ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾನ್ವಿತರ ಕಣಜ..

Last Updated 20 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಭಾರತದ ಕ್ರಿಕೆಟ್‌ ಲೋಕಕ್ಕೆ ಕರ್ನಾಟಕದ ಕೊಡುಗೆ ಅನನ್ಯ. ರಾಹುಲ್‌ ದ್ರಾವಿಡ್‌, ಅನಿಲ್‌ ಕುಂಬ್ಳೆ, ಜಾವಗಲ್‌ ಶ್ರೀನಾಥ್‌, ವೆಂಕಟೇಶ್‌ ಪ್ರಸಾದ್‌, ಸೈಯದ್‌ ಕಿರ್ಮಾನಿ, ರೋಜರ್‌ ಬಿನ್ನಿ, ಬ್ರಿಜೇಶ್‌ ಪಟೇಲ್‌, ಸುನಿಲ್‌ ಜೋಶಿ, ಜಿ.ಆರ್‌. ವಿಶ್ವನಾಥ್‌, ಇ.ಎ.ಎಸ್‌. ಪ್ರಸನ್ನ ಬಿ.ಎಸ್‌. ಚಂದ್ರಶೇಖರ್‌, ವಿಜಯ್‌ ಭಾರದ್ವಾಜ್‌, ಡೇವಿಡ್‌ ಜಾನ್ಸನ್‌ ಹೀಗೆ ಹಲವು ದಿಗ್ಗಜ ಆಟಗಾರರು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಮಿಂಚಿ ಭಾರತದ ಕೀರ್ತಿಯನ್ನು ಬೆಳಗಿದ್ದಾರೆ. ದೊಡ್ಡ ಗಣೇಶ್‌, ಆರ್‌.ವಿನಯ್‌ಕುಮಾರ್‌, ರಾಬಿನ್‌ ಉತ್ತಪ್ಪ, ಎಸ್‌.ಅರವಿಂದ್‌ ಮತ್ತು ಸ್ಟುವರ್ಟ್‌ ಬಿನ್ನಿ ಅವರೂ ಈ ಸಾಲಿನಲ್ಲಿ ನಿಲ್ಲುತ್ತಾರೆ.

ಈ ಪರಂಪರೆ ಇಂದಿಗೂ ಮುಂದುವರಿದಿದೆ. ಕೆ.ಎಲ್‌.ರಾಹುಲ್‌, ಮನೀಷ್‌ ಪಾಂಡೆ ಮತ್ತು ಕರುಣ್‌ ನಾಯರ್‌ ಅವರು ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಸಾಧನೆಯ ಮೈಲುಗಲ್ಲುಗಳನ್ನು ಸ್ಥಾಪಿಸುತ್ತಿದ್ದಾರೆ. ಕರ್ನಾಟಕ ಪ್ರತಿಭಾನ್ವಿತ ಕ್ರಿಕೆಟಿಗರ ಕಣಜ ಎಂಬುದು ಇದರಿಂದ ಜಗಜ್ಜಾಹೀರಾಗಿದೆ. ಹಿರಿಯರು ತೆರೆಗೆ ಸರಿಯುತ್ತಿದ್ದಂತೆ ಅವರ ಸ್ಥಾನ ತುಂಬಬಲ್ಲ ಸಮರ್ಥರು ಬೆಳಕಿಗೆ ಬರುತ್ತಿದ್ದಾರೆ. ಈ ಕಾರ್ಯದ ಹಿಂದೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಪರಿಶ್ರಮವೂ ಅಡಗಿದೆ.

ಕೆಎಸ್‌ಸಿಎ, ಹೊಸ ಪ್ರತಿಭೆಗಳನ್ನು ಪ್ರವರ್ಧಮಾನಕ್ಕೆ ತರುವ ನಿಟ್ಟಿನಲ್ಲಿ ಅಗತ್ಯವಿರುವ ಹಲವು ಯೋಜನೆಗಳನ್ನು ರೂಪಿಸಿ ಅವುಗಳನ್ನು ಕಾರ್ಯಗತಗೊಳಿಸುತ್ತಿದೆ. ಹೀಗಾಗಿ ಆರಂಭದಲ್ಲಿ ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಕ್ರಿಕೆಟ್‌ನ ಕಂಪು ಈಗ ರಾಜ್ಯದ ಎಲ್ಲಾ ಭಾಗಗಳಿಗೂ ಪಸರಿಸಿದೆ. ಮಂಗಳೂರು, ಬೀದರ್‌, ಬೆಳಗಾವಿ, ಮೈಸೂರು, ಹುಬ್ಬಳ್ಳಿ, ದಾವಣಗೆರೆ, ಗದಗ ಹೀಗೆ ವಿವಿಧ ನಗರಗಳಲ್ಲಿ ಆಡಿ ಬೆಳೆದ ಅನೇಕರು ಇಂದು ರಣಜಿ ಸೇರಿದಂತೆ ಇತರ ಮಹತ್ವದ ಟೂರ್ನಿಗಳಲ್ಲಿ ಗಮನಾರ್ಹ ಸಾಮರ್ಥ್ಯ ತೋರುತ್ತಿದ್ದಾರೆ.

ಕ್ರಿಕೆಟ್‌ ಬಗ್ಗೆ ಮಕ್ಕಳು ಮತ್ತು ಯುವಕರಲ್ಲಿ ಆಸಕ್ತಿ ಬೆಳೆಸುವ ಸಲುವಾಗಿ ಕೆಎಸ್‌ಸಿಎ ಹಲವು ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ. ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು ನಗರಗಳಲ್ಲಿ ರಣಜಿ ಪಂದ್ಯಗಳನ್ನು ಆಯೋಜಿಸುತ್ತಿರುವುದು ಇದರಲ್ಲಿ ಮುಖ್ಯವಾದುದು. ಎಳವೆಯಲ್ಲಿಯೇ ಪ್ರತಿಭೆಗಳನ್ನು ಹೆಕ್ಕುವ ಸಲುವಾಗಿಯೇ ರಾಜ್ಯ ಸಂಸ್ಥೆ, ಶಾಲಾ ಮಟ್ಟದ ಲೀಗ್‌ಗಳನ್ನು ಆಯೋಜಿಸುತ್ತಾ ಬಂದಿದೆ.

ಅಂತರ ವಲಯ ಮತ್ತು ವಿವಿಧ ವಯೋಮಾನದ ಲೀಗ್‌ಗಳೂ ಪ್ರತಿಭಾನ್ವೇಷಣೆಗೆ ವೇದಿಕೆಯಾಗಿವೆ. ಇದರಿಂದಾಗಿ ಯುವಕರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಮುನ್ನೆಲೆಗೆ ಬರುತ್ತಿದ್ದಾರೆ. ರಾಜ್ಯ ತಂಡದಲ್ಲಿ ಸ್ಥಾನ ಪಡೆಯಲು ಭಾರೀ ಪೈಪೋಟಿ ಏರ್ಪಟ್ಟಿದೆ. ಶ್ರೇಷ್ಠರೆನಿಸಿದವರಿಗೆ ಮಾತ್ರ ತಂಡದಲ್ಲಿ ಜಾಗ ಸಿಗುತ್ತಿದೆ. ಈ ಕಾರಣದಿಂದಾಗಿಯೇ ಕರ್ನಾಟಕ, ದೇಶಿ ಟೂರ್ನಿಗಳಲ್ಲಿ ಮುಂಬೈ, ದೆಹಲಿಯಂತಹ ಬಲಿಷ್ಠ ತಂಡಗಳ ಸವಾಲು ಮೀರಿ ನಿಲ್ಲುವಷ್ಟರ ಮಟ್ಟಿಗೆ ಬೆಳೆದುನಿಂತಿದೆ.

‘ರಾಜ್ಯ ಮತ್ತು ರಾಷ್ಟ್ರೀಯ ತಂಡದಲ್ಲಿ ಮಿಂಚುವಂತಹ ಆಟಗಾರರನ್ನು ಸಿದ್ಧಗೊಳಿಸುವುದು ನಮ್ಮ ಏಕೈಕ ಗುರಿ. ಇದನ್ನು ಗಮನದಲ್ಲಿಟ್ಟುಕೊಂಡೇ  14, 16, 19 ಮತ್ತು 23 ವರ್ಷದೊಳಗಿನವರ ಲೀಗ್‌, ವಲಯ ಹಾಗೂ ಶಾಲಾ ಲೀಗ್‌ಗಳನ್ನು ಆಯೋಜಿಸುತ್ತಾ ಬರುತ್ತಿದ್ದೇವೆ. ಈ ಮೂಲಕ ಎಲ್ಲರಿಗೂ ತಮ್ಮೊಳಗಿನ ಪ್ರತಿಭೆಯನ್ನು ಜಗಜ್ಜಾಹೀರುಗೊಳಿಸಲು ವೇದಿಕೆ ಕಲ್ಪಿಸಿಕೊಡುತ್ತಿದ್ದೇವೆ’ ಎಂದು ಕೆಎಸ್‌ಸಿಎ ಸಹಾಯಕ ಕಾರ್ಯದರ್ಶಿ ಸಂತೋಷ್‌ ಮೆನನ್‌ ಹೇಳುತ್ತಾರೆ.

‘ಗ್ರಾಮೀಣ ಭಾಗದ ಮಕ್ಕಳಿಗೆ ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ಹುಬ್ಬಳ್ಳಿ, ಧಾರವಾಡ, ದಕ್ಷಿಣ ಕನ್ನಡ, ಶಿವಮೊಗ್ಗ, ಮೈಸೂರು ಹೀಗೆ ವಿವಿಧ ಜಿಲ್ಲೆಗಳಲ್ಲಿ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮೈಸೂರು, ಶಿವಮೊಗ್ಗ, ಮಂಗಳೂರು, ತುಮಕೂರು, ರಾಯಚೂರು ಮತ್ತು ಹುಬ್ಬಳ್ಳಿ ವಲಯಗಳಲ್ಲಿ 14, 16 ಮತ್ತು 19 ವರ್ಷದೊಳಗಿನವರ ಅಕಾಡೆಮಿಗಳು ತಲೆ ಎತ್ತಿವೆ. ತರಬೇತಿ ಶಿಬಿರಗಳಲ್ಲಿ ಉತ್ತಮ ಸಾಮರ್ಥ್ಯ ತೋರುವವರನ್ನು ಜಿಲ್ಲಾ ತಂಡಗಳಿಗೆ ಆಯ್ಕೆ ಮಾಡಲಾಗುತ್ತದೆ. ಅವರಿಗಾಗಿ ಅಂತರ ಜಿಲ್ಲಾ ಪಂದ್ಯಗಳನ್ನು ಆಯೋಜಿಸುತ್ತಿದ್ದೇವೆ. ಆಯ್ಕೆ ಸಮಿತಿ ಸದಸ್ಯರು ಪಂದ್ಯ ದಿನ ಮೈದಾನದಲ್ಲಿ ಹಾಜರಿದ್ದು ಎಲ್ಲರ ಆಟವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ಚೆನ್ನಾಗಿ ಆಡಿದ 20 ರಿಂದ 25 ಆಟಗಾರರನ್ನು ಅವರು ಆಯ್ಕೆ ಮಾಡುತ್ತಾರೆ. ಅಂತಹವರ ಪ್ರತಿಭೆಗೆ ನಾವು ಸಾಣೆ ಹಿಡಿಯುವ ಕೆಲಸ ಮಾಡುತ್ತಿದ್ದೇವೆ’ ಎಂದು ಅವರು ವಿವರಿಸುತ್ತಾರೆ.

ಕೆಪಿಎಲ್‌ನ ಮಹತ್ವ
ಐಪಿಎಲ್‌ ಶುರುವಾದ ಬಳಿಕ ಕ್ರಿಕೆಟ್‌ ಲೋಕದಲ್ಲಿ ಹೊಸ ಕ್ರಾಂತಿ ಸೃಷ್ಟಿಯಾಗಿದೆ. ಈ ಲೀಗ್‌ನಲ್ಲಿ ಆಟಗಾರರಿಂದ ಮೂಡಿಬರುವ ಸಾಮರ್ಥ್ಯವನ್ನು ಈಗ ರಾಷ್ಟ್ರೀಯ ತಂಡದ ಆಯ್ಕೆಗೆ ಮಾನದಂಡವಾಗಿ ಪರಿಗಣಿಸಲಾಗುತ್ತಿದೆ.  ಚುಟುಕು ಕ್ರಿಕೆಟ್‌ನ ಅನುಭವ ಎಲ್ಲರಿಗೂ ಸಿಗಬೇಕು ಎಂಬ ಸದುದ್ದೇಶದಿಂದ ಕೆಎಸ್‌ಸಿಎ, ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಶುರು ಮಾಡಿದೆ.

‘ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿರುವ ಪ್ರೇಕ್ಷಕರ ಎದುರು ಆಡುವಾಗ ಆಟಗಾರರು ಒತ್ತಡಕ್ಕೆ ಒಳಗಾಗುವುದು ಸಹಜ. ಈ ಬಗೆಯ ಒತ್ತಡವನ್ನು ಮೀರಿ ನಿಂತು ಆಡುವ ಕಲೆ ನಮ್ಮವರಿಗೆ ಕರಗತವಾಗಬೇಕು. ಈ ಕಾರಣದಿಂದಾಗಿಯೇ ಕೆಪಿಎಲ್‌ ಶುರು ಮಾಡಿದ್ದೇವೆ. ಹೊನಲು ಬೆಳಕಿನಲ್ಲಿ ನಡೆಯುವ ಪಂದ್ಯಗಳಲ್ಲಿ ಹೇಗೆ ಆಡಬೇಕು ಎಂಬುದನ್ನು ಕಲಿಯಲೂ ಕೂಡ ಈ ಲೀಗ್‌ ಯುವ ಆಟಗಾರರಿಗೆ ಪ್ರಯೋಜನಕಾರಿಯಾಗಿದೆ’ ಎಂದು ಸಂತೋಷ್‌ ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT