ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಎಚ್‌.ಸಿ.ಬಾಲಕೃಷ್ಣಗೆ ಟಿಕೆಟ್‌ ನೀಡದಂತೆ ಒತ್ತಾಯ

Last Updated 22 ಆಗಸ್ಟ್ 2017, 20:11 IST
ಅಕ್ಷರ ಗಾತ್ರ

ನೆಲಮಂಗಲ: ತಾಲ್ಲೂಕಿನ ಅರಿಶಿನಕುಂಟೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜು ಬೆಂಬಲಿಗರು ಹಾಗೂ ಜೇಡರಹಳ್ಳಿ ಕೃಷ್ಣಮೂರ್ತಿ ನಡುವೆ ಜಟಾಪಟಿ ನಡೆಯಿತು.

ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಸಭೆ ನಡೆಯಿತು. ವಿಧಾನಸಭಾ ಚುನಾವಣೆಯ ಅಭ್ಯರ್ಥಿ ಆಯ್ಕೆ ಸಂಬಂಧ ಸ್ಥಳೀಯ ಸಂಸ್ಥೆಗಳ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಕೇಳಲಾಯಿತು.

‘ಜೆಡಿಎಸ್‌ನ ಬಂಡಾಯ ಶಾಸಕ ಎಚ್‌.ಸಿ.ಬಾಲಕೃಷ್ಣ ಅವರಿಗೆ ಮಾಗಡಿ ಕ್ಷೇತ್ರದಿಂದ ಟಿಕೆಟ್‌ ನೀಡಲಾಗುತ್ತದೆ ಎಂಬ ವದಂತಿ ಹರಡುತ್ತಿದೆ. ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಎ.ಮಂಜು ಅವರು ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಬಾಲಕೃಷ್ಣ ಅವರಿಗೆ ಟಿಕೆಟ್‌ ನೀಡುವುದಕ್ಕೆ ನಮ್ಮ ವಿರೋಧವಿದೆ’ ಎಂದು ಎ.ಮಂಜು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.

‘ಬಾಲಕೃಷ್ಣ ಅವರು ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿದ್ದಲ್ಲದೆ, ಕೆಲವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡಿದ್ದಾರೆ. ಮೊದಲು ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿ. ಬಳಿಕ ಟಿಕೆಟ್‌ ಕೇಳಲಿ. ನಮ್ಮ ಒಕ್ಕೊರಲ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು’ ಎಂದು ಆಗ್ರಹಿಸಿದರು.

ಇದೇ ವೇಳೆ ಮುಖಂಡ ಜೇಡರಹಳ್ಳಿ ಕೃಷ್ಣಮೂರ್ತಿ ಅವರು ಎ.ಮಂಜು ವಿರುದ್ಧ ಮಾತನಾಡಲು ಆರಂಭಿಸಿದರು. ಇದರಿಂದ ಸಿಟ್ಟಿಗೆದ್ದ ಕಾರ್ಯಕರ್ತರು, ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು. ಬಳಿಕ ಸಭೆಯಿಂದ ಹೊರನಡೆಯಲು ಮುಂದಾದರು. ಈ ವೇಳೆ ಮಧ್ಯಪ್ರವೇಶಿಸಿದ ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.

ಸಚಿವ ಡಿ.ಕೆ.ಶಿವಕುಮಾರ್‌, ‘ಕಾರ್ಯಕರ್ತರ ಅಭಿಪ್ರಾಯ ಕೇಳಿಯೇ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ. ಬಾಲಕೃಷ್ಣ ಸೇರಿದಂತೆ ಜೆಡಿಎಸ್‌ನ 7 ಬಂಡಾಯ ಶಾಸಕರು ಕಾಂಗ್ರೆಸ್‌ ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಆದರೆ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ಹೈಕಮಾಂಡ್‌ನಿಂದ ಸೂಚನೆ ಬಂದಿಲ್ಲ’ ಎಂದರು.

‘ಎಚ್‌.ಸಿ.ಬಾಲಕೃಷ್ಣ ಅವರಿಗೆ ಟಿಕೆಟ್‌ ನೀಡಿದರೆ, ಜೆಡಿಎಸ್‌ನಿಂದ ಸ್ಪರ್ಧಿಸುತ್ತೇನೆ ಎಂದು ಎ.ಮಂಜು ಹೇಳಿಕೆ ನೀಡಿರುವುದರಿಂದ ಗೊಂದಲ ಉಂಟಾಗಿದೆ. ಈ ವಿಷಯದಲ್ಲಿ ಗೊಂದಲ ಮಾಡಿಕೊಳ್ಳಬಾರದು’ ಎಂದು ಮನವಿ ಮಾಡಿದರು.

‘ಸಿದ್ದರಾಮಯ್ಯ ಅವರಿಂದ ಕೈತಪ್ಪಿದ ಮುಖ್ಯಮಂತ್ರಿ ಸ್ಥಾನ’

‘ಅನ್ಯ ಪಕ್ಷದಿಂದ ಬಂದಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾರೆ. ಇದರಿಂದ ಮುಖ್ಯಮಂತ್ರಿ ಆಗುವ ಅವಕಾಶ ಕೈತಪ್ಪಿತು. ಆದರೂ ಬೇಸರ ಮಾಡಿಕೊಂಡಿಲ್ಲ. ಇಷ್ಟು ದಿನ ನನ್ನನ್ನು ಪಕ್ಷ ಬೆಳೆಸಿದೆ’ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

‘ಎಚ್‌.ಡಿ.ದೇವೇಗೌಡ ಅವರಿಂದಾಗಿ ಧರ್ಮಸಿಂಗ್‌ ಸರ್ಕಾರದಲ್ಲಿ ಮಂತ್ರಿ ಆಗುವ ಅವಕಾಶ ಕೈತಪ್ಪಿತ್ತು. ಸಿದ್ದರಾಮಯ್ಯ ಸರ್ಕಾರದ ಸಂಪುಟಕ್ಕೆ ಸೇರಲು ಒಂದು ವರ್ಷ ಸಾಧ್ಯವಾಗಿರಲಿಲ್ಲ. ಆದರೂ ನಾನು ಪಕ್ಷದ ವಿರುದ್ಧ ಮಾತನಾಡಿಲ್ಲ. ನಿಷ್ಠಾವಂತರು ಪಕ್ಷದಲ್ಲಿ ಇದ್ದುಕೊಂಡೇ ಹೋರಾಟ ನಡೆಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT