ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿ ತಪ್ಪಿದ ರೈಲು 23 ಮಂದಿ ಸಾವು

Last Updated 19 ಆಗಸ್ಟ್ 2017, 20:08 IST
ಅಕ್ಷರ ಗಾತ್ರ

ಲಖನೌ: ಹರಿದ್ವಾರಕ್ಕೆ ತೆರಳುತ್ತಿದ್ದ ಕಳಿಂಗ ಉತ್ಕಲ್‌ ಎಕ್ಸ್‌ಪ್ರೆಸ್‌ ರೈಲಿನ 14 ಬೋಗಿಗಳು ಉತ್ತರಪ್ರದೇಶದ ಮುಜಫ್ಫರ್‌ನಗರ ಬಳಿಯ ಖತೌಲಿ ಎಂಬಲ್ಲಿ ಶನಿವಾರ ಹಳಿತಪ್ಪಿ 23 ಪ್ರಯಾಣಿಕರು ದಾರುಣವಾಗಿ ಸಾವಿಗೀಡಾಗಿದ್ದಾರೆ.

ಹಳಿತಪ್ಪಿರುವ ಬೋಗಿಗಳು ಒಂದರ ಮೇಲೊಂದು ಬಿದ್ದಿದ್ದು, ಒಂದು ಬೋಗಿಯು ಹಳಿಯ ಪಕ್ಕದಲ್ಲೇ ಇದ್ದ ಮನೆ, ಶಾಲೆಯೊಂದಕ್ಕೆ ಅಪ್ಪಳಿಸಿದೆ. ಮಹಿಳೆಯರು, ಮಕ್ಕಳು ಸೇರಿದಂತೆ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ರೈಲ್ವೆ ಸಚಿವ ಸುರೇಶ್‌ ಪ್ರಭು ಅವರು ಘಟನೆಯ ತನಿಖೆಗೆ ಆದೇಶಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನೂ ಅವರು ನೀಡಿದ್ದಾರೆ.

ಶನಿವಾರ ಸಂಜೆ 5.45ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ 12 ಜನರಷ್ಟೇ ಮೃತ‍ಪಟ್ಟಿದ್ದಾರೆ ಎಂದು ದೆಹಲಿಯಲ್ಲಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಹೆಚ್ಚು ಜನರು ಪ್ರಾಣಕಳೆದುಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸಾವು ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
*
ವಿಧ್ವಂಸಕ ಕೃತ್ಯದ ಶಂಕೆ
ನವದೆಹಲಿ:
ಪುರಿ–ಹರಿದ್ವಾರ– ಕಳಿಂಗ ಉತ್ಕಲ್‌ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿರುವುದರ ಹಿಂದೆ ವಿಧ್ವಂಸಕ ಶಕ್ತಿಗಳ ಕೈವಾಡ ಇರಬಹುದು ಎಂದು ರೈಲ್ವೆ ಸಚಿವಾಲಯ ಶಂಕಿಸಿದೆ. ಭಯೋತ್ಪಾದನಾ ಕೃತ್ಯದ ಸಾಧ್ಯತೆಯನ್ನು ಸಚಿವಾಲಯದ ಅಧಿಕಾರಿಗಳು ತಳ್ಳಿಹಾಕಿಲ್ಲ.

‘ಮುಜಫ್ಫರ್‌ನಗರ್‌–ಸಹಾರನ್‌ಪುರ ನಡುವಣ ಮಾರ್ಗವು ಅತ್ಯಂತ ಸಂಚಾರ ದಟ್ಟಣೆಯ ಮಾರ್ಗವಾಗಿದ್ದು, ಹಲವಾರು ರೈಲುಗಳು ಅದರಲ್ಲಿ ಸಂಚರಿಸುತ್ತವೆ. ಇಲ್ಲಿ ರೈಲು ಹಳಿತಪ್ಪಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಉನ್ನತ ಮಟ್ಟದ ತನಿಖೆಯಿಂದ ಮಾತ್ರ ಸತ್ಯ ಬಹಿರಂಗವಾಗಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ಪಡೆಯು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ್ದು, ಉಗ್ರರ ಕೃತ್ಯದ ಆಯಾಮದ ತನಿಖೆಗೆ ರೈಲ್ವೆ ಇಲಾಖೆ ಸಹಕರಿಸುತ್ತಿದೆ ಎಂದು ಅವರು ಹೇಳಿದ್ದಾರೆ. ರೈಲಿನ ಮೊದಲ ಐದು ಬೋಗಿಗಳಿಗೆ ಏನೂ ಆಗಿಲ್ಲ. 14 ಬೋಗಿಗಳು ಹಳಿ ತಪ್ಪಿವೆ. ಅದರಲ್ಲಿ ಎರಡು ಮಗುಚಿ ಬಿದ್ದಿವೆ ಎಂದು ಅವರು ಹೇಳಿದ್ದಾರೆ. ಖತೌಲಿ ನಿಲ್ದಾಣದಿಂದ ಹೊರಟ ತಕ್ಷಣವೇ ತುರ್ತು ಬ್ರೇಕ್‌ ಹಾಕಿದ್ದರಿಂದಲೂ ರೈಲು ಹಳಿ ತಪ್ಪಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
*
‘ಹಳಿಗಳ ದುರಸ್ತಿ ನಡೆಯುತ್ತಿತ್ತು’
‘ಕಳೆದ ಕೆಲವು ದಿನಗಳಿಂದ ಖತೌಲಿ ನಿಲ್ದಾಣದ ಬಳಿಯ ರೈಲ್ವೆ ಹಳಿಗಳ ದುರಸ್ತಿ ಕಾರ್ಯ ನಡೆಯುತ್ತಿತ್ತು. ಈ ಕುರಿತು ಫಲಕವನ್ನೂ ಅಳವಡಿಸಲಾಗಿತ್ತು’ ಎಂದು ಅಪಘಾತ ನಡೆದ ಸ್ಥಳದ ಸಮೀಪದಲ್ಲಿರುವ ಜಗತ್‌ಪುರ ಕಾಲೊನಿಯ ನಿವಾಸಿಗಳು ಹೇಳಿದ್ದಾರೆ.

ಸ್ಥಳೀಯ ಪೊಲೀಸರು ಕೂಡ ಇದನ್ನು ದೃಢಪಡಿಸಿದ್ದಾರೆ. ಹಳಿಯ ಬಳಿ ಬೋಲ್ಟ್‌, ನಟ್‌ಗಳು, ಸುತ್ತಿಗೆಗಳು ಕಂಡು ಬಂದಿರುವುದು ಈ ವಾದಕ್ಕೆ ಪುಷ್ಟಿ ನೀಡಿವೆ. ಘಟನೆ ನಡೆದ ಸಂದರ್ಭದಲ್ಲಿ ರೈಲು ಅತ್ಯಂತ ವೇಗವಾಗಿ ಚಲಿಸುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT