ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಧರ್ಮಕ್ಕೆ ಮತಾಂತರಗೊಂಡ ಅಪ್ಪ, ಮಗ

20 ವರ್ಷದ ಹಿಂದೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು
Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಿದ್ದ ಸಯ್ಯದ್ ಅಬ್ಬಾಸ್ (46) ಹಾಗೂ ಅವರ ಪುತ್ರ ಸೈಯ್ಯದ್ ಹತೀಕ್ (20) ಮಂಗಳವಾರ ಇಲ್ಲಿನ ಆರ್ಯ ಸಮಾಜದಲ್ಲಿ ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡರು.

ಶ್ರೀರಾಮ ಸೇನೆ ವತಿಯಿಂದ ಏರ್ಪಡಿಸಲಾಗಿದ್ದ ‘ಘರ್ ವಾಪಸಿ’ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳ ಮೂಲಕ ಹಿಂದೂ ಧರ್ಮಕ್ಕೆ ಮರಳಿದರು.

ಮದ್ದೂರಿನ ಶೇಷಾದ್ರಿ 20 ವರ್ಷಗಳ ಹಿಂದೆ ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಪುತ್ರನೊಬ್ಬನನ್ನು ಪಡೆದಿದ್ದರು. ಈಗ ಪತ್ನಿ ಇವರನ್ನು ತ್ಯಜಿಸಿದ್ದಾರೆ. ಇದರಿಂದ ಮನನೊಂದು ಹಾಗೂ ಮುಸ್ಲಿಂ ಧರ್ಮದಲ್ಲಿ ತಾರತಮ್ಯ ಭಾವನೆಯಿಂದ ನೋಡಲಾಗುತ್ತಿದ್ದರಿಂದ ಬೇಸರಗೊಂಡು ಹಿಂದೂ ಧರ್ಮಕ್ಕೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮತಾಂತರಗೊಂಡ ನಂತರ ಸೈಯ್ಯದ್ ಅಬ್ಬಾಸ್ ಅವರು ಶೇಷಾದ್ರಿಯಾಗಿ ಹಾಗೂ ಪುತ್ರ ಸೈಯ್ಯದ್ ಹತೀಕ್ ಅವರು ಹರ್ಷಿಲ್ ಆರ್ಯ ಎಂದು ಹೆಸರು ಬದಲಿಸಿಕೊಂಡರು.

ಮುತಾಲಿಕ್ ಆರೋಪ:

ಈ ಹಿಂದೆ ಶೇಷಾದ್ರಿ ಅವರನ್ನು ಬಲವಂತದಿಂದ ಮುಸ್ಲಿಂ ಧರ್ಮಕ್ಕೆ ಪರಿವರ್ತನೆ ಮಾಡಲಾಗಿತ್ತು ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದರು.

ಈಗ ಸ್ವಇಚ್ಛೆಯಿಂದ ಹಿಂದೂ ಧರ್ಮದ ದೀಕ್ಷೆ ಪಡೆದಿದ್ದಾರೆ. ದೇಶದಲ್ಲಿ ಇರುವ ಮುಸ್ಲಿಂರಲ್ಲಿ ಬಹುತೇಕ ಮಂದಿ ಹಿಂದೂಗಳೇ ಆಗಿದ್ದವರು. ಬಲವಂತದಿಂದ ಮುಸ್ಲಿಂರಾಗಿ ಬದಲಾಗಿದ್ದಾರೆ. ವಾಪಸ್ ಹಿಂದೂ ಧರ್ಮಕ್ಕೆ ಬಂದರೆ ಸ್ವಾಗತಿಸಲಾಗುವುದು ಎಂದು ಹೇಳಿದರು.

ದೇಶದಲ್ಲಿ ಈಚೆಗೆ ಅನ್ಯಧರ್ಮಕ್ಕೆ ಮತಾಂತರಗೊಂಡಿದ್ದ 1,500 ಮಂದಿ ಮರಳಿ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ಅವರೆಲ್ಲ ಶಾಂತಿ, ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಮತಾಂತರ ಹೊಂದಿದವರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

‘ರಾಜ್ಯದಲ್ಲಿ 2 ವರ್ಷದ ಅವಧಿಯಲ್ಲಿ 21 ಹಿಂದೂಗಳನ್ನು ಕೊಲೆ ಮಾಡಲಾಗಿದೆ. ಇದರ ಹಿಂದೆ ಪಿಎಫ್‌ಐ ಹಾಗೂ ಕೆಎಫ್‌ಡಿ ಸಂಘಟನೆಗಳ ಪಾತ್ರವಿದೆ ಎಂದು ಗೊತ್ತಿದ್ದರೂ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಆ ಸಂಘಟನೆಗಳನ್ನು ಸರ್ಕಾರ ನಿಷೇಧಿಸುತ್ತಿಲ್ಲ’ ಎಂದು ಆರೋಪಿಸಿದರು.

ತ್ರಿವಳಿ ತಲಾಖ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸರಿಯಾಗಿದೆ. ಇದರಿಂದ ಲಕ್ಷಾಂತರ ಮಂದಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ನ್ಯಾಯ ಸಿಕ್ಕಂತಾಗಿದೆ. ಸಮಾನ ನಾಗರಿಕ ಸಂಹಿತೆ ರೂಪಿಸಲು ಕೇಂದ್ರ ತಕ್ಷಣ ಮುಂದಾಗಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT