ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗಿದ 17 ಜಿಲ್ಲೆಗಳು; 153 ಬಲಿ

ಬಿಹಾರ: ಮುಂದುವರೆದ ನೆರೆ ಹಾವಳಿ, ಪ್ರವಾಹ ಪೀಡಿತರ ಸಂಖ್ಯೆ 1 ಕೋಟಿಗೂ ಅಧಿಕ
Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಪಟ್ನಾ: ಬಿಹಾರದಲ್ಲಿ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹಕ್ಕೆ ಬಲಿಯಾಗಿರುವವರ ಸಂಖ್ಯೆ 153ಕ್ಕೆ ಏರಿದೆ.

17 ಜಿಲ್ಲೆಗಳು ಪ್ರವಾಹಪೀಡಿತವಾಗಿದ್ದು, 1 ಕೋಟಿಗೂ ಅಧಿಕ ಜನರು ಸಂತ್ರಸ್ತರಾಗಿದ್ದಾರೆ. ಅರರಿಯಾ ಜಿಲ್ಲೆಯೊಂದರಲ್ಲೇ ಮಳೆ ಸಂಬಂಧಿ ದುರ್ಘಟನೆಗಳಲ್ಲಿ 30 ಜನರು ಮೃತಪಟ್ಟಿದ್ದಾರೆ.

ಪಶ್ಚಿಮ ಚಂಪಾರಣ್‌ನಲ್ಲಿ 23, ಸೀತಾಮಡೀಯಲ್ಲಿ 13, ಕಿಸಾನ್‌ಗಂಜ್‌, ಪೂರ್ವ ಚಂಪಾರಣ್‌ ಮತ್ತು ಸುಪೌಲ್‌ ಜಿಲ್ಲೆಗಳಲ್ಲಿ ತಲಾ 11 ಮಂದಿ, ಪೂರ್ಣಿಯಾ ಮತ್ತು ಮಾಧೇಪುರ ಜಿಲ್ಲೆಗಳಲ್ಲಿ ತಲಾ 9, ಮಧುಬನಿಯಲ್ಲಿ 8 ಹಾಗೂ ಕಟಿಹಾರ್‌ನಲ್ಲಿ 7 ಜನರು ಪ್ರಾಣಕಳೆದುಕೊಂಡಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆಯ ಅನಿರುದ್ಧ್‌ ಕುಮಾರ್‌ ಹೇಳಿದ್ದಾರೆ.

‘17 ಜಿಲ್ಲೆಗಳು ಮತ್ತು 1,688 ಪಂಚಾಯಿತಿಗಳ 1.08 ಕೋಟಿ ಮಂದಿ ಪ್ರವಾಹಪೀಡಿತರಾಗಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಶನಿವಾರ ಹೊಸದಾಗಿ ಸಾರಣ್‌ ಜಿಲ್ಲೆಯನ್ನು ಪ್ರವಾಹ ಪೀಡಿತ ಜಿಲ್ಲೆಗಳ ಪಟ್ಟಿಗೆ ಸೇರಿಸಲಾಗಿದೆ ಎಂದಿದ್ದಾರೆ. ರಾಜ್ಯದ ವಿವಿಧ ಕಡೆಗಳಲ್ಲಿ ಸ್ಥಾಪಿಸಲಾಗಿರುವ ಪರಿಹಾರ ಶಿಬಿರ
ಗಳಲ್ಲಿ 3.92 ಲಕ್ಷ ಜನರಿಗೆ ಆಶ್ರಯ ನೀಡಲಾಗಿದೆ.

ಭಾರಿ ಮಳೆ ಮುನ್ಸೂಚನೆ: ಪಟ್ನಾ, ಗಯಾ, ಭಾಗಲ್ಪುರ ಮತ್ತು ಪೂರ್ಣಿಯಾಗಳಲ್ಲಿ ಭಾನುವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪರಿಶೀಲನೆ: ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಪ್ರವಾಹ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಭೀಕರ ಪ್ರವಾಹ ಪರಿಸ್ಥಿತಿ ಇರುವ ಪ್ರದೇಶಗಳಿಗೆ ಆಹಾರ ಪೊಟ್ಟಣ ಪೂರೈಸಲು ಅವರು ನಿರ್ದೇಶಿಸಿದ್ದಾರೆ.

ಹಾಳಾಗಿರುವ ರಸ್ತೆ ಮತ್ತು ಸೇತುವೆಗಳನ್ನು ದುರಸ್ತಿ ಮಾಡುವುದಕ್ಕಾಗಿ ಗಡಿ ರಸ್ತೆ ನಿರ್ಮಾಣ ಸಂಸ್ಥೆಯನ್ನು (ಬಿಆರ್‌ಒ) ಸಂಪರ್ಕಿಸುವಂತೆಯೂ ಸೂಚಿಸಿದ್ದಾರೆ.
ರೈಲು ಸಂಚಾರಕ್ಕೆ ಅಡ್ಡಿ: ಈ ಮಧ್ಯೆ, ನೆರೆ ಪರಿಸ್ಥಿತಿಯಿಂದಾಗಿ ಹಲವು ರೈಲುಗಳ ಸಂಚಾರಕ್ಕೆ ಅಡ್ಡಿಯಾಗಿದೆ.
*
ಉತ್ತರ ಪ್ರದೇಶ: ಮೃತರ ಸಂಖ್ಯೆ 42ಕ್ಕೆ
ಲಖನೌ: ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ತೀವ್ರ ಸ್ವರೂಪ ಪಡೆದಿದ್ದು, ಇದುವರೆಗೆ 42 ಜನರು ಮೃತಪಟ್ಟಿದ್ದಾರೆ.

23 ಜಿಲ್ಲೆಗಳ 2 ಸಾವಿರ ಗ್ರಾಮಗಳ 15 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ.ಗೋರಖಪುರ ಮತ್ತು ಅದರ ಅಕ್ಕ ಪಕ್ಕದ ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿವೆ. ಗೋರಖಪುರ, ಮಹಾರಾಜ್‌ಗಂಜ್‌ ಮತ್ತು ಕುಷೀನಗರ ಜಿಲ್ಲೆಗಳಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಿಗಾಗಿ ಸೇನೆಯ ನೆರವು ಪಡೆಯಲಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶನಿವಾರ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.

ಗೋರಖಪುರ ಜಿಲ್ಲೆಯ ನೌಸರ್‌ ಬುಂಧ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಜಲಾವೃತವಾಗಿರುವುದರಿಂದ ಲಖನೌ ಮತ್ತು ಗೋರಖಪುರಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಮುಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT