ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದೇನು ಮಹಿ?

Last Updated 20 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಮಹೇಂದ್ರಸಿಂಗ್ ದೋನಿ ಕುರಿತ ಚಲನಚಿತ್ರದಲ್ಲಿ ಒಂದು ದೃಶ್ಯ ಇದೆ.

ಆಯ್ಕೆ ಸಮಿತಿಯ ಸದಸ್ಯರೊಂದಿಗೆ ತಂಡದ ಆಯ್ಕೆ ಕುರಿತು ನಾಯಕ ದೋನಿ ವಿಡಿಯೋ ಸಂಭಾಷಣೆ ನಡೆಸುವ ದೃಶ್ಯತುಣುಕು ಅದು. ಮೂವರು ದಿಗ್ಗಜ ಕ್ರಿಕೆಟಿಗರನ್ನು ತಂಡದಿಂದ ಕೈಬಿಡುವ ಕುರಿತು ದೋನಿ ಆಯ್ಕೆ ಸಮಿತಿಗೆ ಹೇಳುತ್ತಾರೆ. ಆಗ ಆಯ್ಕೆಗಾರರು ಅಚ್ಚರಿಗೊಳುತ್ತಾರೆ.

‘2011ರ ವಿಶ್ವಕಪ್‌ ಟೂರ್ನಿಗೆ ತಂಡ ಕಟ್ಟಬೇಕಾದರೆ, ಈಗಿನಿಂದಲೇ ಯುವ ಪ್ರತಿಭೆಗಳನ್ನು ಬೆಳೆಸಬೇಕು. ಎಲ್ಲರೂ ಬ್ಯಾಟಿಂಗ್ ಮಾಡಬಲ್ಲರು. ಆದರೆ, ಫೀಲ್ಡಿಂಗ್‌ನಲ್ಲಿ ದೈಹಿಕ ಕ್ಷಮತೆ ಮುಖ್ಯ. ಫೀಲ್ಡರ್‌ಗಳು ಉಳಿಸುವ ರನ್‌ಗಳು ತಂಡಕ್ಕೆ ಮಹತ್ವದ ಕಾಣಿಕೆ ಯಾಗುತ್ತದೆ. ಆದ್ದರಿಂದ ಸದೃಢ ಆಟಗಾರರ ತಂಡದ ಅಗತ್ಯ ಇದೆ’ ಎಂದು ದೋನಿ ಕಡ್ಡಿ ಮುರಿದಂತೆ ಹೇಳುತ್ತಾರೆ.

ಜಾರ್ಖಂಡ್‌ನ ವಿಕೆಟ್‌ಕೀಪರ್–ಬ್ಯಾಟ್ಸ್‌ ಮನ್ ದೋನಿ ತಮ್ಮ ಯೋಜನೆಯಲ್ಲಿ ಸಫಲ ರಾಗುತ್ತಾರೆ. ತಂಡವು 2011ರಲ್ಲಿ ವಿಶ್ವಕಪ್‌ ಗೆಲ್ಲುತ್ತದೆ.  ಅದೀಗ ಇತಿಹಾಸ. ದೋನಿ ನಾಯಕತ್ವದಲ್ಲಿ ಭಾರತ ಕ್ರಿಕೆಟ್‌ ತಂಡವು ಸಾಧಿಸಿದ ಎತ್ತರಗಳು ದಾಖಲೆಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಅಚ್ಚಾಗಿವೆ. ಅವು ಎಂದಿಗೂ ಅಚ್ಚಳಿಯದೇ ಉಳಿಯುವುದು ಖಚಿತ.

ಆದರೆ, ಈಗ ದೋನಿ ತಮ್ಮ ವೃತ್ತಿಜೀವನದ ಹೊರಳು ಹಾದಿಯಲ್ಲಿ ನಿಂತಿದ್ದಾರೆ. ಅವರು ಕೂಡ ಈಗ ದೈಹಿಕ ಕ್ಷಮತೆ ಮತ್ತು ಉತ್ತಮ ಆಟವಾಡಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ಸವಾಲು ಎದುರಿಸುತ್ತಿದ್ದಾರೆ. ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ. ಪ್ರಸಾದ್ ಅವರು ಈಚೆಗೆ ನೀಡಿರುವ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ. ‘ಶ್ರೀಲಂಕಾ ಎದುರಿನ ಏಕದಿನ ಸರಣಿಯಲ್ಲಿ ದೋನಿ ಉತ್ತಮವಾಗಿ ಆಡದಿದ್ದರೆ ಮುಂದಿನ ಸರಣಿಗಳಲ್ಲಿ ಅವರಿಗೆ ಪರ್ಯಾಯ ಆಟಗಾರರಿಗೆ ಅವಕಾಶ ನೀಡಲು ಚಿಂತನೆ ನಡೆಸಲಾಗುವುದು’ ಎಂದು ಪ್ರಸಾದ್ ಹೇಳಿದ್ದರು.

ಹೋದ ತಿಂಗಳು ವೆಸ್ಟ್‌ ಇಂಡೀಸ್ ಎದುರಿನ ಪಂದ್ಯದಲ್ಲಿ ದೋನಿ 114 ಎಸೆತಗಳಲ್ಲಿ 54 ರನ್‌ ಗಳಿಸಿದ್ದರು. ಆ ಪಂದ್ಯದಲ್ಲಿ ಭಾರತ ಸೋತಿತ್ತು. ಸ್ಫೋಟಕ ಬ್ಯಾಟ್ಸ್‌ಮನ್ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದು ಕೂಡ ಆಯ್ಕೆದಾರರ ಅಸಮಾಧಾನಕ್ಕೆ ಕಾರಣವಾಗಿದೆ.

36 ವರ್ಷದ ದೋನಿ ಅವರು ಇನ್ನೂ ಎರಡು ವರ್ಷ ತಮ್ಮ ದೈಹಿಕ ಕ್ಷಮತೆಯನ್ನು ಕಾಪಾಡಿಕೊಂಡು ವಿಶ್ವಕಪ್‌ನಲ್ಲಿ ಆಡುವ ಕುರಿತು ಅನುಮಾನ ಆಯ್ಕೆ ಸಮಿತಿಯಲ್ಲಿ ಮೂಡಿ ರುವುದು ಸಹಜವೇ.

ಆದರೂ ದೋನಿಯಂತಹ ಒಬ್ಬ ದಿಗ್ಗಜ ಆಟಗಾರನಿಗೆ ಈ ರೀತಿಯ ಶರತ್ತು ವಿಧಿಸುವುದು ಸಮಂಜಸವಲ್ಲ ಎಂಬುದು ಅವರ ಅಭಿಮಾನಿಗಳ ಅಭಿಮತ. ಅದಕ್ಕಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾದ್ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.ಇನ್ನೊಬ್ಬ ದಿಗ್ಗಜ ಆಟಗಾರ ಯುವರಾಜ್ ಸಿಂಗ್ ಅವರನ್ನು ಈ ಟೂರ್ನಿಯಿಂದ ಕೈಬಿಟ್ಟಿರುವುದು ಕೂಡ ಕ್ರಿಕೆಟ್‌ಪ್ರೇಮಿಗಳಲ್ಲಿ ಆತಂಕ ಮೂಡಲು ಕಾರಣವಾಗಿದೆ.

ದೋನಿ ಮುಂದುವರಿಯಬೇಕೆ?
ಒಬ್ಬ ವೃತ್ತಿಪರ ಕ್ರೀಡಾಪಟು 35ನೇ ವಯಸ್ಸು ದಾಟಿದ ನಂತರ ನಿವೃತ್ತಿಯ ಪ್ರಶ್ನೆ ಏಳುವುದು ಸಹಜ. ಅದರಲ್ಲೂ ದೇಶದಲ್ಲಿ ಅತ್ಯಂತ ಜನಪ್ರಿಯ ಆಟವಾಗಿರುವ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ಯುವಪಡೆಯ ದಂಡು ಕಾದಿರುವಾಗ ಹಿರಿಯ ಆಟಗಾರರ ಮೇಲೆ ಒತ್ತಡ ಹೆಚ್ಚು. ಈ ಹಿಂದಿನ ದಾಖಲೆಗಳನ್ನು ತಿರುವಿ ನೋಡಿದರೆ ಬಿಸಿಸಿಐ ಅಥವಾ ಆಯ್ಕೆ ಸಮಿತಿಯು ಸೂಚಿಸುವ ಮುನ್ನವೇ ತಮ್ಮ ಸ್ಥಾನಗಳನ್ನು ದೋನಿ ಬಿಟ್ಟಿದ್ದಾರೆ.

2014ರಲ್ಲಿ ಆಸ್ಟ್ರೇಲಿಯಾದಲ್ಲಿ ಸರಣಿ ನಡೆಯುತ್ತಿದ್ದಾಗಲೇ ಟೆಸ್ಟ್‌ ಕ್ರಿಕೆಟ್‌ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಯುವ ನಾಯಕ ವಿರಾಟ್ ಕೊಹ್ಲಿಗೆ ಸ್ಥಾನ ಬಿಟ್ಟುಕೊಟ್ಟಿದ್ದರು. ಅದಾಗಿ ಮೂರು ವರ್ಷಗಳ ನಂತರ ಸೀಮಿತ  ಓವರ್‌ಗೆ ಕ್ರಿಕೆಟ್‌ ತಂಡದ ನಾಯಕತ್ವವನ್ನೂ ತ್ಯಜಿಸಿದ್ದರು. ಆದರೆ ಆಟಗಾರನಾಗಿ ಮುಂದುವರಿದಿದ್ದರು.

‘ಉಳಿದ  ಆಟಗಾರರೊಂದಿಗೆ ಸ್ಪರ್ಧಿಸಿ ಸ್ಥಾನ ಉಳಿಸಿಕೊಳ್ಳುವ ಸವಾಲು ಈಗ ನನ್ನ ಮುಂದಿದೆ’ ಎಂದು ಆಗ ಸ್ವತಃ ದೋನಿಯೇ ಹೇಳಿದ್ದರು. ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯೂ ಸೇರಿದಂತೆ ಹಲವು ಟೂರ್ನಿಗಳಲ್ಲಿ ಅವರು ತಮ್ಮ ಅನುಭವದ ಆಟದ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಇದರಿಂದ ವಿರಾಟ್ ಕೊಹ್ಲಿ ಕೂಡ ಲಾಭ ಪಡೆದಿರುವುದು ಸುಳ್ಳಲ್ಲ.

ಈ ಹಿಂದೆ ದೋನಿ  ನಾಯಕರಾಗಿದ್ದಾಗ ತಂಡದಲ್ಲಿದ್ದ ದಿಗ್ಗಜ ಸಚಿನ್ ತೆಂಡೂಲ್ಕರ್‌ ಕೂಡ ಅದೇ ರೀತಿ ತಮ್ಮ ಅನುಭವ ಧಾರೆಯೆರೆದಿದ್ದರು. ಯುವಪಡೆಯನ್ನು ಬೆಳೆಸುವಲ್ಲಿ ದೋನಿ ಮತ್ತು ಸಚಿನ್ ಅವರಿಬ್ಬರ ಜುಗಲ್‌ಬಂದಿ ಇತ್ತು. ವಿಶ್ವಕಪ್ ನಂತರ ಸಚಿನ್ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ವಿರಾಟ್ ಅವರು ದೋನಿಯ ಸಾಂಗತ್ಯವನ್ನು ಮುಂದಿನ ವಿಶ್ವಕಪ್ ಟೂರ್ನಿಯವರೆಗೆ ಇಟ್ಟುಕೊಳ್ಳಲು ಬಯಸುವರೇ ಎಂಬ ಕುತೂಹಲವೂ ಈಗ ಇದೆ.

ಮಹಿ ನಂತರ ಯಾರು?
ದೋನಿ ಯಶಸ್ವಿ ನಾಯಕನಷ್ಟೇ ಅಲ್ಲ. ವಿಶ್ವದಾಖಲೆ ಹೊಂದಿರುವ ವಿಕೆಟ್‌ಕೀಪರ್ ಕೂಡ ಹೌದು. ಅಲ್ಲದೇ ಬೆಸ್ಟ್‌ ಫಿನಿಷರ್ ಖ್ಯಾತಿಯ ಬ್ಯಾಟ್ಸ್‌ಮನ್ ಕೂಡ. ಈ ಎರಡೂ ಹೊಣೆಗಳನ್ನು ಉತ್ತಮವಾಗಿ ನಿಭಾಯಿಸಬಲ್ಲ ಯುವ ಆಟಗಾರರು ಇದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡುತ್ತಿರುವ ವೃದ್ಧಿಮಾನ್ ಸಹಾ, ದೆಹಲಿಯ ಯುವಪ್ರತಿಭೆ ರಿಷಭ್ ಪಂತ್, ಕೇರಳದ ಸಂಜು ಸ್ಯಾಮ್ಸನ್, ಕರ್ನಾಟಕದ ಕೆ.ಎಲ್. ರಾಹುಲ್, ಆನುಭವಿ ಪಾರ್ಧಿವ್ ಪಟೇಲ್, ತಮಿಳುನಾಡಿನ ದಿನೇಶ್ ಕಾರ್ತಿಕ್ ಅವರ ಹೆಸರುಗಳು ಮುಂಚೂಣಿಗೆ ಬರುತ್ತವೆ.

*
ಏಕದಿನ ಸಾಧನೆ
ಪಂದ್ಯ– 296
ರನ್‌ – 9496
ಶತಕ – 10

*
ಎಲ್ಲಿಯವರೆಗೂ ಮಹಿ ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳುತ್ತಾರೋ ಅಲ್ಲಿಯವರೆಗೆ ಕಷ್ಟವಿಲ್ಲ. ಅವರೊಬ್ಬ ಸಂತೃಪ್ತ ಆಟಗಾರ. ಅವರಿಗೆ ಯಾವುದೇ ಒತ್ತಡವೂ ಇಲ್ಲ. ಮುಂದಿನ ವಿಶ್ವಕಪ್‌ ಟೂರ್ನಿಯವರೆಗೂ ಅವರು ತಂಡದಲ್ಲಿರುವ ನಿರೀಕ್ಷೆ ಇದೆ. ಅಲ್ಲದೆ ಈಗ ಪ್ರತಿಭಾನ್ವಿತ ಆಟಗಾರರು ಸಾಲುಗಟ್ಟಿ ನಿಂತಿದ್ದಾರೆ. ಅವರೊಂದಿಗೆ ಪೈಪೋಟಿ ಮಾಡಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು.
–ಕೇಶವ ರಂಜನ್ ಬ್ಯಾನರ್ಜಿ,
ದೋನಿಯ ಬಾಲ್ಯದ ಕೋಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT