ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚನೆ

ಬೆಳ್ಳಂದೂರು: ಸರ್ಕಾರದ ವಿರುದ್ಧ ಮತ್ತೆ ಕಿಡಿ ಕಾರಿದ ಎನ್‌ಜಿಟಿ
Last Updated 22 ಆಗಸ್ಟ್ 2017, 20:14 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ಬೆಳ್ಳಂದೂರು ಕೆರೆಯ ಮಾಲಿನ್ಯ ತಡೆಗೆ ಆಸಕ್ತಿ ತಾಳದ ರಾಜ್ಯ ಸರ್ಕಾರದ ವಿರುದ್ಧ ಮಂಗಳವಾರ ಮತ್ತೆ ಕಿಡಿಕಾರಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಯು, ಕೆರೆಯ ಸಂರಕ್ಷಣೆಗಾಗಿ ಕೈಗೊಂಡಿರುವ ಕ್ರಮಗಳ ಕುರಿತು 10 ದಿನಗಳೊಳಗೆ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದೆ.

ಘನ ತ್ಯಾಜ್ಯ ನಿರ್ವಹಣೆ, ಕೆರೆಯಲ್ಲಿ ತುಂಬಿಕೊಂಡಿರುವ ಹೂಳೆತ್ತುವ ಪ್ರಕ್ರಿಯೆ, ಕೊಳಚೆ ನೀರನ್ನು ಸಂಸ್ಕರಿಸುವ ಘಟಕ (ಎಸ್‌ಟಿಪಿ)ಗಳ ಅಳವಡಿಕೆ ಹಾಗೂ ಕೆರೆಯ ಸಮರ್ಪಕ ನಿರ್ವಹಣೆ ಅಂಗವಾಗಿ ಕೊಳಚೆ ನೀರಿನ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಕೆರೆ ಅಭಿವೃದ್ಧಿ ಪ್ರಾಧಿಕಾರ, ಮಾಲಿನ್ಯ ನಿಯಂತ್ರಣ ಮಂಡಳಿ, ನಗರಾಭಿವೃದ್ಧಿ ಇಲಾಖೆ, ಕೊಳಚೆ ನಿರ್ಮೂಲನಾ ಮಂಡಳಿಗಳಿಗೆ ನಿರ್ದೇಶನ ನೀಡಿದೆ.

ಬೆಂಗಳೂರಿನಲ್ಲಿರುವ ಜಲಮೂಲಗಳ ರಕ್ಷಣೆಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಸಲ್ಲಿಸಲಾದ ವರದಿಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಕೆರೆಯನ್ನು ಶುದ್ಧೀಕರಿಸಲು ಕ್ರಿಯಾ ಯೋಜನೆ ಸಲ್ಲಿಸಿ ಕಾರ್ಯ ಪ್ರವೃತ್ತವಾಗಬೇಕು ಎಂದು ಆದೇಶಿಸಿದೆ.

ಅಧಿಕಾರಿಗಳು ಕಕ್ಕಾಬಿಕ್ಕಿ: ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಅಧಿಕಾರಿಗೆ ಪೀಠವು ಇದೇ 17ರಂದು ನಡೆದ ವಿಚಾರಣೆ ವೇಳೆ ನೋಟಿಸ್‌ ನೀಡಿತ್ತು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರಕುಮಾರ್‌ ಜೈನ್‌, ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಸೀಮಾ ಗರ್ಗ್‌, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ವಿಚಾರಣೆ ವೇಳೆ ಹಾಜರಿದ್ದು, ಸರ್ಕಾರ ಎನ್‌ಜಿಟಿ ನೀಡಿದ ಆದೇಶ ಪಾಲಿಸುತ್ತಿದೆ. ಕೆರೆಯ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೆರೆಯಲ್ಲಿನ ಘನ ತ್ಯಾಜ್ಯ ತೆರವುಗೊಳಿಸಲಾಗಿದೆ ಎಂದು ವಿವರಿಸಿದರು.

ಆದರೆ, ಈ ವಿವರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಸ್ವತಂತ್ರಕುಮಾರ್‌, ‘ಈ ಕುರಿತು ನಿಮ್ಮ ಹೇಳಿಕೆ ದಾಖಲಿಸಿ. ನಾವು ನಮ್ಮ ಪ್ರತಿನಿಧಿಯನ್ನು ಪರಿಶೀಲನೆಗೆ ಖುದ್ದಾಗಿ ಸ್ಥಳಕ್ಕೆ ಕಳುಹಿಸುತ್ತೇವೆ’ ಎಂದು ತಿಳಿಸಿದಾಗ ಕಕ್ಕಾಬಿಕ್ಕಿಯಾದ ಅಧಿಕಾರಿಗಳು ನಿರುತ್ತರರಾದರು.

‘ಕೆರೆಯಲ್ಲಿ ಹಾಗೂ ಆಸುಪಾಸಿನಲ್ಲಿ ಇರುವ ಘನತ್ಯಾಜ್ಯ ತೆರವುಗೊಳಿಸಿದ್ದಲ್ಲಿ, ಅಲ್ಲಿ ಕಸವೇ ಇರಬಾರದು. ಅಲ್ಲಿ ಕನಿಷ್ಠ ಐದು ಕೆ.ಜಿ.ಗೂ ಅಧಿಕ ಪ್ರಮಾಣದ ಕಸ ದೊರೆತಲ್ಲಿ ನಿಮ್ಮನ್ನು ಕೆಲಸದಿಂದಲೇ ವಜಾ ಮಾಡುವಂತೆ ಆದೇಶಿಸಲಾಗುವುದು. ಈ ಹೇಳಿಕೆ ನೀಡಲು ನೀವು ಸಿದ್ಧರಿದ್ದಲ್ಲಿ ನಾವು ದಾಖಲಿಸಿಕೊಳ್ಳುತ್ತೇವೆ’ ಎಂದು ನ್ಯಾಯಮೂರ್ತಿಗಳು ಮತ್ತೆ ಕೇಳಿದರು.

‘ನೀವು ಹೀಗೆ ಹೇಳಿದ ಕೂಡಲೇ ಯಾರಾದರೂ ಬಂದು ಕೆರೆಯ ಪಕ್ಕದಲ್ಲಿ ಅಷ್ಟು ಪ್ರಮಾಣದ ಕಸ ಚೆಲ್ಲಿದರೆ ಏನು ಮಾಡುವುದು’ ಎಂದು ಮಂಜುನಾಥ ಪ್ರಸಾದ್‌ ಕೇಳುತ್ತಿದ್ದಂತೆಯೇ, ಕೆಂಡಾಮಂಡಲವಾದ ನ್ಯಾಯಮೂರ್ತಿ ಸ್ವತಂತ್ರಕುಮಾರ್‌, ‘ಎನ್‌ಜಿಟಿಯಿಂದಲೇ ಕಮಿಷನರ್‌ ಗ್ರೇಡ್‌ನ ಅಧಿಕಾರಿಯೊಬ್ಬರನ್ನು ಪರಿಶೀಲನೆಗಾಗಿ ಈಗಲೇ, ಮುಂದಿನ ವಿಮಾನದಲ್ಲೇ ಬೆಂಗಳೂರಿಗೆ ಕಳುಹಿಸುತ್ತೇವೆ. ಅವರು ಹೋದಾಗ ಕಸ ಪತ್ತೆಯಾದರೆ ಕ್ರಮ ಕೈಗೊಳ್ಳಬಹುದೇ’ ಎಂದು ಮರುಪ್ರಶ್ನೆ ಎಸೆದಾಗ, ಸಂಪೂರ್ಣ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗುವುದು ಎಂಬ ಉತ್ತರ ಅಧಿಕಾರಿಗಳಿಂದ ಬಂತು.

ಆಗ, ‘ಕೆಲಸ ಮಾಡದೆ ಕೇವಲ ಅಫಿಡವಿಟ್‌ ಸಲ್ಲಿಸುವುದನ್ನು ಬಿಟ್ಟು ಕೆರೆಯ ಸ್ವಚ್ಛತೆಗೆ ಆದ್ಯತೆ ನೀಡಿ’ ಎಂದು ಆದೇಶಿಸಿದ ಪೀಠವು, ವಿಚಾರಣೆಯನ್ನು ಸೆಪ್ಟೆಂಬರ್‌ 8ಕ್ಕೆ ಮುಂದೂಡಿತು. ವಿಚಾರಣೆಯ ವೇಳೆ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯಸ್ಥರು ಸೇರಿದಂತೆ ಈಗ ಹಾಜರಿರುವವರೆಲ್ಲ ಬರಬೇಕು ಎಂದು ನಿರ್ದೇಶನ ನೀಡಿತು.

ನಿಗಾವಹಿಸಲು ಸೂಚನೆ:ಕೆರೆಯ ಸುತ್ತಮುತ್ತ ಇರುವ ಅಪಾರ್ಟ್‌ಮೆಂಟ್‌ಗಳು ಪರಿಸರ ಸಂರಕ್ಷಣೆಯನ್ನು ನಿರ್ಲಕ್ಷಿಸಿವೆ. ಅಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯವನ್ನು ಅಲ್ಲೇ ನಿರ್ವಹಣೆ ಮಾಡುವಂತಾಗಬೇಕು. ಈ ಕುರಿತು ಅಧಿಕಾರಿಗಳು ಗಮನ ಹರಿಸದ್ದರಿಂದ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಇದಕ್ಕೆ ನಿಯಂತ್ರಣವೇ ಇಲ್ಲದಂತಾಗಿದೆ. ಈ ಬಗ್ಗೆ ತೀವ್ರ ನಿಗಾ ಇರಿಸಬೇಕು ಎಂದೂ ಸರ್ಕಾರಕ್ಕೆ ಸೂಚಿಸಿದ ಹಸಿರು ಪೀಠವು, ನಿತ್ಯವೂ ಉತ್ಪತ್ತಿಯಾಗುವ ಘನ ತ್ಯಾಜ್ಯ ನಿರ್ವಹಣೆಗೆ ಆಯಾ ಅಪಾರ್ಟ್‌ಮೆಂಟ್‌ಗಳು ಯಾವ ಕ್ರಮ ಕೈಗೊಂಡಿವೆ. ಅಲ್ಲದೆ, ಎಸ್‌ಟಿಪಿ ಅಳವಡಿಕೆಗಾಗಿ ಯಾವ ಅಪಾರ್ಟ್‌ಮೆಂಟ್‌ಗಳ ಮಾಲೀಕರು ಕ್ರಮ ಕೈಗೊಂಡಿದ್ದಾರೆ ಎಂಬ ಕುರಿತು ವರದಿ ಸಿದ್ಧಪಡಿಸಬೇಕು. ಒಂದೊಮ್ಮೆ ಕ್ರಮ ಕೈಗೊಳ್ಳದಿದ್ದರೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಬೇಕು ಎಂದು ಹೇಳಿತು.

ಬೆಳ್ಳಂದೂರು ಕೆರೆಯಲ್ಲಿ ನೊರೆ ಕಾಣಿಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಪ್ರಕಟಿಸಿದ್ದ ವರದಿಯನ್ನಾಧರಿಸಿ ನ್ಯಾಯಮೂರ್ತಿ ಸ್ವತಂತ್ರಕುಮಾರ್‌ ನೇತೃತ್ವದ ಹಸಿರು ಪೀಠವು ಕಳೆದ ಫೆಬ್ರುವರಿಯಲ್ಲಿ ಸ್ವಯಂ ಪ್ರೇರಣೆಯ ದೂರು ದಾಖಲಿಸಿ ವಿಚಾರಣೆ ಆರಂಭಿಸಿತ್ತು.ರಾಜ್ಯಸಭೆ ಸದಸ್ಯ ಕುಪೇಂದ್ರರೆಡ್ಡಿ, ನಮ್ಮ ಬೆಂಗಳೂರು ಪ್ರತಿಷ್ಠಾನದ ಮುಖ್ಯಸ್ಥರು ಬೆಳ್ಳಂದೂರು ಕೆರೆ ಉಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

ಮಾಲಿನ್ಯ ನಿಯಂತ್ರಣ ಮಂಡಳಿ ಮುಖ್ಯಸ್ಥರು ಯಾರು?

‘ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯಸ್ಥರು ಯಾರು, ಅವರೇನು ಅಧಿಕಾರಿಯೋ ಅಥವಾ ವಿಷಯ ತಜ್ಞರೋ’ ಎಂದು ನ್ಯಾಯಮೂರ್ತಿ ಸ್ವತಂತ್ರಕುಮಾರ್ ಪ್ರಶ್ನಿಸಿದರು.

ಈ ವೇಳೆ ಅರ್ಜಿದಾರ ಕುಪ್ಪೆಂದ್ರ ರೆಡ್ಡಿ ಪರ ಹಾಜರಿದ್ದ ವಕೀಲರು, ‘ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್‌ ರಾಜಕೀಯ ಆಯ್ಕೆ ಎಂದರು.

ಆಗ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿ ‘ರಾಜಕೀಯ ಆಯ್ಕೆಯಾ’ ಎಂದು ಉದ್ಗರಿಸಿದರು.

‘ಅವರು ಸಿವಿಲ್ ಎಂಜಿನಿಯರ್ ಆಗಿದ್ದಾರೆ’ ಎಂದು ರಾಜ್ಯ ಸರ್ಕಾರದ ಪರ ವಕೀಲರು ತಿಳಿಸುತ್ತಿದ್ದಂತೆಯೇ, ’ಅವರಿಗೆ ಮಾಲಿನ್ಯ, ಅದರ ನಿಯಂತ್ರಣದ ಬಗ್ಗೆ ಗೊತ್ತಿದೆಯೇ’ ಎಂದು ನ್ಯಾಯಮೂರ್ತಿ ಮರು ಪ್ರಶ್ನೆ ಎಸೆದರು.

‘ಹೌದು ಅವರಿಗೆ ಈ ಬಗ್ಗೆ ಎಲ್ಲವೂ ಗೊತ್ತಿದೆ’ ಎಂಬ ಉತ್ತರ ಬರುತ್ತಿದ್ದಂತೆಯೇ, ‘ಸರಿ, ಅವರನ್ನೂ ಸೆ. 8ರಂದು ನಡೆಯಲಿರುವ ವಿಚಾರಣೆ ವೇಳೆ ಹಾಜರಿರಲು ಹೇಳಿ’ ಎಂದು ಅವರು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT