ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಬಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಶ್ರೀಕಾಂತ್‌ ಶುಭಾರಂಭ

Last Updated 21 ಆಗಸ್ಟ್ 2017, 19:27 IST
ಅಕ್ಷರ ಗಾತ್ರ

ಗ್ಲಾಸ್ಗೊ: ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಕಿದಂಬಿ ಶ್ರೀಕಾಂತ್‌ ಮತ್ತು ಸಮೀರ್‌ ವರ್ಮಾ ಶುಭಾರಂಭ ಮಾಡಿದ್ದಾರೆ. ಸೋಮವಾರ ರಾತ್ರಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ರಷ್ಯಾದ ಸರ್ಜಿ ಸಿರಾಂತ್ ಎದುರುವ ಶ್ರೀಕಾಂತ್‌ 21–13, 21–12ರಿಂದ ಗೆದ್ದರು. ಸಮೀರ್ ವರ್ಮಾ ವಿರುದ್ಧ ಸೆಣಸಿದ ಸ್ಪೇನ್‌ನ ಪ್ಯಾಬ್ಲೊ ಅಬ್ಯಾನ್‌ ಪಂದ್ಯದ ಅರ್ಧಕ್ಕೇ ಗಾಯಗೊಂಡು ಮರಳಿದರು.

ಎಂಟನೇ ಶ್ರೇಯಾಂಕ ಹೊಂದಿರುವ ಶ್ರೀಕಾಂತ್‌ 30 ನಿಮಿಷಗಳ ಒಳಗೆ ಪಂದ್ಯವನ್ನು ಮುಗಿಸಿದರು. ಮಂಗಳವಾರ ನಡೆಯುವ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು ಫ್ರಾನ್ಸ್‌ನ ಲೂಕಾಸ್ ಕೋರ್ವಿ ವಿರುದ್ಧ ಸೆಣಸುವರು.

ಆರಂಭದಲ್ಲಿ ರಷ್ಯಾ ಆಟಗಾರ ಕಠಿಣ ಸ್ಪರ್ಧೆ ಒಡ್ಡಿದರು. ಹೀಗಾಗಿ ಶ್ರೀಕಾಂತ್‌ ಕೆಲವು ಪಾಯಿಂಟ್‌ಗಳನ್ನು ಕಳೆದುಕೊಂಡರು. ಆದರೆ ಕೆಲವೇ ಕ್ಷಣಗಳಲ್ಲಿ ಆಟಕ್ಕೆ ಹೊಂದಿಕೊಂಡು ಮುನ್ನಡೆ ಸಾಧಿಸಿದರು. ನೆಟ್‌ ಬಳಿ ಅತ್ಯುತ್ತಮ ಆಟವಾಡಿ ಡ್ರಾಪ್‌ಗಳ ಮೂಲಕ ಮಿಂಚಿದ ಅವರು ಪ್ರಬಲ ಸ್ಮ್ಯಾಷ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು. ಹೀಗಾಗಿ 11–6 ಮುನ್ನಡೆ ಸಾಧಿಸಿ ವಿರಾಮಕ್ಕೆ ತೆರಳಿದರು. ವಾಪಸಾಗಿ ಈ ಮುನ್ನಡೆಯನ್ನು 15–7ಕ್ಕೆ ಏರಿಸಿದರು. ಆನಂತರ ಸುಲಭವಾಗಿ ಗೇಮ್‌ ತಮ್ಮದಾಗಿಸಿಕೊಂಡರು.

ಎರಡನೇ ಗೇಮ್‌ನ ಆರಂಭದಲ್ಲೇ ಅಮೋಘ ಆಟವಾಡಿ 11–5ರ ಮುನ್ನಡೆ ಗಳಿಸಿದರು. ನಂತರ ಉಭಯ ಆಟಗಾರರೂ ಅತ್ಯುತ್ತಮ ರ‍್ಯಾಲಿಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಅಂತಿಮವಾಗಿ ಗೇಮ್‌ ಹಾಗೂ ಪಂದ್ಯವನ್ನು ಶ್ರೀಕಾಂತ್‌ ತಮ್ಮದಾಗಿಸಿಕೊಂಡರು.

ಉತ್ತಮ ಸಾಮರ್ಥ್ಯ ತೋರಲು ಬದ್ಧ: ‘ಉತ್ತಮ ಫಾರ್ಮ್‌ನಲ್ಲಿದ್ದೇನೆ. ಆದ್ದರಿಂದ ಭಾರತಕ್ಕೆ ಚಿನ್ನದ ಪದಕ ಗೆದ್ದು ತರುವ ಭರವಸೆ ಇದೆ’ ಎಂದು ಭಾರತದ ಪಿ.ವಿ.ಸಿಂಧು ಅಭಿಪ್ರಾಯಪಟ್ಟಿದ್ದಾರೆ.

ಚಾಂಪಿಯನ್‌ಷಿಪ್‌ನಲ್ಲಿ ಮಹಿಳಾ ವಿಭಾಗದ ಭರವಸೆ ಎನಿಸಿರುವ ಅವರು ಪತ್ರಕರ್ತರ ಜೊತೆ ಮಾತನಾಡಿ ‘ಎರಡು ತಿಂಗಳ ಹಿಂದೆ ಆಸ್ಟ್ರೇಲಿಯಾ ಓಪನ್‌ನಲ್ಲಿ ಸ್ಪರ್ಧಿಸಿದ ನಂತರ ಇಲ್ಲಿಯವರೆಗೆ ಕಣಕ್ಕೆ ಇಳಿಯಲಿಲ್ಲ. ಆದ್ದರಿಂದ ಅಭ್ಯಾಸಕ್ಕೆ ಸಾಕಷ್ಟು ಸಮಯ ಲಭಿಸಿದೆ. ಸ್ಪರ್ಧೆಗೆ ಎಲ್ಲ ರೀತಿಯಲ್ಲೂ ಸಜ್ಜಾಗಿದ್ದೇನೆ. ಪದಕ ಗೆಲ್ಲುವುದು ಖಚಿತ’ ಎಂದರು.

‘ಇಲ್ಲಿ ಉತ್ತಮ ಸಾಮರ್ಥ್ಯ ತೋರುವ ಭರವಸೆಯನ್ನು ಹೊತ್ತುಕೊಂಡೇ ಬಂದಿದ್ದೇನೆ. ಎರಡು ಚಾಂಪಿಯನ್‌ಷಿಪ್‌ಗಳಲ್ಲಿ ಕಂಚಿನ ಪದಕ ಗೆದ್ದಿದ್ದೆ. ಈ ಬಾರಿ ಅದಕ್ಕಿಂತ ಹೆಚ್ಚಿನ ಸಾಧನೆ ಮಾಡುವುದು ಗುರಿ’ ಎಂದರು.

ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದು ಬ್ಯಾಡ್ಮಿಂಟನ್‌ ಜಗತ್ತಿನ ಗಮನ ಸೆಳೆದಿದ್ದ ಸಿಂಧು 2016ರ ಚೀನಾ ಓಪನ್‌ ಮತ್ತು ಈ ವರ್ಷದ ಇಂಡಿಯಾ ಓಪನ್‌ನಲ್ಲಿ ಅಮೋಘ ಸಾಮರ್ಥ್ಯ ತೋರಿದ್ದರು. ಒಲಿಂಪಿಕ್ಸ್‌ನ ಫೈನಲ್‌ನಲ್ಲಿ ಸ್ಪೇನ್‌ನ ಕರೊಲಿನಾ ಮರಿನ್‌ ವಿರುದ್ಧ ಸೋತಿದ್ದ ಸಿಂಧು ಕಳೆದ ಏಪ್ರಿಲ್‌ನಲ್ಲಿ ನಡೆದಿದ್ದ ಇಂಡಿಯಾ ಓಪನ್‌ನ ಫೈನಲ್‌ನಲ್ಲಿ ಚಿನ್ನಕ್ಕೆ ಮುತ್ತು ನೀಡಿದ್ದರು.

2013 ಮತ್ತು 2014ರ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಅವರಿಗೆ ಕಂಚಿನ ಪದಕ ಗೆಲ್ಲಲಷ್ಟೇ ಸಾಧ್ಯವಾಗಿತ್ತು. ಈ ಬಾರಿಯ ವಿಶ್ವ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲಿ ಸಿಂಧು ಅವರಿಗೆ ಪಂದ್ಯ ಇಲ್ಲ.

‘ಇಂಡಿಯಾ ಓಪನ್‌ನಲ್ಲಿ ತವರಿನ ಪ್ರೇಕ್ಷಕರ ಮುಂದೆ ಉತ್ತಮ ಸಾಮರ್ಥ್ಯ ತೋರಬೇಕಿತ್ತು. ಅದನ್ನು ಮಾಡಲು ನನಗೆ ಸಾಧ್ಯವಾಗಿದೆ. ರಿಯೊ ಒಲಿಂಪಿಕ್ಸ್‌ನ ಫೈನಲ್‌ ಪಂದ್ಯವನ್ನು ನೇರವಾಗಿ ವೀಕ್ಷಿಸಲು ಸಾಧ್ಯವಾಗದ ಅಸಂಖ್ಯಾತ ಭಾರತೀಯರು ಇಂಡಿಯಾ ಓಪನ್‌ನ ಅಂತಿಮ ಪಂದ್ಯದಲ್ಲಿ ರೋಮಾಂಚನ ಅನುಭವಿಸಿದ್ದರು’ ಎಂದು ಅವರು ಹೇಳಿದರು.

ಮರಿನ್‌ ಕನಸು: ಹ್ಯಾಟ್ರಿಕ್ ಕನಸಿನೊಂದಿಗೆ ಇಲ್ಲಿಗೆ ಬಂದಿರುವ ಕರೊಲಿನಾ ಮರಿನ್‌ ಅವರು ರಿಯೊ ಒಲಿಂಪಿಕ್ಸ್‌ಗಿಂತ ಪ್ರಭಾವಿ ಆಟ ಆಡುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ. ‘ಎರಡು ತಿಂಗಳಿಂದ ಕಠಿಣ ಅಭ್ಯಾಸ ನಡೆಸಿದ್ದೇನೆ. ಕೆಲ ಪ್ರಬಲ ಎದುರಾಳಿಗಳನ್ನು ನಾನು ಇಲ್ಲಿ ಎದುರಿಸಬೇಕಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT