನನ್ನ ವೃತ್ತಿಗೆ ಆಭಾರಿ.

ಒಂದು ಸಂಜೆ ಕಚೇರಿಯಲ್ಲಿ ಕೂತು ಸಹೋದ್ಯೋಗಿಗಳೊಂದಿಗೆ ಕೊಲೆ ಮೊಕದ್ದಮೆಯೊಂದರ ತಯಾರಿಯಲ್ಲಿ ತೊಡಗಿದ್ದೆ. ಮಹಿಳೆಯೊಬ್ಬಳ ಕೈಹಿಡಿದು ನಡೆಸುತ್ತಾ ಕಚೇರಿಯೊಳಗೆ ಬಂದ ವ್ಯಕ್ತಿಯೊಬ್ಬ, ‘ನನ್ನ ಹೆಸರು ಯದುನಂದನ, ಈಕೆ ನನ್ನ ಹೆಂಡತಿ ಶಾಂತಿಮೇರಿ’ ಎಂದು ಪರಿಚಯಿಸಿಕೊಂಡ. ಕುಳಿತುಕೊಳ್ಳಲು ಹೇಳಿದೆ. ಆಕೆ ಕುರ್ಚಿಯಲ್ಲಿ ಕೂರುವುದಕ್ಕೂ ಆತ ಸಹಾಯ ಮಾಡುತ್ತಿದ್ದ. ಅರೆಬರೆಯಾಗಿದ್ದ ನಮ್ಮ ಕೆಲಸ ಮುಗಿಯುತ್ತಿದ್ದಂತೆ ಅವರನ್ನು ಒಳಗೆ ಕರೆದು ಕೂರಿಸಿದೆ. ಆಗಲೂ ಆತ ಶಾಂತಿಮೇರಿಯನ್ನು ಕೂರಿಸಲು ನೆರವಾಗುತ್ತಿದ್ದ. ಅವರನ್ನು ನೋಡಿ ಆರ್ಥಿಕ ಸಹಾಯ ಕೇಳಲು ಬಂದಿರಬೇಕು ಎಂದು ಭಾವಿಸಿದೆ. ಬಂದ ಉದ್ದೇಶದ ಬಗ್ಗೆ ಅವರೇನೂ ಮಾತನಾಡದೆ ಇದ್ದುದನ್ನು ಕಂಡು, ಬಂದ ಉದ್ದೇಶ ಕುರಿತು ನಾನೇ ಪ್ರಶ್ನಿಸಿದೆ.

ಯದುನಂದನ, ‘ನಮ್ಮ ಯಜಮಾನರಾದ ರಾಚಪ್ಪ ಮತ್ತು ಅವರ ಇಬ್ಬರು ಸ್ನೇಹಿತರನ್ನು ಪೊಲೀಸರು ಕ್ರಿಮಿನಲ್ ಪ್ರಕರಣವೊಂದರಲ್ಲಿ ದಸ್ತಗಿರಿ ಮಾಡಿಕೊಂಡು ಹೋಗಿದ್ದಾರೆ. ಅವರನ್ನು ಬಿಡಿಸಿಕೊಡಬೇಕು’ ಎಂದು ನನ್ನ ಸಹಾಯ ಯಾಚಿಸಿದ. ಅಷ್ಟು ಹೇಳಿದ್ದನ್ನು ಬಿಟ್ಟರೆ ಪ್ರಕರಣಕ್ಕೆ ಸಂಬಂಧಪಟ್ಟ ಯಾವ ಉಪಯುಕ್ತ ವಿವರಗಳನ್ನೂ ಕೊಡಲಿಲ್ಲ. ಪೊಲೀಸ್ ಠಾಣೆಯ ಹೆಸರು, ರಾಚಪ್ಪನನ್ನು ಬಂಧಿಸಿದ ದಿನಾಂಕ, ಸಮಯ ಮುಂತಾದ ವಿವರಗಳನ್ನು ಪಡೆದು ‘ಪ್ರಥಮ ವರ್ತಮಾನ ವರದಿ (ಎಫ್‌ಐಆರ್‌) ಪಡೆಯಲು ಪ್ರಯತ್ನಿಸುತ್ತೇನೆ’ ಎಂದು ತಿಳಿಸಿ ಮಾರನೆಯ ದಿನ ಬರುವಂತೆ ಹೇಳಿದೆ.

ಮಾರನೆಯ ದಿನ ಯದುನಂದನ ತನ್ನ ಹೆಂಡತಿಯೊಂದಿಗೆ ಕಚೇರಿಗೆ ಬಂದಾಗ ಅವರೊಂದಿಗೆ ಇನ್ನಿಬ್ಬರಿದ್ದರು. ಅವರಲ್ಲಿ ಒಬ್ಬಾಕೆ ಕುಂಟಿ. ‘ಇವರು ನಲ್ಲತಿಮ್ಮ ಮತ್ತು ಅವನ ಹೆಂಡತಿ ಭಾಮ’ ಎಂದು ಯದುನಂದನ ಪರಿಚಯಿಸಿದ. ನಾನು ಕೋರ್ಟಿನಿಂದ ಪಡೆದುಕೊಂಡಿದ್ದ ಮಾಹಿತಿಯನ್ನು ಅವರಿಗೆ ಕೊಟ್ಟೆ.

‘ಅರಳಯ್ಯ ಎಂಬುವವರ ಹೆಂಡತಿ ಶ್ಯಾಮಲಾ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಪ್ರಕರಣದಲ್ಲಿ ರಾಚಪ್ಪ ಹಾಗೂ ಇತರರನ್ನು ಬಂಧಿಸಲಾಗಿದೆ’ ಎಂದೆ. ಬಂದವರು, ‘ನೀವೇ ಹೇಗಾದರೂ ಮಾಡಿ ಎಲ್ಲರನ್ನೂ ಜಾಮೀನಿನ ಮೇಲೆ ಹೊರತರಬೇಕು’ ಎಂದು ಕೋರಿದರು.

ಕೋರ್ಟಿನಲ್ಲಿ ಪ್ರಕರಣದ ಪ್ರಕ್ರಿಯೆ ಆರಂಭಿಸುವ ಮುನ್ನ ಸಾಮಾನ್ಯವಾಗಿ ಎಲ್ಲರಿಗೂ ಹೇಳುವಂತೆ ಇವರಿಗೂ ನನ್ನ ಶುಲ್ಕ (ಫೀಸ್‌) ಸಂಬಂಧಪಟ್ಟಂತೆ ಮಾತನಾಡಿಕೊಳ್ಳುವಂತೆ ಸೂಚಿಸಿದೆ. ಆಗ ಅವರು, ‘ನಮ್ಮ ಗೆಳೆಯ ಹುಸೇನ್ ಫೀಸಿನ ಬಗ್ಗೆ ಮಾತಾಡುತ್ತಾನೆ. ಆತ ನಾಳೆ ಬೆಂಗಳೂರಿಗೆ ಮರಳುವವನಿದ್ದಾನೆ. ಬಂದ ಕೂಡಲೇ ನಿಮ್ಮನ್ನು ಕಾಣುತ್ತೇವೆ’ ಎಂದು ತಿಳಿಸಿದರು. ಅವರೆಲ್ಲ ಮಾರನೆಯ ದಿನ ಹುಸೇನ್ ಮತ್ತು ಅವನ ಹೆಂಡತಿ ಹಸೀನಾ ಜೊತೆ ಬಂದರು. ಹಸೀನಾ, ಕಣ್ಣುಗಳು ಮಾತ್ರ ಕಾಣುವಂತೆ ಬುರ್ಖಾ ಧರಿಸಿದ್ದಳು. ಹುಸೇನನು ಶುಲ್ಕದ ವಿಚಾರದ ಬಗ್ಗೆ ಮಾತಿಗೆ ತೊಡಗುವ ಮುನ್ನ ‘ರಾಚಪ್ಪ ಕುರಿತಂತೆ ಒಂದೆರಡು ಮುಖ್ಯ ವಿಚಾರಗಳನ್ನು ತಿಳಿಸಬಹುದೇ’ ಎಂದು ಕೇಳಿದ. ‘ನಿಸ್ಸಂಕೋಚವಾಗಿ ಹೇಳಿ’ ಎಂದೆ. ಆಗ ಆತ, ‘ಸರ್, ರಾಚಪ್ಪ ಅರೆಸ್ಟ್ ಆದ ಮೇಲೆ ಅವರನ್ನು ಹೇಗೆ ಬಿಡಿಸಿಕೊಳ್ಳಬೇಕು ಎಂದು ದಿಕ್ಕು ತೋಚದೆ ಹಲವರಲ್ಲಿ ವಿಚಾರಿಸಿದೆ. ಅವರೆಲ್ಲರೂ ನಿಮ್ಮ ವಿಳಾಸ ಕೊಟ್ಟು, ಕಾಣುವಂತೆ ತಿಳಿಸಿದರು. ತಾವು ತುಂಬಾ ಸಾಮಾಜಿಕ ಕಳಕಳಿ ಉಳ್ಳವರೂ ಎಂದು ಹಲವರು ಹೇಳಿದರು..’ ಎಂದು ಮಾತು ಮುಂದುವರಿಸುತ್ತಿದ್ದಂತೆಯೇ, ‘ಇದ್ಯಾಕೋ ನನ್ನ ಫೀಸ್‌ಗೆ ಆಪತ್ತು ತರುವಂತೆ ಕಾಣುತ್ತದೆಯಲ್ಲ’ ಎಂದು ಮನಸ್ಸಿನಲ್ಲಿ ಅಂದುಕೊಂಡು, ‘ಬಿಡಿ, ಅದನ್ನೆಲ್ಲ ಬಿಟ್ಟು ಇನ್ನೇನಾದರೂ ಮುಖ್ಯ ವಿಷಯವಿದ್ದರೆ ತಿಳಿಸಿ’ ಎಂದೆ.

ಅವನಿಂದ ನನಗೆ ಗೊತ್ತಾದದ್ದು ಎಂದರೆ, ಬೆಂಗಳೂರಿನ ಶ್ರೀರಾಂಪುರದಲ್ಲಿ ಸುಮಾರು 30 ವರ್ಷಗಳಿಂದ ರಾಚಪ್ಪ ಒಂದು ಪ್ರಿಂಟಿಂಗ್ ಪ್ರೆಸ್ ಇಟ್ಟುಕೊಂಡಿದ್ದಾರೆ. ಅವರ ಬಿಡುಗಡೆಗೆ ಕೋರಿ ನನ್ನ ಬಳಿ ಬಂದಿದ್ದವರೆಲ್ಲಾ ಹದಿನೈದು ವರ್ಷಗಳಿಂದ ಅಲ್ಲಿ ಕೆಲಸ ಮಾಡುತ್ತಿದ್ದವರು. ರಾಚಪ್ಪ ತುಂಬಾ ಪ್ರಗತಿಪರರು ಮತ್ತು ಸಾಮಾಜಿಕ ಕಳಕಳಿಯುಳ್ಳವರು. ‘ಕುವೆಂಪು ವಿವಾಹ ಕೇಂದ್ರ’ ಎಂಬ ಸಂಸ್ಥೆಯನ್ನು ನಡೆಸುತ್ತಾ, ಅಲ್ಲಿ ಅಂಗವಿಕಲರಿಗೆ ವಧು ವರರನ್ನು ಗೊತ್ತುಮಾಡುವ ಕಾರ್ಯವನ್ನು ಬಹಳ ವರ್ಷಗಳಿಂದ ನಿರ್ವಹಿಸಿಕೊಂಡು ಬರುತ್ತಿದ್ದವರು. ಹಸೀನಾಳನ್ನು ಮದುವೆಯಾಗುವಂತೆ ಹಿಂದೆ ಬಿದ್ದಿದ್ದ ಒಬ್ಬ ದುಷ್ಕರ್ಮಿಯನ್ನು ಆಕೆ ನಿರಾಕರಿಸಿದಾಗ ಆ ದುಷ್ಕರ್ಮಿ, ಆಕೆಯ ಮುಖಕ್ಕೆ ಆ್ಯಸಿಡ್ ಹಾಕಿ ವಿರೂಪಗೊಳಿಸಿದ್ದ. ಆಕೆಯ ಎಡ ಭಾಗದ ಬುರ್ಖಾವನ್ನು ಬದಿಗೆ ಸರಿಸಿ ಎಡಗೆನ್ನೆ ಮತ್ತು ಎಡಕಿವಿ ಸಂಪೂರ್ಣವಾಗಿ ಸುಟ್ಟುಹೋಗಿರುವುದನ್ನು ಆತನೇ ತೋರಿಸಿದ. ಈ ಘಟನೆ ಆದ ಮೇಲೆ ಆಕೆಯನ್ನು ಮದುವೆ ಮಾಡಿಕೊಳ್ಳಲು ಹುಸೇನ್‌ಗೆ ಹೇಳಿದ್ದು ರಾಚಪ್ಪಾ ಅವರೇ. ಅಷ್ಟೇ ಅಲ್ಲದೆ ನನ್ನ ಕಚೇರಿಗೆ ಹಿಂದೆ ಬಂದಿದ್ದ ಕುಂಟಿ ಭಾಮ (ನಲ್ಲತಮ್ಮನ ಹೆಂಡತಿ) ಹಾಗೂ ದೃಷ್ಟಿಹೀನಳಾಗಿದ್ದ ಶಾಂತಿಮೇರಿ (ಯದುನಂದನ ಹೆಂಡತಿ ) ಇವರ ಮದುವೆಗೂ ರಾಚಪ್ಪನವರೇ ಕಾರಣವಾಗಿದ್ದರು. ಅಂದರೆ ರಾಚಪ್ಪನವರು ಅಂಗವಿಕಲರ ಬಗ್ಗೆ ಅಪರೂಪದ ಕಾಳಜಿ ವಹಿಸಿದ್ದು ಇದರಿಂದ ತಿಳಿಯಿತು.

ಹುಸೇನ್ ಮುಂದುವರಿದು, ’ನಾವು ಮದುವೆಯಾಗಿ ಎಂಟ್ಹತ್ತು ವರ್ಷಗಳೇ ಆಗಿವೆ. ನಮ್ಮನ್ನು ಈಗಲೂ ಪ್ರಿಂಟಿಂಗ್ ಪ್ರೆಸ್‍ನಲ್ಲಿ ಇರಿಸಿಕೊಂಡು ಒಳ್ಳೆಯ ಸಂಬಳ ಕೊಡುತ್ತಾ, ನಮ್ಮ ಕುಟುಂಬಗಳನ್ನು ಚೆನ್ನಾಗಿ ನೋಡಿಕೊಳ್ಳಲು ನೆರವಾಗುತ್ತಿದ್ದಾರೆ. ಅಷ್ಟೇ ಅಲ್ಲ. ರಾಚಪ್ಪ ಅವರು ಹುಟ್ಟು ದೃಷ್ಟಿಹೀನಳನ್ನು ಮದುವೆಯಾದವರು. ಮದುವೆಯಾಗಿ ಮೂವತ್ತು ವರ್ಷಗಳೇ ಕಳೆದರೂ ಎಂದೂ ಹೆಂಡತಿಯ ಮುಖದ ಮೇಲೆ ನೋವಿನ ಛಾಯೆ ಕಾಣದಂತೆ ಮಾಡಿರುವ ಮಹಾಪುರುಷ’ ಎಂದ. ‘ನೀವು ನಮ್ಮ ಪಾಲಿನ ದೇವರು’ ಎಂದು ರಾಚಪ್ಪ ಅವರನ್ನು ಯಾರಾದರೂ ಹೇಳಿದರೆ, ‘ನಾನೊಬ್ಬ ಪ್ರಗತಿಪರ ವ್ಯಕ್ತಿ ಅಷ್ಟೇ. ಹಾಗೆಲ್ಲ ಅನ್ನಬಾರದು ಎನ್ನುವ ಮಹಾನುಭಾವ ಅವರು’ ಎಂದು ಗದ್ಗದಿತನಾದ.

ಸುಧಾರಿಸಿಕೊಂಡು, ‘ಈಗ ಪ್ರಸ್ತುತ ವಿಷಯಕ್ಕೆ ಬರುತ್ತೇನೆ ಸರ್. ಈ ಪ್ರಕರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶ್ಯಾಮಲಾ, ಅಂಗವಿಕಲ ಹೆಣ್ಣು ಮಗಳು. ಇವಳನ್ನು ಅರಳಯ್ಯನಿಗೆ ಮದುವೆ ಮಾಡಿಸಿದವರೂ ರಾಚಪ್ಪನವರೇ. ಬಡವರಾಗಿರುವ ಅರಳಯ್ಯನಿಗೆ ತಮ್ಮ ತಂಗಿಯನ್ನು ಮದುವೆ ಮಾಡಿಸುವುದು ಶ್ಯಾಮಲಾಳ ಅಣ್ಣಂದಿರಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಎಷ್ಟು ಬೇಕೋ ಅಷ್ಟು ವರದಕ್ಷಿಣೆ ಕೊಟ್ಟಾದರೂ ಸೈ. ಸಿರಿವಂತನೊಡನೆಯೇ ಮದುವೆ ಮಾಡುವ ಆಸೆ ಅವರಿಗಿತ್ತು. ಆದರೆ ಅರಳಯ್ಯನವರ ಗುಣದ ಮುಂದೆ ಶ್ಯಾಮಲಾಳಿಗೆ ಬಡತನ ದೊಡ್ಡ ವಿಷಯ ಎನಿಸಲಿಲ್ಲ. ಅವರನ್ನೇ ಮದುವೆಯಾಗುವುದಾಗಿ ಹೇಳಿದಳು. ಆದ್ದರಿಂದ ರಾಚಪ್ಪನವರೇ ಮುಂದೆ ನಿಂತು ಮದುವೆ ಮಾಡಿಸಿದ್ದರು. ನಮಗೆಲ್ಲ ಗೊತ್ತಿರುವಂತೆ ಅರಳಯ್ಯ ಅವಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಅದೇನಾಯಿತೋ ಏನೋ ಆಕೆ ಆತ್ಮಹತ್ಯೆ ಮಾಡಿಕೊಂಡಳು. ಇದಕ್ಕೆ ರಾಚಪ್ಪಾಜಿನೇ ಕಾರಣ ಎಂದು ಆಕೆಯ ಸಹೋದರರು ಎಲ್ಲರ ವಿರುದ್ಧ ಸುಳ್ಳು ದೂರು ನೀಡಿದ್ದಾರೆ...’ ಎಂದ.

ಶ್ಯಾಮಲಾಳ ಅಣ್ಣಂದಿರು ನೀಡಿದ್ದ ದೂರಿನ ಮೇಲೆ ಕಣ್ಣಾಡಿಸಿದೆ. ‘ಅರಳಯ್ಯನಿಂದ ಶ್ಯಾಮಲಾಗೆ ಆಗುತ್ತಿದ್ದ ಕಿರುಕುಳದ ಸಂಬಂಧದಲ್ಲಿ ಪಂಚಾಯತಿಯನ್ನು ಏರ್ಪಡಿಸಿದಾಗ ರಾಚಪ್ಪಾಜಿ ಮತ್ತು ಅವರ ಸ್ನೇಹಿತರು ಹಾಜರಿದ್ದರು. `ನನ್ನ ಗಂಡನಿಂದ ಹಿಂಸೆಯಾಗುತ್ತಿದೆ, ಬದುಕಲು ಇನ್ನು ಸಾಧ್ಯವಿಲ್ಲ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದಾಗ ರಾಚಪ್ಪ ಮತ್ತು ಅವರ ಸ್ನೇಹಿತರು ‘ನಮ್ಮ ಎದುರಿಗೆ ಹಾಗೆ ಮಾಡಿಕೊಳ್ಳಬೇಡ, ನಾವು ಹೋದ ಮೇಲೆ ಮಾಡಿಕೋ’ ಎಂದು ಹೀಯಾಳಿಸುತ್ತಾ ಎದ್ದು ಹೋದರು, ಸ್ವಲ್ಪ ಹೊತ್ತಿನಲ್ಲೇ ಶ್ಯಾಮಲಾ ಆತ್ಮಹತ್ಯೆ ಮಾಡಿಕೊಂಡಳು’ ಎಂದು ದೂರು ದಾಖಲಿಸಲಾಗಿತ್ತು.

ರಾಚಪ್ಪನವರ ಬಗ್ಗೆ ತಿಳಿದುಕೊಂಡ ನನಗೆ ಅವರ ಸೇವೆಯ ಬಗ್ಗೆ ಹೆಮ್ಮೆ ಎನಿಸಿತು. ಅವರು ಶ್ರೇಷ್ಠವಾದ ಅರಿವನ್ನು ಸಿದ್ಧಿಸಿಕೊಂಡಿದ್ದಾರೆ ಎಂದು ಕಾಣಿಸಿತು. ‘ಕಾಲಿಲ್ಲದವರ ಬಯಕೆಗಳು ಓಡಾಡುವಂತೆ, ಕಣ್ಣಿಲ್ಲದವರ ಕನಸುಗಳು ಗರಿಬಿಚ್ಚುವಂತೆ, ಕುರೂಪವಿದ್ದರೂ ಬದುಕಿನ ಸೌಂದರ್ಯ ನೋಡುವಂತೆ ಅಂತಃಶಕ್ತಿಯನ್ನು ಹೆಚ್ಚಿಸಿ ಜೀವನೋತ್ಸಾಹ ತುಂಬುವಂತೆ ಮಾಡುತ್ತಿರುವ ರಾಚಪ್ಪನವರ ಕಾಯಕ ಅದ್ಭುತವಾದುದು. ಇಚ್ಛಾಶಕ್ತಿಯ ಮುಂದೆ ದೈಹಿಕ ಕೊರತೆಗಳು ಸೋಲುತ್ತವೆ ಎಂದು ಅವರು ತೋರಿಸಿಕೊಟ್ಟಿದ್ದಾರೆ. ವಿದ್ಯಾವಂತ ಯುವಕರು ವರೋಪಚಾರದ ಜೊತೆಗೆ ನೌಕರಿಯಲ್ಲಿರುವ ವಧುವನ್ನು ಮದುವೆಯಾಗಲು ಹಾತೊರೆಯುತ್ತಾರೆ, ಇನ್ನೊಂದು ರೀತಿಯ ವಿದ್ಯಾವಂತರು ವರದಕ್ಷಿಣೆ ಬೇಡಿಕೆಯಿಡದೆ ನೌಕರಿಯಲ್ಲಿರುವ ಹುಡುಗಿಯನ್ನು ಮದುವೆಯಾಗಿ ವರದಕ್ಷಿಣೆಯಿಲ್ಲದೆ ಮದುವೆಯಾಗಿರುವುದಾಗಿ ಬೀಗುತ್ತಾ ಆದರ್ಶದ ಮಾತುಗಳನ್ನಾಡುತ್ತಾರೆ. ನಿಮ್ಮನ್ನು ನೋಡಿದಾಗ ನನಗೆ ಹೆಮ್ಮೆ ಅನಿಸುತ್ತದೆ’ ಎಂದು ‘ಖಂಡಿತವಾಗಿಯೂ ನಾನು ಏನಾದರೂ ಮಾಡುತ್ತೇನೆ’ ಎಂದು ಭರವಸೆ ಇತ್ತೆ.

ಅಷ್ಟರೊಳಗೆನೇ, ನನ್ನೊಳಗೆ ರೂಪುಗೊಂಡಿದ್ದ ನಿರ್ಧಾರವನ್ನು ಅವರಿಗೆ ತಿಳಿಸಿದೆ. ‘ನಾನು ನನ್ನ ವೃತ್ತಿಯನ್ನು ಒಂದು ಧರ್ಮವೆಂದು ಭಾವಿಸಿದ್ದೇನೆ. ನನ್ನ ಸಹೋದ್ಯೋಗಿಗಳೂ ಹಾಗೆಯೇ. ಈ ಪ್ರಕರಣದಲ್ಲಿ ನನ್ನ ಸಹೋದ್ಯೋಗಿಗಳೂ ಮತ್ತು ನಾನು ನಿಮ್ಮಿಂದ ಶುಲ್ಕ ಪಡೆಯದೆ ಎಲ್ಲ ಆರೋಪಿಗಳ ಪರವಾಗಿ ವಕಾಲತ್ತು ವಹಿಸಲು ನಿರ್ಧರಿಸಿದ್ದೇವೆ’ ಎಂದಾಗ ಅಲ್ಲಿದ್ದ ಸಹೊದ್ಯೋಗಿಗಳು ಚಪ್ಪಾಳೆ ಹೊಡೆದರು. ಆಗ ನನಗೆ ನನ್ನ ಟೀಮ್ ಬಗ್ಗೆ ಅತೀವ ಹೆಮ್ಮೆ ಎನಿಸಿತು.

ಮಾರನೆಯ ದಿನವೇ ಜಾಮೀನು ಅರ್ಜಿ ಸಲ್ಲಿಸಿದೆ. ಕೆಲವೇ ದಿನಗಳಲ್ಲಿ ಎಲ್ಲರಿಗೂ ಜಾಮೀನು ಸಿಕ್ಕು ಜೈಲಿನಿಂದ ಹೊರಗೆ ಬಂದರು. ರಾಚಪ್ಪನವರು ನನಗೆ ಫೀಸ್‌ ಕೊಡಲು ಅನೇಕ ಪ್ರಯತ್ನ ಮಾಡಿದರಾದರೂ ಅದನ್ನು ಪಡೆಯುವುದು ಕೊಟ್ಟ ಮಾತಿಗೆ ದ್ರೋಹವಾಗುತ್ತದೆ ಎಂದು ಭಾವಿಸಿ ಅದನ್ನು ಎಂದೂ ಪಡೆಯಲಿಲ್ಲ.

ಶ್ಯಾಮಲಾಳ ಆತ್ಮಹತ್ಯೆ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆಗೆ ಬಂತು. ಆಕೆಯ ಶವ ಪರೀಕ್ಷೆ ಮಾಡಿದ್ದ ವೈದ್ಯರನ್ನು ಪಾಟಿ ಸವಾಲಿಗೆ ಒಳಪಡಿಸಲಾಯಿತು. ಅವರು ಶವದ ತೊಡೆ ಮತ್ತು ಬೆನ್ನಿನ ತಳಭಾಗದಲ್ಲಿ ಬಿಳಿ ಮಚ್ಚೆಗಳು (ತೊನ್ನು) ಇದ್ದು ಅದನ್ನು ಹಾಗೆಯೇ ಬಿಟ್ಟಿದ್ದರೆ ಮುಖ, ಕೈ ಕಾಲುಗಳಿಗೂ ವಿಸ್ತರಿಸುತ್ತಿತ್ತು’ ಎಂಬ ಅಂಶವನ್ನು ಹೇಳಿದರು. ಅದನ್ನು ನ್ಯಾಯಾಲಯ ದಾಖಲಿಸಿಕೊಂಡಿತು. ಆಕೆಯ ಅಣ್ಣ ತಮ್ಮಂದಿರಿಗೆ ಈ ವಿಷಯ ಗೊತ್ತಿರಲಿಲ್ಲ ಎಂಬ ವಿಷಯವೂ ವಿಚಾರಣೆ ವೇಳೆ ತಿಳಿಯಿತು.

ಆಕೆಯ ಸಹೋದರರು ನೀಡಿದ್ದ ದೂರಿನಂತೆ ಯಾವ ಪಂಚಾಯಿತಿಯೂ ನಡೆದಿರಲಿಲ್ಲ. ಈ ಆರೋಪ ಹೊರಿಸಿದ್ದು ಕೇವಲ ಸೇಡಿಗಾಗಿ’ ಎಂಬೆಲ್ಲಾ ಅಂಶಗಳನ್ನು ಕೋರ್ಟ್‌ನಲ್ಲಿ ಸಾಬೀತು ಮಾಡಿದೆ. ಕೋರ್ಟ್‌ ಅನುಮತಿ ಪಡೆದು ಅರಳಯ್ಯನನ್ನು ಸಾಕ್ಷಿದಾರರನ್ನಾಗಿ ಮಾಡಿಸಿದೆ. ತೊನ್ನು ಇರುವ ವಿಚಾರ ತನಗೆ ಗೊತ್ತಿತ್ತೆಂದೂ, ಅದನ್ನು ಬೇರೆಯವರಿಗೆ ಹೇಳಿಲ್ಲವೆಂದೂ ಹೇಳಿದ. ತೊನ್ನಿನ ಬಗ್ಗೆ ಶ್ಯಾಮಲಾ ತೀರಾ ತಲೆ ಕೆಡಿಸಿಕೊಂಡಿದ್ದರೂ, ಇದೇನು ದೊಡ್ಡ ವಿಷಯ ಅಲ್ಲ ಬಿಡು ಎಂದು ಹೆಂಡತಿಗೆ ಸಮಾಧಾನ ಮಾಡಿದ್ದನ್ನೂ ಆತ ಹೇಳಿದ. ಹುಸೇನ್, ನಲ್ಲತಮ್ಮ, ಯದುನಂದನ ಮತ್ತು ಅವರ ಹೆಂಡತಿಯರನ್ನು ಸಾಕ್ಷಿಗಳನ್ನಾಗಿಸಿ ವಿಚಾರಣೆ ಮಾಡಿದಾಗ ‘ಭಾರತೀಯ ಸಾಕ್ಷ್ಯ ಕಾಯ್ದೆ’ಯ 54ನೇ ಕಲಮಿನ ಅನ್ವಯ ರಾಚಪ್ಪಾ ಅವರ ಆದರ್ಶ ವ್ಯಕ್ತಿತ್ವವನ್ನು ಸಾಬೀತುಗೊಳಿಸಿದೆ.

ಒಂದು ಕ್ರಿಮಿನಲ್ ಪ್ರಕರಣದ ವಿಚಾರಣೆಯಲ್ಲಿ ಆರೋಪಿಯು ದುರ್ನಡತೆ ಉಳ್ಳವನಾಗಿದ್ದರೂ ಅದು ಅಪ್ರಸ್ತುತವಾಗುತ್ತದೆ. ಆದರೆ ಸನ್ನಡತೆಯುಳ್ಳವನೆಂದು ಸಾಕ್ಷ್ಯಗಳ ಮೂಲಕ ಸಾಬೀತು ಪಡಿಸಿದರೆ ಅದು ಪ್ರಕರಣದಲ್ಲಿ ಪ್ರಸ್ತುತವಾಗುತ್ತದೆ ಎಂದು ಈ ಕಲಮು ಸೂಚಿಸುತ್ತದೆ (ಒಬ್ಬ ವ್ಯಕ್ತಿಯ ಸನ್ನಡತೆಯನ್ನು ಸಾಕ್ಷ್ಯಗಳ ಮೂಲಕ ನಿರೂಪಿಸಬಹುದಾದ ಹತ್ತು ಸಾವಿರ ಪ್ರಕರಣಗಳಲ್ಲಿ ಒಂದರಲ್ಲಿ ಮಾತ್ರ ಈ ಕಲಮು ಅನ್ವಯವಾಗುತ್ತದೆ ಎನ್ನಬಹುದು).

ಪ್ರಕರಣದ ವಾದ ಪ್ರತಿವಾದಗಳ ನಂತರ ನ್ಯಾಯಾಧೀಶರು, ‘ಮೃತರಾದ ಶ್ಯಾಮಲಾ ಅವರ ಸಹೋದರರು ನೀಡಿದ್ದ ದೂರು ಮತ್ತು ಸಾಕ್ಷ್ಯವು ಕೇವಲ ಆಕ್ರೋಶಭರಿತವಾದದ್ದು. ತನ್ನ ತೊನ್ನಿನ ಕಾಯಿಲೆ ಎಲ್ಲೆಡೆ ಹರಡಿ ಎಲ್ಲರಿಗೂ ತಿಳಿಯುತ್ತದೆ ಎಂಬ ಚಿತ್ತಕ್ಷೋಭೆಗೆ ಒಳಗಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಸಾಬೀತಾಗಿರುವುದಲ್ಲದೇ, ಆರೋಪಿ ರಾಚಪ್ಪಅವರ ಸನ್ನಡತೆಯೂ ಸಾಕ್ಷ್ಯಗಳ ಮೂಲಕ ದೃಢಪಟ್ಟಿದೆ. ಆದ್ದರಿಂದ ಆರೋಪಿಗಳನ್ನು ದೋಷಮುಕ್ತ ಮಾಡುತ್ತಿದ್ದೇವೆ’ ಎಂದು ತೀರ್ಪು ಪ್ರಕಟಿಸಿದರು.

`ಕೇವಲ ಪದವಿ, ಹಣ, ಅಂತಸ್ತು, ಅಧಿಕಾರ ಇದ್ಯಾವುದರಿಂದಲೂ ಅಲ್ಲ, ನಿಜವಾದ ಮಾನವೀಯ ಕಾಳಜಿಯಿಂದ ಮಾತ್ರ ನಾವು ಭಿನ್ನರಾಗಿ ನಿಲ್ಲಬಹುದು’ ಎಂಬ ಮಾತು ಈ ಪ್ರಕರಣದ ನಂತರ ಆಗಾಗ್ಗೆ ಅನಿಸುತ್ತಿರುತ್ತದೆ.

(ಹೆಸರುಗಳನ್ನು ಬದಲಾಯಿಸಲಾಗಿದೆ)

ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT