ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ ಹೊಟ್ಟೆ ಪಾಡು, ಪ್ರವೃತ್ತಿ ಹೃದಯದ ಹಾಡು

ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಮನದ ಮಾತು ಬಿಚ್ಚಿಟ್ಟ ಲೇಖಕಿ ಎಚ್.ಗಿರಿಜಮ್ಮ
Last Updated 19 ಆಗಸ್ಟ್ 2017, 20:01 IST
ಅಕ್ಷರ ಗಾತ್ರ

ಬೆಂಗಳೂರು: ‘ವೃತ್ತಿ (ವೈದ್ಯೆ) ಹೊಟ್ಟೆ ಪಾಡು, ಪ್ರವೃತ್ತಿ (ಸಾಹಿತ್ಯ) ಹೃದಯದ ಹಾಡು. ನನಗೆ ಇವೆರಡೂ ಒಂದಕ್ಕೊಂದು ಪೂರಕ’ ಎಂದು ಲೇಖಕಿ ಡಾ.ಎಚ್.ಗಿರಿಜಮ್ಮ ಅವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಲ್ಲಿ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ–190’ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಅವರು ಮಾತನಾಡಿದರು.

‘ವೈದ್ಯೆ ಆಗಿದ್ದರಿಂದಲೇ ನಾನು ವೈದ್ಯಕೀಯ ಸಾಹಿತ್ಯ ಲೋಕಕ್ಕೆ ಕಾಲಿಟ್ಟೆ. ಇಲ್ಲವಾಗಿದ್ದರೆ ನಾನು ಈ ಸ್ಥಾನದಲ್ಲಿ ಬಂದು ನಿಲ್ಲಲು ಆಗುತ್ತಿರಲಿಲ್ಲ. ನನ್ನ ತಾಯಿ ಸಾಕಷ್ಟು ಕಥೆ–ಕಾದಂಬರಿಗಳನ್ನು ಓದುತ್ತಿದ್ದರು. ಚಿಕ್ಕವಳಿದ್ದಾಗ, ಅರ್ಥವಾಗದಿದ್ದರೂ ಅವುಗಳನ್ನು ಓದುತ್ತಿದ್ದೆ. ಆ ಮೂಲಕ ಸಾಹಿತ್ಯದ ಗೀಳು ಹತ್ತಿಸಿಕೊಂಡೆ’ ಎಂದು ಹೇಳಿದರು.

ತಾಯಿಯ ಆಸೆ: ‘ನಾನು ವೈದ್ಯೆ ಆಗಬೇಕೆಂಬುದು ತಾಯಿಯ ಆಸೆ. ಅವರ  ಆಸೆ ಈಡೇರಿಸಿದೆ. ಆದರೆ, ನನ್ನ ವೃತ್ತಿ ಆಕೆಗೆ ಖುಷಿ ಕೊಡಲಿಲ್ಲ’ ಎಂದು ತಿಳಿಸಿದರು.

‘ಭ್ರಷ್ಟಾಚಾರದ ವಿರೋಧಿಯಾಗಿದ್ದ ನಾನು ಯಾರ ಬಳಿಯೂ ಲಂಚ ಪಡೆಯುತ್ತಿರಲಿಲ್ಲ. ಇದರಿಂದ ತಾಯಿ ಸಿಟ್ಟು ಮಾಡಿಕೊಳ್ಳುತ್ತಿದ್ದರು. ವೈದ್ಯಳಾದ ಬಳಿಕ ಹೆಚ್ಚು ಸಂಪಾದನೆ ಮಾಡಬಹುದು ಎಂಬುದು ಅವರ ನಿರೀಕ್ಷೆ ಆಗಿತ್ತು.  ಬೇರೆ ವೈದ್ಯರಂತೆ ನಾನು ಹೆಚ್ಚು ಹಣ ಸಂಪಾದಿಸುತ್ತಿಲ್ಲ ಎಂಬ ಕೊರಗು ಅವರದ್ದು. ಬಡತನದಲ್ಲೇ ಬೆಳೆದ ಅವರ ಈ ಆಲೋಚನೆ ತಪ್ಪು ಎನ್ನಲಾಗದು’ ಎಂದರು.

‘ಕೊನೆಗಾಲದ ಆರು ವರ್ಷಗಳು ತಾಯಿ ನನ್ನ ಜೊತೆಯೇ ಇದ್ದರು. ಅವರನ್ನು ಚೆನ್ನಾಗಿ ಆರೈಕೆ ಮಾಡಿದ್ದೆ. ಈ ಬಗ್ಗೆ ಅವರೂ ಹೆಮ್ಮೆ ಪಟ್ಟುಕೊಂಡಿದ್ದರು’ ಎಂದು ಭಾವುಕರಾದರು.

‘ಸಾಹಿತ್ಯವು ನನಗೆ ಸಹೃದಯತೆ, ಸಂಯಮ, ತಾಳ್ಮೆಯನ್ನು ಕಲಿಸಿತು. ರೋಗಿಗಳ ಜತೆಗೆ ಆತ್ಮೀಯವಾಗಿ ಬೆರೆಯಲು ಇದು ನೆರವಾಯಿತು. ಇಂದು ವೈದ್ಯರು ಹಾಗೂ ರೋಗಿಗಳ ನಡುವಿನ ಅಂತರ ಹೆಚ್ಚುತ್ತಿದೆ’ ಎಂದರು.

ಕೀಳರಿಮೆ ಮೆಟ್ಟಿನಿಂತೆ: ‘ನಾನು ನೋಡಲು ಕಪ್ಪಗಿದ್ದೆ. ಯಾರಾದರೂ ಈ ಬಗ್ಗೆ ಮಾತಾಡಿದರೆ ಬೇಸರವಾಗುತ್ತಿತ್ತು. ಏನಾದರೂ ಸಾಧಿಸಿದರೆ ನನ್ನನ್ನು ಎಲ್ಲರೂ ಹೊಗಳುತ್ತಾರೆ ಎಂದು ಭಾವಿಸಿ ಚೆನ್ನಾಗಿ ಓದಿ ವೈದ್ಯಳಾದೆ. ಜತೆ ಜತೆಗೆ ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡೆ’ ಎಂದು ಹೇಳಿದರು.

***

‘ಸಾಹಿತ್ಯದಿಂದ ದೂರವಾಗಲು ಮೊಬೈಲ್ ಕಾರಣ’

‘ಯುವಜನರ ಕೈಗೆ ಮೊಬೈಲ್‌ ಬಂದ ಮೇಲೆ ಯುವಜನರ ಸೃಜನಾತ್ಮಕ ಚಟುವಟಿಕೆ ಸ್ಥಗಿತಗೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ. ಸಾಹಿತ್ಯದಿಂದ ಯುವಪೀಳಿಗೆ ದೂರ ಉಳಿಯಲು ಇವುಗಳೇ ಕಾರಣ’ ಎಂದು ಗಿರಿಜಮ್ಮ ಆತಂಕ ವ್ಯಕ್ತಪಡಿಸಿದರು.

‘ಮೊಬೈಲ್, ಕಂಪ್ಯೂಟರ್ ಬಳಕೆ ಹೆಚ್ಚಾದಂತೆ ಜ್ಞಾಪಕಶಕ್ತಿ ಕಡಿಮೆಯಾಗುತ್ತದೆ. ನಮ್ಮೊಳಗಿನ ಸೃಜನಶೀಲತೆಯನ್ನು ಕೊಲ್ಲುವ ಜಾಲತಾಣಗಳಿಂದ ದೂರವಿದ್ದರೆ ಸಾಹಿತ್ಯ, ಸಂಗೀತದತ್ತ ಆಸಕ್ತಿ ಮೂಡುತ್ತದೆ’ ಎಂದರು.

***

ಈಗಲೂ ರಾತ್ರಿ  ಪುಸ್ತಕ ಓದದೆ ಮಲಗುವುದಿಲ್ಲ. ನನ್ನ ಎಲ್ಲ ಬೇಸರ, ಆಲಸ್ಯ, ಒಂಟಿತನಕ್ಕೆ ಸಾಹಿತ್ಯವೇ ಮದ್ದು 
–ಡಾ.ಎಚ್‌.ಗಿರಿಜಮ್ಮ, ಲೇಖಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT