ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಗೆದಷ್ಟೂ ಮುಗಿಯದ ಎಐಎಡಿಎಂಕೆ ಬಿಕ್ಕಟ್ಟು

Last Updated 23 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಚೆನ್ನೈ/ಪುದುಚೇರಿ: ತಮಿಳುನಾಡು ರಾಜಕೀಯವು ಬುಧವಾರವೂ ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಎಐಎಡಿಎಂಕೆ ಉಪಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರು ಇ.ಕೆ.ಪಳನಿಸ್ವಾಮಿ ಸಂಪುಟದ ನಾಲ್ವರನ್ನು ಪಕ್ಷದ ಹುದ್ದೆ ಗಳಿಂದ ವಜಾ ಮಾಡಿದ್ದಾರೆ. ದಿನಕರನ್‌ ಬೆಂಬಲಿಗ 19 ಶಾಸಕರು ಪುದುಚೇರಿಯ ರೆಸಾರ್ಟ್‌ ಒಂದರಲ್ಲಿ ವಾಸ್ತವ್ಯ ಹೂಡಿದ್ದಾರೆ.

‘ಕಂದಾಯ ಸಚಿವ ಆರ್‌.ಬಿ.ಉದಯಕುಮಾರ್ ಅವರನ್ನು ಪಕ್ಷದ ಪುರುಚ್ಚಿ ತಲೈವಿ ಅಮ್ಮ ಪೆರವೈ ಸಂಘಟನೆಯ ಕಾರ್ಯದರ್ಶಿ ಹುದ್ದೆಯಿಂದ, ಸಾರಿಗೆ ಸಚಿವ ವಿಜಯಭಾಸ್ಕರ್ ಅವರನ್ನು ಕರೂರು ಜಿಲ್ಲಾ ಕಾರ್ಯದರ್ಶಿ, ವಾಣಿಜ್ಯ ತೆರಿಗೆ ಸಚಿವ ವೀರಮಣಿ ಅವರನ್ನು ವೆಲ್ಲೂರ್ ಜಿಲ್ಲಾ ಕಾರ್ಯದರ್ಶಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಆರ್‌.ಕಾಮರಾಜು ಅವರನ್ನು ತಿರುವರೂರ್ ಜಿಲ್ಲಾ ಕಾರ್ಯದರ್ಶಿ ಹುದ್ದೆಯಿಂದ ತೆರವು ಮಾಡಲಾಗಿದೆ’ ಎಂದು ದಿನಕರನ್ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದ್ದಾರೆ. ತೆರವಾದ ಪಕ್ಷದ ಹುದ್ದೆಗಳಿಗೆ ತಮಗೆ ನಿಷ್ಠರಾದ ಶಾಸಕರನ್ನು ನೇಮಕ ಮಾಡಿದ್ದಾರೆ.

‘ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರ ಅನುಮತಿ ಪಡೆದುಕೊಂಡೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಳನಿಸ್ವಾಮಿ ನೇತೃತ್ವದ ಸರ್ಕಾರ ವಿಶ್ವಾಸಮತ ಕಳೆದುಕೊಂಡಿದೆ. ರಾಜ್ಯಪಾಲರು ಅವರಿಂದ ರಾಜೀನಾಮೆ ಪಡೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಪಳನಿಸ್ವಾಮಿ ವಿಶ್ವಾಸಮತ ಯಾಚಿಸುವಂತೆ ರಾಜ್ಯಪಾಲರು ಆದೇಶಿಸಬೇಕು’ ಎಂದು ವಿರೋಧ ಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್‌ ಆಗ್ರಹಿಸಿವೆ.

ಆದರೆ ಈ ಬಗ್ಗೆ ರಾಜ್ಯಪಾಲರು ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

‘ಪಳನಿಸ್ವಾಮಿ ನೇತೃತ್ವದಲ್ಲಿ ಎಐಎಡಿ ಎಂಕೆ ಸರ್ಕಾರ ತನ್ನ ಅವಧಿಯನ್ನು ಪೂರೈಸಲಿದೆ. ಸರ್ಕಾರ ಉರುಳುವ ಸಂಭವವೇ ಇಲ್ಲ’ ಎಂದು ಪಕ್ಷದ ಸಂಸದ ತಂಬಿದೊರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಿನಕರನ್‌ ಅವರ ಬೆಂಬಲಕ್ಕೆ ನಿಂತಿರುವ 19 ಶಾಸಕರು ಮಂಗಳವಾರ ರಾತ್ರಿ ಔತಣಕೂಟಕ್ಕೆ ಎಂದು ಹೇಳಿ ಚೆನ್ನೈನಿಂದ ಹೊರಟರು. ಆದರೆ ಅವರು ಪುದುಚೇರಿಯ ಕಡಲ ತೀರದ ಬಳಿಯ ರೆಸಾರ್ಟ್‌ ಒಂದರಲ್ಲಿ ವಾಸ್ತವ್ಯ ಹೂಡಿರುವುದು ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿತು. ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಎಐಎಡಿಎಂಕೆಯ ಕೆಲವು ಕಾರ್ಯಕರ್ತರು ರೆಸಾರ್ಟ್ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿ
ದರು. ಒಳಗೆ ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ಶಾಸಕರ ಭದ್ರತೆಗೆ ನಿಯೋಜಿತರಾಗಿದ್ದ ಪೊಲೀಸರು ತಡೆದರು. ಪ್ರತಿಭಟನಾಕಾರರು, ಶಶಿಕಲಾ, ದಿನಕರನ್ ಅವರ ಪ್ರತಿಕೃತಿಗಳನ್ನು ಸುಟ್ಟರು.

ಶಶಿಕಲಾ ಅರ್ಜಿ ವಜಾ

ನವದೆಹಲಿ (ಪಿಟಿಐ): ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಗೆ ವಿಧಿಸಿರುವ ನಾಲ್ಕು ವರ್ಷ ಶಿಕ್ಷೆಯನ್ನು ಮರು ಪರಿಶೀಲಿಸುವಂತೆ ಕೋರಿ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಳ್ಳಿ ಹಾಕಿದೆ.

ಇದರಿಂದಾಗಿ ಶಶಿಕಲಾ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿಯೇ ದಿನ ದೂಡಬೇಕಾಗಿದೆ. ಇದೇ ಪ್ರಕರಣದಲ್ಲಿ ಜೈಲು ಸೇರಿರುವ ಶಶಿಕಲಾ ಅವರ ಸಂಬಂಧಿ ಹಾಗೂ ಜೆ. ಜಯಲಲಿತಾ ಅವರ ದತ್ತುಪುತ್ರ ವಿ.ಎನ್‌. ಸುಧಾಕರನ್‌, ಮತ್ತೊಬ್ಬ ಸಂಬಂಧಿ ಇಳವರಸಿ ಅವರ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ವಜಾಗೊಳಿಸಿದೆ.

ಇನ್ನು ಮುಂದೆ ಈ ಪ್ರಕರಣದ ಶಿಕ್ಷೆಗೆ ಸಂಬಂದಿಸಿದಂತೆ ವಾದ, ವಿವಾದಗಳನ್ನು ಆಲಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿರುವುದರಿಂದ ಈ ಮೂವರು ಶಿಕ್ಷೆ ಪೂರ್ಣಗೊಳಿಸುವುದು ಅನಿವಾರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT