ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ತಂಡಕ್ಕೆ ಫೆಲಿಕ್ಸ್‌ ಕೋಚ್‌

Last Updated 22 ಆಗಸ್ಟ್ 2017, 20:02 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಹಿರಿಯ ಆಟಗಾರ ಜೂಡ್‌ ಫೆಲಿಕ್ಸ್‌ ಸೆಬಾಸ್ಟಿಯನ್‌ ಅವರು ಭಾರತ ಜೂನಿಯರ್‌ ಪುರುಷರ ಹಾಕಿ ತಂಡದ ಕೋಚ್‌ ಆಗಿ ನೇಮಕವಾಗಿದ್ದಾರೆ.

ಈ ವಿಷಯವನ್ನು ಹಾಕಿ ಇಂಡಿಯಾ (ಎಚ್‌ಐ) ಮಂಗಳವಾರ ಪ್ರಕಟಿಸಿದೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿರುವ ಹಾಕಿ ಇಂಡಿಯಾ, ಇದಕ್ಕಾಗಿ 33 ಸದಸ್ಯರ ಸಂಭಾವ್ಯ ತಂಡದ ಪಟ್ಟಿಯನ್ನೂ ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದೆ. ಈ ತಂಡಕ್ಕೆ ಜೂಡ್ ಅವರು ತರಬೇತಿ ನೀಡಲಿದ್ದಾರೆ.

‘ಫೆಲಿಕ್ಸ್‌ ಅವರು ಹಿರಿಯ ಮತ್ತು ಅನುಭವಿ ಆಟಗಾರ. ಜೊತೆಗೆ ಈ ಹಿಂದೆ ಭಾರತ ತಂಡಕ್ಕೆ ನಾಯಕರಾಗಿದ್ದವರು. ಕೋಚ್‌ ಆಗಿ ಕೆಲಸ ಮಾಡಿದ ಅನುಭವವೂ ಅವರಿಗಿದೆ. ಅವರ ಮಾರ್ಗರ್ಶನದಲ್ಲಿ ತಂಡ ಉತ್ತಮ ಸಾಧನೆ ಮಾಡುವ ನಂಬಿಕೆ ಇದೆ’ ಎಂದು ಭಾರತದ ಹೈ ಪರ್ಫಾರ್ಮೆನ್ಸ್‌ ಡೈರೆಕ್ಟರ್‌ ಡೇವಿಡ್‌ ಜಾನ್‌ ತಿಳಿಸಿದ್ದಾರೆ.

‘2020 ಮತ್ತು 2024ರ ಒಲಿಂಪಿಕ್ಸ್‌ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವುದು ನಮ್ಮ ಗುರಿ. ಇದಕ್ಕಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಂಡು ಸಾಗಬೇಕಿದೆ. ಈಗ ಜೂನಿಯರ್‌ ವಿಭಾಗದಲ್ಲಿ ಆಡುತ್ತಿರುವ ಆಟಗಾರರು ಮುಂದೆ ಸೀನಿಯರ್‌ ತಂಡದಲ್ಲಿ ಸ್ಥಾನ ಗಳಿಸಬೇಕು ಎಂಬುದು ನಮ್ಮ ಆಶಯ. ಆ ನಿಟ್ಟಿನಲ್ಲಿ ಕಿರಿಯರನ್ನು ಸಜ್ಜುಗೊಳಿಸುವ ಜವಾಬ್ದಾರಿ ಫೆಲಿಕ್ಸ್‌ ಅವರ ಮೇಲಿದೆ’ ಎಂದಿದ್ದಾರೆ.

ಜೂಡ್‌ ಅವರು 250ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ತಲಾ ಎರಡು ಒಲಿಂಪಿಕ್ಸ್‌ ಮತ್ತು ವಿಶ್ವಕಪ್‌ಗಳಲ್ಲೂ ಅವರು ಆಡಿದ್ದಾರೆ. ಮೂರು ಚಾಂಪಿಯನ್ಸ್‌ ಟ್ರೋಫಿ ಮತ್ತು 1990 ಮತ್ತು 1994ರ ಏಷ್ಯನ್‌ ಕ್ರೀಡಾಕೂಟಗಳಲ್ಲೂ  ಭಾಗವಹಿಸಿದ್ದರು. 1995ರಲ್ಲಿ ಅವರು ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.

2014ರಲ್ಲಿ ಅವರು ಭಾರತ ಸೀನಿಯರ್‌ ತಂಡದ ಸಹಾಯಕ ಕೋಚ್ ಆಗಿ ಕೆಲಸ ಮಾಡಿದ್ದರು. ಆಗ ಟೆರ‍್ರಿ ವಾಲ್ಶ್‌ ಮುಖ್ಯ ಕೋಚ್‌ ಆಗಿದ್ದರು.

‘ಜೂನಿಯರ್‌ ತಂಡಕ್ಕೆ ತರಬೇತಿ ನೀಡುವ ಅವಕಾಶ ಸಿಕ್ಕಿರುವುದಕ್ಕೆ ಅಪಾರ ಖುಷಿಯಾಗಿದೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ  ಆಡಿದವರ ಸಾಮರ್ಥ್ಯದ ಆಧಾರದಲ್ಲಿ ಸಂಭಾವ್ಯ ತಂಡವನ್ನು ಪ್ರಕಟಿಸಲಾಗಿದೆ. ಇವರ ಪೈಕಿ ಶ್ರೇಷ್ಠ ಆಟ ಆಡುವ 18 ಮಂದಿಯನ್ನು ಆಯ್ಕೆಮಾಡುವ ಜವಾಬ್ದಾರಿ ನನ್ನ ಮೇಲಿದೆ. ಮುಂದೆ ಎದುರಾಗಬಹುದಾದ ಎಲ್ಲಾ ಸವಾಲುಗಳನ್ನೂ ಯಶಸ್ವಿಯಾಗಿ ನಿಭಾಯಿಸುತ್ತೇನೆ’ ಎಂದು ಫೆಲಿಕ್ಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT