ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯ ಬಿಸಿಯೂಟಕ್ಕೆ ₹26 ಲಕ್ಷ ಕೊಡುಗೆ

ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಭೇಟಿ
Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬಂಟ್ವಾಳ: ‘ನನ್ನ ವೈಯಕ್ತಿಕ ಜೀವನದಲ್ಲಿ ಬರುವ ಎಲ್ಲ ಕಷ್ಟಗಳನ್ನು ಎದುರಿಸಲು ಸಿದ್ಧನಿದ್ದು, ಈಗಾಗಲೇ ಅವೆಲ್ಲವನ್ನೂ ಎದುರಿಸಿದ್ದೇನೆ. ಆದರೆ ರಾಷ್ಟ್ರೀಯ ಮಟ್ಟದಲ್ಲಿ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಆರ್‌ಎಸ್‌ಎಸ್‌ ಮುಖಂಡ ಡಾ. ಪ್ರಭಾಕರ ಭಟ್ ಮತ್ತು ಇಲ್ಲಿನ ಪುಟಾಣಿಗಳಿಗೆ ಅನ್ಯಾಯವಾದರೆ ನಾನು ಸುಮ್ಮನೆ ಕೂರಲು ಸಾಧ್ಯವಿಲ್ಲ’ ಎಂದು ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಹೇಳಿದರು.

ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ, ಶಾಲಾ ಸಂಚಾಲಕ ಡಾ.ಕೆ.ಪ್ರಭಾಕರ ಭಟ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಅವರು ಮಾತನಾಡಿದರು.

‘ಉತ್ತಮ ಸಂಸ್ಕಾರ ಸಿಗುವ ಶಾಲೆಗಳ ಮಕ್ಕಳು ಹಸಿವೆಯಿಂದ ಬಳಲಬಾರದು ಎಂಬ ಕಾರಣಕ್ಕೆ ನಾನು ಮತ್ತು ನನ್ನ ಸ್ನೇಹಿತರು ಒಟ್ಟು ಸೇರಿ ಬಿಸಿಯೂಟಕ್ಕೆ ₹26 ಲಕ್ಷ ಮೊತ್ತದ ದೇಣಿಗೆ ನೀಡಲಿದ್ದೇವೆ’ ಎಂದು ಭರವಸೆ ನೀಡಿದರು.

‘ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಗಳಿಗೆ ಆರಂಭಗೊಂಡಿದೆ. ಇದರಿಂದಾಗಿ ಇಲ್ಲಿನ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರ ಮತ್ತು ಪುಣಚ ಶ್ರೀದೇವಿ ಪ್ರೌಢಶಾಲೆ ವಿದ್ಯಾರ್ಥಿಗಳ ಮಧ್ಯಾಹ್ನ ಬಿಸಿಯೂಟಕ್ಕಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಿಂದ ಬರುತ್ತಿದ್ದ ಅನ್ನ ಪ್ರಸಾದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಕನ್ನ ಹಾಕಿದ್ದಾರೆ. ಇಂತಹ ರಾಕ್ಷಸಿ ಪ್ರವೃತ್ತಿ ಹೊಂದಿರುವ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ’ ಎಂದು ಎಚ್ಚರಿಸಿದರು.

ಈಗಾಗಲೇ ‘ಭಿಕ್ಷಾಂದೇಹಿ’ ಅಭಿಯಾನ ಮೂಲಕ ಸುಮಾರು ₹12ಲಕ್ಷ ಸಂಗ್ರಹಿಸಲಾಗಿದ್ದು, ಇದಕ್ಕೆ ಶಿಕ್ಷಣ ಪ್ರೇಮಿಗಳಿಂದ ಮತ್ತಷ್ಟು ನೆರವು ಸಿಗಲಿದೆ. ಇನ್ನೊಂದೆಡೆ ಸುಮಾರು 20 ಕ್ವಿಂಟಲ್ ಅಕ್ಕಿ ಸಂಗ್ರಹಗೊಂಡಿದೆ ಎಂದರು.

ಭಿಕ್ಷಾಂದೇಹಿ ಅಭಿಯಾನ ತಂಡದ ವಿಕ್ರಂ ಹೆಗ್ಡೆ, ಸಂದೀಪ್, ಮಹೇಶ್‌, ಉದ್ಯಮಿ ಪರ್ವತ ಶೆಟ್ಟಿ ಮುಂಬೈ, ಲಲ್ಲೇಶ್ ರೆಡ್ಡಿ, ಸದಾನಂದ ನಾವೂರ, ಪ್ರಮುಖರಾದ ವಸಂತ ಮಾಧವ, ಮುಖ್ಯಶಿಕ್ಷಕ ರಮೇಶ್ ಎನ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT